ವಾಸ್ತು ಟಿಪ್ಸ್: ಬ್ರಹ್ಮನ ಶಾಪದಿಂದ ಕುಟುಂಬದಲ್ಲಿ ಮಾನಸಿಕ ಒತ್ತಡ ಇರುತ್ತಾ? ವಾಸ್ತುಶಾಸ್ತ್ರದಲ್ಲಿ ತಿಳಿಯಬೇಕಾದ ಆಸಕ್ತಿಕರ ಮಾಹಿತಿ ಇಲ್ಲಿದೆ
ಮನೆಯ ವಾಸ್ತು ಸರಿಯಾಗಿದ್ದರೆ ಕುಟುಂಬದಲ್ಲಿ ನೆಮ್ಮದಿ ಇರುತ್ತೆ. ಬ್ರಹ್ಮನ ಶಾಪದಿಂದ ಕುಟುಂಬದಲ್ಲಿ ಮಾನಸಿಕ ಒತ್ತಡ ಇರುತ್ತೆ ಎನ್ನಲಾಗುತ್ತದೆ. ವಾಸ್ತುಶಾಸ್ತ್ರದಲ್ಲಿ ತಿಳಿಯಬೇಕಾದ ಮಾಹಿತಿ ಇಲ್ಲಿದೆ.

ಸಾಮಾನ್ಯವಾಗಿ ಕುಟುಂಬದಲ್ಲಿ ಮಾನಸಿಕ ಒತ್ತಡವು ಮೂರನೆಯ ವ್ಯಕ್ತಿಯ ಕಾರಣದಿಂದ ಉಂಟಾಗುತ್ತದೆ. ಇದಕ್ಕೆ ಕಾರಣ ಬ್ರಹ್ಮನ ಶಾಪ ಎಂದು ಧಾರ್ಮಿಕ ಗ್ರಂಥಗಳಿಂದ ತಿಳಿದು ಬರುತ್ತದೆ. ಪ್ರತಿಯೊಂದು ಗ್ರಹಗಳು ಒತ್ತಡವನ್ನು ಉಂಟು ಮಾಡಲು ನೇರವಾಗಿ ಕೆಲವೊಮ್ಮೆ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಉದಾಹರಣೆಗೆ ಜನ್ಮ ಕುಂಡಲಿಯಲ್ಲಿ ರವಿ ಗ್ರಹವು ಉತ್ತಮ ಸ್ಥಿತಿಯಲ್ಲಿ ಇದ್ದರೆ ಅತಿಯಾದ ಆತ್ಮವಿಶ್ವಾಸವಿರುತ್ತದೆ. ಇದರಿಂದ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡು ಮಾನಸಿಕ ಒತ್ತಡಕ್ಕೆ ಒಳಗಾಗುತ್ತೇವೆ. ಇದೇ ರೀತಿಯಲ್ಲಿ ಯಾವುದೇ ಜಾತಕದಲ್ಲಿ ರವಿಯು ದುರ್ಬಲದನಾಗಿದ್ದರೆ ಆತ್ಮವಿಶ್ವಾಸದ ಕೊರತೆ ಇರುತ್ತದೆ. ಇದರಿಂದ ಯಾವುದೇ ವಿಚಾರವಾದರೂ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಕಾರಣದಿಂದಲೂ ಮಾನಸಿಕ ಒತ್ತಡವು ಉಂಟಾಗುತ್ತದೆ. ಆದ್ದರಿಂದ ಮೊದಲು ಜನ್ಮ ಕುಂಡಲಿಯನ್ನು ಅಧ್ಯಯನ ಮಾಡಿ ಮಾನಸಿಕ ಒತ್ತಡಕ್ಕೆ ಇರುವ ಕಾರಣವನ್ನು ತಿಳಿಯಬೇಕು.
ಜನ್ಮ ಕುಂಡಲಿಯಲ್ಲಿ ರಾಹು ಇರುವ ಸ್ಥಾನಕ್ಕೆ ಅನುಗುಣವಾಗಿ ಮಾನಸಿಕ ಒತ್ತಡ ಉಂಟಾಗುತ್ತದೆ. ಉದಾಹರಣೆಗೆ ರಾಹು ಸಪ್ತಮ ಭಾವದಲ್ಲಿ ಇದ್ದರೆ ಬಾಳ ಸಂಗಾತಿಯಿಂದ ಅಥವಾ ಅತ್ಮೀಯರಿಂದ ಮಾನಸಿಕ ಒತ್ತಡ ಉಂಟಾಗುತ್ತದೆ. ಇದೇ ರೀತಿ ರಾಹುವು ಲಗ್ನದಲ್ಲಿ ಇದ್ದರೆ ಮನದಲ್ಲಿ ಭಯದ ವಾತಾವರಣವಿರುತ್ತದೆ. ಯಾವುದೇ ಗ್ರಹಗಳ ಫಲವನ್ನು ತಿಳಿಯುವಾಗ ಕೇವಲ ಆ ಗ್ರಹವು ಇರುವ ಸ್ಥಾನವನ್ನು ಅವಲಂಬಿಸಬಾರದು. ಜ್ಯೋತಿಷ್ಯದ ಪುಸ್ತಕಗಳಲ್ಲಿ ಕೇವಲ ಪ್ರಾರಂಭಿಕ ಭಾಗವನ್ನು ನೀಡಿರುತ್ತಾರೆ. ಗ್ರಹಗಳ ಸಂಯೋಗ ಮತ್ತು ದೃಷ್ಟಿ ಅಲ್ಲದೆ ಈಗ ನಡೆಯುತ್ತಿರುವ ದಶಾಭುಕ್ತಿಯು ಮುಖ್ಯವಾಗುತ್ತದೆ.
ಮನೆಯಲ್ಲಿ ಪಾಲಿಸಬೇಕಾದ ವಾಸ್ತು ಸಲಹೆಗಳು
- ಪೂರ್ವ ದಿಕ್ಕಿಗೆ ಅಥವಾ ಉತ್ತರ ದಿಕ್ಕಿಗೆ ಮುಖ ಮಾಡಿ ನಿದ್ರಿಸುವುದು ಒಳ್ಳೆಯದು. ಇದರಿಂದ ಮನಸ್ಸಿನಲ್ಲಿ ಧನಾತ್ಮಕ ಚಿಂತನೆಗಳು ಮೂಡುತ್ತವೆ. ಆತ್ಮವಿಶ್ವಾಸವು ಹೆಚ್ಚುತ್ತದೆ. ಅಲ್ಲದೆ ಉತ್ತಮ ಆರೋಗ್ಯ ಇರುತ್ತದೆ. ಇದರಿಂದ ಮಾನಸಿಕ ಒತ್ತಡವಿಲ್ಲದೆ ಬಾಳಬಹುದು.
- ಮಲಗುವ ಕೊಠಡಿಗೆ ಸರಿಯಾಗಿ ಮೇಲಿನ ಕೊಠಡಿಯ ಶೌಚಾಲಯ ಇದ್ದಲ್ಲಿ ಯಾವುದೇ ಕೆಲಸವನ್ನು ಆರಂಭಿಸುವ ಮೊದಲೇ ಮನಸ್ಸಿನಲ್ಲಿ ಆತಂಕದ ಭಾವನೆ ಮೂಡುತ್ತದೆ. ಆದ್ದರಿಂದ ಶೌಚಾಲಯವಿರುವ ಕೋಠಡಿಯ ಕೆಳಭಾಗದಲ್ಲಿ ಮಲಗದಿರುವುದು ಒಳ್ಳೆಯದು.
- ಹಾಸಿಗೆಯ ಮೇಲೆ ಮಲಗಿದಾಗ ಬಲಭಾಗದಲ್ಲಿ ಅಥವಾ ಎಡ ಭಾಗದಲ್ಲಿ ಕನ್ನಡಿ ಇರಬಾರದು. ಈ ಭಾಗಗಳಲ್ಲಿ ಕನ್ನಡಿ ಇದ್ದಲ್ಲಿ ಚಂದ್ರನ ಪ್ರಭಾವವು ಹೆಚ್ಚಿನದಾಗಿರುತ್ತದೆ. ಇದರಿಂದ ಅತಿಯಾದ ಆತುರದಿಂದ ಕೆಲಸ ಕಾರ್ಯಗಳು ಆರಂಭಿಸುವ ಕಾರಣ ಮಾನಸಿಕ ಒತ್ತಡವು ಉಂಟಾಗುತ್ತದೆ. ಇರುವ ಕನ್ನಡಿಯನ್ನು ಬದಲಿಸಲು ಸಾಧ್ಯವಾಗದ ಪಕ್ಷದಲ್ಲಿ ತಲೆಯ ಮೇಲ್ಬಾಗದಲ್ಲಿ ನೀಲಿ ಬಣ್ಣದ ದೀಪ ಇರುವುದು ಒಳ್ಳೆಯದು.
ಇದನ್ನೂ ಓದಿ: ಅಡುಗೆಮನೆಯಲ್ಲಿ ವಾಸ್ತು ದೋಷಗಳಿವೆಯೇ? ಈ ಸಣ್ಣ ಬದಲಾವಣೆಯಿಂದ ಸಮಸ್ಯೆಗಳಿಗೆ ಪರಿಹಾರ ಸಿಗುತ್ತೆ
- ತಲೆಯ ಬಳಿಯಲ್ಲಿ ಉಪಯೋಗವಿಲ್ಲದ ವಸ್ತುಗಳು ಇರಬಾರದು. ಕೆಲಸ ಮಾಡದ ಗಡಿಯಾರಗಳು, ಉಪಯೋಗಿಸದ ಮೊಬೈಲ್ ದುರ್ಬಲ ಶನಿಗ್ರಹಕ್ಕೆ ಸಂಬಂಧಿಸಿದ ಕಾರಣ, ಸೋಮಾರಿತನ ಉಂಟಾಗುತ್ತದೆ. ಇದರಿಂದ ಯಾವುದೇ ಕೆಲಸ ಕಾರ್ಯಗಳು ಸಮಯಕ್ಕೆ ಅನುಗುಣವಾಗಿ ಆರಂಭಿಸಲು ಸಾಧ್ಯವಾಗುವುದಿಲ್ಲ.
- ಹಾಸಿಗೆಯು ಶುಕ್ರ ಮತ್ತು ಚಂದ್ರ ಗ್ರಹಗಳಿಗೆ ಸಂಬಂಧಪಟ್ಟ ವಸ್ತುಗಳಾಗಿರುತ್ತವೆ. ಆದ್ದರಿಂದ ದಿಂಬುಗಳನ್ನು ಹಾಸಿಗೆಯಂತೆ ಬಳಸುವುದು ಒಳ್ಳೆಯದಲ್ಲ. ಕಬ್ಬಿಣದಿಂದ ಮಾಡಿದ ಮಂಚಕ್ಕೆ ಹೋಲಿಸಿದರೆ ಮರದ ಮಂಚ ಒಳ್ಳೆಯದು. ಇದರಿಂದ ಕೇವಲ ದಂಪತಿ ನಡುವೆ ಪ್ರೀತಿ ವಿಶ್ವಾಸ ಬೆಳೆಯುವುದಲ್ಲದೆ, ಮನೆಯ ಸದಸ್ಯರ ಜೊತೆಯಲ್ಲಿ ಹೊಂದಿಕೊಂಡು ಬಾಳಲು ಸಾಧ್ಯವಾಗುತ್ತದೆ. ಮಂಚವನ್ನು ಯಾವುದೇ ದಿಕ್ಕಿನ ಗೋಡೆಗೆ ಸ್ಪರ್ಶಿಸುವ ರೀತಿಯಲ್ಲಿ ಹಾಕಬೇಕು. ಲೋಹದ ಮಂಚವಿದ್ದಲ್ಲಿ ಮಾನಸಿಕ ಒತ್ತಡವು ಇರುತ್ತದೆ. ಆದರೆ ಅದರ ಕಾಲುಗಳಿಗೆ ಮರದ ತುಂಡನ್ನು ನೀಡುವುದು ಒಳ್ಳೆಯದು. ಇದರಿಂದ ಮಾನಸಿಕ ಒತ್ತಡವು ಇರುವುದಿಲ್ಲ.
ಇದನ್ನೂ ಓದಿ: ವಾಸ್ತುಪ್ರಕಾರ ಮನೆಯಲ್ಲಿ ಕ್ಯಾಲೆಂಡರ್ ಯಾವ ದಿಕ್ಕಿಗೆ ಇರಬೇಕು, ಈ ಬದಲಾವಣೆ ಮಾಡುವುದರಿಂದ ಶಾಂತಿ, ನೆಮ್ಮದಿ ನೆಲೆಸುತ್ತೆ
- ಮಲಗುವ ಕೊಠಡಿಯಲ್ಲಿ ಉತ್ತರ ಮತ್ತು ಪೂರ್ವ ದಿಕ್ಕುಗಳು ಶುಭ್ರವಾಗಿರಬೇಕು. ಆ ದಿಕ್ಕಿನಲ್ಲಿ ಕುಡಿಯುವ ನೀರನ್ನು ಇಡಬಹುದು. ಇದರಿಂದ ಮನಸ್ಸಿಗೆ ನೆಮ್ಮದಿ ಇರುತ್ತದೆ. ಆದರೆ ತಿಂದು ಉಳಿದ ಅಹಾರ ಪದಾರ್ಥಗಳು ಅಥವಾ ಕುಡಿದು ಉಳಿಸಿದ ನೀರು ಮುಂತಾದವುಗಳನ್ನು ಇಡಬಾರದು.
- ನೆಲ ಒರೆಸಿದ ಮೇಲೆ ಒರೆಸಿದ ಬಟ್ಟೆಯನ್ನು ಪೂರ್ವ ದಿಕ್ಕು ಅಥವಾ ಉತ್ತರ ದಿಕ್ಕಿನಲ್ಲಿ ಇಡಬಾರದು. ಇದರಿಂದ ಅನಾವಶ್ಯಕವಾದ ವಾದ ವಿವಾದಗಳು ಎದುರಾಗುತ್ತದೆ. ಇದರಿಂದಾಗಿ ಮಾನಸಿಕ ನೆಮ್ಮದಿ ಇರುವುದಿಲ್ಲ. ಹೀಗಾಗಿ ವಾಸ್ತು ಪ್ರಕಾರ ಈ ನಿಯಮಗಳನ್ನು ಪಾಲಿಸಬೇಕಾಗುತ್ತದೆ.
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)
