Vastu Tips: ಮನೆಯಲ್ಲಿರುವ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ವಾಸ್ತು ಪ್ರಕಾರ ಜೋಡಿಸಿ; ಈ ಎಲ್ಲಾ ಲಾಭಗಳನ್ನು ಪಡೆದುಕೊಳ್ಳಿ
ಮನೆಯಲ್ಲಿ ಜೋಡಿಸಿರುವ ವಸ್ತುಗಳು ಕೆಲವೊಮ್ಮೆ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಬಹುದು. ಅದರಿಂದ ವಸ್ತುಗಳು ಬಾಳಿಕೆ ಬರದೇ ಪದೇ ಪದೇ ರಿಪೇರಿಗೆ ಕೂಡಾ ಬರಬಹುದು. ಆದ್ದರಿಂದ ನಿಮ್ಮ ಮನೆಯಲ್ಲಿರುವ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ವಾಸ್ತು ಪ್ರಕಾರ ಜೋಡಿಸಿ. ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಿಸಿಕೊಳ್ಳಿ. (ಬರಹ: ಅರ್ಚನಾ ವಿ ಭಟ್)
ಸದ್ಯದ ತಂತ್ರಜ್ಞಾನದ ಯುಗವು ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳಿಂದಲೇ ತುಂಬಿಹೋಗಿದೆ. ಅದು ನಮ್ಮ ದೈನಂದಿನ ಜೀವನವನ್ನು ಆವರಿಸಿದೆ. ಕಂಪ್ಯೂಟರ್, ಲ್ಯಾಪ್‌ಟಾಪ್, ಫೋನ್, ಮೈಕ್ರೋವೇವ್, ಎಲೆಕ್ಟ್ರಿಕಲ್ ಸ್ಟೋವ್ ಹೀಗೆ ಮುಂತಾದ ಗ್ಯಾಜೆಟ್‌ಗಳು ನಮ್ಮ ಮನೆಯಲ್ಲಿ ಜಾಗ ಪಡೆದುಕೊಂಡಿದೆ. ಪ್ರತಿನಿತ್ಯದ ಕೆಲಸಗಳನ್ನು ಸರಳಗೊಳಿಸಿವೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಇವುಗಳನ್ನು ತಪ್ಪಾಗಿ ಜೋಡಿಸಿದರೆ ಧನಾತ್ಮಕ ಶಕ್ತಿ ನೆಲೆಸಲು ಅಡ್ಡಿಪಡಿಸುತ್ತವೆ ಎಂದು ಹೇಳಲಾಗಿದೆ.
ವಾಸ್ತುಶಾಸ್ತ್ರ ಸರಿ ಇಲ್ಲದಿದ್ದರೆ, ಪದೇ ಪದೇ ರಿಪೇರಿ, ಹಾಳಾಗುವುದು ಮುಂತಾದ ತೊಂದರೆಗಳನ್ನು ಎದುರಿಸಬೇಕಾಗಬಹುದು. ವಾಸ್ತು ಶಾಸ್ತ್ರವು ಪುರಾತನ ಭಾರತೀಯ ವಾಸ್ತುಶಿಲ್ಪದ ಸಿದ್ಧಾಂತವಾಗಿರುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ತುಂಬಿರಲು ಮತ್ತು ಸಾಮರಸ್ಯದಿಂದ ಬಾಳಲು ವಸ್ತುಗಳನ್ನು ಇಡುವ ದಿಕ್ಕುಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳುತ್ತದೆ. ಹಾಗಾಗಿ ಇಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ವಾಸ್ತು ಶಾಸ್ತ್ರದ ಪ್ರಕಾರ ಇಡುವುದು ಧನಾತ್ಮಕತೆ ಹೆಚ್ಚಲು ಮತ್ತು ವಸ್ತುಗಳು ಬಾಳಿಕೆ ಬರಲು ನೆರವಾಗಬಹುದು. ನಿಮ್ಮ ಮನೆಯಲ್ಲಿರುವ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಇಲ್ಲಿ ಹೇಳಿರುವ ಸಲಹೆಗಳ ಪ್ರಕಾರ ಜೋಡಿಸಿ ನೋಡಿ.
ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಇಡಲು ವಾಸ್ತು ಸಲಹೆಗಳು
1) ಸರಿಯಿರುವ ಎಲೆಕ್ಟ್ರಾನಿಕ್ ವಸ್ತುಗಳನ್ನು ಮಾತ್ರ ಇಡಿ
ನಿಮ್ಮ ಮನೆಯ ಹಾಲ್ ಅಥವಾ ಲಿವಿಂಗ್ ಏರಿಯಾದಲ್ಲಿ ಇರುವ ಬೇಡದ ವಸ್ತುಗಳನ್ನು ತೆಗೆದುಹಾಕಿ. ನಿಮ್ಮ ಸುತ್ತಲಿನ ಪರಿಸರವು ಧನಾತ್ಮಕ ಶಕ್ತಿಯನ್ನು ಹೊಂದಿರಲು ಇದು ಮೊದಲ ಹಂತವಾಗಿದೆ. ನೀವು ಬಳಸದ, ಹಾಳದ ಉಪಕರಣಗಳನ್ನು ಒಟ್ಟುಗೂಡಿಸಿ ಅವುಗಳನ್ನು ವಿಲೇವಾರಿ ಮಾಡಿ. ಇದು ಮನೆ ಅವ್ಯವಸ್ಥಿತವಾಗಿ ಕಾಣುವುದನ್ನು ತಪ್ಪಿಸುತ್ತದೆ. ನಿಮ್ಮ ಬಳಿಯಿರುವ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಅಚ್ಚುಕಟ್ಟಾಗಿ ಜೋಡಿಸಿ. ಪ್ರತಿಯೊಂದು ವಸ್ತುವಿಗೂ ವಿಶೇಷ ಜಾಗವಿರಲಿ.
2) ಕಂಪ್ಯೂಟರ್ ಮತ್ತು ಸ್ಟಡಿ ಟೇಬಲ್ ಅನ್ನು ಈಶಾನ್ಯ ದಿಕ್ಕಿನಲ್ಲಿಡಿ
ಈಶಾನ್ಯ ದಿಕ್ಕು ಜ್ಞಾನ ಮತ್ತು ಬುದ್ಧಿವಂತಿಕೆಗೆ ಸಂಬಂಧಿಸಿದೆ. ಕಂಪ್ಯೂಟರ್ ಅಥವಾ ಸ್ಟಡಿ ಟೇಬಲ್‌ಗಳಂತಹ ಕಲಿಕಾ ಪರಿಕರಗಳನ್ನು ಈ ದಿಕ್ಕಿಗೆ ಜೋಡಿಸುವುದರಿಂದ ನಿಮ್ಮಲ್ಲಿ ಕಲಿಯುವ ಸಾಮರ್ಥ್ಯವನ್ನು ಸುಧಾರಿಸಬಹುದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.
3) ಫೋನ್ ಮತ್ತು ಲ್ಯಾಪ್‌ಟಾಪ್ ಅನ್ನು ವಾಯುವ್ಯ ದಿಕ್ಕಿನಲ್ಲಿಡಿ
ವಾಯುವ್ಯ ದಿಕ್ಕು ಸಾಮಾಜಿಕ ಸಂವಹನಕ್ಕೆ ಸಂಬಂಧಿಸಿದೆ. ಲ್ಯಾಪ್‌ಟಾಪ್, ಫೋನ್‌ಗಳಂತಹ ಸಾಧನಗಳನ್ನು ವಾಯುವ್ಯ ದಿಕ್ಕಿನಲ್ಲಿ ಜೋಡಿಸುವುದರ ಮೂಲಕ ಸಾಮಾಜಿಕ ಜೀವನವನ್ನು ಬಲಪಡಿಸಿಕೊಳ್ಳಬಹುದು. ನಿಮ್ಮ ಸಾಮಾಜಿಕ ಜೀವನ ವರ್ಧಿಸಬಹುದು.
4) ಆಗ್ನೇಯ ದಿಕ್ಕಿನಲ್ಲಿ ಮೈಕ್ರೋವೇವ್ ಇಡಿ
ಎಲ್ಲರಿಗೂ ತಿಳಿದಿರುವಂತೆ ಬೆಂಕಿಗೆ ಆಗ್ನೇಯ ದಿಕ್ಕನ್ನು ಸೂಚಿಸಲಾಗಿದೆ. ಈ ದಿಕ್ಕು ಶಕ್ತಿಯನ್ನು ಪ್ರತಿನಿಧಿಸುತ್ತದೆ. ವಿದ್ಯುತ್ ಸಂಪರ್ಕ ಅಗತ್ಯವಿರುವ ಸಾಧನಗಳನ್ನು ಅಂದರೆ ಮೈಕ್ರೋವೇವ್, ಟೋಸ್ಟರ್, ಎಲೆಕ್ಟ್ರಿಕಲ್ ಸ್ಟೋವ್ ಮುಂತಾದವುಗಳನ್ನು ಆಗ್ನೇಯ ದಿಕ್ಕಿಗೆ ಇಡಿ. ಇದರಿಂದ ವಸ್ತುಗಳು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿಬಲ್ಲದು ಎಂಬ ನಂಬಿಕೆಯಿದೆ.
5) ಭಾರಿ ಉಪಕರಣಗಳನ್ನು ನೈಋತ್ಯ ದಿಕ್ಕಿನಲ್ಲಿಡಿ
ನೈಋತ್ಯ ದಿಕ್ಕು ಶಕ್ತಿ ಮತ್ತು ಸ್ಥಿರತೆಗೆ ಸಂಬಂಧಿಸಿದೆ. ಈ ದಿಕ್ಕಿನಲ್ಲಿ ಭಾರಿ ಎಲೆಕ್ಟ್ರಾನಿಕ್ ಉಪಕರಣಗಳನ್ನು ಇಡಿ. ಅದು ಉಪಕರಣಗಳನ್ನು ಸುರಕ್ಷಿತವಾಗಿರಿಸಲು ಸಹಾಯ ಮಾಡುತ್ತದೆ.
6) ಮನೆಯ ಪ್ರವೇಶದ್ವಾರದ ಬಳಿ ಗ್ಯಾಜೆಟ್ ಇಡಬೇಡಿ
ಮನೆಯ ಮುಖ್ಯದ್ವಾರ ಬಳಿ ಗ್ಯಾಜೆಟ್‌ಗಳನ್ನು ಇಡುವುದು ಮನೆಯೊಳಗೆ ಧನಾತ್ಮಕ ಶಕ್ತಿಗಳ ಪ್ರವೇಶಕ್ಕೆ ಅಡ್ಡಿಯಾಗಬಹುದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಮನೆಯೊಳಗೆ ಸದಾ ಧನಾತ್ಮಕ ಶಕ್ತಿ ಪ್ರವೇಶಿಸಲು ಮನೆಯ ಮುಖ್ಯದ್ವಾರವನ್ನು ಅಚ್ಚುಕಟ್ಟಾಗಿ ಹಾಗೂ ಸ್ವಚ್ಛವಾಗಿ ಇಟ್ಟುಕೊಳ್ಳಿ.
7) ಗ್ಯಾಜೆಟ್‌ಗಳನ್ನು ಸರಿಯಾಗಿ ನಿರ್ವಹಣೆ ಮಾಡಿ
ನಿಮ್ಮ ಎಲೆಕ್ಟ್ರಾನಿಕ್ಸ್ ಗ್ಯಾಜೆಟ್‌ಗಳು ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಇಟ್ಟುಕೊಳ್ಳಿ. ಹಾಳದ ಮತ್ತು ಸರಿಯಾಗಿ ಕೆಲಸ ಮಾಡದ ಸಾಧನಗಳು ನಿಮ್ಮ ಮನೆಗೆ ನಕಾರಾತ್ಮಕ ಶಕ್ತಿಯನ್ನು ತರಬಹುದು.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
ಬರಹ: ಅರ್ಚನಾ ವಿ ಭಟ್