ನಾವು ಗೊತ್ತಿಲ್ಲದೇ ಮಾಡುವ ಈ ಸಣ್ಣ ತಪ್ಪುಗಳೇ ನಕಾರಾತ್ಮಕ ಶಕ್ತಿ ಹೆಚ್ಚಲು ಕಾರಣ: ಪರಿಹಾರಕ್ಕೆಇಲ್ಲಿದೆ ವಾಸ್ತು ಸಲಹೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ನಾವು ಗೊತ್ತಿಲ್ಲದೇ ಮಾಡುವ ಈ ಸಣ್ಣ ತಪ್ಪುಗಳೇ ನಕಾರಾತ್ಮಕ ಶಕ್ತಿ ಹೆಚ್ಚಲು ಕಾರಣ: ಪರಿಹಾರಕ್ಕೆಇಲ್ಲಿದೆ ವಾಸ್ತು ಸಲಹೆ

ನಾವು ಗೊತ್ತಿಲ್ಲದೇ ಮಾಡುವ ಈ ಸಣ್ಣ ತಪ್ಪುಗಳೇ ನಕಾರಾತ್ಮಕ ಶಕ್ತಿ ಹೆಚ್ಚಲು ಕಾರಣ: ಪರಿಹಾರಕ್ಕೆಇಲ್ಲಿದೆ ವಾಸ್ತು ಸಲಹೆ

Vastu Tips: ಮನುಷ್ಯನ ಜೀವನ ಸುಖ, ಸಂತೋಷ, ನೆಮ್ಮದಿಯಿಂದ ಕೂಡಿರಲು ನಕಾರಾತ್ಮಕ ಶಕ್ತಿಗಳಿಂದ ದೂರವಿರಬೇಕು. ವಾಸ್ತು ಶಾಸ್ತ್ರದ ಪ್ರಕಾರ, ನಮಗೆ ತಿಳಿದೋ, ತಿಳಿಯದೆಯೋ ದಿನನಿತ್ಯ ಮಾಡುವ ಕೆಲವು ತಪ್ಪುಗಳು ಜೀವನದಲ್ಲಿ ನಕಾರಾತ್ಮಕ ಶಕ್ತಿಗಳು ತುಂಬುವಂತೆ ಮಾಡುತ್ತವೆ. ಹಾಗಾದ್ರೆ ಆ ತಪ್ಪುಗಳು ಯಾವುವು? ಇಲ್ಲಿದೆ ಓದಿ.

ವಾಸ್ತು ಸಲಹೆ
ವಾಸ್ತು ಸಲಹೆ (PC: HT File Photo)

ಭೂಮಿಯ ಮೇಲಿನ ಪ್ರತಿಯೊಂದು ಜೀವಿಗೂ ಜೀವಿಸಲು ಕೆಲವು ನಿಯಮಗಳಿವೆ. ಅದರ ಪ್ರಕಾರ ಬದುಕಿದರೆ ಸಮಸ್ಯೆಗಳು ಹೆಚ್ಚಾಗಿ ಕಾಡುವುದಿಲ್ಲ. ಮನುಷ್ಯನು ಆರಾಮದಾಯಕ, ಸಂತೋಷ ಮತ್ತು ಶಾಂತಿಯುತವಾಗಿರಲು, ಕೆಲವು ನಿಯಮಗಳನ್ನು ಪಾಲಿಸಬೇಕು. ಸಂಪ್ರದಾಯಗಳು, ಜ್ಯೋತಿಷ್ಯ ಶಾಸ್ತ್ರ, ವಾಸ್ತು ಶಾಸ್ತ್ರ ಇವೆಲ್ಲವೂ ವ್ಯಕ್ತಿಯ ಜೀವನದ ಬಗ್ಗೆ ಕೆಲವು ನಿಯಮ ಮತ್ತು ವಿಧಾನಗಳನ್ನು ಸೂಚಿಸುತ್ತವೆ. ನೀವು ಅದರ ಪ್ರಕಾರ ಬದುಕದಿದ್ದರೆ, ಅನೇಕ ನಕಾರಾತ್ಮಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಕೆಲವು ನಿಯಮಗಳನ್ನು ಪಾಲಿಸದಿದ್ದರೆ, ಮನುಷ್ಯನ ಸುತ್ತ ನಕಾರಾತ್ಮಕ ಶಕ್ತಿಗಳು ಬೆಳೆದು ಜೀವನವೇ ನಾಶವಾಗುತ್ತದೆ. ವಾಸ್ತು ಶಾಸ್ತ್ರದಲ್ಲಿ ಈ ನಕಾರಾತ್ಮಕ ಶಕ್ತಿಗಳನ್ನು ತೊಡೆದುಹಾಕಲು ಕೆಲವು ನಿಯಮಗಳನ್ನು ಹೇಳಲಾಗಿದೆ. ಅಲ್ಲಿ ಸೂಚಿಸಲಾದ ವಿಧಾನಗಳನ್ನು ತಪ್ಪದೇ ಅನುಸರಿಸುವುದು ಬಹಳ ಮುಖ್ಯವಾಗಿದೆ. ನಾವು ಪ್ರತಿದಿನ ಅಥವಾ ಕೆಲವೊಮ್ಮೆ ನಮಗೆ ತಿಳಿಯದೆ ಮಾಡುವ ಸಣ್ಣ ಪಟ್ಟ ತಪ್ಪುಗಳು ನಕಾರಾತ್ಮಕ ಶಕ್ತಿಗಳನ್ನು ಆಹ್ವಾನಿಸಬಹುದು. ಅವು ಜೀವನದ ಮೇಲೆ ಆಳವಾದ ಪರಿಣಾಮ ಬೀರಬಹುದು.

ಮನೆಯಲ್ಲಿ ನಕಾರಾತ್ಮಕ ಶಕ್ತಿಗಳಿದ್ದರೆ ಏನಾಗುತ್ತದೆ?

ವಾಸ್ತು ಶಾಸ್ತ್ರದ ಪ್ರಕಾರ, ಋಣಾತ್ಮಕ ಶಕ್ತಿಗಳು ಅಂದರೆ ಭೂತ, ದೆವ್ವ, ಪಿಶಾಚಿಗಳು ಮತ್ತು ಇತರ ನಕಾರಾತ್ಮಕ ಶಕ್ತಿಗಳು ಮಾನವ ಜೀವನದ ಮೇಲೆ ಅನೇಕ ರೀತಿಯಲ್ಲಿ ದುಷ್ಪರಿಣಾಮಗಳನ್ನು ಉಂಟುಮಾಡುತ್ತವೆ. ಮನೆ ಅಥವಾ ಕಛೇರಿಯಲ್ಲಿ ಮಾಡುವ ಕೆಲವು ತಪ್ಪುಗಳಿಂದ ದೈಹಿಕ ಆರೋಗ್ಯ ಸಮಸ್ಯೆಗಳು, ಆರ್ಥಿಕ ಸಮಸ್ಯೆಗಳು, ವ್ಯಾಪಾರದಲ್ಲಿ ನಷ್ಟ, ಮಾನಸಿಕ ಒತ್ತಡ, ಆತ್ಮವಿಶ್ವಾಸದ ಕೊರತೆ, ಖಿನ್ನತೆ, ಆತಂಕ, ಋಣಾತ್ಮಕತೆ, ಕುಟುಂಬ ಸದಸ್ಯರ ನಡುವಿನ ವಿವಾದ, ಕೆಲಸದಲ್ಲಿ ವೈಫಲ್ಯ, ನಿದ್ರಾಹೀನತೆ, ಚಡಪಡಿಕೆ ಮತ್ತು ಭಯ ಉಂಟಾಗುತ್ತದೆ.

ನಕಾರಾತ್ಮಕ ಶಕ್ತಿಗಳಿಂದ ಪಾರಾಗಲು ಪರಿಹಾರಗಳು

ಖ್ಯಾತ ವಾಸ್ತು ಸಲಹೆಗಾರ ಆಚಾರ್ಯ ಮುಕುಲ್ ರಸ್ತೋಗಿ ಅವರ ಪ್ರಕಾರ, ಕೆಲವು ಸಣ್ಣ ಪುಟ್ಟ ವಿಷಯಗಳಲ್ಲಿ ಜಾಗರೂಕರಾಗಿರುವುದರ ಮೂಲಕ ಜೀವನದಲ್ಲಿ ನಕಾರಾತ್ಮಕತೆಯನ್ನು ದೂರಮಾಡಿಕೊಳ್ಳಬಹುದು.

  • ನಮ್ಮಲ್ಲಿ ಹೆಚ್ಚಿನವರು ಒಂದೇ ಉಡುಪನ್ನು ಎರಡು ಮೂರು ದಿನ ಧರಿಸುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ ಇದು ಸರಿಯಾದ ವಿಧಾನವಲ್ಲ. ಒಂದೇ ಬಟ್ಟೆಯನ್ನು ಸತತವಾಗಿ ಧರಿಸುವುದರಿಂದ ಅದು ನಕಾರಾತ್ಮಕ ಶಕ್ತಿಗಳ ಮನೆಯಾಗುತ್ತದೆ.
  • ಉಗುರುಗಳನ್ನು ಅತಿಯಾಗಿ ಉದ್ದ ಬಿಡಬಾರದು. ಉಗುರಿನಲ್ಲಿ ಸಂಗ್ರಹವಾದ ಕೊಳಕು ವ್ಯಕ್ತಿಯ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
  • ಶೂ ಅಥವಾ ಸ್ಯಾಂಡಲ್ ಅನ್ನು ಸ್ವಚ್ಛಗೊಳಿಸದೆ ಪದೇ ಪದೇ ಧರಿಸಬಾರದು. ಏಕೆಂದರೆ ಅದು ಮಣ್ಣು ಮತ್ತು ಮರಳಿನಲ್ಲಿರುವ ದುಷ್ಟ ಶಕ್ತಿಗಳ ವಾಸಸ್ಥಾನವಾಗಬಹುದು. ಆದ್ದರಿಂದ ಕಾಲಕಾಲಕ್ಕೆ ಅವುಗಳನ್ನು ಸ್ವಚ್ಛಗೊಳಿಸಿ ಧರಿಸಬೇಕು.
  • ಹಳೆಯ ದಿನಪತ್ರಿಕೆಗಳನ್ನು ದೀರ್ಘಕಾಲ ಮನೆಯಲ್ಲಿ ಇಡಬಾರದು. ಇದು ಮನೆಯಲ್ಲಿ ನಕಾರಾತ್ಮಕತೆಯನ್ನು ಹರಡುತ್ತದೆ.
  • ಮನೆಯಲ್ಲಿ ಸಕಾರಾತ್ಮ ಶಕ್ತಿ ಹೆಚ್ಚಾಗಲು, ಶುಚಿತ್ವ ಮತ್ತು ಮನೆಯೊಳಗೆ ಸಾಕಷ್ಟು ಬೆಳಕು ಪ್ರವೇಶಿಸುವುದರ ಕಡೆಗೆ ವಿಶೇಷ ಗಮನ ನೀಡಬೇಕು. ಜತೆಗೆ ಹಸಿರು ಮರ, ಗಿಡಗಳನ್ನು ಬೆಳೆಸಬೇಕು. ಸತ್ತ ಗಿಡ ಅಥವಾ ಮರಗಳನ್ನು ಮನೆಯಲ್ಲಿ ಇಡಬಾರದು.
  • ವಾಸ್ತು ಪ್ರಕಾರ, ಚಲಿಸದ ಅಥವಾ ಮುರಿದ ಗಡಿಯಾರವನ್ನು ಮನೆಯಲ್ಲಿ ಇಡಬಾರದು. ಇದು ಸಮಯ ಚಲಿಸದೇ ಇರುವುದನ್ನು ಪ್ರತಿನಿಧಿಸುತ್ತದೆ. ಆದ್ದರಿಂದ ತಕ್ಷಣ ರಿಪೇರಿ ಮಾಡಿಸಬೇಕು ಅಥವಾ ಹೊಸದನ್ನು ಖರೀದಿಸಬೇಕು.
  • ಹಳೆಯ ಮತ್ತು ಮುರಿದ ವಸ್ತುಗಳು, ಉಪಯೋಗಿಸದ ಬಟ್ಟೆಗಳು ಆಧ್ಯಾತ್ಮಿಕತೆ ಮತ್ತು ವಾಸ್ತವದಿಂದ ದೂರವಿಡುತ್ತವೆ. ಹಾಗಾಗಿ ಅವುಗಳಲ್ಲಿ ನಕಾರಾತ್ಮಕ ಶಕ್ತಿಗಳು ಉಳಿಯುತ್ತವೆ.

ಇದನ್ನೂ ಓದಿ: Vastu Shastra: ಮಲಗುವಾಗ ದಿಂಬಿನ ಪಕ್ಕ ಈ ವಸ್ತುಗಳನ್ನು ಎಂದಿಗೂ ಇಡಬೇಡಿ: ಹಣ, ನೆಮ್ಮದಿ, ನಿದ್ದೆಗೂ ಈ ವಿಚಾರಕ್ಕೂ ಇದೆ ಸಂಬಂಧ

  • ಚಾಕು ಮತ್ತು ಬ್ಲೇಡ್‌ನಂತಹ ಹರಿತವಾದ ಆಯುಧಗಳನ್ನು ರಾತ್ರಿಯಲ್ಲಿ ಮನೆಯ ಹೊರಗೆ ಇಡಬಾರದು. ಈ ವಸ್ತುಗಳು ಮನೆಯೊಳಗೆ ನಕಾರಾತ್ಮಕ ಶಕ್ತಿಗಳ ಪ್ರವೇಶಕ್ಕೆ ಕಾರಣವಾಗುತ್ತವೆ ಎಂಬ ನಂಬಿಕೆಗಳಿವೆ.

(ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.)

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.