ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಕೆಲಸದ ಸ್ಥಳಕ್ಕೂ ಬೇಕು ವಾಸ್ತು; ಉತ್ಪಾದಕತೆ ಹೆಚ್ಚಿಸಿ ಯಶಸ್ಸು ಸಾಧಿಸಲು ಪರಿಣಾಮಕಾರಿ ವಾಸ್ತು ಸಲಹೆ

ಕೆಲಸದ ಸ್ಥಳಕ್ಕೂ ಬೇಕು ವಾಸ್ತು; ಉತ್ಪಾದಕತೆ ಹೆಚ್ಚಿಸಿ ಯಶಸ್ಸು ಸಾಧಿಸಲು ಪರಿಣಾಮಕಾರಿ ವಾಸ್ತು ಸಲಹೆ

Vastu Tips: ಕೆಲಸ ಸುಸೂತ್ರವಾಗಿ ಸಾಗಬೇಕೆಂದರೆ, ಕೆಲಸದ ವಾತಾವರಣ ಸರಿಯಾಗಿರಬೇಕು. ಕಚೇರಿ ಸೇರಿದಂತೆ ನೀವು ಕೆಲಸ ಮಾಡುವ ಸ್ಥಳಗಳಲ್ಲಿ ಉತ್ಪಾದಕತೆ ಹೆಚ್ಚಿಸಿ ಉತ್ತಮ ಫಲಿತಾಂಶ ಪಡೆಯಲು ಸಹಾಯ ಮಾಡುವ ಪರಿಣಾಮಕಾರಿ ವಾಸ್ತು ಸಲಹೆಗಳು ಇಲ್ಲಿವೆ.

ಉತ್ಪಾದಕತೆ ಹೆಚ್ಚಿಸಿ ಯಶಸ್ಸು ಸಾಧಿಸಲು ಪರಿಣಾಮಕಾರಿ ವಾಸ್ತು ಸಲಹೆ
ಉತ್ಪಾದಕತೆ ಹೆಚ್ಚಿಸಿ ಯಶಸ್ಸು ಸಾಧಿಸಲು ಪರಿಣಾಮಕಾರಿ ವಾಸ್ತು ಸಲಹೆ (pixels)

ವಾಸ್ತು ಶಾಸ್ತ್ರದ ಮೇಲೆ ಭಾರತೀಯರಿಗೆ ಅಪಾರ ನಂಬಿಕೆ ಇದೆ. ನೆಮ್ಮದಿಯ ಜೀವನಕ್ಕಾಗಿ ವಾಸ್ತು ಅನುಸಾರವಾಗಿ ಮನೆ ಕಟ್ಟಿಸಿ ಜೀವನ ನಡೆಸುವ ಜನಸಮೂಹ ಭಾರತದಲ್ಲಿ ಹೆಚ್ಚು. ಹೆಜ್ಜೆ ಹೆಜ್ಜೆಗೂ ವಾಸ್ತು ಅನುಸಾರವಾಗಿ ನಿರ್ಧಾರ ತೆಗೆದುಕೊಂಡರೆ, ಯಾವುದೇ ಸಮಸ್ಯೆಗಳು ಅಥವಾ ವಿಘ್ನಗಳು ಎದುರಾಗುವುದಿಲ್ಲ ಎಂಬುದು ಜನರ ನಂಬಿಕೆ. ಉತ್ಪಾದಕತೆ ಹೆಚ್ಚಿಸಲು ಮತ್ತು ಯೋಗಕ್ಷೇಮಕ್ಕೂ ಇದು ನೈಸರ್ಗಿಕ ವಿಧಾನ ಎನ್ನಲಾಗುತ್ತದೆ. ಮನೆ ಅಥವಾ ವ್ಯಾಪಾರ ಮತ್ತು ವ್ಯವಹಾರದ ಸ್ಥಳಗಳಲ್ಲಿಯೂ ವಾಸ್ತು ಪ್ರಕಾರ ವ್ಯವಸ್ಥಿತವಾಗಿ ಸಾಗಿದರೆ ಒಳೆಯದು. ಇದೇ ವೇಳೆ ನಿತ್ಯ ಕೆಲಸ ಮಾಡುವ ಸ್ಥಳಗಳಲ್ಲಿಯೂ ವಾಸ್ತು ನಿಯಮಗಳನ್ನು ಅನುಸರಿಸುವ ಮೂಲಕ ಉತ್ಪಾದಕತೆ ಹೆಚ್ಚಿಸಬಹುದು. ಅಲ್ಲದೆ ಏಕಾಗ್ರತೆ ವೃದ್ಧಿಸುವ ಮೂಲಕ ಪರಿಣಾಮಕಾರಿ ಫಲಿತಾಂಶ ಪಡೆಯಬಹುದಾಗಿದೆ.

ಕಚೇರಿ ಸೇರಿದಂತೆ ನಿಮ್ಮ ಕೆಲಸದ ಸ್ಥಳಗಳಲ್ಲಿ ಉತ್ಪಾದಕತೆ ಹೆಚ್ಚಿಸಿ ಉತ್ತಮ ಫಲಿತಾಂಶ ಪಡೆಯಲು ಸಹಾಯ ಮಾಡುವ ಪರಿಣಾಮಕಾರಿ ವಾಸ್ತು ಸಲಹೆಗಳು ನಿಮಗಾಗಿ.

ಗಾಳಿ ಮತ್ತು ಬೆಳಕು ಸಮರ್ಪಕವಾಗಿರಲಿ

ಮನೆ ಅಥವಾ ಕಚೇರಿ ಎಲ್ಲೇ ಆದರೂ, ನೈಸರ್ಗಿಕ ಬೆಳಕು ಒಳಗೆ ಬರಬೇಕು. ವಾತಾಯನ ವ್ಯವಸ್ಥೆ ಸರಿಯಾಗಿರಬೇಕು. ಪೂರ್ವ ಅಥವಾ ಈಶಾನ್ಯಕ್ಕೆ ದೊಡ್ಡ ಕಿಟಕಿಗಳು ಇಡುವುದು ಒಳ್ಳೆಯದು. ಸೂಕ್ತ ವಾತಾಯನ ವ್ಯವಸ್ಥೆಯಿಂದ ಕೊಠಡಿಯೊಳಗೆ ತಾಜಾ ಗಾಳಿ ಪ್ರವೇಶಿಸುತ್ತದೆ. ಆರೋಗ್ಯಕರ ಮತ್ತು ಪರಿಣಾಮಕಾರಿ ವಾತಾವರಣವು ಉತ್ಪಾದಕತೆ ಹೆಚ್ಚಿಸಲು ನೆರವಾಗುತ್ತದೆ.

ವಾಸ್ತುಗಿಡ

ಸಹಜವಾಗಿ ಸಸ್ಯಗಳು ಗಾಳಿಯ ಗುಣಮಟ್ಟವನ್ನು ಹೆಚ್ಚಿಸುತ್ತವೆ. ಕಚೇರಿ ಸ್ಥಳದಲ್ಲೂ ಉತ್ಪಾದಕತೆ ಹೆಚ್ಚಿಸಲು, ಒಳಾಂಗಣಕ್ಕೆ ಹೊಂದುವ ಸಸ್ಯಗಳನ್ನು ಇರಿಸಿ. ಕೆಲಸ ಮಾಡುವ ಕೋಣೆಯ ಈಶಾನ್ಯ ಮತ್ತು ಪೂರ್ವ ಮೂಲೆಗಳಲ್ಲಿ ಸಸಿ ಇಡುವುದು ಸೂಕ್ತ.

ಕುಳಿತುಕೊಳ್ಳುವ ದಿಕ್ಕು

ಗೋಡೆಯು ನಿಮ್ಮ ಹಿಂಭಾಗಕ್ಕೆ ಬರುವಂತೆ ಕುರ್ಚಿಯನ್ನು ಜೋಡಿಸಿಕೊಳ್ಳಿ. ಇದು ಸ್ಥಿರತೆಯನ್ನು ಪ್ರತಿನಿಧಿಸುತ್ತದೆ. ಕೋಣೆಯ ಪ್ರವೇಶದ್ವಾರವನ್ನು ಸ್ಪಷ್ಟವಾಗಿ ನೋಡಲು ನೆರವಾಗುವಂತೆ ಆಸನಗಳನ್ನು ಇರಿಸಿ.

ಬಣ್ಣದಲ್ಲೂ ಇದೆ ಲೆಕ್ಕಾಚಾರ

ಕೆಲಸದ ಸ್ಥಳದಲ್ಲಿ ತಿಳಿನೀಲಿ, ಹಸಿರು ಅಥವಾ ಬಿಳಿ ಬಣ್ಣಗಳನ್ನು ಬಳಸಿದರೆ ಉತ್ತಮ ಎಂದು ವಾಸ್ತು ಸಲಹೆ ನೀಡುತ್ತದೆ. ಇದು ಆಕರ್ಷಕ ಮಾತ್ರವಲ್ಲದೆ ಶಾಂತ ವಾತಾವಾರಣ ನಿರ್ಮಿಸುತ್ತದೆ. ಈ ಬಣ್ಣಗಳು ಪ್ರಶಾಂತತೆ ಮತ್ತು ಏಕಾಗ್ರತೆಯನ್ನು ಉತ್ತೇಜಿಸುತ್ತವೆ. ಕಣ್ಣುಗಳಿಗೆ ಎದ್ದುಕಾಣುವ ಬಣ್ಣಗಳಿಂದ ದೂರವಿರುವುದು ಒಳ್ಳೆಯದು.

ನಕಾರಾತ್ಮಕ ಅಂಶಗಳನ್ನು ತೆಗೆದುಹಾಕಿ

ಋಣಾತ್ಮಕ ಅರ್ಥ ಹೊಂದಿರುವ ಯಾವುದೇ ವಸ್ತು ಅಥವಾ ಅಂಶಗಳಿದ್ದರೂ ಅದನ್ನು ತೆಗೆದುಹಾಕಬೇಕು. ಇವುಗಳು ಧನಾತ್ಮಕ ಶಕ್ತಿಯನ್ನು ಹೋಗಲಾಡಿಸುತ್ತವೆ. ಜೊತೆಗೆ ಉತ್ಪಾದನೆಯನ್ನು ಕಡಿಮೆ ಮಾಡುವ ಸಾಧ್ಯತೆ ಇದೆ. ಇದರ ಬದಲಿಗೆ ಪಾಸಿಟಿವ್‌ ವೈಬ್‌ ಕೊಡುವ ಚಿತ್ರಗಳು ನಿಮ್ಮನ್ನು ಬೆಂಬಲಿಸುವ ಸಂಕೇತಗಳನ್ನು ಕೆಲಸದ ಸ್ಥಳಗಳಲ್ಲಿ ಇರಿಸಿ.

ಮೂಲ ವಾಸ್ತು ಅಂಶಗಳನ್ನು ಸಮತೋಲನಗೊಳಿಸಿ

ವಾಸ್ತುವಿನ ಪ್ರಮುಖ ಅಂಶವೇ, ನೀರು, ಬೆಂಕಿ, ಗಾಳಿಯಂಥ ಐದು ಅಂಶಗಳ ಸಮತೋಲನ. ಇವುಗಳ ಉಪಸ್ಥಿತಿ ಇರುವಂತೆ ನೋಡಿಕೊಳ್ಳಬೇಕು. ಮರದಂತಹ ನೈಸರ್ಗಿಕ ವಸ್ತುಗಳನ್ನು ಬಳಸಿ. ನೀರು ಒಳಗಿರುವಂತೆ ನೋಡಿಕೊಳ್ಳಿ. ನೈಸರ್ಗಿಕ ಬೆಳಕು ಹರಿಯಲಿ. ಸಾಕಷ್ಟು ಗಾಳಿ ಹರಿದಾಡುವಂತೆ ವಾತಾಯನ ವ್ಯವಸ್ಥೆ ಸರಿಯಾಗಿರಲಿ. ಗಾಳಿಯಾಡುವಂತೆ ತೆರೆದ ಪ್ರದೇಶಗಳನ್ನು ನಿರ್ಮಿಸಿ.

(ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ವಿಭಾಗ