ಫೆಂಗ್ ಶುಯಿ ವಸ್ತುಗಳಿಂದ ವಾಸ್ತು ದೋಷ ಪರಿಹಾರ; ಲಾಫಿಂಗ್ ಬುದ್ಧ, ಆಮೆ ಪ್ರತಿಮೆ ಪ್ರಾಮುಖ್ಯತೆ ಏನು?
ಮನೆ ಕಟ್ಟುವಾಗ ಆಗುವ ಸಮಸ್ಯೆಗಳು, ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಗೆ ವಾಸ್ತುವಿನಲ್ಲಿ ಪರಿಹಾರವಿದೆ. ಅದರಲ್ಲಿ ಚೀನೀ ವಾಸ್ತುಶಾಸ್ತ್ರಕ್ಕೆ ಈಗ ಬಹಳ ಬೇಡಿಕೆ ಇದೆ. ಫೆಂಗ್ ಶುಯಿ ವಸ್ತುಗಳಾದ ಲಾಫಿಂಗ್ ಬುದ್ಧ, ಆಮೆ ಪ್ರತಿಮೆ ಹಾಗೂ ಇನ್ನಿತರ ವಸ್ತುಗಳು ಮನೆಯಲ್ಲಿದ್ದರೆ ಬಹಳ ಶುಭ. ಇದರ ಪ್ರಾಮುಖ್ಯತೆ ಏನು ನೋಡೋಣ. (ಬರಹ: ಎಚ್. ಸತೀಶ್, ಜ್ಯೋತಿಷಿ)
ಮನೆ ಕಟ್ಟುವಾಗ ಶಾಸ್ತ್ರಬದ್ಧವಾಗಿ ಕಟ್ಟಿದರೆ ಏನೂ ಸಮಸ್ಯೆ ಇರುವುದಿಲ್ಲ. ಆದರೆ ಅದರ ಬಗ್ಗೆ ಅರಿವಿಲ್ಲದೆ ಆಕಸ್ಮಿಕವಾಗಿ ಮಾಡುವ ತಪ್ಪನ್ನು ಸರಿಪಡಿಸಿಕೊಳ್ಳಲು ಫೆಂಗ್ ಶುಯಿಯಲ್ಲಿ ಕೆಲವೊಂದು ವಸ್ತುಗಳು ದೊರೆಯುತ್ತವೆ. ಇದರಿಂದ ನಾವು ಧನಾತ್ಮಕ ಫಲಗಳನ್ನು ಪಡೆಯಬಹುದು ಪ್ರಮುಖವಾಗಿ ಇವು ಬಾಡಿಗೆ ಮನೆಗೆ ಬಹಳ ಉಪಯುಕ್ತವಾಗುತ್ತದೆ ಯಾವುದೇ ದುರಸ್ತಿ ಇಲ್ಲದೆ ವಾಸ್ತುದೋಷವನ್ನು ಸರಿಪಡಿಸಬಹುದಾಗಿದೆ.
ಲಾಫಿಂಗ್ ಬುದ್ಧನ ಪ್ರತಿಮೆ ಮನೆಯಲ್ಲಿದ್ದರೆ ಏನು ಪ್ರಯೋಜನ?
ನಗುವ ಬುದ್ಧನ ಪ್ರತಿಮೆಯು ನಮ್ಮ ದೈನಂದಿನ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇದರಿಂದ ನಾವು ಬಹಳ ಹಣ ಉಳಿಸಬಹುದು. ಸಂಪತ್ತನ್ನು ಗಳಿಸಬಹುದು. ಸೋಲಿನ ದವಡೆಯಲ್ಲಿ ಇರುವವರು ಈ ಪ್ರತಿಮೆಯ ಬಳಕೆಯಿಂದ ಸುಲಭವಾಗಿ ಯಶಸ್ಸನ್ನು ಕಾಣುತ್ತಾರೆ. ಕುಟುಂಬದಲ್ಲಿ ಎದುರಾಗುವ ಅನಗತ್ಯ ಸಮಸ್ಯೆಗಳನ್ನು ಈ ಪ್ರತಿಮೆ ದೂರ ಮಾಡುತ್ತದೆ. ಕೇವಲ ವಾಸವಿರುವ ಮನೆ ಮಾತ್ರವಲ್ಲದೆ, ವ್ಯಾಪಾರ ಮಾಡುವ ಸ್ಥಳದಲ್ಲಿಯೂ ಇದನ್ನು ಬಳಸಬಹುದು. ಸ್ವಂತ ಉದ್ಧಿಮೆ ಇದ್ದಲ್ಲಿ ವಾಸ್ತುದೋಷ ಕಡಿಮೆಯಾಗುತ್ತದೆ. ಈ ಪ್ರತಿಮೆಯಿಂದ ಧನಾತ್ಮಕ ಶಕ್ತಿಯೂ ಹೆಚ್ಚುತ್ತದೆ. ಇದರಿಂದ ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಅನಾರೋಗ್ಯವಿದ್ದಲ್ಲಿ ಪರಿಹಾರ ದೊರೆಯುತ್ತದೆ. ಕುಟುಂಬದಲ್ಲಿ ನಡೆಯಬೇಕಿದ್ದ ಯಾವುದಾದರೂ ಶುಭ ಕಾರ್ಯಕ್ರಮಕ್ಕೆ ವಿಘ್ನ ಎದುರಾದಲ್ಲಿ ಈ ವಿಗ್ರಹದಿಂದ ಆ ಸಮಸ್ಯೆ ಪರಿಹಾರವಾಗುತ್ತದೆ. ನವ ವಿವಾಹಿತರಿಗೆ ಸಂತಾನ ಪ್ರಾಪ್ತಿಯಾಗುತ್ತದೆ. ದಂಪತಿ ನಡುವೆ ಉತ್ತಮ ಅನ್ಯೋನ್ಯತೆ ಕಂಡು ಬರುತ್ತದೆ.
ಲಾಫಿಂಗ್ ಬುದ್ಧನ ಪ್ರತಿಮೆಯನ್ನು ಮನೆಯ ಹಾಲ್‌ನಲ್ಲಿ ಇಡುವುದು ಹೆಚ್ಚು ಲಾಭ. ಮನೆ ಮಂದಿ ನಡುವೆ, ಸಂಬಂಧಿಕರ ನಡುವೆ ಉತ್ತಮ ಬಾಂಧವ್ಯ ವ್ಯಕ್ತವಾಗುತ್ತದೆ. ಆದರೆ ಮಲಗುವ ಕೋಣೆಯಲ್ಲಿ ಇದನ್ನು ಇಡಬಾರದು. ಕೆಲಸ ನಿರ್ವಹಿಸುವ ಕಚೇರಿ ಅಥವಾ ವ್ಯಾಪಾರ ಮಾಡುವ ಸ್ಥಳದಲ್ಲಿ ನಮ್ಮ ಹಿಂಭಾಗದಲ್ಲಿ ನಮ್ಮ ತಲೆಗಿಂತ ಎತ್ತರವಿರುವಂತೆ ಈ ವಿಗ್ರಹವನ್ನು ಇಡುವುದು ಹೆಚ್ಚು ಲಾಭದಾಯಕವಾಗಿದೆ.
ನಾಣ್ಯದ ಮೇಲೆ ಕುಳಿತಿರುವ ಕಪ್ಪೆಯ ಪ್ರತಿಮೆಯ ಪ್ರಾಮುಖ್ಯತೆ
ನಾಣ್ಯದ ಮೇಲೆ ಕುಳಿತಿರುವ ಕಪ್ಪೆಯ ಪ್ರತಿಮೆಯು ನಗುವ ಬುದ್ಧನ ಪ್ರತಿಮೆಯಷ್ಟೇ ಪ್ರಮುಖವಾಗುತ್ತದೆ. ಸಾಮಾನ್ಯವಾಗಿ ಕಪ್ಪೆಗಳಿಗೆ ನಾಲ್ಕು ಕಾಲುಗಳು ಇರುತ್ತವೆ. ಆದರೆ ಈ ಪ್ರತಿಮೆಯಲ್ಲಿರುವ ಕಪ್ಪೆಗೆ ಕೇವಲ ಮೂರು ಕಾಲುಗಳಿರುತ್ತವೆ. ಕೇವಲ ಚೀನಾದಲ್ಲಿ ಮಾತ್ರವಲ್ಲದೆ ನಮ್ಮ ಭಾರತದಲ್ಲಿಯೂ ಕೂಡ ಇದರ ಬಗ್ಗೆ ನಂಬಿಕೆ ಇದೆ. ಕಪ್ಪೆಯು ಮನೆಯ ಒಳಗೆ ಬಂದರೆ ಆ ಕುಟುಂಬದ ಹಣಕಾಸಿನ ತೊಂದರೆ ದೂರವಾಗುವುದೆಂಬ ನಂಬಿಕೆ ಇದೆ. ದಿಢೀರನೆ ಹಣ ಗಳಿಸುವ ಅವಕಾಶವು ದೊರೆಯುತ್ತದೆ. ಯಾರಿಗೂ ಕಾಣದಂತೆ ನೀವು ಹಣ ಇಡುವ ಸ್ಥಳದಲ್ಲಿ ಇಡಬಹುದು. ಒಮ್ಮೆ ಇದನ್ನು ಇಟ್ಟ ಸ್ಥಳದಲ್ಲೇ ಇಡಬೇಕು. ಪದೇ ಪದೆ ಸ್ಥಳ ಬದಲಿಸಬಾರದು. ಇದರ ಮೇಲಿನ ನಾಣ್ಯವನ್ನು ಹೊರಗೆ ಹೋಗುವಾಗ ತೆಗೆದುಕೊಂಡು ಹೋಗಬಹುದು. ಇದರಿಂದ ಉತ್ತಮ ಆದಾಯ ದೊರೆಯುತ್ತದೆ. ಒಂದು ವೇಳೆ ಇದನ್ನು ಕಳೆದುಕೊಂಡರೆ ಹಣದ ತೊಂದರೆ ಎದುರಿಸುವ ಸಾಧ್ಯತೆ ಇದೆ. ಆದ್ದರಿಂದ ಜಾಗ್ರತೆಯಿಂದಿರಿ.
ಹಿಂದೂ ಧರ್ಮದಲ್ಲಿ ವಿಷ್ಣುವಿನ ಕೂರ್ಮಾವತಾರಕ್ಕೆ ಬಹಳ ಪ್ರಾಮುಖ್ಯತೆ ಇದೆ. ಅದೇ ರೀತಿ ಮನೆಯಲ್ಲಿ ಆಮೆಯ ಪ್ರತಿಮೆಯನ್ನು ಇಡುವುದು ಕೂಡಾ ಬಹಳ ಶುಭ. ಇದರಿಂದ ವಾಸ್ತು ದೋಷ ನಿವಾರಣೆಯಾಗುತ್ತದೆ. ಮುಖ್ಯವಾಗಿ ಆಮೆಯ ಪ್ರತಿಮೆ ಇದ್ದಲ್ಲಿ ಆ ಕುಟುಂಬದವರ ಆರೋಗ್ಯದಲ್ಲಿ ಸ್ಥಿರತೆ ಕಂಡುಬರುತ್ತದೆ. ಆಗ್ಗಾಗ್ಗೆ ವಾಹನ ಅಪಘಾತವಾಗುತ್ತಿದ್ದು ಈ ಆಮೆ ಪ್ರತಿಮೆಯನ್ನು ಮನೆಯ ಉತ್ತರ ದಿಕ್ಕಿನಲ್ಲಿ ಇಟ್ಟರೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಇದನ್ನು ನೀರಿನಲ್ಲಿ ಇಡುವುದು ಸರಿಯಾದ ಮಾರ್ಗ. ಇದು ಪೂರ್ವ ದಿಕ್ಕಿಗೆ ತನ್ನ ಮುಖವನ್ನು ಮಾಡಿರಬೇಕು. ಮಲಗುವ ಕೊಠಡಿಯಲ್ಲಿ ಇರಿಸದಲ್ಲಿ ಇದನ್ನು ನೀರಿನಲ್ಲಿ ಇಡಬಾರದು. ಒಂದು ವೇಳೆ ನೀರಿನಲ್ಲಿ ಇಟ್ಟಲ್ಲಿ ದಂಪತಿ ನಡುವೆ ಕಲಹ ಉಂಟಾಗುವ ಸಾಧ್ಯತೆ ಇದೆ.
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).