Vastu Tips: ದೇವಸ್ಥಾನ ಹೊರತುಪಡಿಸಿ ಮನೆಯ ಆವರಣದಲ್ಲಿ ಅರಳಿಗಿಡ ಬೆಳೆಸುವುದು ಸರಿಯೋ ತಪ್ಪೋ? ಇಲ್ಲಿದೆ ವಾಸ್ತು ಸಲಹೆ
Vastu Tips: ಪ್ರತಿ ದೇವಸ್ಥಾನಗಳಲ್ಲೂ ಅರಳಿಮರ ಇದ್ದೇ ಇರುತ್ತದೆ. ಅರಳಿ ಮರದಲ್ಲಿ ದೇವತೆಗಳು ನೆಲೆಸಿರುತ್ತಾರೆ ಎಂಬ ನಂಬಿಕೆ ಇದೆ. ಆದರೆ ಅದು ಪೂಜ್ಯ ಎಂಬ ಕಾರಣಕ್ಕೆ ಕೆಲವರು ಮನೆಯ ಆವರಣದಲ್ಲಿ ಕೂಡಾ ಅರಳಿಮರವನ್ನು ಬೆಳೆಸುತ್ತಾರೆ. ಆದರೆ ಈ ರೀತಿ ಬೆಳೆಸುವುದು ಸರಿಯೋ? ತಪ್ಪೋ ? ಇಲ್ಲಿದೆ ಮಾಹಿತಿ.
ಹಿಂದೂ ಧರ್ಮದಲ್ಲಿ ಕೆಲವೊಂದು ವೃಕ್ಷಗಳಿಗೆ ಪೂಜ್ಯನೀಯ ಸ್ಥಾನವಿದೆ. ಅದರಂತೆ ಅರಳಿ ಮರವನ್ನು ಭಕ್ತರು ಪ್ರತಿ ದಿನ ಪೂಜಿಸುತ್ತಾರೆ. ಎಲ್ಲಾ ದೇವಸ್ಥಾನಗಳ ಆವರಣದಲ್ಲಿ ಅಶ್ವತ್ಥ ಮರವನ್ನು ನೆಡಲಾಗಿರುತ್ತದೆ. ಅರಳಿಮರದಲ್ಲಿ ದೇವತೆಗಳು ನೆಲೆಸಿದ್ದು 3 ಪ್ರದಕ್ಷಿಣಿ ಹಾಕಿ ಪ್ರಾರ್ಥಿಸಿದರೆ ಎಲ್ಲಾ ಕಷ್ಟಗಳು ಕಳೆಯುತ್ತವೆ ಎಂದು ನಂಬಲಾಗಿದೆ.
ಅರಳಿ ಮರ ದೇವರ ಸ್ವರೂಪ ಎಂಬ ಕಾರಣಕ್ಕೆ ಬಹಳಷ್ಟು ಜನರು ಅದನ್ನು ಮನೆಯಲ್ಲೇ ಬೆಳೆಸಲು ನೋಡುತ್ತಾರೆ. ಮನೆಯ ಸುತ್ತಮುತ್ತಲೂ ಮರಗಿಡಗಳನ್ನು ಬೆಳೆಸುವುದು ಬಹಳ ಒಳ್ಳೆಯದು. ಹೀಗೆ ಮಾಡುವುದರಿಂದ ಹಲವಾರು ಆರೋಗ್ಯ ಬಹಳ ಒಳ್ಳೆಯದು. ಸಸ್ಯಗಳು ಮತ್ತು ಮರಗಳು ತಾಜಾತನವನ್ನು ಹೊರ ಹಾಕುತ್ತವೆ ಮತ್ತು ನಮಗೆ ಹೆಚ್ಚು ಅಗತ್ಯವಿರುವ ಆಮ್ಲಜನಕ ಮತ್ತು ಶುದ್ಧ ಗಾಳಿಯನ್ನು ಒದಗಿಸುತ್ತವೆ. ಆದರೆ ಅದು ವಾಸ್ತು ಪ್ರಕಾರ ಅರಳಿ ಮರವನ್ನು ಮನೆಯ ಆವರಣದಲ್ಲಿ ಬೆಳೆಸುವುದು ಒಳ್ಳೆಯದಲ್ಲ.
ಮನೆ ಆವರಣದಲ್ಲಿ ಅರಳಿಮರ ಬೆಳೆಸುವುದು ಅಶುಭ
ಯಾರೇ ಆಗಲೀ, ತಮ್ಮ ಮನೆಯಲ್ಲಿ ವಾಸ್ತು ಪ್ರಕಾರ ಯಾವ ರೀತಿಯ ಸಸ್ಯಗಳನ್ನು ಬೆಳೆಸಬೇಕು ಎನ್ನುವುದರ ಬಗ್ಗೆ ಬಹಳ ಜಾಗರೂಕರಾಗಿರಬೇಕು. ಮನೆಗೆ ಒಳ್ಳೆಯದಾಗಬೇಕು, ನಮ್ಮ ಮನೆಯಲ್ಲಿ ದೇವತೆಗಳು ನೆಲೆಸಬೇಕು, ಅವರ ಆಶೀರ್ವಾದ ದೊರೆಯಬೇಕೆಂದು ಅರಳಿಮರವನ್ನು ನೀವು ಮನೆಯಲ್ಲಿ ನೆಟ್ಟರೆ ಅದು ಸಂತೋಷಕ್ಕಿಂತ ನಿಮಗೆ ಸಮಸ್ಯೆಯನ್ನೇ ತರುತ್ತದೆ. ಅರಳಿಮರಕ್ಕೆ ಸಂಬಂಧಿಸಿದಂತೆ ಈ ವಿಚಾರಗಳನ್ನು ನೀವು ನೆನಪಿನಲ್ಲಿಡಿ.
- ಒಂದು ವೇಳೆ ನಿಮ್ಮ ಮನೆ ಆವರಣದಲ್ಲಿ ಅರಳಿ ಮರವು ಸ್ವಾಭಾವಿಕವಾಗಿ ಬೆಳೆದರೆ, ಅದು ಸಸ್ಯವಾಗಿದ್ದಾಗಲೇ ಬೇರುಸಹಿತ ಅದನ್ನು ಕಿತ್ತು ಬೇರೆ ಕಡೆ ನೆಡಬೇಕು. ಅದನ್ನು ಎಚ್ಚರಿಕೆಯಿಂದ ಬೇರುಸಹಿತ ಕಿತ್ತು ಆರಂಭದಲ್ಲಿಯೇ ಬೇರೆಡೆ ನೆಡಬೇಕು. ಆದರೆ ನೀವು ಅದನ್ನು ಕೀಳುವಾಗಲೂ ನೀವು ಜಾಗೃತರಾಗಬೇಕು. ಏಕೆಂದರೆ ಅರಳಿಮರವನ್ನು ನೀವು ಶನಿವಾರಂದು ಕೀಳಬಾರದು ಹಾಗೂ ಸ್ಥಾನ ಬದಲಾವಣೆ ಮಾಡಬಾರದು. ಹೀಗೆ ಮಾಡಿದರೆ ಕುಟುಂಬದ ಸದಸ್ಯರು ಆರೋಗ್ಯ ಸಮಸ್ಯೆ ಅನುಭವಿಸುತ್ತಾರೆ. ನಿಮ್ಮ ಮನೆಯ ಪ್ರಗತಿಗೆ ಅದು ಅಡ್ಡಿಯಾಗುತ್ತದೆ.
- ನಿಮ್ಮ ಮನೆಯ ಆವರಣದ ಹೊರಗೆ ಅರಳಿಗಿಡ ಬೆಳೆದಿದ್ದರೆ ಅದನ್ನು ಪೂಜಿಸಿ ನಿಧಾನವಾಗಿ ಬೇರು ಸಹಿತ ಕಿತ್ತು ಕುಂಡದಲ್ಲೇ ಇರಿಸಿ, ಹಾಗೆ ಸಸ್ಯವನ್ನು ಕೀಳುವಾಗ ಬೇರುಗಳಿಗೆ ಪೆಟ್ಟಾಗದಂತೆ ನೋಡಿಕೊಳ್ಳಬೇಕು. ಏಕೆಂದರೆ ಅರಳಿ ಮರವನ್ನು ಬ್ರಹ್ಮನ ವಾಸಸ್ಥಾನ ಎಂದು ನಂಬಲಾಗಿದೆ.
- ಮನೆಯ ಪೂರ್ವ ದಿಕ್ಕಿನಲ್ಲಿ ಅರಳಿಗಿಡವನ್ನು ನೆಡಬಾರದು, ಹಾಗೆ ಮಾಡುವುದರಿಂದ ಹಣಕಾಸಿನ ಸಮಸ್ಯೆಗಳು ಹೆಚ್ಚಾಗಿ ಹಣದ ಕೊರತೆಗೆ ಕಾರಣವಾಗಬಹುದು. ಅರಳಿಗಿಡವನ್ನು ಕಿತ್ತು ಪೂಜೆ ಮಾಡಿದ ನಂತರ ಅದನ್ನು ಸಮೀಪದಲ್ಲಿ ಇರುವ ದೇವಸ್ಥಾನಕ್ಕೆ ನೀಡಬೇಕು.
ಇದನ್ನೂಓದಿ: ನವಿಲುಗರಿಯನ್ನು ಶೋಕೇಸ್‌ನಲ್ಲಿಟ್ಟಿದ್ದೀರಾ? ಒಮ್ಮೆ ಅದಕ್ಕೆ ಸಂಬಂಧಿಸಿದ ವಾಸ್ತು ತಿಳಿಯಿರಿ
- ಸೌದೆಗಾಗಿ ಅಥವಾ ಮತ್ತಾವುದೇ ಕಾರಣಕ್ಕಾಗಿ ಅರಳಿ ಮರವನ್ನು ಕಡಿಯುವುದು ತಪ್ಪು. ಹೀಗೆ ಮಾಡಿದರೆ ಅದು ಆ ವ್ಯಕ್ತಿಯ ಜೀವನದಲ್ಲಿ ನಕಾರಾತ್ಮಕ ಅಂಶವಾಗಿ ಬದಲಾಗುತ್ತದೆ. ಅರಳಿ ಮರವನ್ನು ಕತ್ತರಿಸುವುದರಿಂದ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಉಂಟಾಗಬಹುದು ಮತ್ತು ಮಕ್ಕಳು ತೊಂದರೆಗಳನ್ನು ಎದುರಿಸಬೇಕಾಗಬಹುದು. ಶಾಸ್ತ್ರಗಳ ಪ್ರಕಾರ ಅಶ್ವತ್ಥ ಮರವನ್ನು ಕತ್ತರಿಸಿದಾಗ ಪೂರ್ವಜರಿಗೆ ನೋವಾಗುತ್ತದೆ.
- ವಾಸ್ತು ಶಾಸ್ತ್ರದ ಪ್ರಕಾರ ಅರಳಿ ಮರದ ನೆರಳು ಮನೆಯ ಮೇಲೆ ಬಿದ್ದರೆ ಅದು ಮನೆಯ ಪ್ರಗತಿಗೆ ಅಡ್ಡಿಯಾಗುತ್ತದೆ. ಅದರ ನೆರಳು ಅಶುಭವಾದ್ದರಿಂದ ಆ ಮನೆ ವಿವಿಧ ಸಮಸ್ಯೆಗಳಿಂದ ಕೂಡಿರುತ್ತದೆ.
- ವಾಸ್ತು ಶಾಸ್ತ್ರದ ಪ್ರಕಾರ, ಅರಳಿ ಮರವು ತನ್ನ ಸುತ್ತಲೂ ಏಕಾಂತವನ್ನು ಸೃಷ್ಟಿಸುತ್ತದೆ. ಆದ್ದರಿಂದ, ಈ ಸಸ್ಯ ಬೆಳೆಯುವ ಅಥವಾ ನೆಟ್ಟ ಮನೆಯಲ್ಲಿ, ಆ ಮನೆಯಲ್ಲಿ ವಾಸಿಸುವರು ತಮ್ಮ ಜೀವನದಲ್ಲಿ ನಿರಂತರವಾಗಿ ಸಮಸ್ಯೆಗಳನ್ನು ಎದುರಿಸುತ್ತಾರೆ. ಆದ್ದರಿಂದ ಯಾವುದೇ ಕಾರಣಕ್ಕೂ ಅರಳಿಗಿಡವನ್ನು ನಿಮ್ಮ ಮನೆಯಲ್ಲಿ ನೆಡಬೇಡಿ. ದೇವಸ್ಥಾನಕ್ಕೆ ಹೋಗಿ ಪೂಜಿಸಿ ಬನ್ನಿ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.