ವಾಸ್ತು ಪ್ರಕಾರ ಸ್ನೇಕ್ ಪ್ಲಾಂಟ್ ಮನೆಯಲ್ಲಿದ್ರೆ ಒಳ್ಳೆಯದು; ಗಾಳಿಯನ್ನು ಶುದ್ಧೀಕರಿಸುವ ಈ ಸಸ್ಯ ಆರೋಗ್ಯದ ದೃಷ್ಟಿಯಿಂದಲೂ ಉಪಯುಕ್ತ
Snake Plant: ನೋಡಲು ಹಾವಿನಂತೆ ಕಾಣುವ ಈ ಸಸ್ಯ ಮನೆಯಲ್ಲಿದ್ದರೆ ಬಹಳ ಒಳ್ಳೆಯದು. ವಾಸ್ತು ಪ್ರಕಾರ ಸ್ನೇಕ್ ಪ್ಲಾಂಟ್ ಮನೆಯಲ್ಲಿದ್ರೆ ಒಳ್ಳೆಯದು. ಗಾಳಿಯನ್ನು ಶುದ್ಧೀಕರಿಸುವ ಈ ಸಸ್ಯ ಆರೋಗ್ಯದ ದೃಷ್ಟಿಯಿಂದಲೂ ಉಪಯುಕ್ತ. ಇದರ ನಿರ್ವಹಣೆ ಕೂಡಾ ಬಹಳ ಸುಲಭ.
ಅರಳಿ ಮರ, ತೆಂಗಿನ ಮರ, ಶಮಿ ವೃಕ್ಷ, ಬಾಳೆ ಗಿಡ ಸೇರಿದಂತೆ ಹಿಂದೂ ಸಂಸ್ಕೃತಿಯಲ್ಲಿ ನಾವು ಅನೇಕ ಮರ ಗಿಡಗಳನ್ನು ದೇವರ ರೂಪದಲ್ಲಿ ನೋಡುತ್ತೇವೆ. ದೈವಿಕ ಗುಣಗಳೊಂದಿಗೆ ಕೆಲವು ಗಿಡಗಳಂತೂ ಔಷಧೀಯ ಗುಣಗಳನ್ನು ಹೊಂದಿದೆ. ವೇದಕಾಲದಿಂದ ಹಿಡಿದು ಈಗನ ವೈದ್ಯಕೀಯ ಕ್ಷೇತ್ರದವರೆಗೂ ಎಲ್ಲರೂ ಈ ವಿಚಾರವನ್ನು ನಂಬುತ್ತಾರೆ. ಇಂಥಹ ಸಸ್ಯಗಳಲ್ಲಿ ಸ್ನೇಕ್ ಪ್ಲಾಂಟ್ ಕೂಡಾ ಒಂದು.
ವಾಸ್ತು, ಆರೋಗ್ಯದ ದೃಷ್ಟಿಯಿಂದ ಪ್ರಯೋಜನಾಕಾರಿ
ಸ್ನೇಕ್ ಪ್ಲಾಂಟ್, ವಾಸ್ತು ಪ್ರಕಾರ ಮಾತ್ರವಲ್ಲದೆ ಆರೋಗ್ಯದ ದೃಷ್ಟಿಯಿಂದಲೂ ಬಹಳ ಒಳ್ಳೆಯದು. ಈ ಸಸ್ಯವನ್ನು ಮನೆಯಲಿ ಇಟ್ಟರೆ ಹಾವು ಬರುತ್ತದೆ ಎಂದು ಕೆಲವರು ತಪ್ಪು ತಿಳಿದಿದ್ದಾರೆ. ಆದರೆ ಅದು ಸುಳ್ಳು, ಸ್ನೇಕ್ ಪ್ಲಾಂಟ್ ಎಂದರೆ ಹಾವು ಬರುತ್ತದೆ ಎಂದು ಅರ್ಥವಲ್ಲ. ಈ ಗಿಡಗಳ ಎಲೆಗಳನ್ನು ನೋಡಲು ಹಾವಿನಂತೆ ಕಾಣುವುದರಿಂದ ಇದನ್ನು ಸ್ನೇಕ್ ಪ್ಲಾಂಟ್ ಎಂದು ಕರೆಯುತ್ತಾರೆ. ಆಂಗ್ಲ ಭಾಷೆಯಲ್ಲಿ Sansevieria trifasciata ಎನ್ನಲಾಗುತ್ತದೆ. ಸ್ನೇಕ್ ಪ್ಲಾಂಟನ್ನು ಮನೆಯಲ್ಲಿ ಇಡುವುದರಿಂದ ಬಹಳ ಒಳ್ಳೆಯದು. ಮನೆಯಲ್ಲಿ ಸುಖ ಶಾಂತಿ ನೆಲೆಸಿರುತ್ತದೆ. ಇದರಿಂದ ನೀವು ಬಹಳ ಪ್ರಯೋಜನಗಳನ್ನು ಪಡೆಯುತ್ತೀರಿ. ವೈಜ್ಞಾನಿಕವಾಗಿ ಕೂಡಾ ಇದು ಸಾಬೀತಾಗಿದೆ.
ಸ್ನೇಕ್ ಪ್ಲಾಂಟ್ ವಾಸ್ತು
- ಸ್ನೇಕ್ ಪ್ಲಾಂಟ್ ನಿಮ್ಮ ಮನೆಯಲ್ಲಿ ಇದ್ದರೆ ನಿಮ್ಮ ಪ್ರಗತಿಗೆ ಅಡ್ಡಿಯಾಗುವ ಎಲ್ಲಾ ಅಡೆತಡೆಗಳೂ ದೂರಾಗುತ್ತದೆ. ನೀವು ವ್ಯಾಪಾರ ಮಾಡುತ್ತಿದ್ದಲ್ಲಿ ಒಳ್ಳೆ ಆದಾಯ ದೊರೆಯುತ್ತದೆ. ಕೈ ತುಂಬಾ ಸಂಬಳ ಬರುವ ಉದ್ಯೋಗ ದೊರೆಯುತ್ತದೆ. ವಿದ್ಯಾರ್ಥಿಗಳು ಏಕಾಗ್ರತೆಯಿಂದ ವಿದ್ಯಾಭ್ಯಾಸ ಮಾಡುತ್ತಾರೆ.
- ಸ್ನೇಕ್ ಪ್ಲಾಂಟ್, ಸುತ್ತಮುತ್ತಲಿನ ಗಾಳಿಯನ್ನು ಶುದ್ಧೀಕರಿಸುತ್ತದೆ ಮತ್ತು ಮಾನಸಿಕ ಶಾಂತಿಯನ್ನು ನೀಡುತ್ತದೆ. ಆದ್ದರಿಂದ, ಮನೆಯಲ್ಲಿ ಈ ಗಿಡದಿಂದ ಜನರು ಮಾನಸಿಕವಾಗಿ ಸಂತೋಷದಿಂದ ಇರುತ್ತಾರೆ, ಸದಾ ಧನಾತ್ಮಕವಾಗಿ ಯೋಚಿಸುತ್ತಾರೆ.
- ನಿಮ್ಮ ಕಚೇರಿ ಟೇಬಲ್ ಮೇಲೆ ಹಾವಿನ ಗಿಡ ಇಡುವುದು ಕೂಡ ತುಂಬಾ ಒಳ್ಳೆಯದು. ನಿಮ್ಮ ವೃತ್ತಿ ಜೀವನದಲ್ಲಿ ಅಭಿವೃದ್ಧಿ ಹೊಂದಲು ಇದು ಸಹಾಯಕವಾಗಿದೆ. ನಿಮ್ಮ ಏಕಾಗ್ರತೆಯನ್ನು ಹೆಚ್ಚಿಸಿ ಕೆಲಸದಲ್ಲಿ ಯಶಸ್ಸು ಗಳಿಸುವಂತೆ ಮಾಡುತ್ತದೆ.
- ಮನೆಯ ಲಿವಿಂಗ್ ರೂಮ್ ಅಥವಾ ಆಗ್ನೇಯ ಮೂಲೆಯಲ್ಲಿ ಈ ಸ್ನೇಕ್ ಪ್ಲಾಂಟ್ ಇಡುವುದು ವಾಸ್ತು ಪ್ರಕಾರ ಬಹಳ ಒಳ್ಳೆಯದು.
ಆರೋಗ್ಯದ ದೃಷ್ಟಿಯಿಂದ ಈ ಸಸ್ಯದಿಂದ ಏನು ಲಾಭ?
- ಸ್ನೇಕ್ ಪ್ಲಾಂಟ್ ಗಾಳಿಯನ್ನು ನೈಸರ್ಗಿಕವಾಗಿ ಶುದ್ಧೀಕರಿಸುತ್ತದೆ ಎಂದು ಅಧ್ಯಯನದಿಂದ ಸಾಬೀತಾಗಿದೆ. ಇದು ಗಾಳಿಯಲ್ಲಿ ತೇವಾಂಶವನ್ನು ಕಡಿಮೆ ಮಾಡುತ್ತದೆ. ಗಾಳಿಯಿಂದ ಉಂಟಾಗುವ ಅಲರ್ಜಿಯನ್ನು ಸಹ ಕಡಿಮೆ ಮಾಡುತ್ತದೆ.
- ಈ ಸಸ್ಯವು ಕ್ಸೈಲೀನ್, ಟೊಲ್ಯೂನ್, ನೈಟ್ರಸ್ ಆಕ್ಸೈಡ್‌ನಂತಹ ಹಾನಿಕಾರಕ ವಸ್ತುಗಳನ್ನು ನಿಯಂತ್ರಿಸುತ್ತದೆ. ಇದು ರಾತ್ರಿಯಲ್ಲಿ ಕಾರ್ಬನ್ ಡೈಆಕ್ಸೈಡ್ ಅನ್ನು ಆಮ್ಲಜನಕವಾಗಿ ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿದೆ.
- ಸ್ನೇಕ್ ಪ್ಲಾಂಟ್ ಮನೆಯಲ್ಲಿ ಇದ್ದರೆ ಕ್ಯಾನ್ಸರ್ ಅಪಾಯವನ್ನೂ ಕಡಿಮೆ ಮಾಡುತ್ತದೆ. ಈ ಸಸ್ಯವು ವಾಯುಗಾಮಿ ವಿಷಗಳು ಮತ್ತು ಕ್ಯಾನ್ಸರ್ ಉಂಟುಮಾಡುವ ಏಜೆಂಟ್‌ಗಳನ್ನು ಹೀರಿಕೊಳ್ಳುತ್ತದೆ. ಈ ಗಿಡವನ್ನು ಮನೆಗಳಲ್ಲಿ ಇಟ್ಟುಕೊಂಡರೆ ಕ್ಯಾನ್ಸರ್ ನಂತಹ ಅಪಾಯಕಾರಿ ರೋಗಗಳಿಂದ ರಕ್ಷಣೆ ಪಡೆಯಬಹುದು.
- ನಿದ್ರಾಹೀನತೆಯಿಂದ ಬಳಲುವವರಿಗೆ ಇದು ಬಹಳ ಒಳ್ಳೆಯದು. ಸ್ನೇಕ್ ಪ್ಲಾಂಟ್ ಮನೆಯಲ್ಲಿದ್ದರೆ ಒಳ್ಳೆ ನಿದ್ರೆ ಬರುತ್ತದೆ, ಒತ್ತಡವೂ ಕಡಿಮೆ ಆಗುತ್ತದೆ.
ಸ್ನೇಕ್ ಪ್ಲಾಂಟ್ ನಿರ್ವಹಣೆ ಮಾಡುವುದು ಹೇಗೆ?
ಸ್ನೇಕ್ ಪ್ಲಾಂಟ್ ಬೆಳೆಸಲು ಹೆಚ್ಚಿನ ಶ್ರಮ ಬೇಕಾಗಿಲ್ಲ. ಇದು ಸೂರ್ಯ ಅಥವಾ ನೆರಳಿನಲ್ಲಿ ಎಲ್ಲಿಯಾದರೂ ಬೆಳೆಯುತ್ತದೆ. ಇದಕ್ಕೆ ಹೆಚ್ಚಿನ ನೀರಿನ ಅವಶ್ಯಕತೆಯೂ ಇಲ್ಲ. ಅಗತ್ಯಕ್ಕಿಂತ ಹೆಚ್ಚು ನೀರು ಹಾಕಿದರೆ ಗಿಡ ಹಾಳಾಗುತ್ತದೆ. 2-3 ವಾರಗಳಿಗೊಮ್ಮೆ ನೀರು ಹಾಕಿದರೆ ಸಾಕು. ಚಳಿಗಾಲದಲ್ಲಿ ತಿಂಗಳಿಗೆ ಒಮ್ಮೆ ಅಥವಾ ಎರಡು ಬಾರಿ ನೀರು ಹಾಕಿದರೆ ಸಾಕು. ಆದರೆ ಎಲೆಗಳ ಮೇಲೆ ಧೂಳು ಬಿದ್ದರೆ ಅದನ್ನು ನಿಯಮಿತವಾಗಿ ಸ್ವಚ್ಚಗೊಳಿಸಿದರೆ ಸಾಕು. ಹಾಗೇ ವರ್ಷಕ್ಕೆ ಎರಡು ಬಾರಿ ರಸಗೊಬ್ಬರ ಒದಗಿಸಿದರೆ ಸಾಕು.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.