ನಿಮ್ಮ ಮನೆಯಲ್ಲಿ ಲಕ್ಷ್ಮೀ ಶಾಶ್ವತವಾಗಿ ನೆಲೆಸಿರಬೇಕಾ; ವಾಸ್ತು ಪ್ರಕಾರ ಮನೆಯ ಮುಖ್ಯ ದ್ವಾರದಲ್ಲಿ ಹೀಗೆ ಮಾಡಿ
Vastushastra: ಪ್ರತಿಯೊಬ್ಬರಿಗೂ ಹಣದ ಅವಶ್ಯಕತೆ ಇದೆ. ಲಕ್ಷ್ಮೀ ನಮಗೆ ಒಲಿಯಬೇಕೆಂಬ ಆಸೆ ಇರುತ್ತದೆ. ಆದ್ದರಿಂದ ವಾಸ್ತು ಪ್ರಕಾರ ಮನೆಯ ಮುಖ್ಯ ದ್ವಾರದಲ್ಲಿ ಕೆಲವೊಂದು ವಸ್ತುಗಳನ್ನು ಇಡುವುದರಿಂದ ಲಕ್ಷ್ಮೀ ಮನೆಯಲ್ಲಿ ಶಾಶ್ವತವಾಗಿ ನೆಲೆಸುತ್ತಾಳೆ ಎಂಬ ನಂಬಿಕೆ ಇದೆ.
ದುಡ್ಡು ಪ್ರತಿಯೊಬ್ಬರಿಗೂ ಬೇಕು. ನಮ್ಮ ದಿನನಿತ್ಯದ ಜೀವನದಲ್ಲಿ ಹಣವು ಪ್ರಮುಖ ಭಾಗವಾಗಿದೆ. ಪ್ರತಿಯೊಬ್ಬರೂ ತಮಗೆ ಲಕ್ಷ್ಮೀ ಕೃಪೆ ಇರಬೇಕೆಂದು ಬಯಸುತ್ತಾರೆ. ಶ್ರೀಮಂತಿಕೆಗಾಗಿ ನಾನಾ ಪೂಜೆ ಮಾಡುತ್ತಾರೆ. ಲಕ್ಷ್ಮೀ ಯಂತ್ರವನ್ನು ಮನೆಗೆ ತಂದು ಪೂಜಿಸುತ್ತಾರೆ. ಲಕ್ಷ್ಮೀ ವ್ರತ ಮಾಡುತ್ತಾರೆ. ಇದೇ ರೀತಿ ವಾಸ್ತುವಿನಲ್ಲಿ ಕೂಡಾ ಕೆಲವೊಂದು ಪರಿಹಾರಗಳನ್ನು ಸೂಚಿಸಲಾಗಿದೆ. ಇದು ಮುಖ್ಯದ್ವಾರಕ್ಕೆ ಸಂಬಂಧಿಸಿದ್ದಾಗಿದೆ.
ಮನೆಯ ಮುಖ್ಯ ಬಾಗಿಲನ್ನು ಶಕ್ತಿಯ ಕೇಂದ್ರವೆಂದು ಪರಿಗಣಿಸಲಾಗುತ್ತದೆ. ಮುಖ್ಯ ಬಾಗಿಲು ಯಾವಾಗಲೂ ಸ್ವಚ್ಛ ಮತ್ತು ಆಕರ್ಷಕವಾಗಿರಬೇಕು. ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಪ್ರತಿಯೊಂದು ವಸ್ತುವಿನಲ್ಲಿ ಶಕ್ತಿ ಇರುತ್ತದೆ. ಮನೆಯಲ್ಲಿ ಅನಾವಶ್ಯಕವಾದ ವಸ್ತುಗಳು, ನಕಾರಾತ್ಮಕ ವಸ್ತುಗಳನ್ನು ಇಡುವುದು ವಾಸ್ತು ದೋಷಕ್ಕೆ ಮೂಲವಾಗುತ್ತದೆ. ಮನೆಯ ಮುಖ್ಯ ಬಾಗಿಲಲ್ಲಿ ಕೆಲವು ವಸ್ತುಗಳನ್ನು ಇಡುವುದರಿಂದ ಲಕ್ಷ್ಮಿ ದೇವಿ ನೆಲೆಸುತ್ತಾಳೆ ಮತ್ತು ಸಂಪತ್ತನ್ನು ಹೆಚ್ಚಿಸುತ್ತಾಳೆ. ಮನೆಯ ಪ್ರವೇಶ ದ್ವಾರದಲ್ಲಿ ಯಾವ ಅದೃಷ್ಟದ ವಸ್ತುಗಳನ್ನು ಇಡಬೇಕು ಎಂದು ನೋಡೋಣ.
ಸ್ವಸ್ತಿಕ್ ಚಿಹ್ನೆ: ಹಿಂದೂ ಧರ್ಮದಲ್ಲಿ ಸ್ವಸ್ತಿಕ್ ಚಿಹ್ನೆಗೆ ಬಹಳ ಪ್ರಾಮುಖ್ಯತೆ ಇದೆ. ಹೋಮ , ಹಬ್ಬ ಸೇರಿದಂತೆ ಮೊದಲಾದ ಶುಭ ಸಂದರ್ಭಗಳಲ್ಲಿ ಸ್ವಸ್ತಿಕ್ ಚಿಹ್ನೆಯನ್ನು ಬರೆಯಲಾಗುತ್ತದೆ. ಈ ಚಿಹ್ನೆಯು ಕೇವಲ ಶುಭದ ಪ್ರತೀಕವಷ್ಟೇ ಅಲ್ಲ ಮನೆಯ ಮುಂದೆ ಇದನ್ನು ಬರೆಯುವುದರಿಂದ ಸಕಾರಾತ್ಮಕ ಶಕ್ತಿ ತುಂಬುತ್ತದೆ ಎಂಬ ನಂಬಿಕೆಯಿದೆ. ಆದ್ದರಿಂದ, ನಿಮ್ಮ ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸಲು, ನಿಮಗೆ ಲಕ್ಷ್ಮೀ ಕೃಪೆ ಬೇಕಿದ್ದರೆ ಮನೆಯ ಮುಖ್ಯ ಬಾಗಿಲಿನ ಎರಡೂ ಬದಿಗಳಲ್ಲಿ ಸ್ವಸ್ತಿಕ ಚಿಹ್ನೆಯನ್ನು ಹಾಕಿ.
ಕುದುರೆ ಲಾಳ: ವಾಸ್ತು ಪ್ರಕಾರ ಹಾರ್ಸ್ ಶೂ ಅಥವಾ ಕುದುರೆ ಲಾಳವನ್ನು ಮನೆಯ ಮುಂಭಾಗಿಲಿನಲ್ಲಿ ನೇತು ಹಾಕುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಅದರಲ್ಲೂ ಮುಖ್ಯ ದ್ವಾರಕ್ಕೆ ಕಪ್ಪು ಬಣ್ಣದ ಹಾರ್ಸ್ ಶೂ ಹಾಕಿದರೆ ಅದು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ. ಒಂದು ವೇಳೆ ಕುದುರೆಯ ಕಾಳಿನಿಂದ ಬಿದ್ದ ಲಾಳ ನಿಮಗೆ ದೊರೆತರೆ ಅದು ಇನ್ನೂ ಅದೃಷ್ಟ ಹೆಚ್ಚಾಗುತ್ತದೆ.
ಹಸಿರು ತೋರಣ: ಮನೆಯ ಮುಂಭಾಗಿಲಿನಲ್ಲಿ ಯಾವಾಗಲೂ ಹಸಿರು ತೋರಣ ಇದ್ದರೆ ಅದು ಶುಭ ಸಂಕೇತ. ಇದು ನಿಮ್ಮ ಮನೆಗೆ ನಕಾರಾತ್ಮಕ ಶಕ್ತಿ ಪ್ರವೇಶಿಸುವುದನ್ನು ತಡೆಯುತ್ತದೆ. ಒಣಗಿದ ಎಲೆಗಳಿಂದ ನಕಾರಾತ್ಮಕತೆ ಆವರಿಸುತ್ತದೆ.
ಶುಭ ಲಾಭ: ಸ್ವಸ್ತಿಕ್ ಚಿಹ್ನೆಯಂತೆ ಶುಭ ಲಾಭ ಅಕ್ಷರಗಳನ್ನು ಮನೆಯ ಮುಖ್ಯದ್ವಾರದಲ್ಲಿ ಬರೆಯುವುದರಿಂದ ಶುಭ ಉಂಟಾಗುತ್ತದೆ. ಶುಭ್ ಲಭ್ ಭಗವಾನ್ ಗಣೇಶನಿಗೆ ಸಂಬಂಧಿಸಿದ ಚಿಹ್ನೆಗಳಾಗಿವೆ. ಗಣಪತಿಯು ಪ್ರಜಾಪತಿ ವಿಶ್ವಕರ್ಮನ ಪುತ್ರಿಯರಾದ ಸಿದ್ಧಿ ಮತ್ತು ರಿದ್ಧಿಯನ್ನು ವಿವಾಹವಾದನೆಂದು ಧರ್ಮಗ್ರಂಥಗಳು ಹೇಳುತ್ತವೆ. ಅದರಂತೆ ಸಿದ್ಧಿಯ ಮಗ ಶುಭ್ ಮತ್ತು ರಿದ್ಧಿಯ ಮಗನಾದ ಲಭ್‌ಗಳನ್ನು ಅದೃಷ್ಟದ ಚಿಹ್ನೆಗಳು ಎಂದು ಕರೆಯಲಾಗುತ್ತದೆ. ಇದನ್ನು ಬರೆಯುವುದರಿಂದ ಮನೆಯ ಸುಖ-ಸಮೃದ್ಧಿ ಹೆಚ್ಚುತ್ತದೆ.
ದೀಪ ಹಚ್ಚಿ: ಮನೆಯ ಮುಖ್ಯದ್ವಾರದಲ್ಲಿ ಪ್ರತಿದಿನ ಸಂಜೆ ದೀಪವನ್ನು ಬೆಳಗಿಸಿ, ಇದರಿಂದ ಧನಾತ್ಮಕ ಶಕ್ತಿಯು ಮನೆಗೆ ಪ್ರವೇಶಿಸುತ್ತದೆ. ಸಂಜೆ
ಮುಖ್ಯದ್ವಾರದಲ್ಲಿ ದೀಪವನ್ನು ಬೆಳಗಿಸುವುದರಿಂದ ಲಕ್ಷ್ಮಿ ದೇವಿಯು ಮನೆಯಲ್ಲಿ ನೆಲೆಸುತ್ತಾಳೆ ಎಂದು ನಂಬಲಾಗಿದೆ.
ತುಳಸಿ ಗಿಡ: ತುಳಸಿ ಗಿಡವನ್ನು ತಾಯಿ ಲಕ್ಷ್ಮಿಯ ರೂಪವೆಂದು ಪರಿಗಣಿಸಲಾಗಿದೆ. ಮನೆಯ ದ್ವಾರದ ಬಳಿ ತುಳಸಿ ಗಿಡವನ್ನು ಇಡಬಹುದು. ಆದರೆ ಯಾವುದೇ ಕಾರಣಕ್ಕೂ ತುಳಸಿ ಗಿಡ ಒಣಗಬಾರದು. ಕೊಳಕು ಕೈಗಳಿಂದ ತುಳಸಿಯನ್ನು ಮುಟ್ಟಬಾರದು. ಬೆಳಗ್ಗೆ ಮತ್ತು ಸಂಜೆ ತುಳಸಿ ಮುಂದೆ ದೀಪ ಹಚ್ಚಿ.
ಸೂರ್ಯ ಯಂತ್ರ: ಮನೆಯ ಮುಖ್ಯ ದ್ವಾರದ ಮೇಲೆ ಸೂರ್ಯ ಯಂತ್ರವನ್ನು ಸ್ಥಾಪಿಸುವುದು ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಇದರಿಂದ ಮನೆಯನ್ನು ದುಷ್ಟ ಕಣ್ಣುಗಳಿಂದ ಅಥವಾ ನಕಾರಾತ್ಮಕ ಶಕ್ತಿಯಿಂದ ರಕ್ಷಿಸಬಹುದು.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.