ವಾಹನ ಖರೀದಿ 2025: ಮೇಷ ರಾಶಿಯವರಿಗೆ ಹೆಚ್ಚಿನ ಪ್ರಯತ್ನ ಅಗತ್ಯ, ಕಟಕ ರಾಶಿಯವರಿಗೆ ತಮ್ಮಿಷ್ಟದ ವಾಹನ ಕೊಳ್ಳಲು ಒಳ್ಳೆ ಸಮಯ
Vehicle Purchase Muhurtham 2025: ಕಳೆದ ವರ್ಷವಾದರೂ ವಾಹನ ಖರೀದಿಸಲಿಲ್ಲ ಮುಂದಿನ ವರ್ಷದಲ್ಲಾದರೂ ವಾಹನ ಖರೀದಿ ಲಾಭವಿರಬಹುದಾ ಎಂದು ಅನೇಕರು ಕುತೂಹಲದಿಂದ ಕಾಯುತ್ತಿದ್ದಾರೆ. ಆದರೆ ಎಲ್ಲದಕ್ಕೂ ಗ್ರಹಗಳ ಆಶೀರ್ವಾದ ಮುಖ್ಯ 2025 ರಲ್ಲಿ ಮೇಷ, ವೃಷಭ, ಮಿಥುನ, ಕಟಕ ರಾಶಿಯವರಿಗೆ ವಾಹನ ಖರೀದಿ ಸಾಧ್ಯತೆಗಳ ಬಗ್ಗೆ ಮಾಹಿತಿ ಇಲ್ಲಿದೆ.
![2025 ರಲ್ಲಿ ಮೇಷ, ವೃಷಭ, ಮಿಥುನ, ಕಟಕ ರಾಶಿಯವರಿಗೆ ವಾಹನ ಖರೀದಿ ಶುಭ ಸಮಯ 2025 ರಲ್ಲಿ ಮೇಷ, ವೃಷಭ, ಮಿಥುನ, ಕಟಕ ರಾಶಿಯವರಿಗೆ ವಾಹನ ಖರೀದಿ ಶುಭ ಸಮಯ](https://images.hindustantimes.com/kannada/img/2024/12/07/550x309/Vehicle_Purchase_Muhurtham_2025_1733553503862_1733553516424.png)
ವಾಹನ ಖರೀದಿ 2025: ಸ್ವಂತ ಮನೆ, ಹೊರಗೆ ಓಡಾಡಲು ಸ್ವಂತ ವಾಹನ ಇರಬೇಕು ಎನ್ನುವುದು ಪ್ರತಿಯೊಬ್ಬರ ಕನಸು. ಆದರೆ ಎಷ್ಟು ದುಡಿದರೂ ಕೆಲವರಿಗೆ ಒಂದು ಸ್ಕೂಟರ್ ಕೊಳ್ಳಲು ಕೂಡಾ ಆಗುವುದಿಲ್ಲ. ಎಲ್ಲರ ಜಾತಕದ 4ನೇ ಮನೆಯು ಜನರ ಜೀವನದಲ್ಲಿ ವಾಹನಗಳ ಭಾಗ್ಯವನ್ನು ಪ್ರತಿನಿಧಿಸುತ್ತದೆ. ಮಾತು, ಬುದ್ಧಿವಂತಿಕೆ ಮತ್ತು ತರ್ಕವನ್ನು ಪ್ರತಿನಿಧಿಸುವ ಬುಧ ಗ್ರಹವು ವಾಣಿಜ್ಯ ವಾಹನಗಳ ಮೇಲೂ ಪ್ರಭಾವ ಬೀರುತ್ತಾನೆ. ವೈಯಕ್ತಿಕ ಬಳಕೆಗಾಗಿ ಬಯಸುವ ವಾಹನವು ಶುಕ್ರನಿಂದ ಪ್ರಭಾವಿತವಾಗಿರುತ್ತದೆ. ಆದರೂ ನವಗ್ರಹಗಳು ಕೂಡಾ ಇದರ ಮೇಲೆ ಪ್ರಭಾವ ಬೀರುತ್ತವೆ. ನೀವು ಖರೀದಿಸುವ ವಾಹನ ನಿಮಗೆ ಅದೃಷ್ಟವೋ, ಇಲ್ಲವೋ ಎಂಬುದು ಕೂಡಾ ಇದರಿಂದಲೇ ನಿರ್ಧಾರವಾಗುತ್ತದೆ.
2024 ಕಳೆದ ಹೊಸ ವರ್ಷ ಬರುತ್ತಿದೆ. ಹೊಸ ವರ್ಷ 2025ರಲ್ಲಿ ಯಾವೆಲ್ಲಾ ರಾಶಿಯವರ ಸ್ವಂತ ವಾಹನಗಳ ಕನಸು ನನಸಾಗುತ್ತದೆ? ಯಾವ ರಾಶಿಯವರಿಗೆ ವಾಹನಗಳನ್ನು ಕೊಳ್ಳುವ ಕನಸು ಮತ್ತೆ ಮುಂದಕ್ಕೆ ಹೋಗಲಿದೆ ನೋಡೋ. ಇಲ್ಲಿ 2025 ರಲ್ಲಿ ಮೇಷ, ವೃಷಭ, ಮಿಥುನ, ಕಟಕ ರಾಶಿಯವರಿಗೆ ವಾಹನ ಖರೀದಿ ಸಾಧ್ಯವಿದೆಯೋ, ಇಲ್ಲವೋ ಎಂಬುದನ್ನು ತಿಳಿಸಲಾಗಿದೆ.
2025 ರಲ್ಲಿ ಮೇಷ, ವೃಷಭ, ಮಿಥುನ, ಕಟಕ ರಾಶಿಯವರಿಗೆ ವಾಹನ ಖರೀದಿ ಶುಭ ಸಮಯ
ಮೇಷ ರಾಶಿ
ಹಳೆಯ ವಾಹನಗಳಿಂದ ಸಮಸ್ಯೆ ಎದುರಿಸುತ್ತಿರುವ ಮೇಷ ರಾಶಿಯವರು 2025 ರಲ್ಲಿ ವಾಹನ ಖರೀದಿಸಲು ಹೆಚ್ಚು ಪ್ರಯತ್ನ ಮಾಡಬೇಕಾಗುತ್ತದೆ, ಒಮ್ಮೆ ಹೊಸ ವಾಹನ ಖರೀದಿ ಮಾಡಿದ ನಂತರ ಈ ರಾಶಿಯವರು ಹೊಸ ವಾಹನದ ಖುಷಿಯನ್ನು ಅನುಭವಿಸಬಹುದು. 2025 ರಲ್ಲಿ ನಿಮಗೆ ವಾಹನ ಖರೀದಿಸಲು ಅನುಕೂಲಕರ ಅವಧಿಯಾಗಿದೆ. 2025 ರಲ್ಲಿ ಗ್ರಹಗಳ ಸ್ಥಾನದಿಂದಾಗಿ, ಅವರು ಖರೀದಿಗೆ ಸಂಬಂಧಿಸಿದ ವಿಷಯಗಳಿಗೆ ಉತ್ತಮ ಬೆಂಬಲ ಪಡೆಯುತ್ತಾರೆ. ಭೂಮಿ, ವಾಹನಗಳು ಮತ್ತು ಕಟ್ಟಡಗಳಿಗೆ ಸಂಬಂಧಿಸಿದಂತೆ ಮೇಷ ರಾಶಿಯ ಜನರು ತಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಫಲಿತಾಂಶಗಳನ್ನು ಪಡೆಯಬಹುದು.
ವೃಷಭ ರಾಶಿ
ವೃಷಭ ರಾಶಿಯವರು 2025 ರಲ್ಲಿ ಹೊಸ ವಾಹನ ಅಥವಾ ತಮ್ಮ ಮೊದಲ ವಾಹನವನ್ನು ಖರೀದಿಸಲು ಯೋಜಿಸುತ್ತಿದ್ದರೆ, ವಿವಿಧ ತೊಂದರೆಗಳು ಉಂಟಾಗಬಹುದು. ಆದ್ದರಿಂದ ಹೊಸ ವರ್ಷದಲ್ಲಿ ನೀವು ವಾಹನ ಖರೀದಿಯನ್ನು ತಪ್ಪಿಸಬೇಕು. ಆದರೆ ನಿಮ್ಮ ಬಳಿ ಈಗಾಗಲೇ ಹಳೆಯ ವಾಹನ ಇದ್ದಲ್ಲಿ ಅದನ್ನು ರಿಪೇರಿ ಮಾಡಿಸಿಕೊಳ್ಳಬಹುದು ಅಥವಾ ಸಣ್ಣ ಪುಟ್ಟ ಮಾರ್ಪಾಟು ಮಾಡಿಕೊಳ್ಳಬಹುದು. ಆದರೆ 2025ರಲ್ಲಿ ನೀವು ಹೊಸ ವಾಹನ ಖರೀದಿ ಮಾಡದಿರುವುದು ಸೂಕ್ತ.
ಮಿಥುನ ರಾಶಿ
2025, ಹೊಸ ವರ್ಷವು ಮಿಥುನ ರಾಶಿಯವರಿಗೆ ವಾಹನ ಲಾಭದ ವಿಚಾರದಲ್ಲಿ ಮಿಶ್ರ ಫಲಿತಾಂಶಗಳನ್ನು ನೀಡುತ್ತದೆ. ಈ ರಾಶಿಯವರು ಹೊಸ ವಾಹನವನ್ನು ಖರೀದಿಸಲು ಯೋಜಿಸುತ್ತಿದ್ದರೆ, ಅದರ ಬಗ್ಗೆ ಯೋಚಿಸಿ , ಹಿರಿಯರೊಂದಿಗೆ ಚರ್ಚಿಸಿ ನಿರ್ಧಾರ ಮಾಡಿದರೆ ಸೂಕ್ತ. ಆದರೆ ನೀವು ಈಗಾಗಲೇ ಬಳಸಿದ ಹಳೆಯ ವಾಹನವನ್ನು ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ, ಅದರಲ್ಲಿ ಹೂಡಿಕೆ ಮಾಡುವ ಮೊದಲು ಅದರ ಸ್ಥಿತಿ ಮತ್ತು ದಾಖಲೆಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ.
ಕಟಕ ರಾಶಿ
ಕಟಕ ರಾಶಿಯವರಿಗೆ ಹೊಸ ವಾಹನಗಳನ್ನು ಖರೀದಿಸಲು 2025 ಉತ್ತಮ ಸಮಯ. ವಾಹನ ಲಾಭವು ನಿಮಗೆ ಇನ್ನಷ್ಟು ಶುಭ ಫಲಗಳನ್ನು ನೀಡುತ್ತದೆ. ಆತ್ಮೀಯರು ಅಥವಾ ಮನೆಯ ಹಿರಿಯರ ಸಲಹೆಯಂತೆ ನಿಮ್ಮಿಷ್ಟದ ವಾಹನ ಕೊಳ್ಳಬಹುದು, ವ್ಯವಸಾಯ ಅಥವಾ ಬಿಸ್ನೆಸ್ ಉದ್ದೇಶಕ್ಕಾಗಿ ಕೂಡಾ ನೀವು ಮುಂದಿನ ವರ್ಷ ವಾಹನ ಖರೀದಿಸಬಹುದು.
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.
![Whats_app_banner Whats_app_banner](https://kannada.hindustantimes.com/static-content/1y/wBanner.png)
ವಿಭಾಗ