ಮೀನ ರಾಶಿಯಲ್ಲಿ ಶುಕ್ರ ರಾಹು ಸಂಯೋಗ: ಹಣಕಾಸಿನ ಸಮಸ್ಯೆ ಕಡಿಮೆಯಾಗುತ್ತೆ, ಮೇಷ ಸೇರಿ 4 ರಾಶಿಯವರ ಶುಭ ಫಲಗಳು ಹೀಗಿವೆ
ಮೀನ ರಾಶಿಯಲ್ಲಿ ಶುಕ್ರ ಮತ್ತು ರಾಹುವಿನ ಸಂಯೋಗವು 12 ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಈ ಸಂಯೋಗದಿಂದ ಕೆಲವೊಂದು ರಾಶಿಯವರಿಗೆ ಆರ್ಥಿಕ ಸಮಸ್ಯೆಗಳು ಕಡಿಮೆಯಾಗುತ್ತವೆ. ಜೀವನದಲ್ಲಿ ಸಂತೋಷ ಇರುತ್ತದೆ. ಹಣಕಾಸಿನ ವಿವಾದಗಳಲ್ಲಿ ಜಯವನ್ನು ಕಾಣುತ್ತಾರೆ. ಮೇಷ, ವೃಷಭ, ಮಿಥುನ ಹಾಗೂ ಕಟಕ ರಾಶಿಯವರ ಶುಭ ಫಲಗಳನ್ನು ಇಲ್ಲಿ ನೀಡಲಾಗಿದೆ.

ರಾಹುವು ಮಂತ್ರ ಮತ್ತು ಮಾಯೆಗೆ ಅದಿಪತಿ ಆಗಿದ್ದಾನೆ. ಶುಕ್ರ ಸ್ತ್ರೀಗ್ರಹವಾಗುತ್ತದೆ. ಆದ್ದರಿಂದ ಶುಕ್ರನು ರಾಹುವಿನ ಮಾಯೆಗೆ ಒಳಗಾಗುತ್ತದೆ. ರಾಹುವು ಬೃಹತ್ ಪ್ರಮಾಣವನ್ನು ತೋರಿಸುತ್ತದೆ. ಶುಕ್ರ ಗ್ರಹವು ಮೀನದಲ್ಲಿ ಸಾಗುತ್ತದೆ. ರಾಹುವು ಛಾಯಾಗ್ರಹ ಆದ್ದರಿಂದ ಅನಿರೀಕ್ಷಿತ ಶುಭಫಲಗಳು ದೊರೆಯುತ್ತವೆ. ಸ್ತ್ರೀಯರಿಗೆ ವಿಶೇಷವಾದ ಫಲಗಳು ದೊರೆಯುತ್ತವೆ. ಜನವರಿ 28ರ ಮಂಗಳವಾರ ಶುಕ್ರ ಗ್ರಹವು ಮೀನರಾಶಿಯನ್ನು ಪ್ರವೇಶಿಸಿದೆ. ಶುಕ್ರ ಮತ್ತು ರಾಹುವಿನ ಸಂಯೋಗವು ಫೆಬ್ರವರಿ ತಿಂಗಳ 27ರವರೆಗು ಇರುತ್ತದೆ. ಯಾವುದೇ ಗ್ರಹವು ಉಚ್ಚರಾಶಿಯಲ್ಲಿ ಇದ್ದಾಗ ಅಧಿಕವಾಗಿ ಪ್ರತಿ ರಾಶಿಗಳಿಗೂ ಶುಭಫಲಗಳನ್ನು ನೀಡುತ್ತಾನೆ. ಮೇಷದಿಂದ ಕಟಕ ರಾಶಿಯವರಿಗೆ ಶುಭಫಲಗಳನ್ನು ತಿಳಿಯೋಣ.
ಮೇಷ ರಾಶಿ
ಹಣಕಾಸಿನ ತೊಂದರೆಯು ಕಡಿಮೆಯಾಗುತ್ತದೆ. ನಿಮ್ಮ ಮಾತಿಗೆ ಕುಟುಂಬ ಮಾತ್ರವಲ್ಲದೆ ಸಮಾಜದಲ್ಲಿಯೂ ಗೌರವ ಲಭಿಸುತ್ತದೆ. ಖರ್ಚು ವೆಚ್ಚಗಳು ಹೆಚ್ಚಾಗಿದ್ದರೂ ಸಹ ಅದನ್ನು ನಿರ್ವಹಿಸುವ ಚತುರತೆ ನಿಮ್ಮಲ್ಲಿರುತ್ತದೆ. ಕುಟುಂಬದಲ್ಲಿನ ವಿವಾದಗಳು ಬಗೆಹರಿಯುತ್ತವೆ. ಕುಟುಂಬದ ಸ್ತ್ರೀಯರಲ್ಲಿ ಒಮ್ಮತವು ಮೂಡುತ್ತದೆ. ಪಾಲುಗಾರಿಕೆಯ ವ್ಯಾಪಾರ-ವ್ಯವಹಾರ ಇದ್ದಲ್ಲಿ ನಿರೀಕ್ಷಿತ ಮಟ್ಟದ ಲಾಭಾಂಶ ದೊರೆಯುತ್ತದೆ. ನೋಡಲು ಸುಂದರವಾದ ವಾಹನವನ್ನು ಕೊಳ್ಳುವಿರಿ.
ದಾಂಪತ್ಯ ಜೀವನದಲ್ಲಿ ಪರಸ್ಪರ ಅನ್ಯೋನ್ಯತೆ ಇರುತ್ತದೆ. ವಿವಾಹ ಯೋಗವಿದೆ. ಮಕ್ಕಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ. ಸೋದರಿ ಅಥವಾ ಮಗಳ ಜೀವನದಲ್ಲಿ ಅನುಕೂಲಕರ ಬದಲಾವಣೆಗಳು ಕಂಡು ಬರುತ್ತದೆ. ಇರುವ ಮನೆಯನ್ನು ವಿಸ್ತರಿಸುವ ಸಾಧ್ಯತೆಗಳಿವೆ. ಸಾಕುಪ್ರಾಣಿಗಳಿಂದ ತೊಂದರೆ ಉಂಟಾಗಬಹುದು. ಯಾತ್ರಾ ಸ್ಥಳಕ್ಕೆ ಭೇಟಿ ನೀಡುವಿರಿ. ದೂರದ ಬಂಧು ಬಳಗದವರಿಗೆ ಹಣ ಸಹಾಯ ಮಾಡಬೇಕಾಗುತ್ತದೆ. ಕಣ್ಣಿನ ಸಮಸ್ಯೆ ಕಾಡಬಹುದು.
ವೃಷಭ ರಾಶಿ
ಮನದಲ್ಲಿ ಧನಾತ್ಮಕ ಚಿಂತನೆಗಳು ಮೂಡುತ್ತವೆ. ಒಮ್ಮೆ ತೆಗೆದುಕೊಂಡ ನಿರ್ಧಾರಗಳನ್ನು ಬದಲಾಯಿಸುವುದಿಲ್ಲ. ಸಮಯವನ್ನು ಆಧರಿಸಿ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಆರಂಭಿಸಿದ ಕೆಲಸ ಕಾರ್ಯಗಳಲ್ಲಿ ಸುಲಭ ಯಶಸ್ಸು ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಯಶಸ್ಸು ದೊರೆಯುತ್ತದೆ. ಮನೆತನಕ್ಕೆ ಸಂಬಂಧಿಸಿದ ಹಣಕಾಸಿನ ವಿವಾದದಲ್ಲಿ ಜಯಗಳಿಸುವಿರಿ. ಉದ್ಯೋಗದಲ್ಲಿನ ಬದಲಾವಣೆಗಳು ನಿಮಗೆ ಸಹಕಾರಿಯಾಗುತ್ತದೆ. ಅನಿರೀಕ್ಷತವಾಗಿ ಅಧಿಕಾರ ಲಭಿಸುತ್ತದೆ.
ಉಸಿರಾಟದ ಸಮಸ್ಯೆಯಿಂದ ಬಳಲುವಿರಿ. ಕಲುಷಿತ ನೀರಿನ ಸೇವನೆಯಿಂದ ಸೋಂಕು ಉಂಟಾಗುವ ಸಾಧ್ಯತೆಗಳು ಇವೆ. ದಂಪತಿ ನಡುವೆ ಮನಸ್ತಾಪ ಎದುರಾಗುತ್ತದೆ. ವಿದೇಶದ ಆಡಳಿತವಿರುವ ಸಂಸ್ಥೆಯಲ್ಲಿ ಉದ್ಯೋಗ ಲಭಿಸುತ್ತದೆ. ಧಾರ್ಮಿಕ ಕೇಂದ್ರದ ಒಡೆತನ ಲಭಿಸುತ್ತದೆ. ಹೊಸ ವಾಹನವನ್ನು ಕೊಳ್ಳುವ ಯತ್ನ ಸಫಲಗೊಳ್ಳುತ್ತದೆ. ಸ್ವಂತ ಉದ್ಯಮ ಇದ್ದಲ್ಲಿ ಬಂಡವಾಳದ ಕೊರತೆ ಕಾಣಲಿದೆ. ದುಡುಕಿ ಮಾತನಾಡುವ ಸ್ವಭಾವ ವಿವಾದಕ್ಕೆ ಕಾರಣವಾಗಲಿದೆ. ಮನೆಯಲ್ಲಿ ಬಳಸುವ ಲೋಹದ ವಸ್ತು ಅಥವಾ ವಾಹನದಿಂದ ತೊಂದರೆ ಇರುತ್ತದೆ.
ಮಿಥುನ ರಾಶಿ
ಉದ್ಯೋಗದಲ್ಲಿ ಒತ್ತಡದ ಸನ್ನಿವೇಶವಿದ್ದರೂ ಪ್ರಯೋಜನಕಾರಿ ತಿರುವುಗಳಿರುತ್ತವೆ. ತಾಯಿಯವರಿಗೆ ಅಥವಾ ಕುಟುಂಬದ ಹಿರಿಯರಿಗೆ ಅನಾರೋಗ್ಯದ ಸಮಸ್ಯೆ ಇರುತ್ತದೆ. ತಮ್ಮದೇ ಆದ ತಪ್ಪಿನಿಂದಾಗಿ ಮಕ್ಕಳು ಸಮಸ್ಯೆಗೆ ಸಿಲುಕುತ್ತಾರೆ. ವಿದ್ಯಾರ್ಥಿಗಳು ಮಾನಸಿಕ ಒತ್ತಡದ ಕಾರಣ ಕಲಿಕೆಯಲ್ಲಿ ಹಿಂದುಳಿಯಬಹುದು. ಆತ್ಮವಿಶ್ವಾಸವನ್ನು ಬೆಳೆಸಿಕೊಂಡಷ್ಟು ಒಳ್ಳೆಯದು. ಅನಿವಾರ್ಯವಾಗಿ ಉದ್ಯೋಗವನ್ನು ಬದಲಿಸಬಹುದು. ಸುಲಭವಾಗಿ ಯಾರನ್ನು ನಂಬುವುದಿಲ್ಲ. ತೆಗೆದುಕೊಂಡ ತೀರ್ಮಾನಗಳನ್ನು ನೆರವೇರಿಸುವಲ್ಲಿ ವಿಫಲರಾಗುತ್ತಾರೆ. ದಂಪತಿ ನಡುವೆ ಮನಸ್ತಾಪ ಉಂಟಾಗುತ್ತದೆ.
ಹೆಣ್ಣುಮಕ್ಕಳಿಗೆ ಉದ್ಯೋಗ ಲಭಿಸುವ ಸೂಚನೆಗಳಿವೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಹಿರಿಯ ಅಧಿಕಾರಿಗಳ ಜೊತೆಯಲ್ಲಿ ಸಂಧಾನದ ಮಾತುಕತೆ ಆಗುತ್ತದೆ. ಆಪತ್ತಿನ ಸಮಯದಲ್ಲಿ ಕುಟುಂಬದ ಹಿರಿಯರ ಸಹಾಯ ಸಹಕಾರ ಲಭಿಸುತ್ತದೆ. ಸಮಾಜಸೇವೆಯಲ್ಲಿ ಆಸಕ್ತಿ ಮೂಡುತ್ತದೆ. ಆತ್ಮೀಯರ ಜೊತೆಯಲ್ಲಿ ಹಣದ ವ್ಯವಹಾರವನ್ನು ಮಾಡುವಿರಿ. ಸಾಲವಾಗಿ ಪಡೆದ ಹಣವನ್ನುಮರಳಿ ನೀಡುವಿರಿ. ಪ್ರಯಾಣದಿಂದ ಲಾಭವಿದೆ. ಅವಿವಾಹಿತರಿಗೆ ವಿವಾಹ ನಿಶ್ಚಯವಾಗಲಿದೆ. ಶಾಂತಿ ಸಂಯಮದಿಂದ ವರ್ತಿಸಿದಷ್ಟು ಒಳ್ಳೆಯದು. ಕಲಾವಿದರಿಗೆ ಉನ್ನತಮಟ್ಟದ ಗೌರವ ಪ್ರಶಂಸೆ ಲಭಿಸುತ್ತದೆ.
ಕಟಕ ರಾಶಿ
ತಮ್ಮ ಕೆಲಸ ಕಾರ್ಯಗಳಲ್ಲಿ ನಿರೀಕ್ಷಿಸಿದಂತೆ ಯಶಸ್ಸು ದೊರೆಯುತ್ತದೆ. ಸಮಯವನ್ನು ವ್ಯರ್ಥ ಮಾಡದೆ ಸದಾ ಚುರುಕುತನದಿಂದ ಮುಂದುವರೆಯುವಿರಿ. ಹಣಕಾಸಿನ ತೊಂದರೆ ಕಂಡು ಬರುವುದಿಲ್ಲ. ತಂದೆಯವರ ಅಥವಾ ಕುಟುಂಬದ ಹಿರಿಯರ ಹಣಕಾಸಿನ ತೊಂದರೆ ಬಗೆಹರಿಯುತ್ತದೆ. ಆದರೆ ಅವರಿಗೆ ಅನಾರೋಗ್ಯವಿರುತ್ತದೆ. ಹೆಣ್ಣು ಮಕ್ಕಳಿಗೆ ವಿಶೇಷವಾದ ಫಲಗಳು ದೊರೆಯುತ್ತವೆ. ಮಗಳಿಗೆ ಜವಾಬ್ದಾರಿಯುತ ಹುದ್ದೆಯು ದೊರೆಯುತ್ತದೆ. ಬಂಧು-ಬಳಗದವರ ಸಹಾಯವಿರುತ್ತದೆ.
ವಾಸಸ್ಥಳವನ್ನು ಬದಲಿಸುವ ಸೂಚನೆಗಳಿವೆ. ಆತ್ಮೀಯರಿಂದ ಕಾಣಿಕೆಯ ರೂಪದಲ್ಲಿ ಹಣ ದೊರೆಯುತ್ತದೆ. ಮನದಲ್ಲಿ ಒತ್ತಡದ ಭಾವನೆ ಇದ್ದರೂ ಕರ್ತವ್ಯದ ಜವಾಬ್ದಾರಿಯನ್ನು ಮರೆಯುವುದಿಲ್ಲ. ನೆಮ್ಮದಿಯ ಜೀವನವಿರುತ್ತದೆ. ಉದ್ಯೋಗದಲ್ಲಿ ನಿಮ್ಮ ಹಿರಿತನಕ್ಕೆ ಗೌರವ ದೊರೆಯುತ್ತದೆ. ಉದ್ಯೋಗ ಬದಲಿಸುವ ನಿರ್ಧಾರವನ್ನು ಬದಲಿಸಬೇಕಾಗುತ್ತದೆ. ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ವರಮಾನ ವಿರುತ್ತದೆ. ಮನೆಮಂದಿಯ ಜೊತೆ ಯಾತ್ರಾ ಸ್ಥಳಕ್ಕೆ ಭೇಟಿ ನೀಡುವಿರಿ. ಆರೋಗ್ಯದ ಬಗ್ಗೆ ಗಮನವಹಿಸುವುದು ಒಳ್ಳೆಯದು.
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).
