ಮೀನ ರಾಶಿಯಲ್ಲಿ ಶುಕ್ರ ರಾಹು ಸಂಯೋಗ: ಜನೋಪಕಾರಿ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ , ಸಿಂಹ ಸೇರಿ 4 ರಾಶಿಯವರ ಶುಭ ಫಲಗಳು ಇಲ್ಲಿವೆ
ಮೀನ ರಾಶಿಯಲ್ಲಿ ಶುಕ್ರ ಮತ್ತು ರಾಹುವಿನ ಸಂಯೋಗವು 12 ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಈ ಸಂಯೋಗದಿಂದ ಕೆಲವೊಂದು ರಾಶಿಯವರಿಗೆ ಕುಟುಂಬದಲ್ಲಿನ ಸಮಸ್ಯೆಗಳು ಕಡಿಮೆಯಾಗುತ್ತವೆ. ಉತ್ತಮ ಆರೋಗ್ಯ ಇರುತ್ತದೆ. ಸಿಂಹ, ಕನ್ಯಾ, ತುಲಾ ಹಾಗೂ ವೃಶ್ಚಿಕ ರಾಶಿಯವರ ಶುಭ ಫಲಗಳನ್ನು ಇಲ್ಲಿ ನೀಡಲಾಗಿದೆ.

ರಾಹುವು ಮಂತ್ರ ಮತ್ತು ಮಾಯೆಗೆ ಅದಿಪತಿ ಆಗಿದ್ದಾನೆ. ಶುಕ್ರ ಸ್ತ್ರೀಗ್ರಹವಾಗುತ್ತದೆ. ಆದ್ದರಿಂದ ಶುಕ್ರನು ರಾಹುವಿನ ಮಾಯೆಗೆ ಒಳಗಾಗುತ್ತದೆ. ರಾಹುವು ಬೃಹತ್ ಪ್ರಮಾಣವನ್ನು ತೋರಿಸುತ್ತದೆ. ಶುಕ್ರ ಗ್ರಹವು ಮೀನದಲ್ಲಿ ಸಾಗುತ್ತದೆ. ರಾಹುವು ಛಾಯಾಗ್ರಹ ಆದ್ದರಿಂದ ಅನಿರೀಕ್ಷಿತ ಶುಭಫಲಗಳು ದೊರೆಯುತ್ತವೆ. ಸ್ತ್ರೀಯರಿಗೆ ವಿಶೇಷವಾದ ಫಲಗಳು ದೊರೆಯುತ್ತವೆ. ಜನವರಿ 28ರ ಮಂಗಳವಾರ ಶುಕ್ರ ಗ್ರಹವು ಮೀನರಾಶಿಯನ್ನು ಪ್ರವೇಶಿಸಿದೆ. ಶುಕ್ರ ಮತ್ತು ರಾಹುವಿನ ಸಂಯೋಗವು ಫೆಬ್ರವರಿ ತಿಂಗಳ 27ರವರೆಗು ಇರುತ್ತದೆ. ಯಾವುದೇ ಗ್ರಹವು ಉಚ್ಚರಾಶಿಯಲ್ಲಿ ಇದ್ದಾಗ ಅಧಿಕವಾಗಿ ಪ್ರತಿ ರಾಶಿಗಳಿಗೂ ಶುಭಫಲಗಳನ್ನು ನೀಡುತ್ತಾನೆ. ಸಿಂಹ ದಿಂದ ವೃಶ್ಚಿಕ ರಾಶಿಯವರಿಗೆ ಶುಭಫಲಗಳನ್ನು ತಿಳಿಯೋಣ.
ಸಿಂಹ ರಾಶಿ
ಆತ್ಮಸ್ಥೈರ್ಯದಿಂದ ಎಲ್ಲಾ ಸವಾಲುಗಳನ್ನು ಎದುರಿಸುತ್ತೀರಿ. ಬಹುಕಾಲದಿಂದ ಕಾಡುತ್ತಿರುವ ಆರೋಗ್ಯದ ಸಮಸ್ಯೆ ಇರುವವರು ಆರೋಗ್ಯದ ಬಗ್ಗೆ ಗಮನ ನೀಡಬೇಕು. ಕುಟುಂಬದಲ್ಲಿ ಅನಾವಶ್ಯಕವಾದ ವಾದ ವಿವಾದಗಳಿರುತ್ತವೆ. ಸೋದರ ಜೀವನದಲ್ಲಿ ಉಂಟಾಗುವ ಬದಲಾವಣೆಗಳು ಸಂತೋಷಕ್ಕೆ ದಾರಿಯಾಗುತ್ತದೆ. ಜನೋಪಕಾರಿ ಕೆಲಸ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ಸಮಾಜದ ಗಣ್ಯ ವ್ಯಕ್ತಿಗಳಿಗೆ ಉನ್ನತ ಮಟ್ಟದ ಸ್ಥಾನ ಲಭಿಸುತ್ತದೆ. ವಿದ್ಯಾರ್ಥಿಗಳು ಹೆಚ್ಚಿನ ಪ್ರಯತ್ನದಿಂದ ಕಲಿಕೆಯಲ್ಲಿ ಮೊದಲಿಗರಾಗುತ್ತಾರೆ.
ವಿದ್ಯಾರ್ಥಿನಿಯರಿಗೆ ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳುವ ಅವಕಾಶ ಲಭಿಸುತ್ತದೆ. ಉದ್ಯೋಗದಲ್ಲಿ ಸಹೋದ್ಯೋಗಿಗಳ ಜೊತೆಯಲ್ಲಿ ಸ್ನೇಹದಿಂದ ವರ್ತಿಸುವಿರಿ. ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಯುತ್ತದೆ. ಸ್ವಂತ ವ್ಯಾಪಾರ, ವ್ಯವಹಾರವಿದ್ದಲ್ಲಿ ಆದಾಯದಲ್ಲಿ ಕೊರತೆ ಉಂಟಾಗುತ್ತದೆ. ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆ ಇರಲಿ. ಚರ್ಮದ ತೊಂದರೆ ಉಂಟಾಗಬಹುದು. ಕುಟುಂಬದ ಹಿರಿಯರಿಗೆ ಮುಖ್ಯವಾಗಿ ಗೃಹಿಣಿಯರಿಗೆ ಅನಿರೀಕ್ಷಿತ ಧನಲಾಭವಿರುತ್ತದೆ. ಮಕ್ಕಳೊಂದಿಗೆ ಸಂತಸದಿಂದ ಬಾಳುವಿರಿ.
ಕನ್ಯಾ ರಾಶಿ
ದೃಢವಾದ ತೀರ್ಮಾನಗಳನ್ನು ತೆಗೆದುಕೊಳ್ಳುವಲ್ಲಿ ವಿಫಲರಾಗುವಿರಿ. ನಿಮ್ಮ ಬುದ್ಧಿವಂತಿಕೆಯ ಮಾತುಕತೆ ಸಂಸಾರದ ತೊಂದರೆಯನ್ನು ದೂರ ಮಾಡುತ್ತದೆ. ಉತ್ತಮ ಆದಾಯ ಇರುತ್ತದೆ. ಹಣ ಉಳಿತಾಯ ಮಾಡಲು ಸಾಧ್ಯವಾಗುವುದಿಲ್ಲ. ಕುಟುಂಬದ ಹೆಚ್ಚಿನ ಜವಾಬ್ದಾರಿ ನಿಮ್ಮದಾಗುತ್ತದೆ. ಬೇರೆಯವರ ಪ್ರಭಾವಕ್ಕೆ ಮಣಿಯುವಿರಿ. ವಾದ ವಿವಾದವನ್ನು ಇಷ್ಟಪಡುವುದಿಲ್ಲ. ಆರಂಭಿಸಿದ ಕೆಲಸ ಕಾರ್ಯಗಳು ಆತ್ಮೀಯರ ಸಹಾಯದಿಂದ ಯಶಸ್ವಿಯಾಗುತ್ತವೆ. ಗಂಟಲಿಗೆ ಸಂಬಂಧಿಸಿದ ತೊಂದರೆಯಿಂದ ಬಳಲುವಿರಿ.
ಉದ್ಯೋಗದಲ್ಲಿ ನೆಮ್ಮದಿಯ ವಾತಾವರಣವಿರುತ್ತದೆ. ವಿರೋಧಿಗಳೊಂದಿಗೆ ಸ್ನೇಹ ಬೆಳೆಸುವಿರಿ. ಹಣಕಾಸಿನ ತೊಂದರೆ ಕಂಡುಬರುವುದಿಲ್ಲ. ಮನೆತನದ ಹಣಕಾಸಿನ ವ್ಯವಹಾರದಲ್ಲಿ ಅಳುಕಿನ ಭಾವನೆ ಇರುತ್ತದೆ. ದಂಪತಿ ನಡುವಿನ ಮನಸ್ತಾಪವು ಕೊನೆಗೊಳ್ಳುತ್ತದೆ. ಸ್ವಂತ ವ್ಯಾಪಾರ ವ್ಯವಹಾರಗಳು ಮಧ್ಯಮ ಗತಿಯಲ್ಲಿ ಸಾಗಲಿವೆ. ವಿದ್ಯಾರ್ಥಿಗಳು ನಿಧಾನಗತಿಯಲ್ಲಿ ಯಶಸ್ಸನ್ನು ಗಳಿಸುತ್ತಾರೆ. ವದಂತಿಗಳಿಂದ ಮನಸ್ಸಿನ ನೆಮ್ಮದಿ ಕಡಿಮೆಯಾಗುತ್ತದೆ. ಅತಿಯಾದ ನಿಧಾನತೆ ವಿವಾದಕ್ಕೆ ದಾರಿಯಾಗುತ್ತದೆ.
ತುಲಾ ರಾಶಿ
ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಲಾಭವಿರುತ್ತದೆ. ಆತುರ ಇದ್ದರೂ ದುಡುಕಿನ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ. ಎಲ್ಲರ ಪ್ರೀತಿ ವಿಶ್ವಾಸವನ್ನು ಗಳಿಸುವಿರಿ. ಉದ್ಯೋಗದಲ್ಲಿ ಯಾವುದೇ ಬದಲಾವಣೆ ಕಾಣದು. ಕೆಲಸದ ಒತ್ತಡವು ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಹಣಕಾಸಿನ ತೊಂದರೆ ಇರುವುದಿಲ್ಲ. ಅನಿರೀಕ್ಷಿತ ಧನ ಲಾಭವಿದೆ. ಸೋದರರ ಜೊತೆಯಲ್ಲಿ ಉತ್ತಮ ಒಡನಾಟ ಕಂಡು ಬರುತ್ತದೆ. ಮಕ್ಕಳಿಗೆ ಖ್ಯಾತ ಸಂಸ್ಥೆಯಲ್ಲಿ ಉದ್ಯೋಗ ದೊರೆಯುವ ಸಾಧ್ಯತೆಗಳಿವೆ. ಸ್ವತಂತ್ರ ಜೀವನವನ್ನು ನಡೆಸಲು ಇಷ್ಟಪಡುವಿರಿ.
ಬೇರೆಯವರನ್ನು ಸುಲಭವಾಗಿ ನಂಬುವುದಿಲ್ಲ. ಹಣವನ್ನು ಉಳಿಸಲು ಯೋಜನೆಯನ್ನು ರೂಪಿಸುವಿರಿ. ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೆ ಕಲಿಕೆಯಲ್ಲಿ ಮುಂದುವರೆಯುತ್ತಾರೆ. ಉತ್ತಮ ಆರೋಗ್ಯವಿದ್ದರೂ ದೈಹಿಕ ಶಕ್ತಿಯು ಕಡಿಮೆಯಾಗುತ್ತದೆ. ನಿಮಗೆ ಇಷ್ಟವಾದಂತ ವಸ್ತು ಒಂದನ್ನು ಕೊಳ್ಳುವಿರಿ. ಪ್ರಾಣಿಗಳಿಂದ ತೊಂದರೆ ಉಂಟಾಗಬಹುದು. ಬೇಸರದಿಂದ ದೂರವಾಗಲು ದೂರದ ಊರಿಗೆ ಪ್ರವಾಸ ಬೆಳೆಸುವಿರಿ. ಬೆಳ್ಳಿ ಬಂಗಾರದ ಒಡವೆಯನ್ನು ಕೊಳ್ಳುವ ಸಾಧ್ಯತೆ ಇದೆ.
ವೃಶ್ಚಿಕ ರಾಶಿ
ಮಕ್ಕಳ ಕಾರಣದಿಂದ ಕುಟುಂಬದಲ್ಲಿ ವಿವಾದ ಉಂಟಾಗುತ್ತದೆ. ಮಾತುಕತೆಯಿಂದ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸುವಿರಿ. ಪಾಲುಗಾರಿಕೆಯ ವ್ಯಾಪಾರವಿದ್ದಲ್ಲಿ ನಂಬಿಕೆಯ ಕೊರತೆ ಕಂಡು ಬರುತ್ತದೆ. ಮಕ್ಕಳ ಆರೋಗ್ಯದಲ್ಲಿ ಏರುಪೇರು ಕಂಡು ಬರುತ್ತದೆ. ಆದಾಯದಲ್ಲಿ ಕೊರತೆ ಕಂಡು ಬರುತ್ತದೆ. ನಿಮ್ಮಲ್ಲಿನ ಹೊಂದಾಣಿಕೆಯ ಗುಣವು ನೆಮ್ಮದಿಯನ್ನು ನೀಡುತ್ತದೆ. ಉದ್ಯೋಗದಲ್ಲಿ ಅನಿರೀಕ್ಷಿತ ಬದಲಾವಣೆಗಳು ಕಂಡುಬರಲಿದೆ. ದೂರವಾದ ಅವಕಾಶವೊಂದು ಮರಳಿ ಬರಲಿದೆ.
ನಿಮ್ಮಲ್ಲಿರುವ ಹಠದ ಗುಣದಿಂದ ಉತ್ತಮ ಅವಕಾಶವು ಕೈ ತಪ್ಪುವ ಸಾಧ್ಯತೆ ಇದೆ. ತಾಳ್ಮೆಯಿಂದ ನಡೆದುಕೊಂಡಷ್ಟು ಲಾಭವಾಗುತ್ತದೆ. ಗುರುತರ ಪ್ರಯತ್ನದಿಂದ ಕೆಲಸ ಸಾಧಿಸುವಿರಿ. ವಿದ್ಯಾರ್ಥಿಗಳು ಒತ್ತಡಕ್ಕೆ ಮಣಿಯದೆ ಕಲಿಕೆಯಲ್ಲಿ ಮುಂದುವರೆಯುವುದು ಒಳ್ಳೆಯದು. ವಿವಾಹ ನಿಶ್ಚಯವಾಗುವ ಸಾಧ್ಯತೆಗಳಿವೆ. ಕುಟುಂಬದಲ್ಲಿ ಮಂಗಳ ಕಾರ್ಯವು ನಡೆಯಲಿದೆ. ಹೆಣ್ಣು ಮಕ್ಕಳ ಆರೋಗ್ಯದಲ್ಲಿ ಏರಿಳಿತ ಇರಲಿದೆ. ದಂಪತಿಗಳು ಪರಸ್ಪರ ವಿಶ್ವಾಸದಿಂದ ಬಾಳುತ್ತಾರೆ.
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).
