ಶುಕ್ರ-ರಾಹು ಸಂಯೋಗ: ಉದ್ಯೋಗ ಬದಲಿಸುವ ಸೂಚನೆಗಳಿವೆ, ಮೀನ ಸೇರಿ 4 ರಾಶಿಯವರ ಶುಭ ಫಲಗಳ ವಿವರ ಇಲ್ಲಿದೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಶುಕ್ರ-ರಾಹು ಸಂಯೋಗ: ಉದ್ಯೋಗ ಬದಲಿಸುವ ಸೂಚನೆಗಳಿವೆ, ಮೀನ ಸೇರಿ 4 ರಾಶಿಯವರ ಶುಭ ಫಲಗಳ ವಿವರ ಇಲ್ಲಿದೆ

ಶುಕ್ರ-ರಾಹು ಸಂಯೋಗ: ಉದ್ಯೋಗ ಬದಲಿಸುವ ಸೂಚನೆಗಳಿವೆ, ಮೀನ ಸೇರಿ 4 ರಾಶಿಯವರ ಶುಭ ಫಲಗಳ ವಿವರ ಇಲ್ಲಿದೆ

ಮೀನ ರಾಶಿಯಲ್ಲಿ ಶುಕ್ರ ಮತ್ತು ರಾಹುವಿನ ಸಂಯೋಗವು 12 ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಈ ಸಂಯೋಗದಿಂದ ಕೆಲವೊಂದು ರಾಶಿಯವರಿಗೆ ಆರ್ಥಿಕವಾಗಿ ಉತ್ತಮ ಪ್ರಗತಿ ಇರುತ್ತದೆ. ಕುಟುಂಬದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಾರೆ. ಧನು, ಮಕರ, ಕುಂಭ ಹಾಗೂ ಮೀನ ರಾಶಿಯವರ ಶುಭ ಫಲಗಳನ್ನು ಇಲ್ಲಿ ನೀಡಲಾಗಿದೆ.

Venus Rahu Conjunction: ಮೀನ ರಾಶಿಯಲ್ಲಿ ಶುಕ್ರ ರಾಹು ಸಂಯೋಗದಿಂದ ಧನು, ಮಕರ, ಕುಂಭ ಹಾಗೂ ಮೀನ ರಾಶಿಯವರ ಶುಭ ಫಲಗಳನ್ನು ಇಲ್ಲಿ ನೀಡಲಾಗಿದೆ.
Venus Rahu Conjunction: ಮೀನ ರಾಶಿಯಲ್ಲಿ ಶುಕ್ರ ರಾಹು ಸಂಯೋಗದಿಂದ ಧನು, ಮಕರ, ಕುಂಭ ಹಾಗೂ ಮೀನ ರಾಶಿಯವರ ಶುಭ ಫಲಗಳನ್ನು ಇಲ್ಲಿ ನೀಡಲಾಗಿದೆ.

ರಾಹುವು ಮಂತ್ರ ಮತ್ತು ಮಾಯೆಗೆ ಅದಿಪತಿ ಆಗಿದ್ದಾನೆ. ಶುಕ್ರ ಸ್ತ್ರೀಗ್ರಹವಾಗುತ್ತದೆ. ಆದ್ದರಿಂದ ಶುಕ್ರನು ರಾಹುವಿನ ಮಾಯೆಗೆ ಒಳಗಾಗುತ್ತದೆ. ರಾಹುವು ಬೃಹತ್ ಪ್ರಮಾಣವನ್ನು ತೋರಿಸುತ್ತದೆ. ಶುಕ್ರ ಗ್ರಹವು ಮೀನದಲ್ಲಿ ಸಾಗುತ್ತದೆ. ರಾಹುವು ಛಾಯಾಗ್ರಹ ಆದ್ದರಿಂದ ಅನಿರೀಕ್ಷಿತ ಶುಭಫಲಗಳು ದೊರೆಯುತ್ತವೆ. ಸ್ತ್ರೀಯರಿಗೆ ವಿಶೇಷವಾದ ಫಲಗಳು ದೊರೆಯುತ್ತವೆ. ಜನವರಿ 28ರ ಮಂಗಳವಾರ ಶುಕ್ರ ಗ್ರಹವು ಮೀನರಾಶಿಯನ್ನು ಪ್ರವೇಶಿಸಿದೆ. ಶುಕ್ರ ಮತ್ತು ರಾಹುವಿನ ಸಂಯೋಗವು ಫೆಬ್ರವರಿ ತಿಂಗಳ 27ರವರೆಗು ಇರುತ್ತದೆ. ಯಾವುದೇ ಗ್ರಹವು ಉಚ್ಚರಾಶಿಯಲ್ಲಿ ಇದ್ದಾಗ ಅಧಿಕವಾಗಿ ಪ್ರತಿ ರಾಶಿಗಳಿಗೂ ಶುಭಫಲಗಳನ್ನು ನೀಡುತ್ತಾನೆ. ಧನು ರಾಶಿಯಿಂದ ಮೀನ ರಾಶಿಯವರಿಗೆ ಶುಭಫಲಗಳನ್ನು ತಿಳಿಯೋಣ.

ಧನು ರಾಶಿ

ಸಣ್ಣಪುಟ್ಟ ವಿಚಾರಗಳಿಗೂ ಕೋಪದಿಂದ ವರ್ತಿಸುವಿರಿ. ತೆಗೆದುಕೊಳ್ಳುವ ತೀರ್ಮಾನಗಳ ಬಗ್ಗೆ ವಿಶ್ವಾಸವಿರುವುದಿಲ್ಲ. ಅಜೀರ್ಣದ ತೊಂದರೆಯಿಂದ ಬಳಲುವಿರಿ. ಆರಂಭಿಸಿದ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಗಳಿಸುವಿರಿ. ನಿಮ್ಮ ನೇತೃತ್ವದಲ್ಲಿ ಮನೆತನದ ವಿವಾದ ಒಂದು ಪರಿಹಾರ ಗೊಳ್ಳಲಿದೆ. ಕುಟುಂಬದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುವಿರಿ. ಮಕ್ಕಳ ಜೊತೆಯಲ್ಲಿ ಪ್ರೀತಿ ವಿಶ್ವಾಸದಿಂದ ಬಾಳುವಿರಿ. ಪ್ರಯೋಜನವಿಲ್ಲದ ವಿಚಾರಗಳಿಗೆ ಯೋಚನೆ ಮಾಡುವಿರಿ. ತಾಯಿಯವರ ಆರೋಗ್ಯದಲ್ಲಿ ಉತ್ತಮ ಪ್ರಗತಿ ಕಂಡುಬರುತ್ತದೆ.

ವಿಶಾಲವಾದ ಮನೆಯನ್ನು ಕೊಳ್ಳುವ ಆಸೆ ಈಡೇರಲಿದೆ. ಪಾಲುಗಾರಿಕೆಯ ವ್ಯಾಪಾರದಲ್ಲಿ ಉತ್ತಮ ವರಮಾನ ದೊರೆಯಲಿ. ಶಿಕ್ಷಕರಿಗೆ ಉನ್ನತ ಸ್ಥಾನ ಮತ್ತು ಗೌರವ ಲಭಿಸಲಿದೆ. ಉಪವೃತ್ತಿಯನ್ನು ಆರಂಭಿಸುವಿರಿ. ಅನಾವಶ್ಯಕವಾದ ಖರ್ಚು ವೆಚ್ಚಗಳನ್ನು ನಿಯಂತ್ರಿಸುವಿರಿ. ಯಾತ್ರಾ ಸ್ಥಳಕ್ಕೆ ಪ್ರವಾಸಕ್ಕೆ ತೆರಳುವಿರಿ. ಕಷ್ಟ ನಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವಿರಿ. ನಿಮ್ಮ ಸೋದರಿಯಿಂದ ಹಣದ ಸಹಾಯ ದೊರೆಯುತ್ತದೆ. ಸೋಲಿನ ವೇಳೆ ಭಯಪಡದೆ ಯಶಸ್ಸಿನತ್ತ ಸಾಗುವಿರಿ. ದೊಡ್ಡ ವಾಹನವನ್ನು ಕೊಳ್ಳುವಿರಿ. ಹಣಕಾಸಿನ ವಿಚಾರವನ್ನು ರಹಸ್ಯವಾಗಿ ಉಳಿಸಿಕೊಳ್ಳುವಿರಿ.

ಮಕರ ರಾಶಿ

ಆತುರದ ತೀರ್ಮಾನಗಳಿಂದ ತೊಂದರೆಗೆ ಸಿಲುಕುವಿರಿ. ಆದರೆ ಹಣಕಾಸಿನ ವಿಚಾರದಲ್ಲಿ ಸಂಯಮದಿಂದ ವರ್ತಿಸುವಿರಿ. ಒಳ್ಳೆಯ ಮಾತಿನಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಗಳಿಸುವಿರಿ. ಮಾಡದ ತಪ್ಪನ್ನು ಒಪ್ಪುವುದಿಲ್ಲ. ಆದಾಯದಲ್ಲಿ ನಿಧಾನಗತಿಯ ಪ್ರಗತಿ ಕಂಡುಬರುತ್ತದೆ. ಮಕ್ಕಳ ಆರೋಗ್ಯದಲ್ಲಿ ತೊಂದರೆ ಇರುತ್ತದೆ. ಉತ್ತಮ ಹವ್ಯಾಸದಿಂದ ಜನಮನ್ನಣೆಯನ್ನು ಗಳಿಸುವಿರಿ. ವಿದ್ಯಾರ್ಥಿಗಳು ಒತ್ತಡದ ನಡುವೆಯೂ ಕಲಿಕೆಯಲ್ಲಿ ಸಫಲತೆ ಸಾಧಿಸುತ್ತಾರೆ. ಮಕ್ಕಳ ಜೀವನದಲ್ಲಿ ಉತ್ತಮ ಬದಲಾವಣೆಗಳು ಬರಲಿವೆ.

ಕುಟುಂಬದಲ್ಲಿ ಶಾಂತಿ ನೆಮ್ಮದಿಯ ವಾತಾವರಣ ನೆಲೆಸುತ್ತದೆ. ಆತ್ಮವಿಶ್ವಾಸದಿಂದ ಹಣಕಾಸಿನ ವ್ಯವಹಾರವನ್ನು ಆರಂಭಿಸುವಿರಿ. ಸದಾಕಾಲ ಪ್ರವಾಸದಲ್ಲಿ ನಿರತರಾಗುವಿರಿ. ಕಲಾವಿದರಿಗೆ ವಿನೂತನ ಅವಕಾಶ ದೊರೆಯಲಿದೆ. ತಂದೆಯವರಿಗೆ ದೊರೆಯಬೇಕಿದ್ದ ಆಸ್ತಿಯು ವಿವಾದಕ್ಕೆ ಸಿಲುಕುತ್ತೀರಿ. ಮನೆತನದ ಗೌರವವನ್ನು ಕಾಪಾಡುವ ಸಂಕಲ್ಪ ಮಾಡುವಿರಿ. ಒತ್ತಡಕ್ಕೆ ಮಣಿಯದೆ ಸ್ವಂತ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಸ್ವಂತ ವ್ಯಾಪಾರ ವ್ಯವಹಾರಗಳು ಯಾವುದೇ ತೊಂದರೆಗೆ ಒಳಗಾಗದೆ ಸಾಗಲಿದೆ.

ಕುಂಭ ರಾಶಿ

ಮನಸ್ಸಿನ ಯೋಜನೆಗಳನ್ನು ಯಾರುಂದಿಗೂ ಚರ್ಚಿಸುವುದಿಲ್ಲ. ಆದರೆ ಸುಲಭವಾಗಿ ಬೇರೆಯವರ ಮನದ ಇಂಗಿತವನ್ನು ಅರ್ಥ ಮಾಡಿಕೊಳ್ಳುವಿರಿ. ಆದಾಯದಲ್ಲಿ ಉತ್ತಮ ಪ್ರಗತಿ ಕಂಡುಬರುತ್ತದೆ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆಯಿಂದ ವ್ಯವಹರಿಸುವುದು ಒಳ್ಳೆಯದು. ಕೌಟುಂಬಿಕ ಜೀವನದಲ್ಲಿ ಉತ್ತಮ ಬದಲಾವಣೆಗಳು ಕಂಡುಬರುತ್ತವೆ. ವಿದ್ಯಾರ್ಥಿಗಳು ಸ್ವತಂತ್ರವಾಗಿ ಕಲಿಕೆಯಲ್ಲಿ ಮುಂದುವರೆಯಲಿದ್ದಾರೆ. ದುಡುಕಿನ ತೀರ್ಮಾನಗಳು ಹಣಕಾಸಿನ ವ್ಯವಹಾರದಲ್ಲಿ ಬೇಸರ ಮೂಡಿಸುತ್ತದೆ.

ಉದ್ಯೋಗದಲ್ಲಿ ನಿರೀಕ್ಷಿತ ಬದಲಾವಣೆಗಳು ಕಂಡು ಬರಲಿವೆ. ಪರಿಸ್ಥಿತಿಯ ಒತ್ತಡಕ್ಕೆ ಮಣಿದು ಉದ್ಯೋಗವನ್ನು ಬದಲಿಸುವಿರಿ. ವಿದೇಶಕ್ಕೆ ಸಂಬಂಧಿಸಿದ ವ್ಯಾಪಾರ ವ್ಯವಹಾರಗಳಲ್ಲಿ ಲಾಭವಿರುತ್ತದೆ. ಕೈಕಾಲುಗಳಿಗೆ ಪೆಟ್ಟಾಗುವ ಸಂಭವವಿದೆ. ನೂತನ ವಾಹನಲಾಭವಿದೆ. ಕುಟುಂಬದ ಹಿರಿಯರ ಸಲುವಾಗಿ ಖರ್ಚು ವೆಚ್ಚಗಳು ಹೆಚ್ಚುತ್ತವೆ. ಉದ್ಯೋಗದ ಸಲುವಾಗಿ ವಿದೇಶಕ್ಕೆ ತೆರಳಬಹುದು. ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಕಂಡುಬರುತ್ತದೆ. ಮಕ್ಕಳಿಗೆ ವಿವಾಹ ನಿಶ್ಚಯವಾಗಲಿದೆ. ದೇಹದ ತೂಕ ಕಡಿಮೆ ಮಾಡಿಕೊಳ್ಳಲು ವ್ಯಾಯಾಮದ ಮೊರೆಹೋಗುವಿರಿ. ಹಠದ ಮನೋಭಾವನೆ ಬದಲಾಗುವುದು ಒಳ್ಳೆಯದು.

ಮೀನ ರಾಶಿ

ಯಾವುದೇ ವಿಚಾರದಲ್ಲಿಯೂ ಸ್ಥಿರವಾದ ತೀರ್ಮಾನಗಳನ್ನು ತೆಗೆದುಕೊಳ್ಳುವುದಿಲ್ಲ. ಆದರೆ ಆರಂಭಿಸಿದ ಕೆಲಸ ಕಾರ್ಯಗಳನ್ನು ಸಂಪೂರ್ಣಗೊಳಿಸುವಿರಿ. ಉದ್ಯೋಗವನ್ನು ಬದಲಿಸುವ ಸೂಚನೆಗಳಿವೆ. ಆರೋಗ್ಯದಲ್ಲಿ ಏರಿಳಿತ ಕಂಡು ಬರುತ್ತದೆ. ಹೊಟ್ಟೆಗೆ ಸಂಬಂಧಪಟ್ಟ ದೋಷವು ಕಾಡಲಿದೆ. ಕಲುಷಿತ ನೀರಿನಿಂದ ಸೋಂಕು ಉಂಟಾಗಬಹುದು. ಉನ್ನತ ಹುದ್ದೆಯಲ್ಲಿ ಇರುವವರು ವಿವಾದಕ್ಕೆ ಸಿಲುಕಲಿದ್ದಾರೆ. ಕುಟುಂಬದ ಸದಸ್ಯರ ಜೊತೆಯಲ್ಲಿ ಪಾಲುಗಾರಿಕೆ ವ್ಯಾಪಾರವನ್ನು ಆರಂಭಿಸುವಿರಿ.

ಅಲ್ಪ ತೃಪ್ತಿಯ ಗುಣ ಎಲ್ಲರ ಗಮನ ಸೆಳೆಯುತ್ತದೆ. ಕುಟುಂಬದಲ್ಲಿ ನಿಮ್ಮ ಮಾತಿಗೆ ಎಲ್ಲರ ಒಪ್ಪಿಗೆ ದೊರೆಯುತ್ತದೆ. ವಿದ್ಯಾರ್ಥಿಗಳ ಜೀವನದಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ. ಮನೆತನದ ವೃತ್ತಿಯೊಂದು ಆಸರೆಯಾಗಲಿದೆ. ಕುಟುಂಬದಲ್ಲಿನ ಮಂಗಳ ಕಾರ್ಯವು ಮುಂದೂಡಲ್ಪಡುತ್ತದೆ. ಸಂಘ ಸಂಸ್ಥೆಗಳ ಜವಾಬ್ದಾರಿ ನಿಮ್ಮದಾಗಲಿದೆ. ಆತ್ಮೀಯರೊಬ್ಬರ ಹಣಕಾಸಿನ ಜವಾಬ್ದಾರಿ ನಿಮ್ಮದಾಗುತ್ತದೆ. ವಿಶ್ರಾಂತಿ ಇಲ್ಲದ ದುಡಿಮೆಯಿಂದ ಬೇಸರಕ್ಕೆ ಒಳಗಾಗುವಿರಿ. ಕೈಕಾಲುಗಳಲ್ಲಿ ನಿಶ್ಯಕ್ತಿ ಕಂಡುಬರುತ್ತದೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್: 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.