ಶುಕ್ರನಿಗೆ ರಾಹುವಿನ ದೃಷ್ಠಿಯಿಂದ ಅನಾರೋಗ್ಯ, ಆರ್ಥಿಕ ಸಮಸ್ಯೆ; ಈ ರಾಶಿಯವರಿಗೆ ಬಹಳ ಎಚ್ಚರಿಕೆ ಅಗತ್ಯ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಶುಕ್ರನಿಗೆ ರಾಹುವಿನ ದೃಷ್ಠಿಯಿಂದ ಅನಾರೋಗ್ಯ, ಆರ್ಥಿಕ ಸಮಸ್ಯೆ; ಈ ರಾಶಿಯವರಿಗೆ ಬಹಳ ಎಚ್ಚರಿಕೆ ಅಗತ್ಯ

ಶುಕ್ರನಿಗೆ ರಾಹುವಿನ ದೃಷ್ಠಿಯಿಂದ ಅನಾರೋಗ್ಯ, ಆರ್ಥಿಕ ಸಮಸ್ಯೆ; ಈ ರಾಶಿಯವರಿಗೆ ಬಹಳ ಎಚ್ಚರಿಕೆ ಅಗತ್ಯ

ಗ್ರಹಗಳು ಆಗ್ಗಾಗ್ಗೆ ರಾಶಿಗಳು, ನಕ್ಷತ್ರವನ್ನು ಬದಲಿಸುತ್ತಿರುತ್ತವೆ. ಈ ರೀತಿ ಗ್ರಹಗಳ ಬದಲಾವಣೆ ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಇತ್ತೀಚೆಗೆ ಶುಕ್ರನ ಮಿಥುನ ರಾಶಿಗೆ ಪ್ರವೇಶಿಸಿದ್ದಾನೆ. ಇದರ ಪರಿಣಾಮದಿಂದ 7 ರಾಶಿಯವರು ಆರೋಗ್ಯ, ಹಣಕಾಸಿನ ವಿಚಾರದಲ್ಲಿ ಸಮಸ್ಯೆ ಎದುರಿಸಲಿದ್ದಾರೆ. (ಬರಹ: ಎಚ್‌. ಸತೀಶ್, ಜ್ಯೋತಿಷಿ)

ಶುಕ್ರನಿಗೆ ರಾಹುವಿನ ದೃಷ್ಠಿಯಿಂದ ಅನಾರೋಗ್ಯ, ಆರ್ಥಿಕ ಸಮಸ್ಯೆ; ಈ ರಾಶಿಯವರಿಗೆ ಬಹಳ ಎಚ್ಚರಿಕೆ ಅಗತ್ಯ
ಶುಕ್ರನಿಗೆ ರಾಹುವಿನ ದೃಷ್ಠಿಯಿಂದ ಅನಾರೋಗ್ಯ, ಆರ್ಥಿಕ ಸಮಸ್ಯೆ; ಈ ರಾಶಿಯವರಿಗೆ ಬಹಳ ಎಚ್ಚರಿಕೆ ಅಗತ್ಯ

ಶುಕ್ರನು ಇತ್ತೀಚೆಗೆ ಮಿಥುನ ರಾಶಿಯಿಂದ ಕಟಕ ರಾಶಿಯನ್ನು ಪ್ರವೇಶಿಸಿದ್ದಾನೆ. ನಂತರದ ದಿನಗಳಲ್ಲಿ ಆಗಸ್ಟ್ 31ರಂದು ಶುಕ್ರನು ಸಿಂಹ ರಾಶಿಯನ್ನು ಪ್ರವೇಶಿಸುತ್ತಾನೆ ಕಟಕದಲ್ಲಿ ಶುಕ್ರನಿರುವವರೆಗೂ ಶುಕ್ರನಿಗೆ ರಾಹುವಿನ ದೃಷ್ಟಿ ಇರುತ್ತದೆ. ಈ ಕಾರಣದಿಂದ ಪ್ರತಿಯೊಂದು ರಾಶಿಗಳಿಗೂ ತನ್ನದೇ ಆದ ವಿಭಿನ್ನ ರೀತಿಯ ಫಲಿತಾಂಶಗಳು ದೊರೆಯುತ್ತವೆ. ಇಲ್ಲಿ ತಿಳಿಸಿರುವ ರಾಶಿಗಳಲ್ಲಿ ಜನಿಸಿದವರಿಗೆ ಕೆಲಸ ಕಾರ್ಯಗಳಲ್ಲಿ ಹಿನ್ನೆಡೆ ಉಂಟಾಗುತ್ತದೆ. ರಾಹು ಮತ್ತು ಶುಕ್ರಗ್ರಹಕ್ಕೆ ಸಂಬಂಧಿಸಿದ ಪೂಜೆ ಪುನಸ್ಕಾರದಿಂದ ಶುಭಫಲಗಳನ್ನು ಪಡೆಯಬಹುದು. ಮನಸ್ಸು ನಮ್ಮ ಹಿಡಿತದಲ್ಲಿ ಇದ್ದರೆ ಯಾವುದೇ ತೊಂದರೆ ಇರುವುದಿಲ್ಲ. ಆತ್ಮವಿಶ್ವಾಸವೇ ಎಲ್ಲಕ್ಕೂ ಪರಿಹಾರವಾಗಲಿದೆ.

ಮೇಷ

ಕಣ್ಣಿನ ದೋಷದಿಂದ ಬಳಲುವಿರಿ. ಸ್ವಂತ ಖರ್ಚು ವೆಚ್ಚಕ್ಕಿಂತಲೂ ಬೇರೆಯವರಿಗೆ ಹೆಚ್ಚಿನ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಆದರೆ ವರಮಾನದಲ್ಲಿ ಯಾವುದೇ ತೊಂದರೆ ಕಂಡುಬರುವುದಿಲ್ಲ. ಕುಟುಂಬದ ಐಕ್ಯಮತ್ಯದಲ್ಲಿ ಕೊರತೆ ಕಂಡು ಬರುತ್ತದೆ. ಕುಟುಂಬದವರ ಮೇಲಿನ ನಂಬಿಕೆಗಿಂತ ಬೇರೆಯವರನ್ನು ನಂಬುವಿರಿ. ಮನೆಯನ್ನು ಅಂದಗೊಳಿಸಲು ಹೆಚ್ಚಿನ ಹಣ ವೆಚ್ಚವಾಗುತ್ತದೆ. ಕುಟುಂಬದ ಮಹಿಳೆಯರ ಮುಖ್ಯವಾಗಿ ತಾಯಿಯವರ ಆರೋಗ್ಯದಲ್ಲಿ ತೊಂದರೆ ಕಂಡು ಬರುತ್ತದೆ. ಆಹಾರ ಪದ್ಧತಿಯನ್ನು ಬದಲಾವಣೆ ಮಾಡಿಕೊಂಡಲ್ಲಿ ಯಾವುದೇ ತೊಂದರೆ ಎದುರಾಗುವುದಿಲ್ಲ. ನಿಧಾನ ಗತಿಯಲ್ಲಿಕೆಲಸ ಕಾರ್ಯಗಳನ್ನು ಆರಂಭಿಸುವ ಕಾರಣ ನಿಮಗೆ ದೊರೆಯಬೇಕಾದ ಅವಕಾಶಗಳು ಬೇರೆಯವರ ಪಾಲಾಗುತ್ತದೆ. ಒಮ್ಮೆ ಆಡಿದ ಮಾತನ್ನು ಉಳಿಸಿಕೊಳ್ಳಬೇಕು. ಆಡುವ ಮಾತಿನಲ್ಲಿ ನಿಮ್ಮ ಜೀವನ ಅಡಗಿದೆ. ಗುರು ಹಿರಿಯರ ಸಲಹೆಯನ್ನು ಆಲಿಸಿದರೆ ತೊಂದರೆಗಳು ಕಡಿಮೆಯಾಗುತ್ತದೆ.

ಕಟಕ

ಐಷಾರಾಮಿ ಜೀವನವನ್ನು ಇಷ್ಟಪಡುವಿರಿ. ಹೊಸ ರೀತಿಯ ಒಡವೆವಸ್ತ್ರಗಳನ್ನು ಕೊಳ್ಳಲು ಹಣವು ಖರ್ಚಾಗುತ್ತದೆ. ಯಾವುದೇ ಕೆಲಸವನ್ನು ಯೋಚಿಸದೆ, ಅದರ ಬಗ್ಗೆ ತಿಳಿಯದೆ ಆರಂಭಿಸುವಿರಿ. ಇದರಿಂದ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಪ್ರತಿಯೊಂದು ವಿಚಾರದಲ್ಲಿ ಮಾನಸಿಕ ಒತ್ತಡ ನಿಮ್ಮನ್ನು ಕಾಡುತ್ತದೆ. ಶಾಂತಿ ಸಂಯಮದಿಂದ ಎಲ್ಲರೊಡನೆ ವರ್ತಿಸಿದರೆ ಯಾವುದೇ ತೊಂದರೆಯಾಗದು. ಕೆಲಸ ಕಾರ್ಯಗಳು ಮುಗಿಯಬೇಕೆಂಬ ಆತುರದಿಂದ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ನಿಮ್ಮ ಒಳ್ಳೆಯ ಮಾತಿನಿಂದ ಮಾತ್ರ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಲು ಸಾಧ್ಯ. ಹಣಕಾಸಿನ ಕೊರತೆ ಉಂಟಾದಲ್ಲಿ ಸಹನೆ ಕಳೆದುಕೊಂಡು ಉದ್ವೇಗದಿಂದ ವರ್ತಿಸುವಿರಿ. ಇರುವ ಮನೆ ಅಥವಾ ಜಮೀನನ್ನು ಮಾರಾಟ ಮಾಡಿ ಹೆಚ್ಚಿನ ಸೌಕರ್ಯವಿರುವ ಮನೆಯನ್ನು ಕೊಳ್ಳುವಿರಿ.

ಸಿಂಹ

ಆತ್ಮೀಯರ ಮನೆಯಲ್ಲಿ ನಡೆಯುವ ಶುಭ ಕಾರ್ಯಗಳಿಗಾಗಿ ಹಣ ನೀಡಬೇಕಾಗುತ್ತದೆ. ಅತಿಯಾದ ಆತ್ಮವಿಶ್ವಾಸದಿಂದ ತಪ್ಪು ಮಾಡುವ ಸಾಧ್ಯತೆ ಕಂಡು ಬರುತ್ತದೆ. ಅಂದರೆ ಆತುರ ಪಡದೆ ಶಾಂತಿ ಸಂಯಮದಿಂದ ವರ್ತಿಸಬೇಕು. ಮಾಡಿದ ತಪ್ಪಿಗೆ ಶಿಕ್ಷೆ ಮತ್ತು ದಂಡನೆ ಬೆನ್ನ ಹಿಂದೆ ಇರುತ್ತದೆ. ಆರೋಗ್ಯದಲ್ಲಿ ತೊಂದರೆ ಕಂಡು ಬರುತ್ತದೆ. ಸುಳ್ಳು ಸುದ್ದಿಯಿಂದಾಗಿ ಆತ್ಮೀಯರೂ ಸಹ ನಿಮ್ಮಿಂದ ದೂರವಾಗುತ್ತಾರೆ. ಹೆಣ್ಣು ಮಕ್ಕಳಿಗೆ ಹಾರ್ಮೋನಿನ ತೊಂದರೆ ಇರುತ್ತದೆ. ದೀರ್ಘಕಾಲದಿಂದ ಕಾಡುತ್ತಿರುವ ಅನಾರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ. ಸಿಹಿ ಪದಾರ್ಥಗಳು ಮತ್ತು ಕರಿದ ಪದಾರ್ಥಗಳನ್ನು ಸೇವಿಸುವುದರಿಂದ ಆರೋಗ್ಯ ಕೆಡಲಿದೆ. ಹಣಕಾಸಿನ ವಿಚಾರದಲ್ಲಿ ತೊಂದರೆ ಇರುತ್ತದೆ. ಅನಾವಶ್ಯಕ ಖರ್ಚು ವೆಚ್ಚಗಳು ಎದುರಾಗುತ್ತವೆ. ಮನೆಯಲ್ಲಿ ಹೋಮ ಹವನಾದಿಗಳು ನಡೆಯುತ್ತವೆ. ಈ ಅವಧಿಯಲ್ಲಿ ಖರ್ಚು ವೆಚ್ಚ ಹೆಚ್ಚಲಿದೆ.

ವೃಶ್ಚಿಕ

ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಎಂದಿನಂತೆ ಆಸಕ್ತಿ ತೋರುವುದಿಲ್ಲ. ಮನರಂಜನೆ, ಕ್ರೀಡಾಸ್ಪರ್ದೆ ಪ್ರವಾಸಗಳಲ್ಲಿ ಹೆಚ್ಚಿನ ಸಮಯ ಕಳೆಯುತ್ತಾರೆ. ತಂದೆ ತಾಯಿ ಮತ್ತು ಮಕ್ಕಳ ಜೊತೆ ಉತ್ತಮ ಒಡನಾಟ ಇರುವುದಿಲ್ಲ. ಕುಟುಂಬದಲ್ಲಿ ಅನಾವಶ್ಯಕ ಖರ್ಚು ವೆಚ್ಚಗಳು ಕಂಡುಬರುತ್ತವೆ. ವಿವಾಹ ಯೋಗವಿದೆ. ದಾಂಪತ್ಯ ಜೀವನವು ಸುಖ ಸಂತೋಷದಿಂದ ಕೂಡಿರುತ್ತದೆ. ಆದರೆ ವಿರೋಧಿಗಳ ಮಧ್ಯಸ್ಥಿಕೆಯಿಂದ ದಂಪತಿ ನಡುವೆ ವಾದ ವಿವಾದ ಆರಂಭವಾಗುತ್ತದೆ. ಆದರೆ ಹಣಕಾಸಿನ ತೊಂದರೆ ಉಂಟಾಗುವುದಿಲ್ಲ. ಪಾಲುದಾರಿಕೆ ವ್ಯಾಪಾರದಲ್ಲಿ ಲಾಭವಿರುತ್ತದೆ. ಮಹಿಳೆಯರಿಗೆ ಅನಿರೀಕ್ಷಿತವಾಗಿ ಶುಭಫಲಗಳು ದೊರೆಯುತ್ತವೆ. ಬುದ್ಧಿವಂತಿಕೆಯಿಂದ ಕೂಡಿಟ್ಟ ಹಣವನ್ನು ಅನಿವಾರ್ಯವಾಗಿ ಖರ್ಚು ಮಾಡಬೇಕಾಗುತ್ತದೆ. ಎಂದೋ ಮಾಡಿದ ತಪ್ಪಿಗೆ ಇಂದು ಪಶ್ಚಾತಾಪ ಪಡುವ ಸಂದರ್ಭ ಬರಬಹುದು. ಮನೆಯನ್ನು ಕೊಳ್ಳಲು ಬೇರೆಯವರ ಬಳಿ ಹಣವನ್ನು ಪಡೆಯಬೇಕಾಗುತ್ತದೆ.

ಧನಸ್ಸು

ಕುಟುಂಬದ ಪ್ರತಿಯೊಂದು ವಿಚಾರಗಳಲ್ಲಿಯೂ ಬೇರೆಯವರ ಪಾಲ್ಗೊಳ್ಳುವಿಕೆಯಿಂದ ಸಂದಿಗ್ದತೆ ಉಂಟಾಗುತ್ತದೆ. ತಾಯಿಯವರ ಮನಸ್ಸನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ವಿದ್ಯಾರ್ಥಿಗಳಿಗೆ ಮಾನಸಿಕ ಒತ್ತಡದ ಕಾರಣ ಕಲಿಕೆಯಲ್ಲಿ ಹೆಚ್ಚಿನ ಶ್ರದ್ಧೆ ತೋರಲು ಸಾಧ್ಯವಾಗುವುದಿಲ್ಲ. ದಂಪತಿ ನಡುವೆ ಕಲಹ ಉಂಟಾಗುತ್ತದೆ. ಕುಟುಂಬದಲ್ಲಿನ ಶಾಂತಿ ಸೌಹಾರ್ದತೆಗೆ ಧಕ್ಕೆ ಬರುತ್ತದೆ. ಹಣ ಗಳಿಸಬೇಕೆಂಬ ಆಸೆಯಿಂದ ಎಲ್ಲರನ್ನೂ ಕಡೆಗಣಿಸುವಿರಿ. ನೀವು ನಂಬಿದವರೊಬ್ಬರು ನಿಮಗೆ ತೊಂದರೆ ನೀಡಬಹುದು. ಆರೋಗ್ಯದ ಬಗ್ಗೆ ಎಚ್ಚರವಿರಬೇಕು. ಕುಟುಂಬದ ಹಿರಿಯರಿಗೆ ನಿಶ್ಯಕ್ತಿ ಇರುತ್ತದೆ. ದಂಪತಿ ನಡುವೆ ಪರಸ್ಪರ ವಾದ ವಿವಾದಗಳು ಎದುರಾಗುತ್ತದೆ. ಬೇರೊಬ್ಬರ ಮಾತಿಗೆ ಕಿವಿ ಕೊಡದಿದ್ದರೆ ಒಳ್ಳೆಯದು.

ಕುಂಭ

ಸರಿ ತಪ್ಪನ್ನು ಅರಿಯದೆ ನೀವು ಮಾಡಿದ್ದೇ ಸರಿ ಎಂದು ತಪ್ಪು ತಿಳಿಯುವಿರಿ. ನಿಮ್ಮ ಮನಸ್ಸಿನಲ್ಲಿರುವ ವಿಚಾರವನ್ನು ರಹಸ್ಯವಾಗಿ ಕಾರ್ಯಗತಗೊಳಿಸುವಿರಿ. ಮಾತಿನ ಮೇಲೆ ಹಿಡಿತವಿರುವುದಿಲ್ಲ. ನೀವು ಆಡುವ ಮಾತಿನ ಆಂತರ್ಯ ಯಾರಿಗೂ ಅರ್ಥವಾಗುವುದಿಲ್ಲ. ಕುಟುಂಬದಲ್ಲಿ ಇರುವ ಸಂತೋಷದ ವಾತಾವರಣ ನಿಮ್ಮ ಮಾತಿನಿಂದ ಹದಗೆಡುತ್ತದೆ. ಸಣ್ಣ ಪುಟ್ಟ ವಿಚಾರಗಳಿಗೂ ಹೆಚ್ಚಿನ ಹಣ ವೆಚ್ಚವಾಗುತ್ತದೆ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನವಿರಬೇಕು. ಉದ್ಯೋಗದಲ್ಲಿ ಮಾಡದ ತಪ್ಪಿಗೆ ದಂಡ ತೆರ ಬೇಕಾಗುವುದು. ಒಟ್ಟಾರೆ ಎಚ್ಚರ ತಪ್ಪಿ ನಡೆದದಲ್ಲಿ ಮಾತ್ರ ನಿಮಗೆ ತೊಂದರೆ ಇರುತ್ತದೆ. ಕುಟುಂಬದ ಹಿರಿಯರ ಮಾತಿಗೆ ಗೌರವ ನೀಡಿ ಅವರನ್ನು ಅನುಸರಿಸಿ. ನಿಮ್ಮ ಕಷ್ಟ ಗಳಿಗೆ ನಿಮ್ಮ ತಾಯಿಯವರು ಸ್ಪಂದಿಸುತ್ತಾರೆ. ಕಾದು ನೋಡುವ ಬುದ್ಧಿ ಇರಲಿ.

ಮೀನ

ಸರಳವಾದ ಕೆಲಸ ಕಾರ್ಯಗಳಿಗೂ ಹೆಚ್ಚಿನ ಪ್ರಯತ್ನದ ಅವಶ್ಯಕತೆ ಇರುತ್ತದೆ. ಕೆಲಸ ಕಾರ್ಯಗಳು ಸುಗಮವಾಗಿ ನಡೆಯುತ್ತಿದ್ದರೂ ಮನಸ್ಸಿನಲ್ಲಿ ಆತಂಕದ ಭಾವನೆ ಇರುತ್ತದೆ. ಸೋದರರ ಬುದ್ಧಿವಂತಿಕೆಯ ತೀರ್ಮಾನ ನಿಮ್ಮನ್ನು ಸರಿದಾರಿಯಲ್ಲಿ ನಡೆಸುತ್ತದೆ. ವಿದ್ಯಾರ್ಥಿಗಳು ಮನರಂಜನೆಯ ಬಗ್ಗೆ ಹೆಚ್ಚಿನ ಒಲವು ತೋರುತ್ತಾರೆ. ಮಕ್ಕಳ ಆರೋಗ್ಯದಲ್ಲಿ ತೊಂದರೆ ಇರುತ್ತದೆ. ಕುಟುಂಬಕ್ಕೆ ಸೇರಿದ ಮುಖ್ಯ ಕೆಲಸವು ನಿಧಾನವಾಗಿ ಸಾಗುತ್ತದೆ. ಕೆಲಸ ಕಾರ್ಯಗಳಲ್ಲಿ ಅನಾವಶ್ಯಕವಾಗಿ ಏರಿಳಿತ ಕಂಡು ಬರುತ್ತದೆ. ಖರ್ಚು ವೆಚ್ಚಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ. ಸಾಲವಾಗಿ ಪಡೆದ ಹಣವನ್ನು ಮರಳಿ ನೀಡಲೇಬೇಕಾದ ಪ್ರಸಂಗ ಒದಗಿ ಬರುತ್ತದೆ. ಕುಟುಂಬದಲ್ಲಿ ಮಕ್ಕಳ ಸಲುವಾಗಿ ಪರಸ್ಪರ ವಾದ ವಿವಾದದಲ್ಲಿ ತೊಡಗಬೇಕಾಗುತ್ತದೆ. ಪರಿಸ್ಥಿತಿಯ ಒತ್ತಡಕ್ಕೆ ಮಣಿದು ಯಾವುದೇ ಕೆಲಸವನ್ನು ಒಪ್ಪಿಕೊಳ್ಳಬೇಡಿ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.