ಜ 28ಕ್ಕೆ ಮೀನ ರಾಶಿಗೆ ಪ್ರವೇಶಿಸಲಿರುವ ಶುಕ್ರ; 12 ರಾಶಿಗಳಿಗೆ ಏನು ಫಲ ನೀಡಲಿದ್ದಾನೆ ಭಾಗ್ಯ ಗ್ರಹ?
Venus Transit 2025: ಭಾಗ್ಯ, ಪ್ರೀತಿಯ ಗ್ರಹ ಎಂದೇ ಹೆಸರಾದ ಶುಕ್ರನು ಜನವರಿ 28 ರಂದು ಕುಂಭ ರಾಶಿಯಿಂದ ಮೀನ ರಾಶಿಗೆ ಪ್ರವೇಶಿಸುತ್ತಿದ್ದಾನೆ. ಇದು ವಿವಿಧ ರಾಶಿಗಳಿಗೆ ವಿವಿಧ ರೀತಿಯ ಪರಿಣಾಮ ಬೀರಲಿದೆ. ಶುಕ್ರ ಸಂಕ್ರಮಣವು ಯಾವ ರಾಶಿಯವರಿಗೆ ಏನು ಫಲ ನೀಡಲಿದೆ ನೋಡೋಣ.
ಶುಕ್ರ ಸಂಕ್ರಮಣ: ಜನವರಿ 28 ರಂದು ಶುಕ್ರನು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಮೇ 31 ರವರೆಗೂ ಮೀನ ರಾಶಿಯಲ್ಲಿಯೇ ಸಂಚರಿಸುತ್ತಾನೆ. ಮೀನರಾಶಿಯಲ್ಲಿ ಶುಕ್ರನು ಉಚ್ಚನಾಗುತ್ತಾನೆ. ಶುಕ್ರ ಮತ್ತು ರಾಹು ಯುತಿಯು ಮೇ ತಿಂಗಳ 18ವರೆಗೂ ಇರುತ್ತದೆ. ಇದರಿಂದಾಗಿ ಪ್ರತಿಯೊಂದು ರಾಶಿಗಳಿಗೂ ವಿಭಿನ್ನವಾದ ಫಲಗಳು ದೊರೆಯುತ್ತದೆ.
ದೈವಜ್ಞ ಮಂತ್ರೇಶ್ವರರು ಬರೆದಿರುವ ಫಲದೀಪಿಕಾ ಗ್ರಂಥದ ಅನುಸಾರ ಶುಕ್ರನಿಂದ ಸಂಗೀತ, ನಾಟ್ಯ, ಛಾಯಾಚಿತ್ರ, ಮನರಂಜನೆ, ಅಭರಣ,ಆಕರ್ಷಕ ಉಡುಪು, ಸುಖ ಜೀವನ, ಹಣಕಾಸಿನ ವಿಚಾರ, ವಾಹನ ವಿಚಾರ, ದಾಂಪತ್ಯ ಜೀವನ, ವಿಶ್ರಾಂತಿ, ಸುಖಕರ ನಿದ್ದೆ, ರುಚಿಕರ ಆಹಾರ ಮುಂತಾದವುಗಳನ್ನು ಗಳಿಸಬಹುದು. ಆದರೆ ರಾಹುವಿನ ಯುತಿ ಇರುವ ಕಾರಣ ದೊರೆಯುವ ಫಲಗಳು ವಿಭಿನ್ನವಾಗಿರುತ್ತವೆ.
ಮೇಷ ರಾಶಿ
ಆದಾಯದಲ್ಲಿ ತೊಂದರೆ ಇರುವುದಿಲ್ಲ. ಸ್ವಂತ ಕೆಲಸಗಳಿಗಾಗಿ ಹಣ ಖರ್ಚು ಮಾಡುವಿರಿ. ದಂಪತಿ ನಡುವೆ ಅನ್ಯೋನ್ಯತೆ ಇರುತ್ತದೆ. ಆಕರ್ಷಕವಾದ ಒಡವೆ ವಸ್ತ್ರಗಳನ್ನು ಕೊಳ್ಳುವಿರಿ. ಮಹಿಳಾ ಉದ್ಯೋಗಿಗಳಿಗೆ ಅನಿರೀಕ್ಷಿತ ಅಧಿಕಾರ ಲಭ್ಯವಾಗುತ್ತದೆ. ಉತ್ತಮ ಮಾತುಕತೆಯ ಫಲವಾಗಿ ಜೀವನದಲ್ಲಿ ಮಹತ್ತರ ಬದಲಾವಣೆಗಳು ಉಂಟಾಗಲಿವೆ. ಅವಿವಾಹಿತರಿಗೆ ಆತ್ಮೀಯರ ಸಹಾಯದಿಂದ ವಿವಾಹ ನಿಶ್ಚಯವಾಗುತ್ತದೆ. ಕಲಾವಿದರ ಜೀವನದಲ್ಲಿ ಸಾಕಷ್ಟು ಪರಿವರ್ತನೆ ಕಂಡು ಬರುತ್ತದೆ. ಕ್ರಿಯಾಶೀಲತೆಯಿಂದ ಜನಮನ ಗೆಲ್ಲುವಿರಿ. ನಿರೀಕ್ಷಿತ ಖರ್ಚು ವೆಚ್ಚಗಳನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗುವಿರಿ. ಹಾರ್ಮೋನಿನ ತೊಂದರೆ ಇರುವವರು ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು.
ವೃಷಭ ರಾಶಿ
ಮನರಂಜನಾ ಮಾಧ್ಯಮದಲ್ಲಿ ಇರುವವರಿಗೆ ಹೆಚ್ಚಿನ ಅವಕಾಶಗಳು ದೊರೆಯಲಿವೆ. ಜೀವನದಲ್ಲಿ ಯಾವುದೇ ರೀತಿಯ ತೊಂದರೆ ಕಂಡು ಬರುವುದಿಲ್ಲ. ಹಣಕಾಸಿನ ಅನುಕೂಲತೆ ಒದಗಿ ಬರುತ್ತದೆ. ಖರ್ಚು ವೆಚ್ಚಗಳಿಗಿಂತ ಹೆಚ್ಚಿನ ಆದಾಯವಿರುತ್ತದೆ. ಉದ್ಯೋಗದಲ್ಲಿ ನಿಧಾನಗತಿಯ ಪ್ರಗತಿ ಇರಲಿದೆ. ನಿಮ್ಮ ಮನಸ್ಸಿಗೆ ಮುದ ನೀಡುವ ಕೆಲಸಗಳನ್ನು ಆಯ್ಕೆ ಮಾಡುವಿರಿ. ಭಾಗ್ಯ ಪದಾರ್ಥಗಳನ್ನು ಸಂಗ್ರಹಿಸುವಿರಿ. ಬೇರೆಯವರಿಗೆ ಸಹಾಯವಾಗಿ ನೀಡಿದ್ದ ಹಣವು ಮರಳಿ ದೊರೆಯುತ್ತದೆ. ಬೇಸರ ಕಳೆಯಲು ಯಾತ್ರಾಸ್ಥಳಕ್ಕೆ ಭೇಟಿ ನೀಡುವಿರಿ. ಬೇರೆಯವರ ಒತ್ತಡಕ್ಕೆ ಮಣಿಯದೆ ಸ್ವಂತ ಕೆಲಸ ಕಾರ್ಯಗಳನ್ನು ಸ್ವತಂತವಾಗಿ ಪೂರ್ಣಗೊಳಿಸುವಿರಿ.
ಮಿಥುನ ರಾಶಿ
ಆತ್ಮವಿಶ್ವಾಸದಿಂದ ಕೆಲಸ ಕಾರ್ಯಗಳಲ್ಲಿ ಮುಂದುವರೆಯುವಿರಿ. ಒಮ್ಮೆ ತೆಗೆದುಕೊಂಡು ನಿರ್ಧಾರಕ್ಕೆ ಬದ್ಧರಾದಲ್ಲಿ ಹೆಚ್ಚಿನ ಅನುಕೂಲವಿದೆ. ಉದ್ಯೋಗಸ್ಥರಿಗೆ ಇದ್ದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಮಕ್ಕಳಿಗೆ ಉದ್ಯೋಗ ದೊರೆಯುವ ಸಾಧ್ಯತೆಗಳಿವೆ. ವಿದ್ಯಾರ್ಥಿಗಳು ಕಾರ್ಯ ನಿರ್ವಹಣೆಯಲ್ಲಿ ಮೊದಲಿಗರಾಗುತ್ತಾರೆ. ಕಲಿಕಾ ಹಂತದಲ್ಲಿ ಜನಪ್ರಿಯತೆ ಗಳಿಸುತ್ತಾರೆ. ಪ್ರಯತ್ನ ಪಟ್ಟಲ್ಲಿ ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳಬಹುದು. ಮಹಿಳಾ ಉದ್ಯಮಿಗಳಿಗೆ ಹಣದ ಸಹಾಯ ದೊರೆಯಲಿದೆ. ಅನಿರೀಕ್ಷಿತ ಖರ್ಚು ವೆಚ್ಚಗಳ ಬಗ್ಗೆ ಎಚ್ಚರಿಕೆ ಇರಲಿ. ಬೇರೆಯವರ ಉದ್ಯೋಗದಲ್ಲಿನ ಸಮಸ್ಯೆಯನ್ನು ದೂರ ಮಾಡುವಲ್ಲಿ ಯಶಸ್ವಿಯಾಗುವಿರಿ. ಮಕ್ಕಳ ಆರೋಗ್ಯದ ಬಗ್ಗೆ ಗಮನ ನೀಡಿ.
ಕಟಕ ರಾಶಿ
ಜೀವನದಲ್ಲಿ ಇದ್ದ ಕಷ್ಟಗಳು ದೂರವಾಗಲಿವೆ. ಕುಟುಂಬದಲ್ಲಿನ ನಿರ್ಧಾರಗಳು ಹೊಸ ನಿರೀಕ್ಷೆಗೆ ಕಾರಣವಾಗಲಿದೆ. ದೊಡ್ಡ ಜವಾಬ್ದಾರಿಯೊಂದನ್ನು ಆತ್ಮೀಯರೊಬ್ಬರಿಗೆ ವಹಿಸುವಿರಿ. ಶಾಂತಿ ನೆಮ್ಮದಿಯಿಂದ ಜೀವನ ಮಾಡುವಿರಿ. ಬಹುನಿರೀಕ್ಷಿತ ಕಾರ್ಯವೊಂದನ್ನು ಯಶಸ್ವಿಗೊಳಿಸುವಿರಿ. ಸುಖನಿದ್ರೆ ಸುಖ ಭೋಜನ ನಿಮ್ಮದಾಗುತ್ತದೆ. ನಿಮಗೆ ತಿಳಿದ ವಿಚಾರವಾದರೂ ಬೇರೊಬ್ಬರಿಗೆ ಸಲಹೆ ನೀಡುವುದಿಲ್ಲ. ಶೀತದ ತೊಂದರೆಯಿಂದ ಬಳಲುವಿರಿ. ಪ್ರಯಾಣಗಳಿಗಾಗಿ ಹೆಚ್ಚಿನ ಹಣ ಖರ್ಚು ಮಾಡುವಿರಿ. ತಾಯಿ ಆರೋಗ್ಯದ ಬಗ್ಗೆ ಗಮನ ನೀಡುವಿರಿ. ವಾಸ ಸ್ಥಳವನ್ನು ಬದಲಿಸುವ ಯೋಚನೆ ಸಫಲವಾಗುವುದಿಲ್ಲ. ಸ್ವಂತ ಬಳಕೆಗಾಗಿ ಹೊಸ ವಾಹನ ಕೊಳ್ಳುವಿರಿ. ಹಣಕಾಸಿನ ಕೊರತೆ ಕಡಿಮೆಯಾಗುತ್ತದೆ.
ಸಿಂಹ ರಾಶಿ
ಒತ್ತಡದ ನಡುವೆಯೂ ಉದ್ಯೋಗದಲ್ಲಿ ಯಶಸ್ಸು ಕಾಣುವಿರಿ. ನಿಮ್ಮಲ್ಲಿರುವ ಸಮರ್ಪಣಾ ಮನೋಭಾವನೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ. ದಿಢೀರನೆ ಆರೋಗ್ಯದಲ್ಲಿ ತೊಂದರೆ ಕಂಡು ಬರುತ್ತದೆ. ಉತ್ತಮ ಪ್ರಯತ್ನವಿಲ್ಲದೆ ನಿಮ್ಮ ಯಾವುದೇ ಕೆಲಸ ಕಾರ್ಯಗಳು ಪೂರ್ಣಗೊಳ್ಳುವುದಿಲ್ಲ. ಹಟದ ಬುದ್ಧಿಯಿಂದ ತೊಂದರೆಗೆ ಒಳಗಾಗುವಿರಿ. ದುಡುಕದೆ ಶಾಂತಿ ಸಂಯಮದಿಂದ ವರ್ತಿಸಲು ಪ್ರಯತ್ನಿಸಿ. ಮಕ್ಕಳ ಸಹಾಯದಿಂದ ಕುಟುಂಬದ ಸಮಸ್ಯೆಗಳು ದೂರವಾಗುತ್ತವೆ. ಮಕ್ಕಳಿಗೆ ವಿವಾಹ ಯೋಗವಿದೆ. ವಂಶದ ವೃತ್ತಿಯನ್ನು ಒಲ್ಲದ ಮನಸ್ಸಿನಿಂದ ಮುಂದುವರಿಸುವಿರಿ. ಆಸ್ತಿ ವಿವಾದ ಬಗೆಹರಿಯುವುದಿಲ್ಲ. ಶಾಂತಿ ಸಂಧಾನದ ಮಾತುಕತೆಗೆ ಮೊದಲ ಆದ್ಯತೆ ನೀಡುವಿರಿ.
ಕನ್ಯಾ ರಾಶಿ
ಅಳುಕಿನ ಭಾವನೆಯಿಂದ ಕೆಲಸ ಕಾರ್ಯಗಳನ್ನು ಆರಂಭಿಸುವಿರಿ. ಬೇರೊಬ್ಬರ ಸಹಾಯದಿಂದ ಮಾತ್ರ ಕೆಲಸ ಕಾರ್ಯಗಳಲ್ಲಿ ಪ್ರಗತಿ ಸಾಧಿಸುವಿರಿ. ಮಾತಿನ ಬಲದಿಂದ ಕೆಲಸ ಸಾಧಿಸುವ ಬುದ್ಧಿ ಇರುತ್ತದೆ. ಆಡುವ ಮಾತಿನ ಬದಲು ಕೆಲಸ ಮಾಡಿ ತೋರಿಸುವಿರಿ. ಉತ್ತಮ ಸ್ನೇಹಿತರಿರುತ್ತಾರೆ. ಉದ್ಯೋಗದಲ್ಲಿ ಆತ್ಮೀಯರಿಂದ ಸಹಾಯ ಸಹಕಾರ ಲಭಿಸುತ್ತದೆ. ಎರಡಕ್ಕಿಂತಲೂ ಹೆಚ್ಚಿನ ಕೆಲಸ ಕಾರ್ಯಗಳನ್ನು ಒಮ್ಮೆಲೇ ನಿರ್ವಹಿಸಬಲ್ಲಿರಿ. ಮಕ್ಕಳ ಜೊತೆಯಲ್ಲಿ ಅನಾವಶ್ಯಕವಾದ ವಾದ ವಿವಾದಗಳಿರುತ್ತವೆ. ಕೈಕಾಲುಗಳಲ್ಲಿ ನೋವು ಹೆಚ್ಚಾಗುತ್ತದೆ. ದೈಹಿಕ ವ್ಯಾಯಾಮದಿಂದ ಮಾತ್ರ ಆರೋಗ್ಯದಲ್ಲಿ ಸ್ಠಿರತೆ ಕಂಡು ಬರುತ್ತದೆ. ನಿಮ್ಮ ಕೆಲಸ ಸಾಧಿಸಲು ವಿರೋಧಿಗಳನ್ನು ಹೊಗಳುವಿರಿ.
ತುಲಾ ರಾಶಿ
ಆತ್ಮೀಯರಿಬ್ಬರ ಸಂಘರ್ಷದ ನಡುವೆ ನೀವು ಮಧ್ಯವರ್ತಿ ಆಗಬೇಕಾದ ಪ್ರಸಂಗ ಎದುರಾಗುತ್ತದೆ. ಆರೋಗ್ಯದಲ್ಲಿ ದಿಢೀರ್ ಬದಲಾವಣೆಗಳು ಕಂಡುಬರುತ್ತದೆ. ವಿರೋಧಿಗಳು ಹೆಚ್ಚುತ್ತಾರೆ. ಉದ್ಯೋಗದಲ್ಲಿ ಯಾವುದೇ ರೀತಿಯ ಬದಲಾವಣೆ ಕಂಡುಬರುವುದಿಲ್ಲ. ಆತುರದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ವಿಫಲವಾಗಬಹುದು. ಮಕ್ಕಳ ವಿಚಾರದಲ್ಲಿ ಯಾವುದೇ ತೊಂದರೆ ಇರುವುದಿಲ್ಲ. ವಿದ್ಯಾರ್ಥಿಗಳಿಗೆ ಪ್ರತಿಭಾ ಪ್ರದರ್ಶನಕ್ಕೆ ಸೂಕ್ತ ಅವಕಾಶ ದೊರೆಯುತ್ತದೆ. ಹಣಕಾಸಿನ ವ್ಯವಹಾರದಲ್ಲಿ ನಿರೀಕ್ಷಿತ ಪ್ರಗತಿ ಕಂಡುಬರುತ್ತದೆ. ಸೋಲು ಗೆಲುವನ್ನು ಒಂದೇ ರೀತಿಯ ಮನೋಭಾವನೆಯಿಂದ ಸ್ವೀಕರಿಸುವಿರಿ. ಸಾಂಪ್ರದಾಯಿಕ ಕಲೆಗಳನ್ನು ಬಲ್ಲವರಿಗೆ ಉತ್ತಮ ವರಮಾನ ಇರುತ್ತದೆ. ಸಣ್ಣಪುಟ್ಟ ಪ್ರಯಾಣಗಳು ಸಾಧ್ಯವಾಗುವುದಿಲ್ಲ. ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆ ಇರಲಿ.
ವೃಶ್ಚಿಕ ರಾಶಿ
ವಿದ್ಯಾಭ್ಯಾಸದಲ್ಲಿ ಉನ್ನತ ಮಟ್ಟ ತಲುಪುವಿರಿ. ಮಕ್ಕಳೊಂದಿಗೆ ಅನಾವಶ್ಯಕ ವಾದ ವಿವಾದಗಳಿರುತ್ತವೆ. ಮಾತಿನ ಮೇಲೆ ಹತೋಟಿ ಸಾಧಿಸುವುದು ಒಳ್ಳೆಯದು. ಪ್ರೀತಿ ವಿಶ್ವಾಸ ತೋರಿದರೆ ಜೀವನದಲ್ಲಿ ನೆಮ್ಮದಿ ಕಾಣುವಿರಿ. ಹಣಕಾಸಿನ ತೊಂದರೆ ಕಂಡು ಬರುವುದಿಲ್ಲ. ಆರೋಗ್ಯದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಚೇತರಿಕೆ ಕಾಣುವಿರಿ. ಬಂಧು ಬಳಗದವರಿಂದ ಅಂತರ ಕಾಪಾಡುವಿರಿ. ಹಟದ ಸ್ವಭಾವದಿಂದ ಮನೆಯ ನೆಮ್ಮದಿ ಕಡಿಮೆಯಾಗುತ್ತದೆ. ಅವಶ್ಯಕತೆ ಇದ್ದಲ್ಲಿ ಬೇರೆಯವರ ಸಲಹೆ ಸೂಚನೆಗಳನ್ನು ಪಾಲಿಸುವುದು ಒಳ್ಳೆಯದು. ಉದ್ಯೋಗದಲ್ಲಿ ಯಾವುದೇ ಬದಲಾವಣೆ ಕಾಣುವುದಿಲ್ಲ. ಸಂದರ್ಭಕ್ಕೆ ಅನುಸಾರವಾಗಿ ನಡೆದುಕೊಳ್ಳುವ ಚತುರತೆ ನಿಮಗಿರುತ್ತದೆ.
ಧನಸ್ಸು ರಾಶಿ
ಕುಟುಂಬದ ಸದಸ್ಯರ ಸಹಭಾಗಿತ್ವದಲ್ಲಿ ಉದ್ದಿಮೆಯೊಂದನ್ನು ಆರಂಭಿಸುವಿರಿ. ಅತಿಯಾದ ಆತ್ಮವಿಶ್ವಾಸ ತಪ್ಪು ನಿರ್ಧಾರಕ್ಕೆ ದಾರಿಯಾಗುತ್ತದೆ. ತಾಯಿಯ ಆರೋಗ್ಯದಲ್ಲಿ ಏರಿಳಿತ ಕಂಡು ಬರುತ್ತದೆ. ಕುಟುಂಬದಲ್ಲಿ ಹಣಕಾಸಿನ ವಿಚಾರದಲ್ಲಿ ಒಮ್ಮತ ಇರುವುದಿಲ್ಲ. ಹೊಸ ಕೆಲಸ ಕಾರ್ಯಗಳನ್ನು ಆರಂಭಿಸಿದರೂ ನಿಧಾನವಾಗಿ ಯಶಸ್ಸು ದೊರೆಯುತ್ತದೆ. ಅನಿರೀಕ್ಷಿತ ಧನಲಾಭವಿದೆ. ದೂರದ ಸಂಬಂಧಿಕರು ನಿಮ್ಮನ್ನು ಭೇಟಿ ಮಾಡುತ್ತಾರೆ. ನಿಮಗೆ ಅನುಕೂಲವಲ್ಲದ ಕೆಲಸಗಳನ್ನು ಮಾಡುವುದಿಲ್ಲ. ತೆಗೆದುಕೊಂಡ ತೀರ್ಮಾನಗಳನ್ನು ಬದಲಿಸುವಿರಿ. ತಲೆ ನೋವು ನಿಮ್ಮನ್ನು ಕಾಡಬಹುದು. ಕಲುಷಿತ ಆಹಾರ ಸೇವನೆಯಿಂದ ಅಜೀರ್ಣದ ತೊಂದರೆ ಉಂಟಾಗುತ್ತದೆ.
ಮಕರ ರಾಶಿ
ಬೇರೆಯವರ ಒತ್ತಡದ ನಡುವೆಯೂ ನಿಮ್ಮ ಕೆಲಸವನ್ನು ಸಾಧಿಸುವಿರಿ. ಅಸಾಧ್ಯವೆನಿಸುವ ಕೆಲಸ ಕಾರ್ಯಗಳನ್ನು ಆರಂಭಿಸುವುದೇ ಇಲ್ಲ. ಉತ್ತಮ ಆದಾಯವಿರುತ್ತದೆ. ಉದ್ಯೋಗದಲ್ಲಿ ನಿಮ್ಮ ಮಾತಿಗೆ ಎಲ್ಲರ ಒಪ್ಪಿಗೆ ಇರುತ್ತದೆ. ಉದ್ಯೋಗ ಬದಲಿಸುವ ಸಾಧ್ಯತೆಗಳಿವೆ. ಕಷ್ಟಗಳಿಗೆ ಹೆದರದೆ ನಿಮ್ಮ ಪಾಲಿನ ಕರ್ತವ್ಯ ನಿರ್ವಹಿಸುವಿರಿ. ವಿದ್ಯಾರ್ಥಿಗಳು ಸುಲಭವಾಗಿ ಬೇರೆಯವರ ಮಾತು ಕೇಳುವುದಿಲ್ಲ. ಹಿರಿಯ ಅಧಿಕಾರಿಗಳ ಪ್ರಶಂಸೆ ನಿಮಗೆ ದೊರೆಯುತ್ತದೆ. ಉನ್ನತ ವಿದ್ಯಾಭ್ಯಾಸದಲ್ಲಿ ನಿರೀಕ್ಷಿತ ಪ್ರಗತಿ ಕಾಣುವಿರಿ. ಹಣಕಾಸಿನ ತೊಂದರೆ ಇರದು. ಪ್ರಯತ್ನಕ್ಕೆ ತಕ್ಕ ಯಶಸ್ಸು ನಿಮ್ಮದಾಗುತ್ತದೆ. ಆರೋಗ್ಯದಲ್ಲಿ ಚೇತರಿಕೆ ಕಾಣುವಿರಿ. ಬೇರೆಯವರಿಂದ ಹಣ ಪಡೆಯುವಿರಿ.
ಕುಂಭ ರಾಶಿ
ವಾದ ವಿವಾದಗಳಿಂದ ದೂರ ಉಳಿಯುವಿರಿ. ಇರುವ ಮನಸ್ತಾಪಗಳನ್ನು ಶಾಂತಿ ಸಂಧಾನಗಳಿಂದ ಪರಿಹರಿಸುವಿರಿ. ಸಾರ್ವಜನಿಕ ಜೀವನದಲ್ಲಿ ಉನ್ನತ ಗೌರವ ಗಳಿಸುವಿರಿ. ಕುಟುಂಬದ ಹಿರಿಯರನ್ನು ಗೌರವಿಸುವಿರಿ. ಹಣಕಾಸಿನ ವಿಚಾರದಲ್ಲಿ ದುಡುಕುವುದಿಲ್ಲ. ದೊರೆಯುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವಿರಿ. ಮಕ್ಕಳಿಗೆ ಅವಶ್ಯಕವಾದ ಅನುಕೂಲತೆ ಕಲ್ಪಿಸುವಿರಿ. ವಿದ್ಯಾರ್ಥಿಗಳು ಆತಂಕದಲ್ಲಿಯೇ ತಮ್ಮ ಕಾರ್ಯ ಸಾಧನೆ ಮಾಡುತ್ತಾರೆ. ಉದ್ಯೋಗದಲ್ಲಿ ದುಡುಕಿನ ನಿರ್ಧಾರ ತೆಗೆದುಕೊಳ್ಳುವಿರಿ. ಎದುರಾಗುವ ತೊಂದರೆಗಳು ತಾವಾಗಿಯೇ ಮರೆಯಾಗುತ್ತವೆ. ದಂಪತಿ ನಡುವೆ ಹಣಕಾಸಿನ ವಿಚಾರದಲ್ಲಿ ಒಮ್ಮತ ಮೂಡುವುದಿಲ್ಲ. ಮನೆತನದ ಆಸ್ತಿಯಲ್ಲಿ ವಿವಾದ ಎದುರಾಗುತ್ತದೆ. ಕುಟುಂಬದ ಹಿರಿಯರ ಮಾತನ್ನು ಒಪ್ಪಲೇಬೇಕಾದ ಸಂದರ್ಭ ಎದುರಾಗುತ್ತದೆ.
ಮೀನ ರಾಶಿ
ಕೆಲಸ ಕಾರ್ಯಗಳಲ್ಲಿ ಆಸಕ್ತಿ ಇರುವುದಿಲ್ಲ. ಒತ್ತಾಯಪೂರ್ವಕವಾಗಿ ಜವಾಬ್ದಾರಿಗಳನ್ನು ಪೂರ್ಣಗೊಳಿಸುವಿರಿ. ಆತ್ಮೀಯರ ಸಹಾಯದಿಂದ ಕ್ರಮೇಣವಾಗಿ ಉತ್ತಮ ಫಲಗಳನ್ನು ಪಡೆಯುವಿರಿ. ಉದ್ಯೋಗದಲ್ಲಿ ಎದುರಾಗುವ ಸಮಸ್ಯೆಗಳು ದೂರವಾಗುತ್ತವೆ. ದೊರೆಯುವ ಅವಕಾಶಗಳನ್ನು ದೂರ ಮಾಡುವುದಿಲ್ಲ. ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸಿರುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಮಧ್ಯಮ ಗತಿಯ ಅನುಕೂಲತೆ ಕಂಡುಬರುತ್ತದೆ. ವಿದ್ಯಾರ್ಥಿಗಳಿಗೆ ಹೊಸ ರೀತಿಯ ಅವಕಾಶಗಳು ದೊರೆಯುತ್ತವೆ. ಸ್ತಿರವಾದ ಮನಸ್ಸಿರುವುದಿಲ್ಲ. ಒಮ್ಮೆ ತೆಗೆದುಕೊಂಡ ನಿರ್ಧಾರಕ್ಕೆ ಬದ್ಧರಾಗುವಲ್ಲಿ ವಿಫಲರಾಗುವಿರಿ. ಉತ್ತಮ ಆದಾಯ ಇರುತ್ತದೆ. ಆರೋಗ್ಯದಲ್ಲಿ ಯಾವುದೇ ತೊಂದರೆ ಉಂಟಾಗುವುದಿಲ್ಲ.
ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ.
ಬರಹ: ಹೆಚ್. ಸತೀಶ್, ಜ್ಯೋತಿಷಿ, ಬೆಂಗಳೂರು
ಮೊಬೈಲ್: 8546865832