Kartikotsava: ಫೆ 15 ರಿಂದ 17 ರ ತನಕ ಯಲಗೂರೇಶನ ಕಾರ್ತಿಕೋತ್ಸವ, ಯಲಗೂರು ಹನುಮ ಧಾಮದ ಐತಿಹ್ಯ, ವಿಶೇಷ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Kartikotsava: ಫೆ 15 ರಿಂದ 17 ರ ತನಕ ಯಲಗೂರೇಶನ ಕಾರ್ತಿಕೋತ್ಸವ, ಯಲಗೂರು ಹನುಮ ಧಾಮದ ಐತಿಹ್ಯ, ವಿಶೇಷ

Kartikotsava: ಫೆ 15 ರಿಂದ 17 ರ ತನಕ ಯಲಗೂರೇಶನ ಕಾರ್ತಿಕೋತ್ಸವ, ಯಲಗೂರು ಹನುಮ ಧಾಮದ ಐತಿಹ್ಯ, ವಿಶೇಷ

ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ಯಲಗೂರು ಹನುಮ ಧಾಮದಲ್ಲಿ ಫೆ 15 ರಿಂದ 17ರ ತನಕ ಯಲಗೂರೇಶನ ಕಾರ್ತಿಕೋತ್ಸವ ನಡೆಯಲಿದೆ. ಕಾರ್ಯಕ್ರಮ ವಿವರ ಮತ್ತು ದೇವಸ್ಥಾನದ ಐತಿಹ್ಯ ವಿಶೇಷ ವಿವರ ಇಲ್ಲಿದೆ.

ಫೆ 15 ರಿಂದ 17 ರ ತನಕ ಯಲಗೂರೇಶನ ಕಾರ್ತಿಕೋತ್ಸವ, ಯಲಗೂರು ಹನುಮ ಧಾಮದ ಐತಿಹ್ಯ, ವಿಶೇಷ ವಿವರ ಇಲ್ಲಿದೆ.
ಫೆ 15 ರಿಂದ 17 ರ ತನಕ ಯಲಗೂರೇಶನ ಕಾರ್ತಿಕೋತ್ಸವ, ಯಲಗೂರು ಹನುಮ ಧಾಮದ ಐತಿಹ್ಯ, ವಿಶೇಷ ವಿವರ ಇಲ್ಲಿದೆ.

ಹುಬ್ಬಳ್ಳಿ: ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಸುಕ್ಷೇತ್ರ ಏಳೂರ ಒಡೆಯ ಯಲಗೂರೇಶನ ಕಾರ್ತಿಕೋತ್ಸವ ಫೆ 15 ರಿಂದ 17ರ ತನಕ ನಡೆಯಲಿದೆ. ತನ್ನಿಮಿತ್ತವಾಗಿ ನಾನಾ ಸಾಮಾಜಿಕ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮ ಫೆ. 15 ರಿಂದ ಮೂರು ದಿನ ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ಫೆ 15 ರಿಂದ 17 ರ ತನಕ ಯಲಗೂರೇಶನ ಕಾರ್ತಿಕೋತ್ಸವ

ಸುಕ್ಷೇತ್ರ ಏಳೂರ ಒಡೆಯ ಯಲಗೂರೇಶನ ಕಾರ್ತಿಕೋತ್ಸವ ನಿಮಿತ್ತ ಫೆಬ್ರವರಿ 15 ರಂದು ಅಭಿಷೇಕ, ಮಹಾನೈವೇದ್ಯ, ದಿಂಡಿನ ಸ್ಪರ್ಧೆ, ಅನ್ನಸಂತರ್ಪಣೆ, ಅಂದು ರಾತ್ರಿ ಹರಿದಾಸರ ಕೀರ್ತನೆ ಹಾಗೂ ದಾಸವಾಣಿ ಸಂಗೀತ ಕಾರ್ಯಕ್ರಮ ನಡೆಯಲಿವೆ.

ಫೆಬ್ರವರಿ 16 ರಂದು ಹರಶಾವಿಗೆ ನಡೆಯಲಿದೆ.ಅದೇ ದಿನ ಸಂಜೆ ೫ ಕ್ಕೆ ರಥೋತ್ಸವ ಜರುಗಲಿದೆ. ರಾತ್ರಿ ೮ಕ್ಕೆ ಹೊಂಡದ ಪೂಜೆ, ರಾತ್ರಿ 10.30 ಕ್ಕೆ ಮುಧೋಳ ತಾಲೂಕಿನ ರನ್ನ ಬೆಳಗಲಿಯ ಬಸವೇಶ್ವರ ನಾಟ್ಯ ಸಂಘದಿಂದ ’ಅಕ್ಕ ಅಪರಂಜಿ ತಂಗಿ ಗುಲಗಂಜಿ’ ನಾಟಕ ಪ್ರದರ್ಶನಗೊಳ್ಳಲಿದೆ.

ಫೆಬ್ರವರಿ 17 ರಂದು ಸಂಜೆ 4 ಕ್ಕೆ ಸುಪ್ರಸಿದ್ದ ಜಂಗೀ ಕುಸ್ತಿಗಳು ಅದೇ ದಿನ ರಾತ್ರಿ 10.30 ಕ್ಕೆ ಶ್ರೀಶಿವಲಿಂಗೇಶ್ವರ ನಾಟ್ಯ ಕಲಾ ಸಂಘ, ಕುಲಕಳ್ಳಿ ಇವರು ಅರ್ಪಿಸುವ ಸುಂದರ ಸಾಮಾಜಿಕ ನಾಟಕ ತವರಿಗೆ ಬಂದ ತಂಗಿ ಅರ್ಥಾತ್ : ಮನೆ ಮುರುಕ ಅಳಿಯ ನಾಟಕ ಜರುಗಲಿವೆ. ವಿಶೇಷವಾಗಿ ನಾಡಿನ ಶ್ರೇಷ್ಠ ಕಲಾವಿದರಿಂದ ಸಂಗೀತ ಕಾರ್ಯಕ್ರಮ ಕಳೆಗಟ್ಟಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

ಯಲಗೂರು ಹನುಮ ಧಾಮದ ಐತಿಹ್ಯ, ವಿಶೇಷ

ಕೃಷ್ಣಾ ನದಿ ತೀರದ ಆಂಜನೇಯ ತೀರ್ಥದ ಸಮೀಪ ಇರುವ ಯಲಗೂರು ಹನುಮ ಧಾಮವೇ ಶ್ರೀ ಯಲಗೂರೇಶನ ಪುಣ್ಯ ಕ್ಷೇತ್ರ. ಯಲಗೂರು ಹನುಮ ಧಾಮದ ಐತಿಹ್ಯ, ವಿಶೇಷಗಳನ್ನು ತಿಳಿಯೋಣ.

ಯಲಗೂರು ಹೆಸರು ಹೇಗೆ ಬಂತು: ಯಲಗೂರು ಎಂಬುದು ಏಳು ಊರುಗಳ ಗುಂಪು. ಏಳೂರು ಎಂಬ ಹೆಸರು ಕಾಲಾನುಕ್ರಮದಲ್ಲಿ ಯಲಗೂರು ಆಯಿತು ಎನ್ನುತ್ತಾರೆ ಸ್ಥಳೀಯ ಇತಿಹಾಸ ಬಲ್ಲವರು.

ಏಳು ಊರುಗಳು ಯಾವುವು- ಕೃಷ್ಣಾ ನದಿ ತೀರದ ನಾಗಸಂಪಿಗೆ, ಚಂದ್ರಗಿರಿ, ಅಳಲದಿನ್ನಿ, ಯಲಗೂರು, ಕಾಶಿನಕುಂಟೆ, ಬೂದಿಹಾಳ, ಮಸೂದಿ.

ಆರಾಧ್ಯ ದೈವ ಯಲಗೂರಪ್ಪ: ಸಾಮಾನ್ಯವಾಗಿ ಊರಿಗೊಬ್ಬ ಹನುಮಪ್ಪನಿರುವುದು ವಾಡಿಕೆ. ಆದರೆ, ಈ ಏಳು ಊರುಗಳ ಏಕೈಕ ಆರಾಧ್ಯ ದೇವರು ಏಳೂರೇಶ ಅಥವಾ ಯಲಗೂರೇಶ, ಯಲಗೂರೇಶ್ವರ. ಈ ಏಳು ಗ್ರಾಮಗಳ ಪೈಕಿ ಯಲಗೂರಿನಲ್ಲಿ ಮಾತ್ರ ಹನುಮಪ್ಪನ ದೇಗುಲವಿರುವುದು.

ಯಲಗೂರು ಐತಿಹ್ಯ: ಯಲಗೂರು ಹೊರತು ಪಡಿಸಿ ಉಳಿದ ಆರು ಊರುಗಳಲ್ಲಿ ಹನುಮ ದೇಗುಲ ಇಲ್ಲ. ರಾಮಾಯಣ ಕಾಲಘಟ್ಟದಲ್ಲಿ ಸೀತಾಪಹರಣದ ಸಮಯದಲ್ಲಿ ಕೆಲವು ದಿನಗಳ ಕಾಲ ಈ ಭಾಗದಲ್ಲಿ ಶ್ರೀರಾಮ- ಲಕ್ಷ್ಮಣರು ಇಲ್ಲಿ ತಂಗಿದ್ದರು ಎನ್ನುತ್ತದೆ ಸ್ಥಳ ಪುರಾಣ.

ದೇವಸ್ಥಾನದ ವಿಶೇಷ: ಗರ್ಭಗುಡಿಯಲ್ಲಿ 7 ಅಡಿ ಎತ್ತರದ ಯಲಗೂರೇಶ ಹನುಮನ ವಿಗ್ರಹವಿದೆ. ಹನುಮನ ಎಡಗೈನಲ್ಲಿ ಸೌಗಂಧಿಕಾ ಪುಷ್ಪ, ಎಡಪಾದದಲ್ಲಿ ರಾಕ್ಷಸ ನಿಗ್ರಹದ ಚಿತ್ರಣವಿದೆ. ಗರ್ಭಗುಡಿ ಮಂಭಾಗದ ಚಾಲುಕ್ಯ ಶೈಲಿಯ ಕೆತ್ತನೆಗಳಿರುವ ಕಂಬಗಳನ್ನು ಒಳಗೊಂಡ ರಂಗಮಂಟಪ. ಒಂದು ಕಂಬದಲ್ಲಿ ಮಾರುತಿಯ ಚಿಕ್ಕದಾದ ಮನೋಹರ ಮೂರ್ತಿ ಇದೆ. ರಂಗ ಮಂಟಪದಲ್ಲಿ ಈಶ್ವರಲಿಂಗ ಹಾಗೂ ಭವ್ಯವಾದ ಗಣಪತಿ ವಿಗ್ರಹಗಳಿವೆ. ದೇವಾಲಯದ ಆವರಣದಲ್ಲಿ ಸೂರ್ಯನಾರಾಯಣ ದೇವರ ಚಿಕ್ಕ ಗುಡಿಯೂ ಇದೆ. ಹಿಂಭಾಗದಲ್ಲಿ ತುಳಸಿ ವೃಂದಾವನ ಇದೆ.

ಯಲಗೂರು ದೇವಾಲಯ ಎಲ್ಲಿದೆ: ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನಲ್ಲಿರುವ ಯಲಗೂರು, ಆಲಮಟ್ಟಿ ಅಣೆಕಟ್ಟೆಯಿಂದ 5 ಕಿ.ಮೀ. ದೂರದಲ್ಲಿದೆ. ಇಲ್ಲಿಗೆ ಸ್ಥಳೀಯ ವಾಹನ ಸೌಲಭ್ಯಗಳೂ ಇವೆ.

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.