ಜಗತ್ತಿನ ಅಂತ್ಯ ಯಾವಾಗ, 2060ರಲ್ಲಿ ವಿಶ್ವ ರೀಸೆಟ್ ಆಗುತ್ತಾ, 321 ವರ್ಷ ಹಿಂದೆ ಸರ್ ಐಸಾಕ್ ನ್ಯೂಟನ್ ಬರೆದ ಪತ್ರದ ವಿವರ ಈಗ ವೈರಲ್
ಜಗತ್ತಿನ ಅಂತ್ಯ ಯಾವಾಗ ಎಂಬುದು ಮನುಷ್ಯರ ಮಟ್ಟಿಗೆ ಮಿಲಿಯನ್ ಡಾಲರ್ ಪ್ರಶ್ನೆ. ಈ ವಿಚಾರ ಈಗ ಯಾಕೆ ಅಂತೀರಾ, 321 ವರ್ಷ ಹಿಂದೆ ಸರ್ ಐಸಾಕ್ ನ್ಯೂಟನ್ ಬರೆದ ಪತ್ರದ ಅಂಶ ವೈರಲ್ ಆಗಿದೆ. ಇದರಂತೆ 2060ರಲ್ಲಿ ವಿಶ್ವ ರೀಸೆಟ್ ಆಗುತ್ತಾ - ಇಲ್ಲಿದೆ ಆ ವಿವರ.

ನಿತ್ಯ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಜಗತ್ತಿಗೆ ಅಂತ್ಯವೇ ಇಲ್ಲವಾ? ಖಚಿತವಾಗಿಯೂ ಇದೆ ಎಂದು ಬಲ್ಲವರು ಹೇಳುತ್ತಾರಾದರೂ ಯಾವುದೂ ನಿಖರವಲ್ಲ. ಆದಾಗ್ಯೂ, ಜಗತ್ತಿನ ಅಂತ್ಯ ಯಾವಾಗ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಇಂದು ನಿನ್ನೆಯದಲ್ಲ. ಶತಮಾನಗಳ ಹಿಂದಿನದ್ದು ಎಂಬುದನ್ನು ಖಾತರಿಪಡಿಸುವಂತಹ ವಿಚಾರ ಈಗ ಗಮನಸೆಳೆದಿದೆ. ಹೌದು, ಗಣಿತಜ್ಞ, ವಿಜ್ಞಾನಿ ಸರ್ ಐಸಾಕ್ ನ್ಯೂಟನ್ 321 ವರ್ಷ ಹಿಂದೆ ಬರೆದ ಪತ್ರದ ಅಂಶ ಈಗ ವೈರಲ್ ಆಗಿದೆ.
2060ರಲ್ಲಿ ವಿಶ್ವ ರೀಸೆಟ್ ಆಗುತ್ತಾ, 321 ವರ್ಷ ಹಿಂದಿನ ಪತ್ರ ವೈರಲ್
ಗುರುತ್ವಾಕರ್ಷಣೆ ನಿಯಮ ಪ್ರತಿಪಾದಿಸಿದ ಐಸಾಕ್ ನ್ಯೂಟನ್ 1704ರಲ್ಲಿ ಬರೆದಿದ್ದ ಪತ್ರದ ಅಂಶವನ್ನು ನ್ಯೂಯಾರ್ಕ್ ಪೋಸ್ಟ್ ಮತ್ತೆ ನೆನಪಿಸಿದೆ. ಕುತೂಹಲಕಾರಿ ಅಂಶ ಎಂದರೆ, ಈ ಪತ್ರದಲ್ಲಿ ನ್ಯೂಟನ್ ಅವರು ಜಗತ್ತು “ಅಂತ್ಯ”ವಾಗುತ್ತದೆ ಎಂದು ಬರೆದಿಲ್ಲ. ಬದಲಾಗಿ, ವಿಶ್ವ ಮರು ಹೊಂದಿಕೆ ಮಾಡಿಕೊಳ್ಳುತ್ತದೆ (ರೀಸೆಟ್ ಆಗುತ್ತದೆ) ಎಂದು ಬರೆದುಕೊಂಡಿದ್ದಾರೆ. 1000 ವರ್ಷಗಳ ಜಾಗತಿಕ ಶಾಂತಿಯ ಸಾಮ್ರಾಜ್ಯವನ್ನು ಪುನಸ್ಥಾಪಿಸಲು ಕ್ರಿಸ್ತ ಮತ್ತು ಸಂತರು ಮತ್ತೆ ಭೂಮಿಗೆ ಬರುತ್ತಾರೆ ಎಂದು ಅವರು ಹೇಳಿದ್ದಾಗಿ ವರದಿ ವಿವರಿಸಿದೆ.
ಐಸಾಕ್ ನ್ಯೂಟನ್ ಈ ರೀಸೆಟ್ ಲೆಕ್ಕಾಚಾರಕ್ಕಾಗಿ ಬುಕ್ ಆಫ್ ಡೇನಿಯಲ್‌ನ ಮಾಹಿತಿಯನ್ನು ಗಣನೆಗೆ ತೆಗೆದುಕೊಂಡಿದ್ದಾರೆ. ಐಸಾಕ್ ನ್ಯೂಟನ್ ಧರ್ಮನಿಷ್ಠ ಕ್ರಿಶ್ಚಿಯನ್ ಆಗಿದ್ದು, ಅವರ ಲೆಕ್ಕಾಚಾರಕ್ಕೆ ಬುಕ್ ಆಫ್ ಡೇನಿಯಲ್ (ಡೇನಿಯಲ್ ಪುಸ್ತಕ)ನಲ್ಲಿದ್ದ ದಿನಾಂಕಗಳನ್ನು ಬಳಸಿಕೊಂಡಿದ್ದಾರೆ. ಹಳೆಯ ಒಡಂಬಡಿಕೆಯ ಪ್ರವಾದಿಗಳ ವಿಭಾಗದಲ್ಲಿ ಇಂಗ್ಲಿಷ್ ಬೈಬಲ್‌ಗಳಲ್ಲಿ ಡೇನಿಯಲ್ ಪುಸ್ತಕದ ಉಲ್ಲೇಖ ಕಂಡುಬರುತ್ತದೆ. ಡೇನಿಯಲ್ ಪುಸ್ತಕವನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದ್ದು, 1–6 ಅಧ್ಯಾಯಗಳಲ್ಲಿ ಆರು ನ್ಯಾಯಾಲಯದ ಕಥೆಗಳು, ಮತ್ತು 7–12 ಅಧ್ಯಾಯಗಳಲ್ಲಿ ನಾಲ್ಕು ಅಪೋಕ್ಯಾಲಿಪ್ಸ್ ದರ್ಶನಗಳ ವಿವರ ಇದೆ. ಸುಧಾರಣೆ ಮತ್ತು ನಂತರದ ಸಹಸ್ರವರ್ಷದ ಚಳವಳಿ ಸೇರಿ ಧಾರ್ಮಿಕ ಚಳವಳಿಗಳ ಮೇಲೆ ಡೇನಿಯಲ್ ಪುಸ್ತಕ ಪ್ರಭಾವ ಬೀರಿದೆ.
ಐಸಾಕ್ ನ್ಯೂಟನ್ ವಿಶ್ವ ರೀಸೆಟ್ ಲೆಕ್ಕಾಚಾರ ಮತ್ತು ಡೇನಿಯಲ್ ಪುಸ್ತಕ
ಹ್ಯಾಲಿಫ್ಯಾಕ್ಸ್‌ನ ಕಿಂಗ್ಸ್ ಕಾಲೇಜಿನ ಪ್ರಾಧ್ಯಾಪಕ ಸ್ಟೀಫನ್ ಡಿ. ಸ್ನೋಬೆಲೆನ್ ಅವರ ಪ್ರಕಾರ, ಡೂಮ್ಸ್ ಡೇ ಅನ್ನು ಲೆಕ್ಕಹಾಕಲು ನ್ಯೂಟನ್ ಎಂಬ ಧರ್ಮನಿಷ್ಠ ಕ್ರಿಶ್ಚಿಯನ್ ಡೇನಿಯಲ್ ಪುಸ್ತಕದಲ್ಲಿ ಉಲ್ಲೇಖಿಸಲಾದ ದಿನಾಂಕಗಳನ್ನು ಬಳಸಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ವಿವರಿಸಿದೆ.
“..ಆದ್ದರಿಂದ ಸಮಯ ಮತ್ತು ಅರ್ಧ ಸಮಯ ಅಂದರೆ 42 ತಿಂಗಳು ಅಥವಾ 1260 ದಿನ ಅಥವಾ ಮೂರೂವರೆ ವರ್ಷ ಅಥವಾ ಪ್ರಾಚೀನ ಒಂದೂವರೆ ವರ್ಷ… ಹೀಗೆ ಅಲ್ಪಾವಧಿಯ ಸಾಮ್ರಾಜ್ಯಗಳು ಮೂರು ರಾಜರ ಆಡಳಿತವನ್ನು ಕೊನೆಗೊಳಿಸುತ್ತದೆ. ಇದರಂತೆ ಯೋಜಿಸಿದರೆ ಕ್ರಿಶ 800, ಅದಾಗಿ ಕ್ರಿಶ 2060ರಲ್ಲಿ ಆ ಅವಧಿ ಕೊನೆಗೊಳ್ಳುತ್ತದೆ. ಜಗತ್ತು ರೀಸೆಟ್ ಆಗುವ ಅವಧಿ ಸ್ವಲ್ಪ ತಡವಾಗಬಹುದು. ಆದರೆ ಬೇಗ ಕೊನೆಯಾಗುತ್ತದೆ ಎಂದು ಹೇಳುವುದಕ್ಕೆ ಯಾವ ಕಾರಣವೂ ಕಾಣಿಸುತ್ತಿಲ್ಲ ಎಂದು ನ್ಯೂಟನ್ ಬರೆದಿದ್ದಾರೆ" ಎಂದು ವಿವರಿಸಿರುವುದಾಗಿ ಡೇಲಿ ಮೇಲ್ ವರದಿ ಹೇಳಿದೆ. ಸ್ಟೀಫನ್ ಡಿ. ಸ್ನೋಬೆಲೆನ್ ಅವರ ಪ್ರಕಾರ, ಐಸಾಕ್ ನ್ಯೂಟನ್ ವಿಜ್ಞಾನಿಯಲ್ಲ ಆದರೆ, ಸಹಜ ತತ್ತ್ವಜ್ಞಾನಿ.
2060ರಲ್ಲಿ ವಿಶ್ವ ರೀಸೆಟ್; ಐಸಾಕ್ ನ್ಯೂಟನ್ ವೆಬ್‌ಸೈಟ್‌ನಲ್ಲೇನಿದೆ
“ಸ್ಟೇಟ್‌ಮೆಂಟ್ ಆನ್ ದ ಡೇಟ್ 2060”ಕ್ಕೆ ಸಂಬಂಧಿಸಿ ಐಸಾಕ್ ನ್ಯೂಟನ್ ವೆಬ್‌ಸೈಟ್ (isaac-newton.org)ನಲ್ಲಿ ಹೇಳಿಕೆ ಇದೆ. ಅದರಲ್ಲಿ ಸ್ಟೀಫನ್ ಡಿ. ಸ್ನೋಬೆಲೆನ್, “ನ್ಯೂಟನ್‌ಗೆ, ಧರ್ಮ ಮತ್ತು ನಾವು ಈಗ ವಿಜ್ಞಾನ ಎಂದು ಕರೆಯುವ ನಡುವೆ ಯಾವುದೇ ಅಗ್ರಾಹ್ಯ ತಡೆಗೋಡೆ ಇರಲಿಲ್ಲ. ಬೈಬಲ್‌ನ ಭವಿಷ್ಯವಾಣಿಯ ವ್ಯಾಖ್ಯಾನವು ‘ಅಸಡ್ಡೆ ಇರಲಿ, ಆದರೆ ಶ್ರೇಷ್ಠ ಕ್ಷಣದ ಕರ್ತವ್ಯ ಎಂದು ನಂಬಲಾಗಿದೆ. ದೇವರ ಆವಿಷ್ಕಾರವನ್ನು ಮತ್ತು ಅವನ ಗುಣಲಕ್ಷಣಗಳನ್ನು ಅದರ ಮುಖ್ಯ ಅಂತ್ಯವೆಂದು ಕಂಡ ನೈಸರ್ಗಿಕ ತತ್ತ್ವಶಾಸ್ತ್ರದ ಕಲ್ಪನೆಗೆ ನ್ಯೂಟನ್ ಬದ್ಧನಾಗಿರುತ್ತಾನೆ. ನ್ಯೂಟನ್ ಅವರ "ದೇವತಾಶಾಸ್ತ್ರದ ದೃಷ್ಟಿಕೋನಗಳ" ಬಗ್ಗೆ ತಿಳಿವಳಿಕೆಯ ಮಹತ್ವವನ್ನು ತನ್ನ "ನೈಸರ್ಗಿಕ ತತ್ವಶಾಸ್ತ್ರದ ಅಧ್ಯಯನದಲ್ಲಿ ಒತ್ತಿಹೇಳಿದ್ದಾರೆ ಎಂದು ವಿವರಿಸಿದ್ದಾರೆ.
