ರಾಮಾಯಣ: ತಾಟಕಿ ಮತ್ತು ಮಾರೀಚನ ಹಿನ್ನೆಲೆ ವಿವರಿಸಿದ ವಿಶ್ವಾಮಿತ್ರರು, ತಾಟಕವನ ದಾಟಿ ಹೋಗಲು ಸಂಹಾರವೇ ಆಗಬೇಕು-vishwamitra explained the background of tataki and maricha to rama and lakshmana ramayana smk ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ರಾಮಾಯಣ: ತಾಟಕಿ ಮತ್ತು ಮಾರೀಚನ ಹಿನ್ನೆಲೆ ವಿವರಿಸಿದ ವಿಶ್ವಾಮಿತ್ರರು, ತಾಟಕವನ ದಾಟಿ ಹೋಗಲು ಸಂಹಾರವೇ ಆಗಬೇಕು

ರಾಮಾಯಣ: ತಾಟಕಿ ಮತ್ತು ಮಾರೀಚನ ಹಿನ್ನೆಲೆ ವಿವರಿಸಿದ ವಿಶ್ವಾಮಿತ್ರರು, ತಾಟಕವನ ದಾಟಿ ಹೋಗಲು ಸಂಹಾರವೇ ಆಗಬೇಕು

ತಾಟಕಿ ಮತ್ತು ಮಾರೀಚರ ಹಿನ್ನೆಲೆ: ಅಗಸ್ತ್ಯ ಮಹಾಮನಿಗಳ ಶಾಪದಿಂದ ತಾಟಕಿಯ ಪತಿಯಾದ ಸುಂದನು ಮರಣ ಹೊಂದುತ್ತಾನೆ. ಇದನ್ನು ತಿಳಿದು ಅಗಸ್ತ್ಯಮುನಿಗಳನ್ನೇ ತಿಂದುಹಾಕಲು ತಾಟಕಿಯು ಬರುತ್ತಾಳೆ. ಮಾರೀಚ ತಾಟಕಿಯ ಮಗನಾಗಿರುತ್ತಾನೆ. (ಬರಹ: ಎಚ್. ಸತೀಶ್, ಜ್ಯೋತಿಷಿ)

ವಿಶ್ವಾಮಿತ್ರರನ್ನು ಹಿಂಬಾಲಿಸುತ್ತಿರುವ ರಾಮ, ಲಕ್ಷ್ಮಣರು
ವಿಶ್ವಾಮಿತ್ರರನ್ನು ಹಿಂಬಾಲಿಸುತ್ತಿರುವ ರಾಮ, ಲಕ್ಷ್ಮಣರು (pinterest)

ವಿಶ್ವಾಮಿತ್ರರ ಮಾತನ್ನು ಕೇಳಿದ ಶ್ರೀರಾಮನು ಸಾಮಾನ್ಯವಾಗಿ ಯಕ್ಷರು ದುರ್ಬಲರಾಗಿರುತ್ತಾರೆ. ಇದರ ಬಗ್ಗೆ ನಾನು ಪುರಾಣ ಪುಣ್ಯ ಕಥೆಗಳಿಂದ ತಿಳಿದ್ದೇನೆ. ಆದರೆ ತಾಟಕಿಗೆ ಸಾವಿರ ಆನೆಗಳ ಬಲವಿದೆ ಎಂದು ತಿಳಿಸಿದ್ದೀರಿ.ಇದು ಹೇಗೆ? ಎಂದು ಪ್ರಶ್ನಿಸುತ್ತಾನೆ. ಆಗ ವಿಶ್ವಾಮಿತ್ರರು ತಾಟಕಿಯ ಹಿಂದಿನ ಕಥೆಯನ್ನು ಹೇಳಲು ಆರಂಭಿಸುತ್ತಾರೆ. ಹಿಂದೆ ಸುಕೇತು ಎಂಬ ಹೆಸರಿನ ಒಳ್ಳೆಯ ನಡತೆಯುಳ್ಳ, ಒಳ್ಳೆಯ ಚರಿತ್ರೆಯುಳ್ಳ ಯಕ್ಷನೊಬ್ಬನು ಇದ್ದನು. ಇವನಿಗೆ ಸಂತಾನವಿರಲಿಲ್ಲ. ಆಗ ಸುಕೇತು ಸಾಕ್ಷಾತ್ ಬ್ರಹ್ಮದೇವನನ್ನು ಕುರಿತು ಘೋರ ತಪಸ್ಸನ್ನು ಮಾಡುತ್ತಾನೆ. ಅವನ ತಪಸ್ಸಿಗೆ ಮೆಚ್ಚಿದ ಬ್ರಹ್ಮದೇವನು ಪ್ರತ್ಯಕ್ಷನಾಗಿ ತಾಟಕ ಎಂಬ ಹೆಣ್ಣು ಮಗುವನ್ನು ದಯಪಾಲಿಸುತ್ತಾನೆ. ಅಲ್ಲದೆ ಅವಳಿಗೆ ಸಾವಿರ ಆನೆಗಳ ಬಲವನ್ನು ನೀಡುತ್ತಾನೆ.

ತಾಟಕಿಯ ಮಗ ಮಾರೀಚ

ನೋಡಲು ಸೌಂಧರ್ಯವತಿಯಾದ ತಾಟಕಿ ಪ್ರವರ್ಧಮಾನಕ್ಕೆ ಬರುತ್ತಾಳೆ. ಇವಳ ವಿವಾಹವು ಮತ್ತೊಬ್ಬ ರಾಕ್ಷಸನಾದ ಸುಂದನ ಜೊತೆ ನಡೆಯುತ್ತದೆ. ಇವರಿಬ್ಬರಿಗೆ ಜನಿಸುವ ಮಗನೇ ಶೌರ್ಯದಲ್ಲಿ ಮತ್ತು ಸಾಹಸದಲ್ಲಿ ಇಂದ್ರನಿಗೆ ಸರಿ ಸಮಾನವಾದ ಮಾರೀಚ. ನೋಡಲು ಭಯಂಕರವಾಗಿದ್ದ ಮಾರೀಚನು ಪ್ರತಿದಿನವೂ ಈ ದೇಶದ ಪ್ರಜೆಗಳನ್ನು ನಾನಾ ವಿಧವಾಗಿ ಹಿಂಸಿಸುತ್ತಿದ್ದನು. ಇದೇ ರೀತಿ ತಾಟಕಿಯು ಸಹ ಪ್ರಜೆಗಳ ಜೀವ ಮತ್ತು ಜೀವನದ ಜೊತೆ ಆಟವಾಡುತ್ತಿದ್ದಳು.

ತಾಟಕ ವನ ದಾಟಬೇಕು

ಈಗ ನಾವು ನಮ್ಮ ಆಶ್ರಮಕ್ಕೆ ತೆರಳಲು ತಾಟಕಿಯು ನಿರ್ಮಿಸಿರುವ ತಾಟಕವನದ ಮೂಲಕವೇ ಹೋಗಬೇಕಾಗುತ್ತದೆ. ಈ ಕಾರಣದಿಂದ ನಿನ್ನಿಂದ ಅವಳ ಸಂಹಾರ ಆಗಲೇಬೇಕು. ನಿನ್ನಲ್ಲಿ ಅಂತಹ ಶಕ್ತಿ ಇದೆ. ಇದರಿಂದ ಈ ದೇಶಗಳನ್ನು ಕೆಟ್ಟವರಿಂದ ಸಂರಕ್ಷಿಸಿದ ಭಾಗ್ಯವು, ಪುಣ್ಯವೂ ನಿನ್ನದಾಗುತ್ತದೆ. ಹೀಗೆಂದು ರಾಮನಲ್ಲಿ ವಿಶ್ವಾಮಿತ್ರರು ಧೈರ್ಯ ಮತ್ತು ಆತ್ಮವಿಶ್ವಾಸವನ್ನು ತುಂಬುತ್ತಾರೆ. ಅಗಸ್ತ್ಯ ಮಹಾಮನಿಗಳ ಶಾಪದಿಂದ ತಾಟಕಿಯ ಪತಿಯಾದ ಸುಂದನು ಮರಣ ಹೊಂದುತ್ತಾನೆ. ಇದನ್ನು ತಿಳಿದು ಅಗಸ್ತ್ಯಮುನಿಗಳನ್ನೇ ತಿಂದುಹಾಕಲು ತಾಟಕಿಯು ಬರುತ್ತಾಳೆ.

ಇದರಿಂದ ಕ್ರೋಧಗೊಂಡ ಅಗಸ್ತ್ಯರು ಮಾರಿಚನಿಗೆ ರಾಕ್ಷಸನಾಗುವಂತೆ ಶಾಪವನ್ನು ನೀಡುತ್ತಾರೆ. ಅಪ್ರತಿಮ ಸುಂದರಿಯಾದ ತಾಟಕಿಗೆ ಅಗಸ್ತ್ಯರು ಕುರೂಪಿಯಾಗುವಂತೆ ಶಪಿಸುತ್ತಾರೆ. ಇದರಿಂದಾಗಿ ಅಗಸ್ತ್ಯರ ಆಶ್ರಮದ ಬಳಿಯೇ ತಾಟಕಿಯು ನೆಲೆಸಿದ್ದಾಳೆ. ಅವಳಿಗೆ ಬ್ರಹ್ಮನ ವರವಿದೆ. ಇದರಿಂದಾಗಿ ನಿನ್ನನ್ನು ಹೊರತು ಬೇರೆ ಯಾರಿಗೂ ಅವಳನ್ನು ಸಂಹರಿಸಲು ಸಾಧ್ಯವಿಲ್ಲ. ಅವಳು ಅಬಲೆ ಎಂದು ಹಿಂಜರಿಯಬೇಡ. ರಾಜಕುಮಾರನಾದ ನಿನಗೆ ಪ್ರಜೆಗಳನ್ನು ಕಾಪಾಡುವುದು ಮೊದಲ ಜವಾಬ್ದಾರಿಯಾಗಿದೆ. ಪ್ರಜಾರಕ್ಷಣೆಗಾಗಿ ಮತ್ತು ಧರ್ಮದ ಉಳುವಿಗಾಗಿ ರಾಕ್ಷಸರ ಸಂಹಾರ ಮಾಡುವುದು ನಿನ್ನ ಕರ್ತವ್ಯವಾಗಿದೆ ಎಂದು ರಾಮನಿಗೆ ವಿಶ್ವಾ ಮಿತ್ರರು ತಿಳಿಸುತ್ತಾರೆ.

ತಾಟಕಿಯನ್ನು ಸಂಹರಿಸಿದರೆ ಪಾಪವಿಲ್ಲ

ಅಧರ್ಮದ ಕೆಲಸ ಕಾರ್ಯಗಳಲ್ಲಿ ನಿರತರಾಗಿರುವ ತಾಟಕಿಯನ್ನು ಸಂಹರಿಸಿದರೆ ಯಾವುದೇ ಪಾಪ ಬರುವುದಿಲ್ಲ. ಹಿಂದೆಯೂ ಸಹ ಅನೇಕ ವೀರರು ರಾಕ್ಷಸಿ ಸ್ತ್ರೀಯರನ್ನು ಸಂಹಾರ ಮಾಡಿದ ದೃಷ್ಟಾಂತ ನಮಗೆ ಸಿಗುತ್ತದೆ. ಒಮ್ಮೆ ಬೃಗು ಋಷಿಗಳ ಪತ್ನಿಯು ಇಂದ್ರನನ್ನು ಸಂಹರಿಸಿ ಇಂದ್ರ ಲೋಕವನ್ನೇ ತನ್ನದಾಗಿಸಿಕೊಳ್ಳಬೇಕೆಂದು ಆಸೆ ಪಟ್ಟಳು. ಇಂತಹ ಸಂದರ್ಭದಲ್ಲಿ ಬೇರೆ ದಾರಿಗೆ ಇಲ್ಲದೆ ಸ್ವತಹ ಭಗವಾನ್ ವಿಷ್ಣು ಆಕೆಯ ಸಂಹಾರ ಮಾಡುತ್ತಾನೆ. ಆದ್ದರಿಂದ ಯಾವುದೇ ಕಾರಣಕ್ಕೂ ತಾಟಕಿಯ ಬಗ್ಗೆ ಕರುಣೆ ಅಥವಾ ಕ್ಷಮೆಯನ್ನು ತೋರಬೇಡ. ಅವಳ ಸಂಹಾರವೇ ನಿನ್ನ ಮುಖ್ಯ ಗುರಿಯಾಗಲಿ. ನಾನು ಮಾಡುತ್ತಿರುವ ಯಾಗವನ್ನು ಸಂರಕ್ಷಿಸಲು ನೀನು ನನ್ನೊಂದಿಗೆ ಬಂದಿರುವೆ ಎಂಬುದನ್ನು ಮರೆತರೆ, ನೀನು ಸಹ ಕೊಟ್ಟ ಮಾತನ್ನುತಪ್ಪಿದಂತೆ ಆಗುತ್ತದೆ. ಆಗ ರಾಮನು ವಿಶ್ವಾಮಿತ್ರರಿಗೆ ಕೈಮುಗಿದು ನಿಮ್ಮೊಂದಿಗೆ ಬರುವಾಗ ನನ್ನ ತಂದೆಗೆ ನಿಮ್ಮ ಎಲ್ಲಾ ಆಜ್ಞೆಯನ್ನು ಪರಿಪಾಲಿಸುತ್ತೇನೆ ಎಂದು ಮಾತನ್ನು ನೀಡಿದ್ದೇನೆ. ಈಗ ನೀವು ಹೇಳಿದಂತೆ ನಡೆಯದೆ ಹೋದರೆ ನನ್ನ ತಂದೆಗೆ ಸುಳ್ಳು ಹೇಳಿದಂತೆ ಆಗುತ್ತದೆ. ಆದ್ದರಿಂದ ನೀವು ಹೇಳಿದಂತೆ ತಾಟಕಿಯನ್ನು ನಾನು ಸಂಹಾರ ಮಾಡುತ್ತೇನೆ ಎಂದು ಶ್ರೀರಾಮನು ಹೇಳುತ್ತಾನೆ.

mysore-dasara_Entry_Point

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.