ವಿಶ್ವಾವಸು ಸಂವತ್ಸರ 1905; ಬಂಗಾಳ ವಿಭಜನೆ, ಸ್ವದೇಶಿ ಆಂದೋಲನಕ್ಕೆ ಬಲ, ಭಾರತದಲ್ಲಿ ಸ್ವಾತಂತ್ರ್ಯ ಹೋರಾಟದ ಮಹತ್ವದ ಮೈಲಿಗಲ್ಲು
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ವಿಶ್ವಾವಸು ಸಂವತ್ಸರ 1905; ಬಂಗಾಳ ವಿಭಜನೆ, ಸ್ವದೇಶಿ ಆಂದೋಲನಕ್ಕೆ ಬಲ, ಭಾರತದಲ್ಲಿ ಸ್ವಾತಂತ್ರ್ಯ ಹೋರಾಟದ ಮಹತ್ವದ ಮೈಲಿಗಲ್ಲು

ವಿಶ್ವಾವಸು ಸಂವತ್ಸರ 1905; ಬಂಗಾಳ ವಿಭಜನೆ, ಸ್ವದೇಶಿ ಆಂದೋಲನಕ್ಕೆ ಬಲ, ಭಾರತದಲ್ಲಿ ಸ್ವಾತಂತ್ರ್ಯ ಹೋರಾಟದ ಮಹತ್ವದ ಮೈಲಿಗಲ್ಲು

ವಿಶ್ವಾವಸು ಸಂವತ್ಸರ 1905ರಲ್ಲಿ ಬಂದಾಗ ಭಾರತದಲ್ಲಿನ ಸನ್ನಿವೇಶ, ವಿದ್ಯಮಾನಗಳು ಕೂಡ ಧನಾತ್ಮಕವಾಗಿಯೆ ಇದ್ದವು. ಅಂದು ಬಂಗಾಳ ವಿಭಜನೆಯ ಸಂದರ್ಭ. ಅದರ ವಿರುದ್ಧದ ಹೋರಾಟದ ಕಿಚ್ಚು ಭಾರತದ ಸ್ವಾತಂತ್ರ್ಯ ಹೋರಾಟದ ಮಹತ್ವದ ಮೈಲಿಗಲ್ಲಾಗಿರುವ ಸ್ವದೇಶಿ ಆಂದೋಲನ ಶುರುವಾಗುವುದಕ್ಕೆ ಅಡಿಪಾಯ ಹಾಕಿಕೊಟ್ಟಿತು. ಅದರ ಕಡೆಗೊಂದು ನೋಟ ಹರಿಸುವುದಕ್ಕೆ ಈ ಹೊತ್ತು ಒಂದು ನಿಮಿತ್ತ.

ವಿಶ್ವಾವಸು ಸಂವತ್ಸರ 1905; ಬಂಗಾಳ ವಿಭಜನೆ ನಿರ್ಧಾರ ಪ್ರಕಟಿಸಿದ ಬ್ರಿಟಿಷ್ ವೈಸರಾಯ್ ಕರ್ಜನ್‌ (ಎಡಚಿತ್ರ). ಸ್ವಾತಂತ್ರ್ಯ ಹೋರಾಟದ ಭಾಗವಾಗಿ ವಿದೇಶಿ ವಸ್ತುಗಳನ್ನು ಬಹಿಷ್ಕರಿಸಿದ ಸ್ವದೇಶಿ ಆಂದೋಲನ (ಬಲಚಿತ್ರ).
ವಿಶ್ವಾವಸು ಸಂವತ್ಸರ 1905; ಬಂಗಾಳ ವಿಭಜನೆ ನಿರ್ಧಾರ ಪ್ರಕಟಿಸಿದ ಬ್ರಿಟಿಷ್ ವೈಸರಾಯ್ ಕರ್ಜನ್‌ (ಎಡಚಿತ್ರ). ಸ್ವಾತಂತ್ರ್ಯ ಹೋರಾಟದ ಭಾಗವಾಗಿ ವಿದೇಶಿ ವಸ್ತುಗಳನ್ನು ಬಹಿಷ್ಕರಿಸಿದ ಸ್ವದೇಶಿ ಆಂದೋಲನ (ಬಲಚಿತ್ರ).

ಭಾರತದ ಇತಿಹಾಸದ ಕಡೆಗೆ ಗಮನಹರಿಸೋಣ. 120 ವರ್ಷಗಳ ಹಿಂದೆ 1905ರಲ್ಲಿ ವಿಶ್ವಾವಸು ಸಂವತ್ಸರ ಬಂದ ಸಂದರ್ಭ ಅದು. ಭಾರತದ ಮಟ್ಟಿಗೆ ಬಹಳ ಮಹತ್ವದ ವರ್ಷ. ಭಾರತದಲ್ಲಿ ಬ್ರಿಟಿಷ್ ಆಡಳಿತವಿತ್ತು. ಲಾರ್ಡ್ ಕರ್ಜನ್ ಭಾರತದ ವೈಸರಾಯ್ ಆಗಿದ್ದ. 1905ರ ಜುಲೈ 20ರಂದು ಬಂಗಾಳ ವಿಭಜನೆಯ ಘೋಷಣೆ ಮಾಡಿದ. ಕರ್ಜನ್ ಆಡಳಿತದ ಆಂತರಿಕ ನೀತಿಯ ಭಾಗವಾಗಿ ಬಂಗಾಳವನ್ನು 1905ರ ಅಕ್ಟೋಬರ್ 16 ರಂದು ಪೂರ್ವ ಬಂಗಾಳ ಮತ್ತು ಪಶ್ಚಿಮ ಬಂಗಾಳ ಎಂದು ವಿಭಜಿಸಲಾಯಿತು. ಜನಸಂಖ್ಯೆ ಹೆಚ್ಚಿದ್ದ ಕಾರಣ ಬಂಗಾಳದ ಆಡಳಿತ ಕಷ್ಟವೆನಿಸಿದೆ. ಹೀಗಾಗಿ, ಬಂಗಾಳ ವಿಭಜನೆ ಮಾಡಲಾಗುತ್ತಿದೆ ಎಂದು ಭಾರತೀಯರನ್ನು ಬ್ರಿಟಿಷರು ನಂಬಿಸಲು ಪ್ರಯತ್ನಿಸಿದ್ದರು. ಬ್ರಿಟಿಷರ ಮನದ ಇಂಗಿತ ಬೇರೆಯೇ ಇತ್ತು. ಭಾರತ ಸ್ವಾತಂತ್ರ್ಯ ಹೋರಾಟದ ಕೇಂದ್ರ ಸ್ಥಾನವಾಗಿ ಬಂಗಾಳ ಬೆಳೆಯುತ್ತಿರುವುದು ಅವರಿಗೆ ಸಹ್ಯವಾಗಿರಲಿಲ್ಲ. ಹೀಗಾಗಿ, ಮುಸ್ಲಿಂ ಮತ್ತು ಹಿಂದುಗಳ ನಡುವೆ ಒಡೆದು ಆಳುವ ನೀತಿಗೆ ಅನುಗುಣವಾಗಿ ಬಂಗಾಳ ವಿಭಜನೆ ನಡೆಯಿತು. ಆದಾಗ್ಯೂ, ಬಂಗಾಳ ವಿಭಜನೆಯ ಬ್ರಿಟಿಷರ ಈ ಕ್ರಮ, ವ್ಯಾಪಕ ಟೀಕೆ ಮತ್ತು ಪ್ರತಿಭಟನೆಗೆ ವೇದಿಕೆ ಒದಗಿಸಿತು.

ಬಂಗಾಳ ವಿಭಜನೆಯ ಮಹತ್ವದ ಅಂಶಗಳು

ಬಂಗಾಳ ವಿಭಜನೆ ಸಂದರ್ಭದಲ್ಲಿ ಅಲ್ಲಿ 8 ಕೋಟಿ ಜನಸಂಖ್ಯೆ ಇತ್ತು. ಬಿಹಾರ ಭಾಗದಲ್ಲಿ ಬಹುಪಾಲು ಹಿಂದಿ ಭಾಷಿಕರು, ಒಡಿಯಾ ಭಾಗದಲ್ಲಿ ಬಹುಪಾಲು ಒಡಿಯಾ ಭಾಷಿಕರು,ಅಸ್ಸಾಂ ಬಾಗದಲ್ಲಿ ಅಸ್ಸಾಮೀ ಭಾಷಿಕರು ಇದ್ದರು.

1904ರ ಜನವರಿಯಲ್ಲಿ ಬಂಗಾಳ ವಿಭಜನೆಯ ಪ್ರಸ್ತಾವನೆ ಸಲ್ಲಿಸಲ್ಪಟ್ಟಾಗ ಅಸ್ಸಾಂನ ಚೀಫ್ ಕಮಿಷನರ್ ಹೆನ್ರಿ ಜಾನ್ ಸ್ಟೆಡ್‌ಮನ್ ವಿರೋಧಿಸಿದ್ದರು. ಆದಾಗ್ಯೂ, ಲಾರ್ಡ್‌ ಕರ್ಜನ್ 1905ರ ಅಕ್ಟೋಬರ್ 16 ರಂದು ಬಂಗಾಳ ವಿಭಜನೆ ಮಾಡಿದರು.

ಬಂಗಾಳ ವಿಭಜನೆ ಬಳಿಕ ಪೂರ್ವ ಬಂಗಾಳ ಮತ್ತು ಅಸ್ಸಾಂ ಒಟ್ಟು ಸೇರಿ ಡಾಕಾ ರಾಜಧಾನಿಯಾಗಿ ಪೂರ್ವ ಬಂಗಾಳ ರಾಜ್ಯ ರಚನೆಯಾಯಿತು. ಪಶ್ಚಿಮ ಬಂಗಾಳ, ಬಿಹಾರ, ಒಡಿಶಾ ಸೇರಿ ಪಶ್ಚಿಮ ಬಂಗಾಳ ರಾಜ್ಯ ರಚನೆಯಾಯಿತು.

ಬಂಗಾಳ ವಿಭಜನೆಗೆ ಜನಸಂಖ್ಯೆ ನಿಭಾಯಿಸುವುದು ಕಷ್ಟ ಎಂಬ ಆಡಳಿತಾತ್ಮಕ ಕಾರಣ ಮುಂದಿಟ್ಟರೂ, ಹಿಂದೆ ಬೇರೆಬೇರೆ ಉದ್ದೇಶಗಳಿದ್ದವು. ಹಿಂದೂಗಳು ಹಾಗೂ ಮುಸ್ಲಿಮರ ನಡುವೆ ಇದ್ದ ಐಕಮತ್ಯವನ್ನು ಒಡೆಯುವ ಸಲುವಾಗಿ ಪೂರ್ವ ಬಂಗಾಳ ಮತ್ತು ಪಶ್ಚಿಮ ಬಂಗಾಳ ರಚಿಸಲಾಯಿತು. ಬ್ರಿಟಿಷರು ಹಿಂದುಗಳಿಗೆ ಆಂಗ್ಲ ಶಿಕ್ಷಣ ಕೊಟ್ಟರು, ಮುಸ್ಲಿಮರಿಗೆ ಕೊಡಲಿಲ್ಲ. ಬಂಗಾಳ ವಿಭಜನೆಯನ್ನು ಹಿಂದುಗಳು ವಿರೋಧಿಸಿದರೇ ಹೊರತು ಮುಸ್ಲಿಮರು ವಿರೋಧಿಸಲಿಲ್ಲ. ಅವರಲ್ಲಿ ಪೂರ್ವ ಬಂಗಾಳದ ಆಸೆ ಹುಟ್ಟಿಸಲಾಗಿತ್ತು.

ಬಂಗಾಳ ವಿಭಜನೆ ನಂತರದಲ್ಲಿ ಪಶ್ಚಿಮ ಬಂಗಾಳದ ಹಿಂದೂಗಳು ಬ್ರಿಟಿಷರ ವಿರುದ್ಧ ಸಿಡಿದೆದ್ದರು. ಬಾರತದ ರಾಷ್ಟ್ರೀಯ ಚಳವಳಿಯಲ್ಲಿ ಭಾಗವಹಿಸಿದರು. ಸ್ವದೇಶಿ ಚಳವಳಿಗೆ ಇದು ಬಲತುಂಬಿತು. ಕಾಂಗ್ರೆಸ್ ಅಂದು ಸ್ವದೇಶಿ ಚಳವಳಿ ಶುರುಮಾಡಿದಾಗ ಮುಸ್ಲಿಮರು ಬೆಂಬಲ ನೀಡಲಿಲ್ಲ. ಅವರಿಗೆ ಪೂರ್ವ ಬಂಗಾಳ ಸಿಕ್ಕಿದ್ದರ ತೃಪ್ತಿ ಇತ್ತು. ಅದನ್ನು ಅವರು ಕಳೆದುಕೊಳ್ಳಲು ಬಯಸಿರಲ್ಲಿಲ್ಲ.

ಸ್ವದೇಶಿ ಚಳವಳಿಗೆ ಬಲ ತುಂಬಿದ ಬಂಗಾಳ ವಿಭಜನೆ

ಸ್ವದೇಶಿ ಚಳವಳಿ 1850ರಲ್ಲಿ ಶುರುವಾಗಿದ್ದು, 1905ರಲ್ಲಿ ಬಂಗಾಳ ವಿಭಜನೆ ಘೋಷಣೆಯಾದ ಕೂಡಲೇ ಬಲಪಡೆದುಕೊಂಡಿತು. ದಾದಾಬಾಯಿ ನವರೋಜಿ, ಗೋಪಾಲಕೃಷ್ಣ ಗೋಖಲೆ, ಮಹಾದೇವ ಗೋವಿಂದ ರಾನಡೆ, ಬಾಲ ಗಂಗಾಧರ ತಿಲಕ, ಗಣೇಶ ವೆಂಕಟೇಶ ಜೋಶಿ, ಸುಬ್ರಹ್ಮಣ್ಯ ಭಾರತೀ ಮುಂತಾದವರು ನಮ್ಮ ದೇಶ ಭಾರತದ ಮೊದಲ ಸ್ವದೇಶಿ ಚಳವಳಿಯ ರೂವಾರಿಗಳಾಗಿದ್ದರು. 1905ರ ಜುಲೈ 20ರಂದು ಬಂಗಾಳ ವಿಭಜನೆ ಘೋಷಣೆಯಾದ ಬೆನ್ನಿಗೆ 1905ರ ಆಗಸ್ಟ್ 7 ರಂದು ಕಲ್ಕತಾದ ಟೌನ್‌ನಿಂದ ಸ್ವದೇಶಿ ಚಳವಳಿ ಔಪಚಾರಿಕವಾಗಿ ಶುರುವಾಯಿತು.

ದೇಶಿ ಉತ್ಪನ್ನಗಳ ಬಳಕೆ, ವಿದೇಶಿ ವಸ್ತುಗಳನ್ನು ತಿರಸ್ಕರಿಸುವುದಕ್ಕೆ ಸ್ವದೇಶಿ ಚಳವಳಿಕಾರರು ಭಾರತೀಯರನ್ನು ಆಗ್ರಹಿಸಿದರು. ಮಹಾತ್ಮಗಾಂಧಿ ಸ್ವರಾಜ್ ಚಳವಳಿ ಎಂದು ಹೇಳಿದರು. ಈ ಚಳವಳಿಗೆ ಶ್ರೀಮಂತ ಭಾರತೀಯರು ದೇಣಿಗೆ ನೀಡಿದ ಕಾರಣ ಇದು ಉಚ್ಛ್ರಾಯ ಸ್ಥಿತಿ ತಲುಪಿತು. ಖಾದಿ ಮತ್ತು ಗ್ರಾಮೋದ್ಯೋಗ ಸೊಸೈಟಿಗಳು ತಲೆಎತ್ತಿದವು. ಗ್ರಾಮ ಗ್ರಾಮಗಳಲ್ಲಿ ಸ್ವಾವಲಂಬಿ ಬದುಕಿಗೆ ಬೇಕಾದ ಉಪಕ್ರಮಗಳುಂಟಾದವು. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಈ ಸನ್ನಿವೇಶವನ್ನು ಸ್ವಾತಂತ್ರ್ಯ ಸಂಗ್ರಾಮಕ್ಕೆ ಬಳಸಿಕೊಂಡಿತು.

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.