ಕನ್ನಡ ಸುದ್ದಿ  /  Astrology  /  Vrushabha Rashi Ugadi Varsha Bhavishya Taurus Horoscope Ugadi Predictions Of Krodhi Nama Samvatsara Yearly Horoscope Sts

ವೃಷಭ ರಾಶಿಯ ಶ್ರೀ ಕ್ರೋಧಿನಾಮ ಸಂವತ್ಸರದ ವರ್ಷ ಭವಿಷ್ಯ: ಹೆಂಡತಿಗೆ ಇಷ್ಟವಾಗುವಂತೆ ನಡೆದುಕೊಳ್ಳುವ ಇವರದ್ದು ನೆಮ್ಮದಿಯ ದಾಂಪತ್ಯ ಜೀವನ

ಯುಗಾದಿ ರಾಶಿ ಭವಿಷ್ಯ: ರಾಶಿ ಚಕ್ರದಲ್ಲಿ ವೃಷಭ 2ನೇ ರಾಶಿ. ವೃಷಭ ರಾಶಿಗೆ ಈ ವರ್ಷ ಹೇಗಿದೆ ಎನ್ನುವ ಬಗ್ಗೆ ಜ್ಯೋತಿಷಿ ಎಚ್.ಸತೀಶ್ ಅವರು ಈ ಬರಹದಲ್ಲಿ ವಿವರ ನೀಡಿದ್ದಾರೆ.

ವೃಷಭ ರಾಶಿ ಯುಗಾದಿ ವರ್ಷ ಭವಿಷ್ಯ
ವೃಷಭ ರಾಶಿ ಯುಗಾದಿ ವರ್ಷ ಭವಿಷ್ಯ

ವೃಷಭ ರಾಶಿಯ ಯುಗಾದಿ ವರ್ಷ ಭವಿಷ್ಯ: ನೀವು ಕೃತ್ತಿಕಾ ನಕ್ಷತ್ರದ 2, 3 ಮತ್ತು 4ನೇ ಪಾದಗಳು, ರೋಹಿಣಿ ನಕ್ಷತ್ರದ 1, 2, 3 ಮತ್ತು 4ನೇ ಪಾದಗಳು, ಮೃಗಶಿರ ನಕ್ಷತ್ರದ 1 ಮತ್ತು 2ನೇ ಪಾದದಲ್ಲಿ ಜನಿಸಿದ್ದಲ್ಲಿ ನಿಮ್ಮದು ವೃಷಭ ರಾಶಿ ಆಗುತ್ತದೆ. ನಿಮ್ಮ ಹೆಸರಿನ ಮೊದಲ ಅಕ್ಷರವು ಇ, ಉ, ಎ ಆದಲ್ಲಿ ಕೃತ್ತಿಕ ನಕ್ಷತ್ರ. ಒ, ವ, ವಿ, ವು ಆದಲ್ಲಿ ರೋಹಿಣಿ ನಕ್ಷತ್ರ ಮತ್ತು ವೆ, ವೊ ಆದಲ್ಲಿ ಮೃಗಶಿರ ನಕ್ಷತ್ರದೊಂದಿಗೆ ಮೇಷ ರಾಶಿಗೆ ಬರುತ್ತದೆ. ನಂದಿ ಅಥವಾ ಗೂಳಿ ಈ ರಾಶಿಯ ಚಿಹ್ನೆ. ಈ ರಾಶಿಗೆ ಸೇರಿದವರು ಸಾಮಾನ್ಯವಾಗಿ ಪ್ರಾಮಾಣಿಕರು ಆದರೆ ಸ್ವಭಾವ ತುಸು ಮೊಂಡು. ಎದುರಿಗೆ ಇರುವವರಿಂದಲೂ ಪ್ರಾಮಾಣಿಕತೆಯನ್ನು ನಿರೀಕ್ಷಿಸುತ್ತಾರೆ.

ವೃಷಭ ರಾಶಿಯ ಗುಣಲಕ್ಷಣಗಳು (Taurus characteristics in Kannada)

ವೃಷಭ ರಾಶಿಯಲ್ಲಿ ಜನಿಸಿದ ಮಹಿಳೆಯರಿಗೆ ಧೈರ್ಯ ಮತ್ತು ಆತ್ಮಶಕ್ತಿ ವಿಶೇಷವಾಗಿರುತ್ತದೆ. ದೈಹಿಕವಾಗಿಯೂ ಇವರು ಸಬಲರಾಗಿರುತ್ತಾರೆ. ಸಹನೆ ಮತ್ತು ಏಕಾಗ್ರತೆಗೆ ಇವರೇ ನಿಜವಾದ ಮಾದರಿ. ಪ್ರೀತಿ ಮತ್ತು ವಿಶ್ವಾಸದ ವಿಚಾರದಲ್ಲಿ ಇವರಿಗೆ ಬೇರಾರು ಸಮರಲ್ಲ. ಸಂಗಾತಿಯೊಂದಿಗೆ ಅರ್ಥಪೂರ್ಣ ಜೀವನ ನಡೆಸುತ್ತಾರೆ. ಸಣ್ಣಪುಟ್ಟ ವಿಚಾರಗಳನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ. ಹಲವು ಬಾರಿ ಇವರನ್ನು ಗಮನಿಸಿದಾಗ ಇವರೆಂಥ ಭಾವನಾಜೀವಿಗಳು ಅನ್ನಿಸುತ್ತದೆ. ಇತರರು ಅರ್ಥ ಮಾಡಿಕೊಳ್ಳಲು ಕಷ್ಟಪಡುವ ಹಲವು ವಿಚಾರಗಳನ್ನು ಇವರು ಸುಲಭವಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಅತಿಯಾಗಿ ಊಹೆ ಮಾಡಿಕೊಳ್ಳದೆ, ಕಣ್ಣ ಮುಂದೆ ನಡೆಯುವ ವಿಚಾರಗಳಿಗಷ್ಟೇ ಬೆಲೆ ಕೊಡುತ್ತಾರೆ. ಸಮಾಜದಲ್ಲಿ ಮತ್ತು ಕುಟುಂಬದಲ್ಲಿ ಗೌರವ ಮೆಚ್ಚುಗೆಗಳು ಅನಾಯಾಸವಾಗಿ ದೊರೆಯಲಿವೆ. ಸ್ವತಃ ಇವರು ತಪ್ಪು ಮಾಡುವುದು ಕಡಿಮೆ, ಸದಾ ಸರಿಯಾದ ಹಾದಿಯಲ್ಲಿ ನಡೆಯಬೇಕು ಎಂದು ಬಯಸುತ್ತಾರೆ. ತಾವಷ್ಟೇ ಅಲ್ಲ, ತಮ್ಮ ಸುತ್ತಲು ಇರುವವರೂ ತಪ್ಪು ಮಾಡಿದರೆ ಇವರು ಒಪ್ಪುವುದಿಲ್ಲ ಹಾಗೆಂದು ಅಂಥವರನ್ನು ಶಿಕ್ಷಿಸುವುದು ಇಲ್ಲ. ತಪ್ಪನ್ನು ತಿದ್ದಿಕೊಳ್ಳಲು ಅವಕಾಶ ನೀಡುವ ಬುದ್ಧಿ ಇವರಲ್ಲಿ ಇರುತ್ತದೆ.

ವೃಷಭ ರಾಶಿಯಲ್ಲಿ ಜನಿಸಿದ ಪುರುಷರು ಸಾಮಾನ್ಯವಾಗಿ ಹಣಕಾಸಿನ ವಿಚಾರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಇವರ ಮನಸ್ಸು ಬದಲಾಯಿಸುವುದು ಸುಲಭದ ವಿಚಾರವಲ್ಲ. ಯಾವುದೇ ತೀರ್ಮಾನಗಳನ್ನು ತೆಗೆದುಕೊಂಡರೂ ಬೇರೆಯವರು ಒಪ್ಪಲೇಬೇಕೆಂಬ ಮನಸ್ಥಿತಿ ಇವರಿಗೆ ಇರುತ್ತದೆ. ಪ್ರಾಮಾಣಿಕತೆಯೇ ಇವರ ನಿಜವಾದ ಬಂಡವಾಳ. ಒಪ್ಪಿಕೊಂಡ ಜವಾಬ್ದಾರಿಗಳ ವಿಚಾರದಲ್ಲಿ ಶ್ರದ್ಧೆಯಿಂದ ಕೆಲಸ ಮಾಡುತ್ತಾರೆ. ಕೆಲಸ ದೊಡ್ಡದು-ಸಣ್ಣದು ಎಂದು ವ್ಯತ್ಯಾಸ ಮಾಡುವುದಿಲ್ಲ. ಹೆಂಡತಿಯ ಮೇಲೆ ವಿಶೇಷ ಪ್ರೀತಿ ಮತ್ತು ವಿಶ್ವಾಸ ಹೊಂದಿರುತ್ತಾರೆ. ಬೇರೊಬ್ಬರ ಅಧೀನದಲ್ಲಿ ಇರಲು ಇಷ್ಟಪಡದೆ ಸ್ವತಂತ್ರವಾಗಿ ಜೀವನ ಮಾಡುವುದು ಇವರ ಗುರಿ. ಇಷ್ಟಪಟ್ಟ ವಸ್ತು ಕೈವಶವಾಗದಿದ್ದರೆ ಅಂಥದ್ದನ್ನು ತಿರಸ್ಕರಿಸುತ್ತಾರೆ. ಬೇರೊಬ್ಬರ ಸಹಾಯದಿಂದಲೂ ಅಥವಾ ಹೆಚ್ಚಿನ ಪ್ರಯತ್ನದಿಂದಲೂ ಅದನ್ನು ಗಳಿಸಲು ಪ್ರಯತ್ನಿಸುವುದಿಲ್ಲ. ಸದಾ ಕಾಲ ಪತ್ನಿಗೆ ಇಷ್ಟವಾಗುವಂತೆ ನಡೆದುಕೊಳ್ಳುತ್ತಾರೆ. ಆದರೆ ಸಹನೆ ಸ್ವಲ್ಪ ಕಡಿಮೆ.

ವೃಷಭ ರಾಶಿಗೆ ಶುಭ ದಿನಾಂಕ, ವಾರ, ಬಣ್ಣ

ವೃಷಭ ರಾಶಿಯಲ್ಲಿ ಜನಿಸಿದವರು ನೆನಪಿಟ್ಟುಕೊಳ್ಳಬೇಕಾದ ವಿಚಾರಗಳು ಇವು. ಶುಭ ದಿನಾಂಕಗಳು: 5, 6, 15, 18, 19, 20, 25, 29. ಶುಭ ದಿನಗಳು: ಸೋಮವಾರ, ಬುಧವಾರ, ಗುರುವಾರ, ಶುಕ್ರವಾರ ಮತ್ತು ಶನಿವಾರ. ಶುಭ ಸಂಖ್ಯೆಗಳು: 5, 6, 8. ಶುಭ ವರ್ಣ: ಪಿಂಕ್, ಹಸಿರು ಮತ್ತು ಬಿಳಿ. ಅಶುಭ ವರ್ಣ: ಕೆಂಪು ಮತ್ತು ಹಳದಿ. ಶುಭ ದಿಕ್ಕು: ದಕ್ಷಿಣ ಮತ್ತು ನೈರುತ್ಯ. ಶುಭ ತಿಂಗಳು: ಜನವರಿ 15 ರಿಂದ ಏಪ್ರಿಲ್15. ಶುಭ ಹರಳು: ಹಸಿರು ಪಚ್ಚೆ ಮತ್ತು ನೀಲಮಣಿ. ಶುಭ ರಾಶಿ: ಮಿಥುನ, ಕನ್ಯಾ ಮತ್ತು ಮಕರ. ಅಶುಭ ರಾಶಿ: ಕಟಕ, ಧನುಸ್ಸು ಮತ್ತು ಮೇಷ.

ಶ್ರೀ ಕ್ರೋಧಿನಾಮ ಸಂವತ್ಸರದ ವೃಷಭ ರಾಶಿಯ ಗೋಚಾರ ಫಲ

ವೃಷಭ ರಾಶಿಗೆ ಸೇರಿದವರಲ್ಲಿ ಶ್ರೀ ಕ್ರೋಧಿನಾಮ ಸಂವತ್ಸರದಲ್ಲಿ ಗುರುವಿನ ಅನುಗ್ರಹ ದೊರೆಯದ ಕಾರಣ ಪ್ರತಿಯೊಂದು ಕೆಲಸ ಪೂರ್ಣಗೊಳ್ಳಲು ಹೆಚ್ಚಿನ ಪ್ರಯತ್ನ ಅಗತ್ಯ. ಆದರೆ ಶನಿ ಮತ್ತು ರಾಹು ಗ್ರಹಗಳು ಶುಭಸ್ಥಾನದಲ್ಲಿ ಇರುವ ಕಾರಣ ಸಮಸ್ಯೆಗಳು ಎದುರಾಗುವುದಿಲ್ಲ. ಆರೋಗ್ಯದಲ್ಲಿ ತೊಂದರೆ ಕಂಡುಬರಲಿದೆ. ವೆಚ್ಚ ಹೆಚ್ಚಿದ್ದರೂ ಒಳ್ಳೆಯ ಕೆಲಸಗಳಿಗೆ ಮಾತ್ರ ಹಣವನ್ನು ಖರ್ಚು ಮಾಡುವಿರಿ. ಉತ್ತಮ ಆದಾಯವಿರುವ ಕಾರಣ ಹಣವನ್ನು ಉಳಿಸಲು ಸಫಲರಾಗುವಿರಿ. ಈ ಸಂವತ್ಸರದಲ್ಲಿ ಉತ್ತಮ ಫಲಗಳನ್ನು ನಿರೀಕ್ಷಿಸಬಹುದು. ಆದರೆ ತಡವಾಗಿ ಕೆಲಸ ಕಾರ್ಯಗಳು ನಡೆಯಲಿವೆ. ಯಾವುದೇ ವಿಚಾರವಾದರೂ ಸಮಯವರಿತು ನಿರ್ಧಾರಗಳನ್ನು ತೆಗೆದುಕೊಳ್ಳಲು ಗಮನ ಕೊಡಿ. ನಿಮ್ಮ ಮನಃಸ್ಥಿತಿಯೂ ಅದಕ್ಕೆ ಪೂರಕವಾಗಿಯೇ ಇರುತ್ತದೆ.

ವೃಷಭ ರಾಶಿಯವರಿಗೆ ಈ ವರ್ಷದ ಸ್ನೇಹ, ವಿಶ್ವಾಸದ ಬಂಧ

ವೃಷಭ ರಾಶಿಯವರಿಗೆ ಈ ವರ್ಷ ದಾಂಪತ್ಯ ಜೀವನದಲ್ಲಿ ಏರಿಳಿತ ಕಂಡು ಬರುತ್ತದೆ. ಸಹನೆಯಿಂದ ನಡೆದುಕೊಂಡರೆ ಯಾವುದೇ ತೊಂದರೆ ಕಾಣುವುದಿಲ್ಲ. ಸ್ವಭಾವತಃ ಶಾಂತ ಮನಸ್ಕರಾದವರಾದರೂ ಕೋಪ ಬಂದಾಗ ಉದ್ವೇಗದಿಂದ ವರ್ತಿಸುವಿರಿ. ಸಭೆ-ಸಂಧಾನದಿಂದ ಕುಟುಂಬದಲ್ಲಿ ಎದುರಾಗುವ ತೊಂದರೆಗಳಿಂದ ಪಾರಾಗುವಿರಿ. ಅತಿಯಾದ ನಿರೀಕ್ಷೆ ಸೋಲಿಗೆ ಕಾರಣವಾಗಬಹುದು. ಸ್ನೇಹವನ್ನು ಬಯಸಿ ಬರುವವರ ಪೂರ್ವಾಪರಗಳನ್ನು ಅರಿಯಲು ಪ್ರಯತ್ನಿಸುವಿರಿ. ದುಡುಕುತನದಿಂದ ಸ್ನೇಹವನ್ನು ಬೆಳೆಸುವುದಿಲ್ಲ. ಮುಂದಿನ ದಿನಗಳಲ್ಲಿ ಅನವಶ್ಯಕ ಸಮಸ್ಯೆಗಳನ್ನು ಎದುರಿಸಲು ಇಚ್ಚಿಸುವುದಿಲ್ಲ. ಪ್ರತಿಯೊಂದು ವಿಚಾರದಲ್ಲಿ ಅನುಕೂಲವಿದ್ದರೂ ಅದನ್ನು ಆನಂದಿಸುವುದಿಲ್ಲ. ಸಂಗಾತಿ ಇದ್ದರೂ ಅನವಶ್ಯಕ ಚಿಂತೆಯಿಂದ ಪ್ರೀತಿ ವಿಶ್ವಾಸವನ್ನು ಪೂರ್ಣವಾಗಿ ಅನುಭವಿಸಲಾರಿ. ತಪ್ಪು ನಿರ್ಧಾರಗಳಿಂದ ದೂರವಿದ್ದಲ್ಲಿ ಸುಖ ಸಂತೋಷಗಳಿಗೆ ಪಾರವಿರುವುದಿಲ್ಲ.

ಉದ್ಯೋಗ: ನಿಮ್ಮ ಪರಿಶ್ರಮಕ್ಕೆ ಸಿಗಲಿದೆ ಪ್ರಶಂಸೆ

ವೃಷಭ ರಾಶಿಯವರಿಗೆ ಉದ್ಯೋಗದಲ್ಲಿ ಯಾವುದೇ ರೀತಿಯ ತೊಂದರೆಗಳು ಎದುರಾಗುವುದಿಲ್ಲ. ಶನಿಯು ಶಕ್ತಿಶಾಲಿಯಾದ ಕಾರಣ ಉದ್ಯೋಗದಲ್ಲಿ ಉತ್ತಮ ಫಲಗಳನ್ನೇ ನೀಡುತ್ತಾನೆ. ಉದ್ಯೋಗದಲ್ಲಿ ನಿಮ್ಮದಲ್ಲದ ಜವಾಬ್ದಾರಿಯನ್ನೂ ನಿಷ್ಠೆಯಿಂದ ನಿರ್ವಹಿಸುವಿರಿ. ಈ ಕಾರಣದಿಂದಾಗಿ ಅಧಿಕಾರಿಗಳಿಗೆ ಸಮಾನದ ಸ್ಥಾನಮಾನಗಳು ನಿಮಗೆ ದೊರೆಯಲಿವೆ. ಸಾಮಾನ್ಯವಾಗಿ ನಿಮ್ಮ ಯಾವುದೇ ಪ್ರಯತ್ನಗಳು ವಿಫಲವಾಗುವುದಿಲ್ಲ ನಿಮ್ಮ ಕೆಲಸ ಕಾರ್ಯಗಳಿಗೆ ಕುಟುಂಬದ ಒಳಗೂ ಹೊರಗೂ ಸಂಪೂರ್ಣ ಬೆಂಬಲ ಮತ್ತು ಮೆಚ್ಚುಗೆ ವ್ಯಕ್ತವಾಗುತ್ತದೆ. ಉದ್ಯೋಗ ಮಾಡುವ ಸಂಸ್ಥೆಯ ಮುಖಾಂತರ ವಿದೇಶಕ್ಕೆ ತೆರಳಬಹುದು. ಈ ಸಂವತ್ಸರದಲ್ಲಿ ಉದ್ಯೋಗದಲ್ಲಿ ವಿಶೇಷವಾದಂತಹ ಧನಾತ್ಮಕ ಬೆಳವಣಿಗೆಗಳು ಕಂಡು ಬರಲಿವೆ. ಸಮಾಜದಲ್ಲಿ ಉನ್ನತ ಮಟ್ಟದ ಹಿರಿಮೆ ನಿಮಗೆ ದೊರೆಯಲಿದೆ. ಮಾತನ್ನು ಕಡಿಮೆ ಮಾಡಿದರೆ ಬೇರೆಯವರಿಂದ ಸಹಾಯ ಮತ್ತು ಸಹಕಾರ ತಾನಾಗಿಯೇ ದೊರೆಯುತ್ತದೆ.

ವಿದ್ಯಾಭ್ಯಾಸ: ಅತಿಯಾದ ಆತ್ಮವಿಶ್ವಾಸ ಸಲ್ಲದು

ವೃಷಭ ರಾಶಿಯಲ್ಲಿರುವ ವಿದ್ಯಾರ್ಥಿಗಳು ಏಕಾಗ್ರತೆಯಿಂದ ಅಧ್ಯಯನ ಮಾಡಿದರೆ ವಿದ್ಯಾರ್ಥಿಗಳು ವಿನೂತನ ಸಾಧನೆ ಮಾಡಬಲ್ಲರು. ಆದರೆ ಪಂಚಮದಲ್ಲಿ ಕೇತು ಇರುವ ಕಾರಣ ಅತಿಯಾದ ಆತ್ಮವಿಶ್ವಾಸ ನಿರಾಸೆಗೆ ಕಾರಣವಾಗುತ್ತದೆ. ಅನ್ವೇಷಣಾ ಬುದ್ಧಿ ಇರುವ ಕಾರಣ ಓದಿದ ವಿಚಾರಗಳನ್ನು ಸುಲಭವಾಗಿ ಮನನ ಮಾಡಿಕೊಳ್ಳುವಿರಿ. ಮೇ ತಿಂಗಳಲ್ಲಿ ಗುರುವು ಜನ್ಮರಾಶಿಯನ್ನು ಪ್ರವೇಶಿಸುವ ಕಾರಣ ಕೇತುವಿನ ಮೇಲೆ ಗುರು ದೃಷ್ಟಿ ಇರುತ್ತದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಗುರುಹಿರಿಯರ ಸಹಾಯ ದೊರೆಯುತ್ತದೆ. ನಿಮ್ಮಲ್ಲಿರುವ ಅನ್ವೇಷಣಾ ಬುದ್ಧಿಯು ಎಲ್ಲರ ಗಮನ ಸೆಳೆಯುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶವನ್ನು ಪಡೆಯಲಿದ್ದೀರಿ. ಕಲಿಕೆಯ ವಿಚಾರಗಳ ಆಯ್ಕೆಯ ವೇಳೆ ವಿದ್ಯಾರ್ಥಿಗಳು ಗಲಿಬಿಲಿಗೆ ಸಿಲುಕುತ್ತಾರೆ. ವಿದೇಶದಲ್ಲಿ ಅಧ್ಯಯನ ನಡೆಸುವ ಅವಕಾಶ ದೊರೆಯಲಿದೆ

ಹಣಕಾಸು: ಬುದ್ಧಿವಂತಿಯೇ ಬಂಡವಾಳ, ಉತ್ತಮ ಆದಾಯದ ನಿರೀಕ್ಷೆ

ವೃಷಭ ರಾಶಿಯಲ್ಲಿ ಇರುವವರಿಗೆ ರಾಹು ಉತ್ತಮ ಆದಾಯವನ್ನು ನೀಡುತ್ತಾನೆ. ಸಮಯಕ್ಕೆ ತಕ್ಕಂತೆ ಹಣವನ್ನು ಸಂಪಾದಿಸುವ ಬುದ್ಧಿವಂತಿಕೆ ನಿಮ್ಮಲ್ಲಿರುತ್ತದೆ. ನಿಮ್ಮೆಲ್ಲ ಹಣಕಾಸಿನ ಯೋಜನೆಗಳಲ್ಲಿ ಉತ್ತಮ ಆದಾಯ ದೊರೆಯುತ್ತದೆ. ಭವಿಷ್ಯದ ದಿನಗಳಿಗಾಗಿ ರೂಪಿಸುವ ಯೋಜನೆಗಳನ್ನು ಸುಲಭವಾಗಿ ಪರಿಪೂರ್ಣಗೊಳಿಸುವಿರಿ. ಷೇರುಪೇಟೆ ವ್ಯವಹಾರದಲ್ಲಿ ಉತ್ತಮ ಆದಾಯ ದೊರೆಯಲಿದೆ. ಕೇವಲ ಒಳ್ಳೆಯ ಕೆಲಸ ಕಾರ್ಯಗಳಿಗೆ ಮಾತ್ರ ಹಣವನ್ನು ವಿನಿಯೋಗಿಸುವಿರಿ. ಅನಿರೀಕ್ಷಿತ ಧನಲಾಭವಿರುತ್ತದೆ. ಆಗಸ್ಟ್ ತಿಂಗಳ ನಂತರ ಖರ್ಚು ವೆಚ್ಚಗಳು ಕಡಿಮೆಯಾಗಲಿವೆ. ಕೌಟುಂಬಿಕ ಜವಾಬ್ದಾರಿಗಳನ್ನು ಸರಿದೂಗಿಸಲು ಹಣವು ಖರ್ಚಾಗುತ್ತದೆ. ಅನಿರೀಕ್ಷಿತವಾಗಿ ಖರ್ಚು ಹೆಚ್ಚಾದರೂ ಉತ್ತಮ ಆದಾಯವಿರುತ್ತದೆ.

ಕೌಟುಂಬಿಕ ಜೀವನ: ಎಲ್ಲರ ಸಹಕಾರ ನಿಮಗೆ, ಮಕ್ಕಳ ಮೇಲೆ ಬೇಡ ಕೋಪ

ಕುಟುಂಬದ ಸದಸ್ಯರೊಂದಿಗೆ ಉತ್ತಮ ಸಂಬಂಧ ಏರ್ಪಡುತ್ತದೆ. ಎಲ್ಲರ ಸಹಾಯ ಸಹಕಾರ ನಿಮಗೆ ದೊರೆಯಲಿದೆ. ಮೊದಲ ಆದ್ಯತೆಯನ್ನು ಕುಟುಂಬದ ಹಿರಿಯರ ಸೇವೆಗೆ ನೀಡುವಿರಿ. ಮಕ್ಕಳೊಂದಿಗೆ ಅನಾವಶ್ಯಕ ಸಂಘರ್ಷ ಏರ್ಪಡುತ್ತದೆ. ಮುಖ್ಯವಾಗಿ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಗಮನವಿರುತ್ತದೆ. ತಾಳ್ಮೆಯಿಂದ ಎಲ್ಲಾ ರೀತಿಯ ತೊಂದರೆಗಳನ್ನು ಜಯಿಸುವಿರಿ. ಕುಟುಂಬದ ಹಿರಿಯರ ಅಣತಿಯಂತೆ ಎಲ್ಲರೊಂದಿಗೆ ಯಾತ್ರಾ ಸ್ಥಳಕ್ಕೆ ಭೇಟಿ ನೀಡುವಿರಿ. ಒಟ್ಟಾರೆ ಕುಟುಂಬದಲ್ಲಿ ಶಾಂತಿ ನೆಮ್ಮದಿ ಮತ್ತು ಸಾಮರಸ್ಯ ಸದಾ ಕಾಲ ಕಂಡು ಬರುತ್ತದೆ.

ಮಕ್ಕಳ ವಿಚಾರ: ಮಕ್ಕಳ ಮನಸ್ಸು ಅರಿತುಕೊಳ್ಳಿ

ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು. ಅನವಶ್ಯಕ ವಾದ ವಿವಾದಗಳು ಮಕ್ಕಳೊಂದಿಗೆ ಉಂಟಾಗಲಿದೆ. ಅವರ ಮನಸ್ಸಿನಂತೆ ನಡೆದುಕೊಂಡಲ್ಲಿ ನೆಮ್ಮದಿಯ ಜೀವನ ಇರುತ್ತದೆ. ವಯಸ್ಸು ಚಿಕ್ಕದಾದರೂ ಹಲವು ಬಾರಿ ಮಕ್ಕಳ ಆಲೋಚನೆ ಮತ್ತು ಮಾತು ಹಿರಿಯರ ಮನಸ್ಸಿಗೆ ನಾಟುವಂತೆ ಇರುತ್ತದೆ. ವಿದ್ಯಾಭ್ಯಾಸದ ಗೆಲುವಿಗಾಗಿ ಹೆಚ್ಚಿನ ಪರಿಶ್ರಮದ ಅವಶ್ಯಕತೆ ಇದೆ. ಮಕ್ಕಳಿಂದ ನಿಮಗೆ ಉತ್ತಮ ಭವಿಷ್ಯದ ನಿರೀಕ್ಷೆ ಇರುತ್ತದೆ. ಸಂತಾನ ಲಾಭವಿದೆ.

ವಿವಾಹ ಮತ್ತು ದಾಂಪತ್ಯ: ಈ ವರ್ಷ ನಿಮಗಿದೆ ಮದುವೆ ಖುಷಿ

ವೃಷಭ ರಾಶಿಯವರಿಗೆ ಕ್ರೋಧಿನಾಮ ಸಂವತ್ಸರದಲ್ಲಿ ಆತ್ಮೀಯರ ಸಹಾಯದಿಂದ ವಿವಾಹವಾಗುತ್ತದೆ. ದೂರದ ಸಂಬಂಧಿಕರ ಅಥವಾ ಪರಿಚಯದವರ ಜೊತೆಗೆ ವಿವಾಹ ನಿಶ್ಚಯವಾಗಲಿದೆ. ದಂಪತಿಗಳ ನಡುವೆ ಉತ್ತಮ ಬಾಂಧವ್ಯ ರೂಪಗೊಳ್ಳುತ್ತದೆ. ದಂಪತಿಗಳ ನಡುವೆ ಅನ್ಯೋನ್ಯತೆ ಮೂಡುತ್ತದೆ. ಕೌಟುಂಬಿಕ ಜೀವನದಲ್ಲಿ ವಿವಾದಗಳು ಎದುರಾದರೂ ಕ್ಷಣಿಕವಾಗಿರುತ್ತದೆ. ಪರಸ್ಪರ ಒಬ್ಬರ ಮಾತನ್ನು ಒಬ್ಬರು ಅರಿತುಕೊಂಡರೆ ಯಾವುದೇ ತೊಂದರೆ ಎದುರಾಗದು. ಚಾಡಿ ಮಾತನ್ನು ಕೇಳಿದಲ್ಲಿ ತೊಂದರೆ ಖಚಿತ.

ವ್ಯಾಪಾರ ಮತ್ತು ವ್ಯವಹಾರ: ಪಾಲುದಾರರ ಸಹಕಾರದಿಂದ ಮುನ್ನಡೆ

ವೃಷಭ ರಾಶಿಯವರ ವ್ಯಾಪಾರ-ವ್ಯವಹಾರಕ್ಕೆ ಪರಿಸರವು ಪೂರಕವಾಗಿದೆ. ತಡವಾಗಿಯಾದರೂ ವ್ಯಾಪಾರ-ವ್ಯವಹಾರಗಳಲ್ಲಿ ಅನುಕೂಲಕರ ಪರಿಸ್ಥಿತಿಗಳು ಉಂಟಾಗುತ್ತವೆ. ನಿಮ್ಮ ವ್ಯಾಪಾರ ವ್ಯವಹಾರಗಳಲ್ಲಿ ಪಾಲುದಾರರು ನಿಮ್ಮ ಪ್ರಯತ್ನದಲ್ಲಿ ಸಂಪೂರ್ಣವಾಗಿ ಸಹಕರಿಸುತ್ತಾರೆ. ಅವಶ್ಯವಿದ್ದಲ್ಲಿ ಎಲ್ಲರ ಸಹಾಯ ದೊರೆಯುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಉನ್ನತಿ ಸಾಧಿಸಲು ಉತ್ಸಾಹ ತೋರುವಿರಿ. ಈ ಸಂವತ್ಸರದಲ್ಲಿ ಯಾವುದೇ ತೊಂದರೆ ಎದುರಾಗುವುದಿಲ್ಲ. ಆದರೆ ಕಾನೂನು ಮೀರಿ ಯಾವುದೇ ಕೆಲಸ ಮಾಡಲು ಹೋಗಬೇಡಿ. ಅದರಿಂದ ಅಪಾಯ ಆಗಬಹುದು. ಕುಟುಂಬದ ಸದಸ್ಯರು ಬಂಡವಾಳ ಹೂಡಿಕೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತಾರೆ. ಹೊಸ ಉದ್ದಿಮೆಯನ್ನು ಸ್ಥಾಪಿಸುವ ಸೂಚನೆಗಳಿವೆ. ನಿಮ್ಮ ಆರ್ಥಿಕ ಪ್ರಗತಿಯನ್ನು ಕಂಡು ಅಸೂಯೆ ಪಡುವ ಜನರಿಂದ ದೂರವಿರುವುದು ಕ್ಷೇಮಕರ. ಸಂಗಾತಿಯೊಂದಿಗೆ ಪಾಲುಗಾರಿಕೆಯ ವ್ಯಾಪಾರವನ್ನು ಆರಂಭ ಮಾಡುವಿರಿ.

ವಾಹನ ವಿಚಾರ: ಈ ಬಣ್ಣದ ಗಾಡಿ ನಿಮಗೆ ಒಳ್ಳೇದು

ವೃಷಭ ರಾಶಿಗೆ ಸೇರಿದವರು ಈ ವರ್ಷ ಏಪ್ರಿಲ್ ನಂತರ ನೀಲಿ ಬಣ್ಣದ ಹೊಸ ವಾಹನವನ್ನು ಕೊಳ್ಳುವ ಸಾಧ್ಯತೆಯಿದೆ. ಕೆಂಪು ಮತ್ತು ಮುತ್ತಿನ ಬಣ್ಣಗಳ ವಾಹನ ಖರೀದಿಸಬೇಕೆಂದು ಹಟ ಹಿಡಿಯದಿರಿ. ಒಳ್ಳೇ ಹಣ ಸಿಗುತ್ತೆ ಅಂತಾದರೆ ನಿಮ್ಮ ಬಳಿ ಇರುವ ಹಳೆಯ ವಾಹನವನ್ನು ಮಾರುವುದು ಒಳ್ಳೆಯದು. ಅಂಥ ಸಾಧ್ಯತೆಯೂ ಕಂಡುಬರುತ್ತಿದೆ. ಐಷಾರಾಮಿ ವಾಹನಕ್ಕೆ ಹಣ ವಿನಿಯೋಗಿಸುವಿರಿ. ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆ ಇರಲಿ.

ಆರೋಗ್ಯದ ವಿಚಾರ: ಹಾರ್ಮೋನ್ ಏರುಪೇರಾಗಬಹುದು, ಎಚ್ಚರ

ವೃಷಭ ರಾಶಿಯವರಿಗೆ ಏಪ್ರಿಲ್ ತಿಂಗಳವರೆಗೂ ಕಣ್ಣಿನ ತೊಂದರೆ ಬಹುವಾಗಿ ಕಾಡುತ್ತದೆ. ಆದರೆ ಆನಂತರ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ. ಹಾರ್ಮೋನಿನ ತೊಂದರೆ ಸಂಭವಿಸಬಹುದು. ಸಣ್ಣಪುಟ್ಟ ತೊಂದರೆ ಸಾಮಾನ್ಯವಾಗಿರುತ್ತದೆ. ಎಚ್ಚರಿಕೆ ಮತ್ತು ಹೆಚ್ಚಿನ ಕಾಳಜಿ ವಹಿಸಬೇಕು. ಶ್ವಾಸಕೋಶದ ಸೊಂಕು ಕೆಲ ದಿನ ಭಾದಿಸಬಹುದು. ಕುಟುಂಬದ ಹಿರಿಯರ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ.

ವೃಷಭ ರಾಶಿಯವರಿಗೆ ಪರಿಹಾರಗಳು

1) ಪ್ರತಿದಿನ ಶ್ರೀ ಇಂದ್ರಾಕ್ಷಿ ಸ್ತೋತ್ರ ಪಠಿಸುವುದರಿಂದ ಅಥವಾ ಕೇಳಿಸಿಕೊಳ್ಳುವುದರಿಂದ ಆತ್ಮಶಕ್ತಿಯು ಹೆಚ್ಚುತ್ತದೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ.

2) ಬಿಳಿಬಣ್ಣದ ಬಟ್ಟೆ ಮತ್ತು ಗೋಧಿ ಅಥವಾ ರವೆಯನ್ನು ದಾನ ನೀಡುವುದರಿಂದ ಖರ್ಚುವೆಚ್ಚಗಳು ಕಡಿಮೆ ಆಗಲಿವೆ.

3) ಹೂ ಬಿಡುವ ಗಿಡಗಳನ್ನು ಪೋಷಿಸಿದಲ್ಲಿ ಎಲ್ಲಾರೀತಿಯ ಸಮಸ್ಯೆಗಳು ದೂರವಾಗುತ್ತವೆ.

4) ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಗೆ ಪಂಚಾಮೃತ ಅಭಿಷೇಕ ಮಾಡಿಸುವುದು ಕ್ಷೇಮಕರ. ಮನೆಯಲ್ಲಿಯೂ ಶ್ರೀ ಸತ್ಯನಾರಾಯಣ ಪೂಜೆ ಮಾಡಬಹುದು.

5) ನೀಲಿ ಮತ್ತು ಹಸಿರು ಬಣ್ಣದ ಕರವಸ್ತ್ರ ಬಳಸಿದರೆ ನಿರೀಕ್ಷಿತ ಫಲಗಳು ದೊರೆಯಲಿವೆ.

ಬರಹ: ಎಚ್‌.ಸತೀಶ್, ಜ್ಯೋತಿಷಿ, ಬೆಂಗಳೂರು.ಇಮೇಲ್: sathishaapr23@gmail.com

ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು.

(ಈ ಬರಹವು ಮೊದಲ ಬಾರಿಗೆ 'ಹಿಂದೂಸ್ತಾನ್‌ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಪ್ರಕಟವಾಗಿದೆ. ಯುಗಾದಿ ಹಬ್ಬ, ಜ್ಯೋತಿಷ್ಯ, ಅಧ್ಯಾತ್ಮ ಕುರಿತ ಮತ್ತಷ್ಟು ಮಾಹಿತಿಗೆ kannada.hindustantimes.com ವೆಬ್‌ಸೈಟ್‌ಗೆ ಭೇಟಿ ನೀಡಿ)