ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಕೂಡಿಟ್ಟ ಹಣವನ್ನು ಪತಿಯ ಕೆಲಸಕ್ಕೆ ನೀಡುವಿರಿ, ತವರು ಮನೆಯ ಆಸ್ತಿಯ ವಿವಾದದಿಂದ ಮಾನಸಿಕ ಒತ್ತಡ; ಸ್ತ್ರೀ ವಾರ ಭವಿಷ್ಯ

ಕೂಡಿಟ್ಟ ಹಣವನ್ನು ಪತಿಯ ಕೆಲಸಕ್ಕೆ ನೀಡುವಿರಿ, ತವರು ಮನೆಯ ಆಸ್ತಿಯ ವಿವಾದದಿಂದ ಮಾನಸಿಕ ಒತ್ತಡ; ಸ್ತ್ರೀ ವಾರ ಭವಿಷ್ಯ

Weekly Women horoscope: ಸ್ತ್ರೀ ವಾರ ಭವಿಷ್ಯ (ಜೂನ್‌ 14 ರಿಂದ 20ವರೆಗೆ) ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಈ ವಾರ ಯಾವ ರಾಶಿಯವರಿಗೆ ಏನು ಫಲ? ಈ ವಾರದ ಸ್ತ್ರೀ ಭವಿಷ್ಯ ಇಲ್ಲಿದೆ. (ಬರಹ: ಎಚ್‌. ಸತೀಶ್, ಜ್ಯೋತಿಷಿ)

ಕೂಡಿಟ್ಟ ಹಣವನ್ನು ಪತಿಯ ಕೆಲಸಕ್ಕೆ ನೀಡುವಿರಿ, ತವರು ಮನೆಯ ಆಸ್ತಿಯ ವಿವಾದದಿಂದ ಮಾನಸಿಕ ಒತ್ತಡ; ಸ್ತ್ರೀ ವಾರ ಭವಿಷ್ಯ
ಕೂಡಿಟ್ಟ ಹಣವನ್ನು ಪತಿಯ ಕೆಲಸಕ್ಕೆ ನೀಡುವಿರಿ, ತವರು ಮನೆಯ ಆಸ್ತಿಯ ವಿವಾದದಿಂದ ಮಾನಸಿಕ ಒತ್ತಡ; ಸ್ತ್ರೀ ವಾರ ಭವಿಷ್ಯ

ಸ್ತ್ರೀ ವಾರ ಭವಿಷ್ಯ: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (Weekly Women horoscope in Kannada).

ಮೇಷ

ಅವಿವಾಹಿತರಿಗೆ ಗೌರವಾನ್ವಿತ ಮನೆತನದ ಸಂಗಾತಿ ದೊರೆಯುತ್ತಾರೆ. ಜೀವನದಲ್ಲಿ ಎದುರಾಗುವ ಯಾವುದೇ ಸಮಸ್ಯೆಗಳಿಗೂ ಧೈರ್ಯ ಗೆಡುವುದಿಲ್ಲ. ನಿಮ್ಮ ಸಹಾಯದಿಂದ ಸ್ವಂತ ಮನೆಯ ಕನಸು ನನಸಾಗಲಿದೆ. ನಿರುದ್ಯೋಗಿಗಳಿಗೆ ಖ್ಯಾತ ಸಂಸ್ಥೆಯಲ್ಲಿ ಉದ್ಯೋಗ ಲಭಿಸುತ್ತದೆ. ಕುಟುಂಬದಲ್ಲಿನ ಹಣಕಾಸಿನ ಕೊರತೆ ನಿವಾರಣೆಯಾಗುತ್ತದೆ. ನಿಮ್ಮ ಪ್ರಯತ್ನದಿಂದ ಕೆಲಸ ಕಾರ್ಯಗಳು ಯಶಸ್ವಿಯಾಗಿ ನಿರೀಕ್ಷಿತ ಫಲಗಳು ದೊರೆಯುತ್ತವೆ. ದಾಂಪತ್ಯ ಜೀವನವು ಸುಖ ಸಂತೋಷಗಳಿಂದ ಕೂಡಿರುತ್ತದೆ. ತವರು ಮನೆಯಲ್ಲಿ ಕೌಟುಂಬಿಕ ಕಲಹವನ್ನು ನಿಲ್ಲಿಸುವಲ್ಲಿ ಯಶಸ್ವಿಯಾಗುವಿರಿ. ಸತಿ ಮತ್ತು ಮಕ್ಕಳ ಜೊತೆಯಲ್ಲಿ ಕಿರು ಪ್ರವಾಸ ಕೈಗೊಳ್ಳುವಿರಿ. ನೀವು ಕಲಿತ ವಿದ್ಯೆಯಿಂದಲೇ ಹಣ ಸಂಪಾದಿಸುವಿರಿ.

ವೃಷಭ

ಕುಟುಂಬದ ಹಣಕಾಸಿನ ಜವಾಬ್ದಾರಿ ನಿಮ್ಮದಾಗುತ್ತದೆ. ಬೇಸರ ಕಳೆಯಲು ಆರಂಭಿಸಿದ ವ್ಯಾಪಾರವೊಂದು ಕುಟುಂಬಕ್ಕೆ ಆಧಾರವಾಗಲಿದೆ. ಸೋದರಿಯ ವಿವಾಹಕ್ಕೆ ಹಣದ ಸಹಾಯ ಮಾಡುವಿರಿ. ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಧೈರ್ಯದಿಂದ ಎದುರಿಸಿ ಗೆಲ್ಲುವಿರಿ. ಯಾವುದೇ ಒತ್ತಡಕ್ಕೆ ಬಳಗಾಗದೆ ಒಮ್ಮೆ ತೆಗೆದುಕೊಂಡ ನಿರ್ಧಾರಗಳಿಗೆ ಬದ್ಧರಾಗುವಿರಿ. ಬಂದು ಬಳಗದವರಿಂದ ದೂರ ಉಳಿಯಲು ಪ್ರಯತ್ನಿಸುವಿರಿ. ಗರ್ಭಿಣಿಯರು ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ನಿಮಗೆ ಆತ್ಮೀಯರಿಂದ ಕೆಲಸ ಕಾರ್ಯಗಳಲ್ಲಿ ಸಹಾಯ ದೊರೆಯುತ್ತದೆ. ಆರೋಗ್ಯದಲ್ಲಿ ಅಲ್ಪಮಟ್ಟಿನ ತೊಂದರೆ ಕಂಡು ಬರುತ್ತದೆ. ಆದರೆ ಶಾಂತಿಯುತ ಮನಸ್ಸು ಮತ್ತು ಉತ್ತಮ ಚಿಕಿತ್ಸೆಯಿಂದ ತೊಂದರೆಯಿಂದ ಪಾರಾಗುವಿರಿ.

ಮಿಥುನ

ಪತಿಯ ಸಹಕಾರ ದೊರೆಯುವ ಕಾರಣ ಜೀವನದಲ್ಲಿ ಯಾವುದೇ ತೊಂದರೆಗಳು ಉಂಟಾಗುವುದಿಲ್ಲ. ಆತಂಕದ ಪರಿಸ್ಥಿತಿಯಲ್ಲಿ ಬುದ್ಧಿವಂತಿಕೆಯ ತೀರ್ಮಾನಗಳನ್ನು ತೆಗೆದುಕೊಳ್ಳಬಲ್ಲಿರಿ. ಕೂಡಿಟ್ಟ ಹಣವನ್ನು ಪತಿಗೆ ನೀಡಬೇಕಾಗಿ ಬರುತ್ತದೆ. ಮಕ್ಕಳ ಸಲುವಾಗಿ ಹಣ ಖರ್ಚು ಮಾಡುವಿರಿ. ಅನಾವಶ್ಯಕವಾಗಿ ಮಾನಸಿಕ ಒತ್ತಡಕ್ಕೆ ಒಳಗಾಗುವಿರಿ. ಬೇಸರ ಕಳೆಯಲು ಪತಿಯ ಜೊತೆ ಮನರಂಜನಾ ಕೂಟಕ್ಕೆ ತೆರಳುವಿರಿ. ಹೆಣ್ಣು ಮಕ್ಕಳಿಂದ ನಿಮಗೆ ಹಣದ ಸಹಾಯ ದೊರೆಯುತ್ತದೆ. ಸಮಸ್ಯೆಗಳು ಎದುರಾದಾಗ ಅಂಜದೆ ವಿವೇಕದಿಂದ ನಡೆದುಕೊಳ್ಳುವಿರಿ. ಉದ್ಯೋಗಸ್ಥರಿಗೆ ಕೆಲಸ ಕಾರ್ಯಗಳಲ್ಲಿ ಅನಾವಶ್ಯಕವಾದ ವಾದ ವಿವಾದ ಎದುರಾಗುತ್ತದೆ. ಮನದ ನೋವನ್ನು ನುಂಗಿ ನಗುನಗುತ್ತಾ ಬಾಳುವಿರಿ.

ಕಟಕ

ಪತಿ ಮತ್ತು ಮಕ್ಕಳ ಜೊತೆ ದೀರ್ಘಕಾಲದ ಕಾಲದ ಪ್ರವಾಸ ಮಾಡುವಿರಿ. ಉದ್ಯೋಗಿಗಳಿಗೆ ಅನಾವಶ್ಯಕ ಸಮಸ್ಯೆಗಳು ಎದುರಾಗಲಿವೆ. ಈ ಕಾರಣದಿಂದ ಉದ್ಯೋಗ ಬದಲಿಸುವ ನಿರ್ಧಾರ ಮಾಡುವಿರಿ. ಹಣಕಾಸಿನ ಕೊರತೆ ಇರುತ್ತದೆ. ಸೋದರದಿಂದ ಹಣಕಾಸಿನ ಸಹಾಯ ದೊರೆಯುತ್ತದೆ. ಮಾನಸಿಕ ಒತ್ತಡದಿಂದ ಬಳಲುವಿರಿ. ಮಾಡುವ ಕೆಲಸದಲ್ಲಿ ತೊಂದರೆ ಇರುತ್ತದೆ. ಸಾರಿಗೆ ಸಂಚಾರ ಕಲ್ಪಿಸುವ ಸಂಸ್ಥೆಯಿಂದ ಲಾಭವಿರುತ್ತದೆ. ಆರೋಗ್ಯದ ಬಗ್ಗೆ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಆತ್ಮೀಯ ಸ್ನೇಹಿತರ ಭೇಟಿಯಿಂದ ಖುಷಿಯಾಗುವಿರಿ. ಕುಟುಂಬದ ಹಿರಿಯರಿಂದ ಹಣಕಾಸಿನ ನೆರವು ದೊರೆಯುತ್ತದೆ.

ಸಿಂಹ

ಅಧಿಕಾರದ ಆಸೆ ಇರುತ್ತದೆ. ಮಕ್ಕಳಿಗೆ ಸಂಬಂಧಪಟ್ಟ ಕೆಲಸ ಕಾರ್ಯಗಳು ಸುಗಮವಾಗಿ ನಡೆಯಲಿವೆ. ಕುಟುಂಬದಲ್ಲಿನ ಧಾರ್ಮಿಕ ಕಾರ್ಯಗಳು ನಿಮ್ಮ ಸಹಕಾರದಿಂದ ನೆರವೇರುತ್ತದೆ. ಒಮ್ಮೆ ತೆಗೆದುಕೊಂಡ ತೀರ್ಮಾನಗಳನ್ನು ಬದಲಿಸುವುದಿಲ್ಲ. ಸಮಾಜದಲ್ಲಿ ಉನ್ನತ ಮಟ್ಟದ ಗೌರವ ದೊರೆಯುತ್ತದೆ. ಮೃದುವಾದ ನುಡಿಯಿಂದ ಎಲ್ಲರ ಮನಸ್ಸನ್ನು ಗೆಲ್ಲುವಿರಿ. ನೋಡಲು ಶಾಂತರಾದಂತೆ ಕಂಡರೂ ಮನಸ್ಸಿನಲ್ಲಿ ಕೋಪ ಇರುತ್ತದೆ. ಸಮಯ ಸಾಧಿಸಿ ವಿರೋಧಿಗಳ ವಿರುದ್ಧ ಜಯ ಗಳಿಸುವಿರಿ. ಹಣಕಾಸಿನ ತೊಂದರೆ ಇರುವುದಿಲ್ಲ. ತಂದೆಯವರಿಂದ ದೊಡ್ಡ ಮಟ್ಟದ ಉಡುಗೊರೆ ದೊರೆಯುತ್ತದೆ. ಪತಿಯು ದುಬಾರಿ ಬೆಲೆಯ ಒಡವೆ ವಸ್ತ್ರಗಳನ್ನು ನೀಡಲಿದ್ದಾರೆ. ದಾಂಪತ್ಯ ಜೀವನ ಸುಖ ಸಂತೋಷದಿಂದ ಕೂಡಿರುತ್ತದೆ.

ಕನ್ಯಾ

ಕೆಲಸ ಕಾರ್ಯಗಳನ್ನು ನಿಷ್ಠೆಯಿಂದ ಮಾಡಬೇಕಾದ ಅವಶ್ಯಕತೆ ಇದೆ. ಪ್ರತಿಯೊಂದು ವಿಚಾರಗಳಿಗೂ ಪತಿಯನ್ನು ಟೀಕಿಸುವಿರಿ. ಸೋದರಿಯರ ಜೊತೆಯಲ್ಲಿ ಹಣಕಾಸಿನ ವಿಚಾರದಲ್ಲಿ ಮನಸ್ತಾಪ ಉಂಟಾಗುತ್ತದೆ. ನಿಮ್ಮ ನಿರೀಕ್ಷೆಯಂತೆ ಎಲ್ಲಾ ಕೆಲಸ ಕಾರ್ಯಗಳು ನಡೆಯಲಿವೆ. ನಿಮ್ಮ ಮಾತಿಗೆ ಕುಟುಂಬದಲ್ಲಿ ಗೌರವ ಲಭಿಸುತ್ತದೆ. ಮಕ್ಕಳ ವಿಚಾರದಲ್ಲಿ ನಿಮ್ಮ ತೀರ್ಮಾನವೇ ಅಂತಿಮವಾಗುತ್ತದೆ. ಅವಿವಾಹಿತರಿಗೆ ವಿವಾಹ ನಿಶ್ಚಯವಾಗುತ್ತದೆ. ತವರು ಮನೆಯ ಆಸ್ತಿಯ ವಿವಾದದಿಂದ ಮಾನಸಿಕ ಒತ್ತಡಕ್ಕೆ ಒಳಗಾಗುವಿರಿ. ಆರೋಗ್ಯದಲ್ಲಿ ಏರಿಳಿತ ಕಂಡು ಬರುತ್ತದೆ. ವಿದ್ಯಾರ್ಥಿಗಳು ಕಲಿಕೆಯ ಅವಧಿಯಲ್ಲಿಯೇ ಖ್ಯಾತ ಸಂಸ್ಥೆಯಲ್ಲಿ ಉದ್ಯೋಗ ಗಳಿಸುತ್ತಾರೆ.

ತುಲಾ

ನಿಮ್ಮಲ್ಲಿನ ಕ್ರಿಯಾಶೀಲ ಗುಣವು ಎಲ್ಲರ ಗಮನ ಸೆಳೆಯುತ್ತದೆ. ಸಂಗಾತಿಯ ಒಳ್ಳೆಯತನ ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸಲು ಕಾರಣವಾಗುತ್ತದೆ. ನಿಮ್ಮ ಬಳಿ ಇರುವ ಹಣವನ್ನು ಸುಲಭವಾಗಿ ಖರ್ಚು ಮಾಡುವುದಿಲ್ಲ. ಸ್ವಂತ ಮನೆ ಕೊಳ್ಳುವ ವಿಚಾರದಲ್ಲಿ ಪತಿಗೆ ಹಣದ ಸಹಾಯ ಮಾಡುವಿರಿ. ನಿಮಗೆ ಅನುಕೂಲಕರವಾಗುವಂತೆ ಪರಿಸ್ಥಿತಿಯನ್ನು ಬದಲಾಯಿಸಬಲ್ಲಿರಿ. ಹಣಕಾಸಿನ ಬಗ್ಗೆ ಅತಿಯಾದ ಆಸೆ ಅಥವಾ ವ್ಯಾಮೋಹ ಇರುವುದಿಲ್ಲ. ಮಕ್ಕಳ ವಿವಾಹ ಕಾರ್ಯದ ಜವಾಬ್ದಾರಿ ನಿಮ್ಮದಾಗುತ್ತದೆ. ಬೇರೆಯವರ ಹಣಕಾಸಿನ ವ್ಯವಹಾರದಲ್ಲಿ ಸಾಕ್ಷಿದಾರರಾಗದಿರಿ. ಸಾಲದ ವ್ಯವಹಾರದಲ್ಲಿ ವಿವಾದ ಎದುರಿಸಬೇಕಾಗುತ್ತದೆ.

ವೃಶ್ಚಿಕ

ದಿನನಿತ್ಯದ ಜೀವನದಲ್ಲಿ ಅನಿರೀಕ್ಷಿತವಾದ ಧನಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ನಿಮ್ಮ ಸ್ನೇಹಿತರು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಾರೆ. ನಿಮ್ಮಲ್ಲಿ ಹಟದ ಸ್ವಭಾವ ಇರುತ್ತದೆ. ಸುಲಭವಾಗಿ ಯಾರ ಮಾತನ್ನೂ ಒಪ್ಪುವುದಿಲ್ಲ. ಪತಿಯ ಜೊತೆಯಲ್ಲಿ ಉತ್ತಮ ಅನುಬಂಧ ಇರುತ್ತದೆ. ಸ್ವಂತ ಭೂಮಿ ಅಥವಾ ಮನೆಯನ್ನು ಕೊಳ್ಳಲು ಪತಿಗೆ ಸಹಾಯ ಮಾಡುವಿರಿ. ನೀವು ತೆಗೆದುಕೊಳ್ಳುವ ತೀರ್ಮಾನಗಳು ಕುಟುಂಬದ ಹಾದಿಯನ್ನು ಬದಲಿಸುತ್ತದೆ. ಮಕ್ಕಳ ಉತ್ತಮ ಭವಿಷ್ಯ ರೂಪಿಸುವಲ್ಲಿ ಯಶಸ್ವಿಯಾಗುವಿರಿ. ಬಿಡುವಿಲ್ಲದ ಕೆಲಸ ಕಾರ್ಯಗಳ ಕಾರಣ ಆರೋಗ್ಯದಲ್ಲಿ ತೊಂದರೆ ಉಂಟಾಗುತ್ತದೆ. ಉದ್ಯೋಗಿಗಳಿಗೆ ಉನ್ನತ ಅಧಿಕಾರಿಯಾಗಿ ಬಡ್ತಿ ದೊರೆಯುತ್ತದೆ.

ಧನಸ್ಸು

ನಿಮ್ಮ ಆತಂಕದ ಮನೋಭಾವನೆ ಕೆಲಸ ಕಾರ್ಯಗಳನ್ನು ಅಪೂರ್ಣಗೊಳಿಸುತ್ತವೆ. ದೃಢವಾದ ನಿರ್ಧಾರಗಳನ್ನು ತೆಗೆದುಕೊಂಡಲ್ಲಿ ಹಣಕಾಸಿನ ತೊಂದರೆ ದೂರವಾಗುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ನಿಮ್ಮ ಪ್ರಯತ್ನಕ್ಕೆ ತಕ್ಕಂತೆ ವರಮಾನವು ದೊರೆಯುತ್ತದೆ. ಒಂದೇ ರೀತಿಯ ಜೀವನ ಅಥವಾ ಕೆಲಸ ಕಾರ್ಯಗಳನ್ನು ಇಷ್ಟಪಡುವುದಿಲ್ಲ. ಉದ್ಯೋಗವನ್ನು ಬದಲಿಸುವ ಸೂಚನೆಗಳಿವೆ. ಮಕ್ಕಳ ಬಗ್ಗೆ ವಿಶೇಷ ಪ್ರೀತಿ ತೋರುವಿರಿ. ವಿದೇಶದಲ್ಲಿ ಉದ್ಯೋಗ ಲಭಿಸುವ ಸಾಧ್ಯತೆಗಳಿವೆ. ಬೇಗನೆ ಕೋಪಗೊಂಡರೂ ತಪ್ಪು ನಿರ್ಧಾರ ತೆಗೆದುಕೊಳ್ಳುವುದಿಲ್ಲ. ನೆರೆಯವರೊಂದಿಗೆ ಉತ್ತಮ ಬಾಂಧವ್ಯ ಇರುತ್ತದೆ. ಕಷ್ಟದಲ್ಲಿ ಇದ್ದವರಿಗೆ ಸಹಾಯ ಮಾಡುವ ಸಲುವಾಗಿ ಸಂಘ ಸಂಸ್ಥೆಯನ್ನು ಸ್ಥಾಪಿಸುವ ಸಾಧ್ಯತೆಗಳಿವೆ.

ಮಕರ

ನಿಮ್ಮ ನೆರವಿನಿಂದಾಗಿ ಕುಟುಂಬದ ಕೆಲಸ ಕಾರ್ಯಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ಮಕ್ಕಳ ವಿಚಾರದಲ್ಲಿ ಯಾವುದೇ ರೀತಿಯ ಯೋಚನೆ ಬೇಡ. ಮಕ್ಕಳಿಗೆ ಉತ್ತಮ ಆದಾಯ ದೊರೆಯಲಿದೆ. ನಿಮ್ಮ ಮನಸ್ಸು ಎಷ್ಟೇ ಒಳ್ಳೆಯದನ್ನು ದುಡುಕಿನಿಂದ ಮಾತನಾಡುವಿರಿ. ಆತ್ಮೀಯರ ಸಹಾಯ ನಿಮಗೆ ದೊರೆಯುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಕ್ರಮೇಣವಾಗಿ ಆರ್ಥಿಕ ಪರಿಸ್ಥಿತಿಯಲ್ಲಿ ಪ್ರಗತಿ ಕಂಡುಬರುತ್ತದೆ. ಯಾರ ಮನಸ್ಸನ್ನು ನೋಯಿಸದ ಕಾರಣ ಎಲ್ಲರ ಸಹಾಯ ಸಹಕಾರ ನಿಮಗೆ ದೊರೆಯುತ್ತದೆ. ನಿಮ್ಮ ಮೇಲೆ ತಂದೆಯವರಿಗೆ ಇದ್ದ ಬೇಸರವೂ ಕ್ರಮೇಣವಾಗಿ ದೂರವಾಗುತ್ತದೆ.

ಕುಂಭ

ಆಹಾರ ಕ್ರಮದಲ್ಲಿ ಬದಲಾವಣೆ ತಂದಲ್ಲಿ ಆರೋಗ್ಯವು ಸುಧಾರಿಸುತ್ತದೆ. ದಿನ ನಿತ್ಯದ ಕೆಲಸದಲ್ಲಿ ಪತಿಯ ಸಹಾಯ ಇರುತ್ತದೆ. ಮಿತಿಮೀರಿದ ಖರ್ಚು ವೆಚ್ಚಗಳು ಬೇಸರ ಉಂಟುಮಾಡಲಿದೆ. ಅಧಿಕಾರಿಗಳಾದಲ್ಲಿ ಸಹೋದ್ಯೋಗಿಗಳನ್ನು ನಿಯಂತ್ರಿಸಲು ವಿಫಲರಾಗುವಿರಿ. ನಿಮ್ಮ ಮಕ್ಕಳಿಗೆ ಅಜೀರ್ಣದ ತೊಂದರೆ ಇರುತ್ತದೆ. ಉತ್ತಮ ಆರೋಗ್ಯ ಗಳಿಸಲು ಯೋಗ ಪ್ರಾಣಾಯಾಮ ಆರಂಭಿಸುವಿರಿ. ವಿದ್ಯಾರ್ಥಿಗಳಿಗೆ ವಿದೇಶದಲ್ಲಿಅಧ್ಯಯನ ನಡೆಸುವ ಅವಕಾಶ ದೊರೆಯುತ್ತದೆ. ಕುಟುಂಬದಲ್ಲಿನ ಒಗ್ಗಟ್ಟು ಕಷ್ಟಗಳಿಂದ ಪಾರು ಮಾಡುತ್ತದೆ. ಧಾರ್ಮಿಕ ಕೇಂದ್ರಗಳ ಆಡಳಿತದ ಚುಕ್ಕಾಣಿ ದೊರೆಯುತ್ತದೆ. ನಿಮ್ಮ ಸೋದರರ ಜೊತೆ ನಿಮ್ಮ ಪತಿಗೆ ಮನಸ್ತಾಪ ಉಂಟಾಗಲಿದೆ.

ಮೀನ

ಒಳ್ಳೆಯ ಮನಸ್ಸಿರುವ ಕಾರಣ ನಿಮ್ಮ ಆಶೋತ್ತರಗಳು ಈಡೇರುತ್ತವೆ. ನಿಮ್ಮ ಪ್ರಯತ್ನದಿಂದ ಕುಟುಂಬದ ವರಮಾನ ಹೆಚ್ಚುತ್ತದೆ. ಉದ್ಯೋಗದಲ್ಲಿ ತೊಂದರೆ ಉಂಟಾಗದು. ಸಮಯ ಸಂದರ್ಭಕ್ಕೆ ಅನುಗುಣವಾಗಿ ನಡೆವ ಕಾರಣ ಕೆಲಸ ಕಾರ್ಯದಲ್ಲಿ ಯಶಸ್ಸು ದೊರೆಯುತ್ತದೆ. ಕುಟುಂಬದಲ್ಲಿ ನೆಮ್ಮದಿಯ ಕೊರತೆ ಇರುತ್ತದೆ. ವಿದ್ಯಾರ್ಥಿಗಳಿಗೆ ಶುಭಫಲಗಳು ಲಭಿಸುತ್ತವೆ. ಪಾಲುದಾರಿಕೆ ವ್ಯಾಪಾರ ವ್ಯವಹಾರಗಳಲ್ಲಿ ಲಾಭವಿರುತ್ತದೆ. ಇಷ್ಟವಾಗುವ ಉದ್ಯೋಗವನ್ನು ಮಾತ್ರ ಆಯ್ಕೆ ಮಾಡುವಿರಿ. ಖರ್ಚು ವೆಚ್ಚಗಳನ್ನು ಕಡಿಮೆ ಮಾಡುವಿರಿ. ತವರಿನಿಂದ ಶುಭ ವರ್ತಮಾನವೊಂದು ಬರಲಿದೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.