ಭೀಷ್ಮ ಪ್ರತಿಜ್ಞೆ ಎಂದರೇನು, ತನ್ನ ತಂದೆಯ ಆಸೆಯನ್ನು ನೆರವೇರಿಸಲು ದೇವವ್ರತ ಈ ರೀತಿ ಪ್ರತಿಜ್ಞೆ ಮಾಡಲು ಕಾರಣವೇನು?-what is bhishma pratigna why devavrat make this pratigna to fulfil his father shantanu wishes mahabharata story ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಭೀಷ್ಮ ಪ್ರತಿಜ್ಞೆ ಎಂದರೇನು, ತನ್ನ ತಂದೆಯ ಆಸೆಯನ್ನು ನೆರವೇರಿಸಲು ದೇವವ್ರತ ಈ ರೀತಿ ಪ್ರತಿಜ್ಞೆ ಮಾಡಲು ಕಾರಣವೇನು?

ಭೀಷ್ಮ ಪ್ರತಿಜ್ಞೆ ಎಂದರೇನು, ತನ್ನ ತಂದೆಯ ಆಸೆಯನ್ನು ನೆರವೇರಿಸಲು ದೇವವ್ರತ ಈ ರೀತಿ ಪ್ರತಿಜ್ಞೆ ಮಾಡಲು ಕಾರಣವೇನು?

ಮಹಾಭಾರತದಲ್ಲಿ ಭೀಷ್ಮ ಪ್ರತಿಜ್ಞೆಗೆ ಬಹಳ ಹೆಸರಿದೆ. ಭೀಷ್ಮ ಯಾರ ಮಗ? ಭೀಷ್ಮನ ಮೊದಲ ಹೆಸರೇನು? ತಾನು ಕೊನೆಯವರೆಗೂ ಬ್ರಹ್ಮಚಾರಿಯಾಗೇ ಉಳಿಯುವೆ ಎಂದು ಭೀಷ್ಮ ಪ್ರತಿಜ್ಞೆ ಮಾಡಿದ್ದು ಯಾರಿಗಾಗಿ? ಇನ್ನಿತರ ವಿಚಾರಗಳ ಬಗ್ಗೆ ಇಲ್ಲಿದೆ ಮಾಹಿತಿ. (ಎಚ್‌. ಸತೀಶ್, ಜ್ಯೋತಿಷಿ)

ಭೀಷ್ಮ ಪ್ರತಿಜ್ಞೆ ಎಂದರೇನು, ತನ್ನ ತಂದೆಯ ಆಸೆಯನ್ನು ನೆರವೇರಿಸಲು ದೇವವ್ರತ ಈ ರೀತಿ ಪ್ರತಿಜ್ಞೆ ಮಾಡಲು ಕಾರಣವೇನು?
ಭೀಷ್ಮ ಪ್ರತಿಜ್ಞೆ ಎಂದರೇನು, ತನ್ನ ತಂದೆಯ ಆಸೆಯನ್ನು ನೆರವೇರಿಸಲು ದೇವವ್ರತ ಈ ರೀತಿ ಪ್ರತಿಜ್ಞೆ ಮಾಡಲು ಕಾರಣವೇನು?

ಯಾರಾದರೂ ಯಾವುದಾದರೂ ವಿಚಾರಕ್ಕೆ ಸಂಬಂಧಿಸಿದಂತೆ ಭರವಸೆ ನೀಡಿದಾಗ, ವಾಗ್ದಾನ ಮಾಡಿದಾಗ ಭೀಷ್ಮ ಪ್ರತಿಜ್ಞೆ ಎಂಬ ಪದ ಬಳಸುತ್ತವೆ. ಹಾಗಾದರೆ ಭೀಷ್ಮ ಪ್ರತಿಜ್ಞೆ ಎಂದರೇನು? ಭೀಷ್ಮನಿಗೆ ಇರುವ ಬೇರೆ ಹೆಸರುಗಳು ಯಾವುವು? ಭೀಷ್ಮ ಪ್ರತಿಜ್ಞೆ ಎಂಬ ಪದವನ್ನು ಬಳಸುವುದು ಏಕೆ? ಪುರಾಣಗಳಲ್ಲಿ ಇದರ ಬಗ್ಗೆ ಏನು ಹೇಳಲಾಗಿದೆ? ಇಲ್ಲಿದೆ ವಿವರ.

ಶಂತನು ಗಂಗೆಯರ ಪುತ್ರ ಭೀಷ್ಮ

ಭೀಷ್ಮ ಮಹಾಭಾರತದಲ್ಲಿ ಬರುವ ಒಂದು ಪ್ರಮುಖ ಪಾತ್ರ. ದೇವವ್ರತ, ಸತ್ಯವ್ರತ ಎಂದೂ ಕರೆಯಲಾಗುತ್ತದೆ. ಶಂತನು ಹಾಗೂ ಗಂಗೆಗೆ ಜನಿಸಿದ ಭೀಷ್ಮನು ಸಕಲ ವಿದ್ಯಾಪಾರಂಗತನಾಗಿ ಪರಶುರಾಮ, ವಶಿಷ್ಟ, ಬೃಹಸ್ಪತಿ ಮತ್ತು ಸನತ್ ಕುಮಾರನಿಗೆ ಸಮನಾಗಿ ಬೆಳೆಯುತ್ತಾನೆ. ಸಂಪ್ರದಾಯದಂತೆ ಶಂತನು ಭೀಷ್ಮನನ್ನು ಯುವರಾಜನನ್ನಾಗಿ ಪಟ್ಟಾಭಿಷೇಕ ಮಾಡುತ್ತಾನೆ. ಒಂದು ದಿನ ಶಂತನು ಯಮುನಾ ನದಿಯ ಹತ್ತಿರ ಬೇಟೆಗಾಗಿ ತೆರಳಿರುತ್ತಾನೆ. ಅಲ್ಲಿ ಒಬ್ಬ ಸ್ತ್ರೀಯನ್ನು ಕಾಣುತ್ತಾನೆ. ಅವಳ ರೂಪಕ್ಕೆ ಮನ ಸೋಲುತ್ತಾನೆ. ಅವಳು ದಶರಾಜನ ಮಗಳಾದ ಸತ್ಯವತಿ ಎಂದು ತಿಳಿದು ಬರುತ್ತದೆ. ಯುವತಿಯ ಪೂರ್ಣ ವಿಚಾರ ತಿಳಿದ ಶಂತನು, ಮಹಾರಾಜನನ್ನು ಭೇಟಿ ಮಾಡಿ, ನಿನ್ನ ಮಗಳನ್ನು ನನಗೆ ಕೊಟ್ಟು ವಿವಾಹ ಮಾಡಿಕೊಳ್ಳಬೇಕೆಂದು ಆಗ್ರಹಿಸುತ್ತಾನೆ. ಈ ವಿವಾಹಕ್ಕೆ ಒಪ್ಪಿದ ಮಹಾರಾಜನು ತನ್ನ ಮನದ ಕೋರಿಕೆಯೊಂದನ್ನು ಪೂರೈಸಬೇಕೆಂದು ಹೇಳುತ್ತಾನೆ.

ನಿನ್ನ ನಂತರ ನನ್ನ ಮಗಳ ಗರ್ಭದಲ್ಲಿ ಹುಟ್ಟುವ ಮಗನೇ ಮುಂದಿನ ರಾಜನಾಗಬೇಕು ಎಂದು ಮಹಾರಾಜ ಮನದ ಆಸೆಯನ್ನು ಹೇಳುತ್ತಾನೆ. ಆ ಕ್ಷಣದಲ್ಲಿ ಶಂತನು ವಿಚಲಿತನಾಗುತ್ತಾನೆ. ಕಾರಣವೇನೆಂದರೆ ಪ್ರತಾಪ ಶಾಲಿಯಾದ ದೇವವ್ರತನನ್ನು ಯುವರಾಜನನ್ನಾಗಿ ಮಾಡಿರುತ್ತಾನೆ. ತನ್ನ ನಂತರ ತನ್ನ ಮೊದಲ ಮಗನಾದ ದೇವವ್ರತನಿಗೆ ಪಟ್ಟಾಭಿಷೇಕ ಮಾಡುವ ನಿಷ್ಠೆವನ್ನು ಮಾಡಿರುತ್ತಾನೆ. ಇದರಿಂದಾಗಿ ಮಾನಸಿಕ ಒತ್ತಡದಿಂದ ಚಿಂತಾಮಗ್ನನಾಗುತ್ತಾನೆ. ಶಂತನಿಗೆ ಸತ್ಯವತಿಯನ್ನು ಮರೆಯಲು ಆಗುವದೇ ಇಲ್ಲ. ದಶರಾಜನ ಕೋರಿಕೆಯನ್ನು ತೀರಿಸಲಾಗದೆ, ಸತ್ಯವತಿಯನ್ನು ಮರೆಯಲಾಗದೆ, ದೇವವ್ರತನಿಗೆ ಮೋಸ ಮಾಡಲಾಗದೆ ಮಾನಸಿಕ ಒತ್ತಡದಿಂದ ಚಿಂತೆಗೀಡಾಗುತ್ತಾನೆ.

ತಂದೆಗಾಗಿ ತಾನು ಬ್ರಹ್ಮಚಾರಿಯಾಗಿ ಉಳಿದ ಭೀಷ್ಮ

ತಂದೆಯು ಈ ರೀತಿ ಚಿಂತಾಕ್ರಾಂತನಾಗಿ ಕುಳಿತಿರುವುದನ್ನು ನೋಡಿದ ದೇವವ್ರತನ ಮನಸ್ಸು ಕರಗುತ್ತದೆ. ಕೊನೆಗೆ ತಂದೆಯ ಬಳಿಗೆ ತೆರಳಿ ಯಾವುದೇ ಕಾರಣಕ್ಕೂ ಚಿಂತೆ ಮಾಡದಿರಿ. ಯಾವುದೇ ರೀತಿಯ ದುಃಖ ಅಥವಾ ವ್ಯಥೆ ನಿಮಗೆ ಸರಿ ಹೊಂದುವುದಿಲ್ಲ. ಈ ನಿಮ್ಮ ಯೋಚನೆಗೆ ಇರುವ ಕಾರಣವನ್ನು ತಿಳಿಸಿ ಖಂಡಿತವಾಗಿಯೂ ನಿಮ್ಮ ಸಮಸ್ಯೆಗೆ ಸೂಕ್ತ ಪರಿಹಾರವನ್ನು ಕಂಡು ಹಿಡಿಯಲು ಪ್ರಯತ್ನಿಸುತ್ತೇನೆ ಎಂದು ಹೇಳುತ್ತಾನೆ. ಆಗ ಶಂತನು ತನ್ನ ಮಗನ ಈ ಮಾತುಗಳನ್ನು ಕೇಳಿ ಸಂತೋಷಗೊಳ್ಳುತ್ತಾನೆ. ಆತನಲ್ಲಿ ಆತ್ಮವಿಶ್ವಾಸವು ಹೆಚ್ಚಿ ಹೊಸ ನಿರೀಕ್ಷೆಗಳು ಮೂಡುತ್ತವೆ. ಮಗನನ್ನು ಕುರಿತು ಶಂತನು ನನಗೆ ನಿನ್ನ ಮೇಲೆ ಸಂಪೂರ್ಣ ವಿಶ್ವಾಸವಿದೆ. ನಿನಗೆ ನನ್ನ ಮೇಲೆ ಇರುವ ಪ್ರೀತಿ ಮತ್ತು ಗೌರವದ ಆಳವನ್ನು ಅಳೆಯಬಲ್ಲೆ. ಆದರೆ ದುರುಪಯೋಗವನ್ನು ನಾನು ಮಾಡಿಕೊಳ್ಳಲಾರೆ. ನಮ್ಮ ಈ ಮನೆತನಕ್ಕೆ ನೀನೇ ಹಿರಿಯ. ನೀನೊಬ್ಬನೇ ಮಗ. ನೀನೊಬ್ಬ ನನ್ನೊಡನೆ ಇದ್ದಲ್ಲಿ ನನಗೆ ನೂರಾನೆಯ ಬಲ ಬರುತ್ತದೆ. ಯಾವ ಕಾಲದಲ್ಲಿ ಯಾವ ರೀತಿಯ ಅಪಾಯ ಬರುವುದು ಯಾರಿಗೂ ತಿಳಿಯದು.

ಒಂದು ವೇಳೆ ನಿನಗೆ ತೊಂದರೆ ಉಂಟಾದರೆ ನಿನ್ನ ಬದಲಾದ ವ್ಯಕ್ತಿ ಯಾರು? ಎಂಬ ವ್ಯಥೆ ಇದೆ ಎಂದು ಹೇಳುತ್ತಾನೆ. ನಿನ್ನ ಅನುಪಸ್ಥಿತಿಯಲ್ಲಿ ಇನ್ನಾರಿಗೆ ಪಟ್ಟಾಭಿಷೇಕ ಮಾಡಬೇಕು ಎಂದು ಕೇಳುತ್ತಾನೆ. ಆದ್ದರಿಂದ ನಾನು ಇನ್ನೊಂದು ಮದುವೆ ಆಗಬೇಕು. ಸತ್ಯವತಿ ಎಂಬ ಹೆಸರಿನ ಕನ್ಯೆಯೊಬ್ಬಳು ನನ್ನ ಮನಸ್ಸನ್ನು ಗೆದ್ದಿದ್ದಾಳೆ ಎಂದು ಎಲ್ಲಾ ವಿಚಾರವನ್ನು ಹೇಳುತ್ತಾನೆ. ದೇವವ್ರತನು ಬೇರೆ ಯೋಚನೆ ಮಾಡದೆ ವಿವಾಹಕ್ಕೆ ಸಮ್ಮತಿ ಸೂಚಿಸುವಂತೆ ತಿಳಿಸುತ್ತಾನೆ. ಆಗ ಶಾಂತನು ಅಳುಕು ಮನಸ್ಸಿನಿಂದ ಮಹಾರಾಜನ ಕೋರಿಕೆಯೊಂದಿದೆ ಎನ್ನುತ್ತಾನೆ. ದೇವವ್ರತನು ಏನೆಂದು ಕೇಳಲು ಸತ್ಯವತಿಯ ಉದರದಲ್ಲಿ ಜನಿಸುವ ಮಗನಿಗೆ ರಾಜ್ಯದ ಪಟ್ಟಾಭಿಷೇಕ ಬೇಕು ಎಂಬುದೇ ಅವರ ವಾದ ಎಂದು ತಿಳಿಸುತ್ತಾನೆ. ಇದಕ್ಕೆ ಉತ್ತರಿಸಿದ ದೇವವ್ರತನು ನನಗೆ ನಿನ್ನ ಸುಖ್ಯಕಿಂತಲೂ ಬೇರೊಂದು ಇಲ್ಲ. ನನಗೆ ರಾಜನಾಗಬೇಕೆಂಬ ಆಸೆಯೂ ಇಲ್ಲ. ಆದ್ದರಿಂದ ನಾನೇ ಸ್ವತ: ಜವಾಬ್ದಾರಿ ವಹಿಸಿಕೊಂಡು ಸತ್ಯವತಿಯ ಜೊತೆ ನಿನ್ನ ವಿವಾಹ ಮಾಡಿಸುತ್ತೇನೆ ಎಂದು ಹೇಳುತ್ತಾನೆ.

ಬ್ರಹ್ಮಚಾರಿಯಾಗಿ ಉಳಿಯುವಂತೆ ಪ್ರತಿಜ್ಞೆ ಮಾಡಿದ ದೇವವ್ರತ

ಸತ್ಯವತಿಯ ತಂದೆಯನ್ನು ಭೇಟಿ ಮಾಡಿದ ದೇವವ್ರತನು ತನ್ನ ತೀರ್ಮಾನವನ್ನು ತಿಳಿಸುತ್ತಾನೆ. ಸತ್ಯವತಿಯ ತಂದೆಗೆ ದೇವವ್ರತನ ಮಾತಿನ ಮೇಲೆ ನಂಬಿಕೆ ಉಂಟಾಗುತ್ತದೆ. ಆದರೂ ಒಂದು ವೇಳೆ ನಿನ್ನ ನಂತರ ನಿನ್ನ ಮಕ್ಕಳು ನನ್ನ ಮೊಮ್ಮಗನಿಂದ ರಾಜ್ಯವನ್ನು ಕಬಳಿಸುವುದಿಲ್ಲ ಎಂಬುದರ ಖಾತ್ರಿ ಏನು ಎಂದು ಕೇಳುತ್ತಾನೆ. ಆದ್ದರಿಂದ ದೇವವ್ರತನು ವಿಚಲಿತನಾಗದೆ ನೀನು ಯಾವುದಕ್ಕೂ ಯೋಚನೆ ಮಾಡಬೇಡ. ನಾನು ವಿವಾಹವಾದಲ್ಲಿ ತಾನೆ ನನ್ನ ಮಕ್ಕಳ ಪ್ರಶ್ನೆ ಬರುವುದು. ಆದ್ದರಿಂದ ದೇವದಾನವರ ಸಾಕ್ಷಿಯಾಗಿ, ಜನ್ಮ ನೀಡಿದ ತಂದೆ ತಾಯಿಗಳ ಸಾಕ್ಷಿಯಾಗಿ, ನನಗೆ ಸಂಪೂರ್ಣ ವಿದ್ಯೆಯನ್ನು ಧಾರೆಯಾದ ಗುರುಗಳ ಪಾದಗಳ ಸಾಕ್ಷಿಯಾಗಿ ನಿಮಗೊಂದು ವಚನವನ್ನು ನೀಡುತ್ತೇನೆ.

ಎಂದಿಗೂ ನಾನು ವಿವಾಹವಾಗಲಾರೆ ಆಜನ್ಮ ಬ್ರಹ್ಮಚಾರಿಯಾಗಿ ಉಳಿವೆ ಎಂದು ಶಪಥ ಮಾಡುತ್ತಾನೆ. ಇದನ್ನು ಕೇಳಿದ ದೇವಾನುದೇವತೆಗಳು ಹೂವಿನ ಮಳೆಯನ್ನೇ ಸುರಿಸುತ್ತಾರೆ. ಇಡೀ ಭೂಲೋಕದಲ್ಲಿ ಒಂದು ಕ್ಷಣ ಪ್ರಳಯವೇ ಆದಂತಾಗುತ್ತದೆ. ಕೊನೆಯವರೆಗೂ ದೇವವ್ರತನು ಬ್ರಹ್ಮಚಾರಿಯಾಗಿಯೇ ಉಳಿಯುತ್ತಾನೆ. ಭೀಷ್ಮನೆಂಬ ಹೆಸರನ್ನೂ ಪಡೆಯುತ್ತಾನೆ. ಅಂದಿನಿಂದ ಇದನ್ನೇ ಭೀಷ್ಮ ಪ್ರತಿಜ್ಞೆ ಎಂದು ಕರೆಯಲಾಗುತ್ತದೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.