ಕನ್ನಡ ಸುದ್ದಿ  /  Astrology  /  What Is Choti Holi? What Is The History And Significance Of Holika Dahan

Choti holi or Holiak dahan: ಹೋಳಿ ದಹನ ಆಚರಣೆಯ ಹಿಂದಿನ ಇತಿಹಾಸವೇನು? ಇದರ ಮಹತ್ವದ ಬಗ್ಗೆ ನಿಮಗೆಷ್ಟು ಗೊತ್ತು?

Holiak dahan: ಹೋಳಿಯ ಹಿಂದಿನ ದಿನ ರಾತ್ರಿ ಹೋಳಿ ದಹನ ಮಾಡುತ್ತಾರೆ, ಒಣ ಎಲೆ, ಕೊಂಬೆ ಮತ್ತು ಬೆರಣಿಯಿಂದ ಹೋಲಿ ಪೈರನ್ನು ತಯಾರಿಸುತ್ತಾರೆ ಮತ್ತು ಅದನ್ನು ಸುಟ್ಟು ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ದೇವರಲ್ಲಿ ಪ್ರಾರ್ಥಿಸುತ್ತಾರೆ. ಉತ್ತರ ಭಾರತ, ನೇಪಾಳ ಮತ್ತು ದಕ್ಷಿಣ ಭಾರತದ ಕೆಲವು ಭಾಗಗಳಲ್ಲಿ ಈ ರೀತಿಯ ಆಚರಣೆ ಈಗಲೂ ಚಾಲ್ತಿಯಲ್ಲಿದೆ.

ಹೋಳಿ ದಹನ
ಹೋಳಿ ದಹನ (HT_PRINT)

ಚೋಟಿ ಹೋಳಿ, ಈ ಸಾಂಪ್ರದಾಯಿಕ ಆಚರಣೆಯನ್ನು ಹೋಲಿ ದಹನ ಅಥವಾ ಹೋಲಿಕಾ ದಹನ್‌ ಎಂದೂ ಕರೆಯುತ್ತಾರೆ. ಇದನ್ನು ನೇಪಾಳ ಹಾಗೂ ಉತ್ತರ ಭಾರತದ ಕಡೆ ಆಚರಿಸುತ್ತಾರೆ. ಹೋಳಿ ಹಬ್ಬದ ಹಿಂದಿನ ಎಲ್ಲರೂ ಒಂದೆಡೆ ಸೇರಿ ದುಷ್ಟ ಶಕ್ತಿಯ ನಾಶಕ್ಕಾಗಿ ಪ್ರಾರ್ಥಿಸಿ, ಒಳಿತಾಗಿ ದೇವರಲ್ಲಿ ಬೇಡಿಕೊಂಡು ದಹನ ಮಾಡುತ್ತಾರೆ. ಕೆಡುಕಿನ ಮೇಲೆ ಒಳಿತಿನ ವಿಜಯ ಹಾಗೂ ಭಕ್ತಿಯಿಂದ ದುಷ್ಟತನವನ್ನು ಜಯಿಸಬಹುದು ಎಂಬುದನ್ನು ಪ್ರತಿನಿಧಿಸುವ ಮೂಲಕ ಹೋಳಿ ದಹನವನ್ನು ಮಾಡಲಾಗುತ್ತದೆ. ಹೀಗೆ ಚೋಟಿ ಹೋಳಿ ಅಥವಾ ಹೋಳಿ ದಹನ ಅರ್ಥ ಸಂಕೇತವನ್ನು ಹೊಂದಿದೆ.

ಬಣ್ಣಗಳ ರಂಗನ್ನು ಎರಚಾಡುವುದು, ನಾಲಿಗೆಯ ಚಪಲವನ್ನು ತೀರಿಸುವ ಸಿಹಿ ತಿನಿಸುಗಳನ್ನು ಮೆಲ್ಲುವ ಜೊತೆಗೆ ಚೋಟಿ ಹೋಳಿ ಆಚರಣೆ ಸಂಭ್ರಮವೂ ಜೊತೆಯಾಗುತ್ತದೆ. ಹೋಳಿ ದಹನದ ಇತಿಹಾಸವೇನು, ಇದನ್ನು ಯಾವ ಕಾರಣಕ್ಕೆ ಆಚರಿಸಲಾಗುತ್ತದೆ, ಹೋಳಿ ದಹನದ ಸಮಯ, ಇದರ ಮಹತ್ವ ಈ ಎಲ್ಲದರ ಬಗ್ಗೆ ಲೇಖನದಲ್ಲಿ ತಿಳಿಸಲಾಗಿದೆ.

2023ರಲ್ಲಿ ಚೋಟಿ ಹೋಳಿ ಯಾವಾಗ?

ಚೋಟಿ ಹೋಳಿ ಅಥವಾ ಹೋಳಿ ದಹನವನ್ನು ಭಾರತದಾದ್ಯಂತ ಮಾರ್ಚ್‌ 7 ರಂದು ಆಚರಿಸಲಾಗುತ್ತದೆ. ದೃಕ್‌ ಪಂಚಾಂಗದ ಕ್ಯಾಲೆಂಡರ್‌ನ ಪ್ರಕಾರ ಪೂರ್ಣಿಮಾ ತಿಥಿಯು ಮಾರ್ಚ್‌ 6ರ ಸಂಜೆ 4.17ಕ್ಕೆ ಆರಂಭವಾಗಿ ಮಾರ್ಚ್‌ 7ರ ಸಂಜೆ 6.09ನಿಮಿಷಕ್ಕೆ ಮುಗಿಯುತ್ತದೆ.

ಹೋಳಿ ದಹನದ ಮುಹೂರ್ತ: ಸಂಜೆ 6.24 ರಿಂದ ರಾತ್ರಿ 8.51ರವರೆಗೆ

ಚೋಟಿ ಹೋಳಿಯ ಇತಿಹಾಸ

ಹೋಳಿ ದಹನದ ಹಿಂದೆ ಹಲವಾರು ಐತಿಹಾಸಿಕ ಮಹತ್ವಗಳಿವೆ. ಇದು ಹಿಂದೂ ಪುರಾಣಗಳ ಕಾಲದಿಂದಲೂ ಮಹತ್ವ ಪಡೆದಿದೆ. ಹೋಳಿ ದಹನದ ಕಥೆಯು ರಾಕ್ಷಸ ರಾಜ ಹಿರಣ್ಯ ಕುಶಿಪು ಹಾಗೂ ಅವನ ಮಗ ವಿಷ್ಣುವಿನ ಭಕ್ತ ಪ್ರಹ್ಲಾದನ ಸುತ್ತ ಕೇಂದ್ರಿಕೃತವಾಗಿದೆ. ಹಿರಣ್ಯಕಶಿಪು ಒಬ್ಬ ನಿರಂಕುಶಾಧಿಕಾರಿಯಾಗಿದ್ದು, ತನ್ನನ್ನು ತಾನು ವಿಶ್ವದಲ್ಲಿಯೇ ಅತ್ಯಂತ ಶಕ್ತಿಶಾಲಿ ಎಂದುಕೊಂಡಿದ್ದನು ಮತ್ತು ಎಲ್ಲರೂ ಅವನನ್ನು ಆರಾಧಿಸಬೇಕೆಂದು ಒತ್ತಾಯಿಸುತ್ತಿದ್ದನು. ಆದರೆ ಆತನ ಮಗ ಪ್ರಹ್ಲಾದ ಇದನ್ನು ನಿರಾಕರಿಸುತ್ತಾರೆ. ಅವನು ಭಗವಾನ್ ವಿಷ್ಣುವಿನ ಆರಾಧನೆಯನ್ನು ಮುಂದುವರೆಸುತ್ತಾನೆ, ಇದು ಅವನ ತಂದೆಯನ್ನು ಕೆರಳಿಸುತ್ತದೆ. ಅವನು ತನ್ನ ಮಗನನ್ನು ಕೊಲ್ಲುವ ಯೋಚನೆ ಮಾಡಿ, ತನ್ನ ಸಹೋದರಿ ಹೋಲಿಕಾಳ ಸಹಾಯ ಪಡೆಯುತ್ತಾನೆ. ಹೋಲಿಕಾ ಮೋಸದಿಂದ ಪ್ರಹ್ಲಾದನನ್ನು ತನ್ನೊಂದಿಗೆ ಬೆಂಕಿಯಲ್ಲಿ ಕುಳ್ಳಿರಿಸುತ್ತಾಳೆ, ಇದರಿಂದ ಅವನು ಬೆಂಕಿ ಸುಟ್ಟು ಹೋಗಬಹುದು ಎಂದು ಅವಳು ಭಾವಿಸುತ್ತಾಳೆ. ಆದರೆ ಎಲ್ಲರೂ ಆಶ್ಚರ್ಯ ಪಡುವಂತೆ ಹೋಲಿಕಾ ಬೆಂಕಿಯಲ್ಲಿ ಸುಟ್ಟು ಹೋಗುತ್ತಾಳೆ, ಪ್ರಹ್ಲಾದ ಯಾವುದೇ ಜೀವಪಾಯವಿಲ್ಲದೆ ಬೆಂಕಿಯಿಂದ ಹೊರ ಬರುತ್ತಾನೆ. ಈ ಘಟನೆಯು ದುಷ್ಟರ ವಿರುದ್ಧ ಒಳ್ಳೆಯತನ ಎಂದಿಗೂ ಗೆಲ್ಲುತ್ತದೆ ಎಂಬುದನ್ನು ಸಂಕೇತಿಸುತ್ತದೆ. ಅಲ್ಲದೆ ಅಂದಿನಿಂದ ಇದನ್ನು ಚೋಟಿ ಹೋಲಿ ಎಂದು ಆಚರಿಸಿಕೊಂಡು ಬರಲಾಗುತ್ತಿದೆ.

ಹೋಲಿ ದಹನದ ಮಹತ್ವ

ಈ ಹಬ್ಬವು ಕೆಟ್ಟತನ ಎದುರು ಒಳ್ಳೆಯತನದ ವಿಜಯವಾಗುತ್ತದೆ ಎಂಬುದನ್ನು ಸಂಕೇತಿಸುತ್ತದೆ. ದುಷ್ಟಶಕ್ತಿಯ ನಾಶ ಮಾಡುವ ಉದ್ದೇಶದಿಂದ ಬೆಂಕಿ ಉರಿಸಲಾಗುತ್ತದೆ. ಇದು ವಿಷ್ಣು ಭಕ್ತ ಪ್ರಹ್ಲಾದನನ್ನು ಕೊಲ್ಲಲ್ಲು ಯತ್ನಿಸಿದ ರಾಕ್ಷಸಿ ಹೋಲಿಕಾಳನ್ನು ದಹಿಸುವುದನ್ನು ಪ್ರತಿನಿಧಿಸುತ್ತದೆ ಎಂದು ನಂಬಲಾಗಿದೆ. ಹೋಲಿಕಾಳ ಮರಣವು ದುಷ್ಟತನ ವಿರುದ್ಧ ಒಳ್ಳೆಯತನದ ವಿಜಯ ಹಾಗೂ ಪಾಪದ ಮೇಲೆ ಸದಾಚಾರದ ವಿಜಯವನ್ನು ಸಂಕೇತಿಸುತ್ತದೆ.

ಧಾರ್ಮಿಕ, ಸಾಂಸ್ಕೃತಿಕ, ಪಾರಿಸರಿಕ

ಹೋಳಿ ದಹನವು ಚಳಿಗಾಲದ ಅಂತ್ಯ ಹಾಗೂ ವಸಂತಕಾಲದ ಆರಂಭವನ್ನೂ ಸಹ ಸೂಚಿಸುತ್ತದೆ. ಜನರೆಲ್ಲ ಒಟ್ಟಾಗಿ ಸೇರಿ ಸಂಭ್ರಮದಿಂದ ವಸಂತಕಾಲವನ್ನು ಸ್ವಾಗತಿಸುವ ಹಬ್ಬವೂ ಹೌದು ಈ ಹೋಳಿ. ಹೋಳಿ ಎಂದರೆ ಬಣ್ಣ ಎರಚಿಕೊಂಡು ಮೋಜು ಮಸ್ತಿ ಮಾಡುವುದರ ಜೊತೆಗೆ ಧಾರ್ಮಿಕ, ಸಾಂಸ್ಕೃತಿಕ ಪ್ರಾಮುಖ್ಯತೆಯನ್ನೂ ಹೊಂದಿದೆ. ಇದರೊಂದಿಗೆ ಹೋಳಿ ದಹನವು ಪರಿಸರ ಪ್ರಾಮುಖ್ಯವನ್ನೂ ಹೊಂದಿದೆ. ಈ ದಿನದಂದು ಒಣ ಎಲೆ ಹಾಗೂ ಕೊಂಬೆಗಳಿಂದ ಹೋಲಿ ದಹನಕ್ಕಾಗಿ ಬೆಂಕಿ ಹಚ್ಚಲಾಗುತ್ತದೆ. ಇದು ಪರಿಸರ ಶುದ್ಧೀಕರಣ ಹಾಗೂ ರೋಗಗಳು ಬಾರದಂತೆ ತಡೆಯುವ ವಿಧಾನವೂ ಹೌದು ಎಂದು ನಂಬಲಾಗಿದೆ.

ವಿಭಾಗ