Ekadashi 2025: ಅಮಲಕಿ ಏಕಾದಶಿ ಯಾವಾಗ? ದಿನಾಂಕ, ಮುಹೂರ್ತ, ಪೂಜಾವಿಧಿ ಹಾಗೂ ಪೌರಾಣಿಕ ಕಥೆ ತಿಳಿಯಿರಿ
Amalaki Ekadashi 2025: ಫಾಲ್ಗುಣ ಮಾಸದ ಶುಕ್ಲ ಪಕ್ಷದ ಏಕಾದಶಿಯನ್ನು ಅಮಲಕಿ ಏಕಾದಶಿ ಎಂದು ಕರೆಯಲಾಗುತ್ತದೆ. ಈ ಶುಭದಿನದಂದು ಭಗವಾನ್ ಮಹಾವಿಷ್ಣುವನ್ನು ಪೂಜಿಸುವುದರ ಜೊತೆಗೆ ನೆಲ್ಲಿಕಾಯಿಯ ಗಿಡವನ್ನು ಸಹ ಪೂಜಿಸಲಾಗುತ್ತದೆ.

ಹಿಂದೂ ಪಂಚಾಂಗದಲ್ಲಿ ಪ್ರತಿ ತಿಂಗಳು ಎರಡು ಏಕಾದಶಿಗಳು ಬರುತ್ತವೆ. ಶುಕ್ಲ ಪಕ್ಷದಲ್ಲಿ ಒಂದು ಮತ್ತು ಕೃಷ್ಣ ಪಕ್ಷದಲ್ಲಿ ಒಂದು ಏಕಾದಶಿ ಬರುವುದರಿಂದ ವರ್ಷದಲ್ಲಿ ಒಟ್ಟು 24 ಏಕಾದಶಿಗಳನ್ನು ಆಚರಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ಏಕಾದಶಿಗೆ ಬಹಳ ಮಹತ್ವವನ್ನು ನೀಡಲಾಗಿದೆ. ಇದನ್ನು ಬಹಳ ಪವಿತ್ರ ಹಾಗೂ ಶುಭ ಎಂದು ನಂಬಲಾಗಿದೆ. ಏಕಾದಶಿಯ ವ್ರತವನ್ನು ಬಹಳ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ. ಈ ಏಕಾದಶಿಗಳಲ್ಲಿ ಫಾಲ್ಗುಣ ಮಾಸದ ಶುಕ್ಲ ಪಕ್ಷದಲ್ಲಿ ಬರುವ ಏಕಾದಶಿ ಬಹಳ ವಿಶೇಷವಾಗಿದೆ. ಅದನ್ನು ಅಮಲಕಿ ಏಕಾದಶಿ ಎಂದು ಕರೆಯುತ್ತಾರೆ. ಈ ಏಕಾದಶಿಯನ್ನು ಭಾರತದ ಕೆಲವಡೆ ಆಮ್ಲಾ ಏಕಾದಶಿ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಈ ಶುಭದಿನದಂದು ಭಗವಾನ್ ವಿಷ್ಣುವನ್ನು ಆರಾಧಿಸುವ ಜೊತೆಗೆ ಆಮ್ಲಾ ಅಂದರೆ ನೆಲ್ಲಿಕಾಯಿಯ ಗಿಡವನ್ನು ಸಹ ಪೂಜಿಸಲಾಗುತ್ತದೆ. ಈ ದಿನ ವ್ರತಾಚರಣೆಯೂ ವಿಶೇಷವಾಗಿದೆ. ಈ ವರ್ಷದ ಫಾಲ್ಗುಣ ಮಾಸದ ಅಮಲಕಿ ಏಕಾದಶಿ ಯಾವಾಗ? ಶುಭ ಮುಹೂರ್ತ ಮತ್ತು ಪೂಜಾವಿಧಿಗಳೇನು ಎಂದು ತಿಳಿಯೋಣ.
ಅಮಲಕಿ ಏಕಾದಶಿ ಯಾವಾಗ?
ಹಿಂದೂ ಪಂಚಾಂಗದ ಪ್ರಕಾರ ಫಾಲ್ಗುಣ ಮಾಸದ ಶುಕ್ಲ ಪಕ್ಷದ ಏಕಾದಶಿಯನ್ನು ಮಾರ್ಚ್ 10, 2025 ರಂದು ಆಚರಿಸಲಾಗುತ್ತಿದೆ. ಅಂದು ಬೆಳಿಗ್ಗೆ 7:45 ಕ್ಕೆ ಏಕಾದಶಿ ಪ್ರಾರಂಭವಾಗಿ ಮಾರ್ಚ್ 10, 2025 ರ ಬೆಳಿಗ್ಗೆ 7:45 ಗಂಟೆಗೆ ಸಮಾಪ್ತವಾಗುತ್ತದೆ. ಆದ್ದರಿಂದ ಉದಯ ತಿಥಿಯ ಅನುಸಾರ ಆಮಲಕಿ ಏಕಾದಶಿಯ ವ್ರತವನ್ನು ಮಾರ್ಚ್ 10 ರಂದು ಆಚರಿಸಲಾಗುತ್ತದೆ.
ದ್ವಾದಶಿ ಪಾರಣೆ ಸಮಯ
ವ್ರತ ಪಾರಣೆ ಸಮಯ ಎಂದರೆ ಏಕಾದಶಿ ವ್ರತವನ್ನು ಕೊನೆಗೊಳಿಸುವ ದ್ವಾದಶಿ ಪಾರಣೆ ಸಮಯ. ಅದನ್ನು ಮಾರ್ಚ್ 11 ರ ಬೆಳಿಗ್ಗೆ 6:35 ರಿಂದ 8:13 ರವರೆಗೆ ನಡೆಸಲಾಗುತ್ತದೆ. ಪಾರಣೆ ತಿಥಿಯ ದಿನ ದ್ವಾದಶಿ ಮುಕ್ತಾಯವಾಗುವ ಸಮಯವು ಬೆಳಿಗ್ಗೆ 8 ಗಂಟೆ 13 ನಿಮಿಷವಾಗಿದೆ.
ಏಕಾದಶಿ ಪೂಜಾವಿಧಿ
- ಮೊದಲಿಗೆ ಸ್ನಾನ, ನಿತ್ಯಕರ್ಮ ಇತ್ಯಾದಿಗಳನ್ನು ಮಾಡಿ. ನಂತರ ದೇವರು ಮನೆಯನ್ನು ಸ್ವಚ್ಛಗೊಳಿಸಿ
- ಶ್ರೀ ಹರಿಗೆ ಜಲಾಭಿಷೇಕ ಮಾಡಿ
- ನಂತರ ವಿಷ್ಣುವಿಗೆ ಪಂಚಾಮೃತ ಮತ್ತು ಗಂಗಾ ಜಲದಿಂದ ಅಭಿಷೇಕ ಮಾಡಿ
- ಅಭಿಷೇಕದ ನಂತರ ದೇವರಿಗೆ ಹಳದಿ ಶ್ರೀಗಂಧ ಮತ್ತು ಹಳದಿ ಹೂವುಗಳನ್ನು ಅರ್ಪಿಸಿ
- ದೇವರ ಮನೆಯಲ್ಲಿ ತುಪ್ಪದ ದೀಪ ಹಚ್ಚಿ.
- ಸಾಧ್ಯವಾದರೆ, ಉಪವಾಸ ಮಾಡಿ ಮತ್ತು ಉಪವಾಸ ಆಚರಿಸಲು ಸಂಕಲ್ಪ ಮಾಡಿ
- ಅಮಲಕಿ ಏಕಾದಶಿಯ ಉಪವಾಸದ ಕಥೆಯನ್ನು ಓದಿ
- ಓಂ ನಮೋ ಭಗವತೇ ವಾಸುದೇವಾಯ ಮಂತ್ರವನ್ನು ಪಠಿಸಿ
- ಭಗವಾನ್ ಶ್ರೀ ಹರಿ ವಿಷ್ಣು ಮತ್ತು ಲಕ್ಷ್ಮಿ ಪೂಜೆ ಮತ್ತು ಆರತಿಯನ್ನು ಶ್ರದ್ಧಾಭಕ್ತಿಯಿಂದ ಮಾಡಿ
- ದೇವರಿಗೆ ತುಳಸಿ ದಳ ಅರ್ಪಿಸಿ
- ಕೊನೆಯಲ್ಲಿ ಕ್ಷಮಾಪಣಾ ಪ್ರಾರ್ಥನೆಯನ್ನು ಮಾಡಿಕೊಳ್ಳಿ
ಅಮಲಕಿ ಏಕಾದಶಿಯ ವ್ರತದ ಕಥೆ
ಪುರಾಣದ ಕಥೆಯ ಪ್ರಕಾರ, ಪ್ರಾಚೀನ ಕಾಲದಲ್ಲಿ ವೈದಿಕ ಎಂಬ ಹೆಸರಿನ ನಗರವಿತ್ತು. ಅಲ್ಲಿ ಚೈತ್ರರಥನೆಂಬ ರಾಜನು ಆಡಳಿತ ಮಾಡುತ್ತಿದ್ದನು. ಆ ಊರಿನಲ್ಲಿ ಎಲ್ಲರೂ ವಿಷ್ಣುವಿನ ಭಕ್ತರಾಗಿದ್ದರು. ಅವರೆಲ್ಲರೂ ಏಕಾದಶಿಯ ಉಪವಾಸ ವ್ರತವನ್ನು ಆಚರಿಸುತ್ತಿದ್ದರು. ಒಮ್ಮೆ ಫಾಲ್ಗುಣ ಮಾಸದ ಶುಕ್ಷ ಪಕ್ಷದ ಏಕಾದಶಿಯ ದಿನದಂದು ಎಲ್ಲ ಭಕ್ತರು ಉಪವಾಸ ಮಾಡಿ ವಿಷ್ಣುವನ್ನು ಪೂಜಿಸುತ್ತಾ ರಾತ್ರಿ ಜಾಗರಣೆ ಮಾಡುತ್ತಿದ್ದರು. ಆಗ ಅಲ್ಲಿಗೆ ಒಬ್ಬ ಬೇಟೆಗಾರನು ಬಂದನು. ಅಲ್ಲಿ ನಡೆಯುತ್ತಿದ್ದ ಜಾಗರಣೆಯಲ್ಲಿ ವಿಷ್ಣುವಿನ ಕಥೆ ಮತ್ತು ಏಕಾದಶಿಯ ಮಹಿಮೆಯನ್ನು ಕೇಳುತ್ತಾ ಇಡೀ ರಾತ್ರಿ ಎಚ್ಚರವಾಗಿ ಕಳೆದನು. ಮರುದಿನ ಅವನು ತನ್ನ ಮನೆಗೆ ಹೋಗಿ ಊಟ ಮಾಡಿ ಮಲಗಿದನು. ಸ್ವಲ್ಪ ದಿನಗಳ ನಂತರ ಆ ಬೇಡನು ಸತ್ತು ಹೋದನು.
ಅವನು ಮಾಡಿದ ಪಾಪಗಳಿಂದಾಗಿ ನರಕದಲ್ಲಿ ಕಳೆದನು. ಆದರೆ ಅವನು ತಿಳಿಯದೇ ಆಮಲಕಿ ಏಕಾದಶಿ ವ್ರತದ ಕಥೆಯನ್ನು ಕೇಳಿ, ಜಾಗರಣೆ ಹಾಗೂ ಉಪವಾಸ ಮಾಡಿದ್ದನು. ಆದ್ದರಿಂದ ಅವನು ಮುಂದಿನ ಜನುಮದಲ್ಲಿ ವಿದುರಥನ ಮನೆಯಲ್ಲಿ ಜನಿಸಿದನು. ಅವನಿಗೆ ವಸುರ್ಥ ಎಂದು ಹೆಸರಿಡಲಾಯಿತು. ಒಮ್ಮೆ ಅವನು ಕಾಡಿಗೆ ಹೋದಾಗ ಒಂದು ಮರದ ಕೆಳಗೆ ನಿದ್ರಿಸಿದನು. ಆಗ ಕೆಲವು ಡಕಾಯಿತರು ಅವನ ಮೇಲೆ ದಾಳಿ ಮಾಡಿದರು. ಆದರೆ ಅವರ ಆಯುಧಗಳು ರಾಜನ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ರಾಜನಿಗೆ ಎಚ್ಚರವಾದಾಗ ಕೆಲವು ಜನರು ನೆಲದ ಮೇಲೆ ಸತ್ತಂತೆ ಬಿದ್ದಿರುವುದನ್ನ ಕಂಡನು. ಆಗ ರಾಜನಿಗೆ ಅವರು ತನ್ನನ್ನು ಕೊಲ್ಲಲು ಬಂದಿದ್ದರೆಂದು ಅರ್ಥವಾಯಿತು. ಆಗ ಆಕಾಶದಿಂದ ಒಂದು ಧ್ವನಿ ಕೇಳಿಸಿತು, ‘ಓ ರಾಜನೇ, ನಿನ್ನ ಜೀವವನ್ನು ಮಹಾವಿಷ್ಣುವು ಉಳಿಸಿದ್ದಾನೆ. ನೀನು ನಿನ್ನ ಹಿಂದಿನ ಜನ್ಮದಲ್ಲಿ ಅಮಲಕಿ ಏಕಾದಶಿಯ ವ್ರತದ ಕಥೆಯನ್ನು ಕೇಳಿದ್ದೆ, ಇದು ಅದರ ಫಲವಾಗಿದೆ ಎಂದು ಹೇಳಿತು.
ಅಮಲಕಿ ಏಕಾದಶಿಯ ಮತ್ತೊಂದು ಪೌರಾಣಿಕ ಕಥೆ
ಬ್ರಹ್ಮ ದೇವನು ವಿಷ್ಣುವಿನ ನಾಭಿಯಿಂದ ಹುಟ್ಟಿಕೊಂಡನು. ಬ್ರಹ್ಮನಿಗೆ ತನ್ನ ಬಗ್ಗೆ ತಿಳಿದುಕೊಳ್ಳುವ ಆಸೆಯಾಯಿತು. ಅದಕ್ಕಾಗಿ ಬ್ರಹ್ಮನು ವಿಷ್ಣುವಿನ ತಪಸ್ಸನ್ನು ಮಾಡಿದನು. ಅವನ ತಪಸ್ಸಿನಿಂದ ಪ್ರಸನ್ನನಾದ ಮಹಾವಿಷ್ಣು ಬ್ರಹ್ಮನ ಮುಂದೆ ಪ್ರತ್ಯಕ್ಷನಾದನು. ಆಗ ಬ್ರಹ್ಮನು ಭಾವುಕನಾಗಿ ಅವನ ಕಣ್ಣಿಂದ ನೀರು ಬರಲು ಪ್ರಾರಂಭಿಸಿತು. ಬ್ರಹ್ಮನ ಕಣ್ಣೀರು ಬಿದ್ದ ಸ್ಥಳದಲ್ಲಿ ನೆಲ್ಲಿಕಾಯಿಯ (ಆಮ್ಲಾ) ಗಿಡ ಬೆಳೆಯಿತು. ಆಗ ವಿಷ್ಣುವು ಇದು ನಿನ್ನ ಕಣ್ಣೀರಿನಿಂದ ಹುಟ್ಟಿಕೊಂಡಿದೆ, ಈ ಮರದ ಕಾಯಿ ನನಗೆ ತುಂಬಾ ಪ್ರಿಯವಾಗುತ್ತವೆ ಎಂದು ಹೇಳಿದನು. ಇಂದಿನಿಂದ ಅಮಲಕಿ ಏಕಾದಶಿ ಉಪವಾಸ ಆಚರಿಸುವ ಹಾಗೂ ಆಮ್ಲಾ (ನೆಲ್ಲಿಕಾಯಿ) ಮರವನ್ನು ಪೂಜಿಸುವವರಿಗೆ ಶುಭಫಲಗಳು ದೊರೆಯುತ್ತವೆ ಎಂದು ಹೇಳಿದನು.
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟಿಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)
