ವಿಷ್ಣುವಿನ 24 ಅವತಾರಗಳಲ್ಲಿ ಐದನೇ ಅವತಾರ ಯಾವುದು, ಅದಿತಿ ಎಂಬ ಋಷಿಪತ್ನಿಯ ಗರ್ಭದಲ್ಲಿ ಶ್ರೀಹರಿ ಜನಿಸಿದ್ದೇಕೆ?
ಪುರಾಣ ಕಥೆಗಳ ಪ್ರಕಾರ ವಿಷ್ಣುವು 24 ಅವತಾರಗಳನ್ನು ತಾಳುತ್ತಾನೆ. ಅವುಗಳಲ್ಲಿ ಪ್ರಸಿದ್ಧ ಅವತಾರಗಳನ್ನು ದಶಾವತಾರ ಎಂದು ಕರೆಯಲಾಗುತ್ತದೆ. ಶ್ರೀಹರಿಯ 5ನೇ ಅವತಾರವೇ ವಾಮನ. ವಿಷ್ಣುವು ವಾಮನನಾಗಿ ಜನಿಸಿದ್ದು ಏಕೆ? ಬಲಿಚಕ್ರವರ್ತಿಯನ್ನು ಕೊಂದ ಕಾರಣ ಏನು? ಇಲ್ಲಿದೆ ವಿವರ.
ವಿಷ್ಣು 24 ಅವತಾರಗಳನ್ನು ತಾಳಿದರೂ ಅತಿ ಪ್ರಸಿದ್ದವಾದ ಅವತಾರಗಳ ಪಟ್ಟಿಯನ್ನು ದಶಾವತಾರ ಎಂದು ಕರೆಯಲಾಗುತ್ತದೆ. ಅದರಲ್ಲಿ ಐದನೇ ಅವತಾರವೇ ವಾಮನ. ಪುರಾಣದ ಪ್ರಕಾರ ವಿಷ್ಣುವು ಭಾದ್ರಪದ ಮಾಸದ ಶುಕ್ಲ ಪಕ್ಷದ 12ನೇ ದಿನದಂದು ವಾಮನನ ರೂಪದಲ್ಲಿ ಜನಿಸುತ್ತಾನೆ. ಇದೇ ಸಮಯಕ್ಕೆ ಪ್ರತಿ ವರ್ಷ ವಾಮನ ಜಯಂತಿ ಎಂದೂ ಆಚರಿಸಲಾಗುತ್ತದೆ. ಲೋಕ ರಕ್ಷಣೆಗಾಗಿ ಶ್ರೀ ಹರಿಯು ವಾಮನ ರೂಪದಲ್ಲಿ ಭೂಮಿಗೆ ಬಂದನೆಂದು ಹೇಳಲಾಗುತ್ತದೆ
ವಿಷ್ಣು ವಾಮನ ಅವತಾರವೆತ್ತಿದ ಕಥೆ ಹೀಗಿದೆ
ಪುರಾಣಗಳ ಪ್ರಕಾರ, ವೈರೋಚನನ ಮಗ ಬಲಿ ಚಕ್ರವರ್ತಿಯು ವಿಶ್ವಜಿತ್ ಯಾಗ ಮಾಡುತ್ತಾನೆ. ಇಂದ್ರನ ವಿರುದ್ಧ ಹೋರಾಡಿ ಅವನನ್ನು ಸೋಲಿಸುತ್ತಾನೆ. ಬಲಿಯು ಸ್ವರ್ಗವನ್ನು ಆಕ್ರಮಿಸುವ ಭಯದಿಂದ ದೇವತೆಗಳು ಅಲ್ಲಿಂದ ಬೇರೆ ಕಡೆ ತೆರಳುತ್ತಾರೆ. ಆ ಸಮಯದಲ್ಲಿ ದೇವತೆಗಳೆಲ್ಲರೂ ಶ್ರೀ ಹರಿಯ ಬಳಿಗೆ ಹೋಗಿ ಆಶ್ರಯ ಯಾಚಿಸುತ್ತಾರೆ. ಆಗ ಶ್ರೀ ಮಹಾವಿಷ್ಣುವು ತಾನು ಅದಿತಿ ಎಂಬ ಋಷಿಪತ್ನಿಯ ಗರ್ಭದಲ್ಲಿ ಜನಿಸುತ್ತೇನೆಂದು ಹೇಳಿ, ಅದರಂತೆ ಭಾದ್ರಪದ ಮಾಸದ ಶುಕ್ಲ ಪಕ್ಷ ಶುದ್ಧ ದ್ವಾದಶಿಯಂದು ವಾಮನನಾಗಿ ಜನಿಸುತ್ತಾನೆ. ಅಂದಿನಿಂದ ಬಲಿಚಕ್ರವರ್ತಿಯನ್ನು ಕೊಲ್ಲುವ ದಿನಕ್ಕಾಗಿ ಕಾಯುತ್ತಾನೆ.
ಒಮ್ಮೆ ಬಲಿ ಚಕ್ರವರ್ತಿಯು ಅಶ್ವಮೇಧ ಯಾಗವನ್ನು ಮಾಡಲು ಸಿದ್ಧನಾಗುತ್ತಾನೆ. ವಿಷ್ಣುವು, ಬಲಿಯನ್ನು ಕೊಲ್ಲಲು ಅದೇ ಒಳ್ಳೆ ಸಮಯವೆಂದು ಪರಿಗಣಿಸಿ ಬ್ರಾಹ್ಮಣನ(ವಾಮನ) ರೂಪದಲ್ಲಿ ಯಾಗಶಾಲೆಗೆ ಆಗಮಿಸುತ್ತಾನೆ. ಅಲ್ಲಿ ಅವನನ್ನು ಆತ್ಮೀಯವಾಗಿ ಸ್ವಾಗತಿಸಲಾಗುತ್ತದೆ. ಸಕಲ ರೀತಿಯಿಂದಲೂ ಉಪಚರಿಸಿ, ಏನು ಬೇಕೋ ಕೇಳು ಎಂದು ಬಲಿ ಚಕ್ರವರ್ತಿ ಹೇಳುತ್ತಾನೆ. ವಾಮನನು ಯಾಗವನ್ನು ಮಾಡಲು ಮೂರು ಹೆಜ್ಜೆಗಳನ್ನು ಕೇಳುತ್ತಾನೆ. ಅದಕ್ಕೆ ಅವನು ತಕ್ಷಣ ಒಪ್ಪುತ್ತಾನೆ. ಆಗ ರಾಕ್ಷಸರ ಗುರುಗಳಾದ ಶುಕ್ರಾಚಾರ್ಯರಿಗೆ ಮಹಾವಿಷ್ಣುವು ವಾಮನ ರೂಪದಲ್ಲಿ ಬಂದಿರುವುದು ಅರಿವಾಗುತ್ತದೆ. ಕೂಡಲೇ ಈ ವಿಚಾರವನ್ನು ಬಲಿ ಚಕ್ರವರ್ತಿಗೆ ತಿಳಿಸುತ್ತಾನೆ. ಆದರೆ ನಾನು ಈಗಾಗಲೇ ಮಾತು ಕೊಟ್ಟಿದ್ದೇನೆ, ಅದನ್ನು ವಾಪಸ್ ಪಡೆಯಲು ಸಾಧ್ಯವಿಲ್ಲ ಎನ್ನುತ್ತಾರೆ. ಬಲಿಯು ತನ್ನ ಮಾತನನ್ನು ಕೇಳದಿದ್ದಕ್ಕೆ ಕೋಪಗೊಂಡ ಶುಕ್ರಾಚಾರ್ಯನು ಬಲಿ ಚಕ್ರವರ್ತಿಗೆ ರಾಜ್ಯವನ್ನು ಕಳೆದುಕೊಳ್ಳುವಂತೆ ಶಪಿಸುತ್ತಾನೆ.
ಬಲಿ ಚಕ್ರವರ್ತಿಯ ತಲೆ ಮೇಲೆ ಕಾಲಿಟ್ಟು ಪಾತಾಳಕ್ಕೆ ತಳ್ಳಿದ ವಾಮನ
ಬಲಿ ಚಕ್ರವರ್ತಿಯು ವಾಮನನಿಗೆ ನೀಡಿದ ಮಾತಿನಂತೆ ಅವನ ಪಾದಗಳನ್ನು ತೊಳೆದು ತನ್ನ ತಲೆಯ ಮೇಲೆ ನೀರನ್ನು ಚಿಮುಕಿಸಿಕೊಳ್ಳುತ್ತಾನೆ. ವಾಮನನಿಗೆ ಮೂರು ಅಡಿ ಜಾಗವನ್ನು ದಾನ ನೀಡುವುದಾಗಿ ಘೋಷಿಸಿ ಕಲಶದೊಂದಿಗೆ ತನ್ನ ಕೈಯಿಂದ ವಾಮನನ ಕೈಗೆ ನೀರು ಸುರಿಯಲು ಮುಂದಾಗುತ್ತಾನೆ. ಇದನ್ನು ತಡೆಯಲು, ಶುಕ್ರಾಚಾರ್ಯರು ಸಣ್ಣ ರೂಪ ಪಡೆದು ಕಲಶದ ರಂಧ್ರಕ್ಕೆ ಅಡ್ಡಿಯಾಗಿ ಕೂರುತ್ತಾರೆ. ಇದನ್ನು ಅರಿತ ವಾಮನನು ದರ್ಭೆಯಿಂದ ರಂಧ್ರವನ್ನು ಚುಚ್ಚುತ್ತಾನೆ. ಇದರಿಂದ ಶುಕ್ರಾಚಾರ್ಯರು ಎರಡೂ ಕಣ್ಣುಗಳನ್ನು ಕಳೆದುಕೊಂಡು ಹೊರ ಬರುತ್ತಾರೆ.
ವಾಮನನು ತಕ್ಷಣವೇ ದಾನವನ್ನು ಸ್ವೀಕರಿಸಿ ದೈತ್ಯಾಕಾರವಾಗಿ ಬೆಳೆಯುತ್ತಾರೆ. ಭೂಮಿಯ ಮೇಲೆ ಒಂದು ಹೆಜ್ಜೆ ಇಟ್ಟು ಇಡೀ ಭೂಮಿಯನ್ನು ಆವರಿಸಿಕೊಳ್ಳುತ್ತಾನೆ, ನಂತರ ಆಕಾಶದ ಮೇಲೆ ಇನ್ನೊಂದು ಹೆಜ್ಜೆ ಇಟ್ಟು , ಇಡೀ ವಿಶ್ವವನ್ನೇ ಆಕ್ರಮಿಸಿಕೊಳ್ಳುತ್ತಾನೆ. ಮೂರನೇ ಹೆಜ್ಜೆಯನ್ನು ಎಲ್ಲಿ ಇಡಲಿ ಎಂದು ಕೇಳಿದಾಗ ಬಲಿ ಚಕ್ರವರ್ತಿಯು ತನ್ನ ತಲೆ ಮೇಲೆ ಇಡುವಂತೆ ಹೇಳುತ್ತಾನೆ. ರಾಜನ ಮಾತಿನಂತೆ ಬಲಿಯು ತನ್ನ ಮೂರನೇ ಪಾದವನ್ನು ಬಲಿಚಕ್ರವರ್ತಿಯ ಮೇಲಿಟ್ಟು ಅವನನ್ನು ಪಾತಾಳಲೋಕಕ್ಕೆ ತಳ್ಳುತ್ತಾನೆ.
ಆದರೂ ಬಲಿಚಕ್ರವರ್ತಿಯ ದಾನ ಧರ್ಮದ ಗುಣಕ್ಕೆ ಸಂತುಷ್ಟನಾದ ಮಹಾವಿಷ್ಣುವು ಪ್ರತಿವರ್ಷ ಕೆಲವು ದಿನಗಳ ಕಾಲ ಭೂಮಿಗೆ ಬಂದು ತನ್ನ ರಾಜ್ಯವನ್ನು ನೋಡಿಕೊಳ್ಳಲು ಅವಕಾಶ ಮಾಡಿಕೊಡುತ್ತಾನೆ. ಅದೇ ದಿನ ಪ್ರತಿವರ್ಷ ಬಲಿಪಾಡ್ಯಮಿಯನ್ನಾಗಿ ಆಚರಿಸಲಾಗುತ್ತದೆ. ನಂತರ ವಿಷ್ಣುವು ಇಂದ್ರನಿಗೆ ಸ್ವರ್ಗಲೋಕವನ್ನು ಮರಳಿ ವಾಪಸ್ ದೊರಕಿಸಿಕೊಡುತ್ತಾನೆ. ಮೂರು ಪಾದಗಳಿಂದ ಮೂರು ಲೋಕಗಳನ್ನು ಗೆದ್ದ ಕಾರಣ ವಾಮನನಿಗೆ ತ್ರಿವಿಕ್ರಮ ಎಂಬ ಹೆಸರು ಬಂದಿದೆ.
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope