ಮರಣದ ನಂತರ ತುಳಸಿ ಎಲೆ, ಗಂಗಾ ಜಲವನ್ನು ಮೃತರ ಬಾಯಿಗೆ ಹಾಕಲು ಕಾರಣವೇನು? ಧಾರ್ಮಿಕ ನಂಬಿಕೆ ಹೀಗಿದೆ
ಸಾವಿನ ನಂತರವೂ ಅನೇಕ ಸಂಪ್ರದಾಯಗಳನ್ನು ಅನುಸರಿಸಲಾಗುತ್ತದೆ. ಸಾವಿನ ನಂತರ ಗಂಗಾ ಜಲ ಮತ್ತು ತುಳಸಿ ಎಲೆಗಳನ್ನು ಸತ್ತವರ ಬಾಯಿಯಲ್ಲಿ ಇಡಲಾಗುತ್ತದೆ. ಇದರ ಹಿಂದಿನ ಕಾರಣವೇನು ಎಂದು ತಿಳಿಯೋಣ.

ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಯು ಒಂದು ದಿನ ಈ ಭೂಮಿಯನ್ನು ಬಿಟ್ಟು ಹೊರಡಲೇಬೇಕು. ಸಾವು ಪ್ರತಿಯೊಬ್ಬರ ಜೀವನದಲ್ಲೂ ನಿಶ್ಚಿತ. ಎಲ್ಲಾ ಧರ್ಮದಲ್ಲೂ ಸಾವಿನ ನಂತರವೂ ಅನೇಕ ಸಂಪ್ರದಾಯಗಳನ್ನು ಅನುಸರಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ವ್ಯಕ್ತಿಯ ಹುಟ್ಟಿನಿಂದ ಸಾವಿನವರೆಗೆ ಹಲವಾರು ವಿಧಿ, ಪದ್ಧತಿಗಳ ಆಚರಣೆಯಿರುತ್ತದೆ. ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದ ಈ ಪದ್ಧತಿಗಳಿಗೆ ಅದರದೇ ಆದ ಕಾರಣಗಳೂ ಇವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮರಣದ ನಂತರ ಕೆಲವು ಆಚರಣೆಗಳನ್ನು ಪಾಲಿಸುತ್ತಾರೆ. ಅವುಗಳಲ್ಲಿ ಸತ್ತ ವ್ಯಕ್ತಿಯ ಬಾಯಿಯಲ್ಲಿ ತುಳಸಿ ಎಲೆ ಮತ್ತು ಗಂಗಾ ಜಲವನ್ನು ಹಾಕುವುದು ಒಂದಾಗಿದೆ. ಇದರ ಹಿಂದಿನ ಕಾರಣವೇನು ಎಂದು ತಿಳಿಯೋಣ.
ಗಂಗಾ ಜಲವು ಶುದ್ಧತೆಯ ಸಂಕೇತ
ಯಾವುದೇ ಪೂಜೆಯನ್ನು ಮಾಡುವಾಗ, ಪೂಜಾ ಸಾಮಗ್ರಿಗಳ ಮೇಲೆ ಮತ್ತು ಭಕ್ತರ ಮೇಲೆ ನೀರನ್ನು ಸಿಂಪಡಿಸಿ ಶುದ್ದೀಕರಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ಗಂಗಾ ನೀರನ್ನು ಪವಿತ್ರವೆಂದು ಪರಿಗಣಿಸಲಾಗಿದೆ. ಇದನ್ನು ಅಮೃತಕ್ಕೆ ಸಮಾನವೆಂದೂ ಹೇಳಲಾಗುತ್ತದೆ. ಗಂಗೆಯನ್ನು "ಸ್ವರ್ಗದ ನದಿ" ಎಂದೂ ಕರೆಯುತ್ತಾರೆ. ಅದರಲ್ಲಿ ಸ್ನಾನ ಮಾಡುವುದರಿಂದ ವ್ಯಕ್ತಿಯ ಎಲ್ಲಾ ಪಾಪಗಳು ನಾಶವಾಗುತ್ತದೆ ಎಂಬ ನಂಬಿಕೆಯಿದೆ. ಅದು ವಿಷ್ಣುವಿನ ಪಾದಗಳಿಂದ ಹುಟ್ಟಿ, ಶಿವನ ಜಟೆಯಲ್ಲಿ ವಾಸಿಸುತ್ತಿತ್ತು. ನಂತರ ಭಗೀರಥನು ಗಂಗೆಯನ್ನು ಅವನ ಪೂರ್ವಜರ ಪಾಪಗಳನ್ನು ತೊಳೆಯಲು ಭೂಮಿಗೆ ಕರೆತಂದನು. ಪಾಪಗಳನ್ನು ತೊಳೆಯುವ ಪಾಪನಾಶಿನಿಯಾದ ಕಾರಣಕ್ಕಾಗಿ, ಸಾವಿನ ಸಮಯದಲ್ಲಿ ಗಂಗಾ ನೀರನ್ನು ಬಾಯಿಗೆ ಹಾಕಲಾಗುತ್ತದೆ. ಆತ್ಮವು ದೇಹವನ್ನು ತೊರೆದಾಗ ಹೆಚ್ಚು ನೋವು ಅನುಭವಿಸಬೇಕಾಗುತ್ತದೆ. ಸತ್ತ ವ್ಯಕ್ತಿಯ ಬಾಯಿಯಲ್ಲಿ ಗಂಗಾ ನೀರನ್ನು ಹಾಕುವುದರಿಂದ, ಆ ವ್ಯಕ್ತಿಗೆ ಸಾವಿನ ನಂತರ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ಹೇಳಲಾಗುತ್ತದೆ. ಇದು ಆತ್ಮದ ಮುಂದಿನ ಪ್ರಯಾಣವನ್ನು ಸುಲಭಗೊಳಿಸುತ್ತದೆ.
ಮೋಕ್ಷವನ್ನು ನೀಡುವ ತುಳಸಿ ಎಲೆ
ತುಳಸಿಯು ವಿಷ್ಣುವಿಗೆ ಸಂಬಂಧಿಸಿದೆ ಎಂದು ನಂಬಲಾಗಿದೆ. ಅದಕ್ಕಾಗಿಯೇ ಮೃತರ ಆತ್ಮಕ್ಕೆ ಶಾಂತಿಯನ್ನು ಮತ್ತು ಮೋಕ್ಷವನ್ನು ನೀಡುವ ಸಲುವಾಗಿ ತುಳಸಿ ಎಲೆಯನ್ನು ಹಾಕಲಾಗುತ್ತದೆ. ತುಳಸಿ ಎಲೆಗಳನ್ನು ಮೃತ ವ್ಯಕ್ತಿಯ ಬಾಯಿಯಲ್ಲಿ ಇಡುವುದರಿಂದ ಯಮ ಧರ್ಮರಾಜನು ಯಾವುದೇ ಹಾನಿಯನ್ನುಂಟು ಮಾಡುವುದಿಲ್ಲ ಎಂದು ಹೇಳಲಾಗುತ್ತದೆ. ಮರಣದ ನಂತರ, ವ್ಯಕ್ತಿಯು ಯಮನ ಶಿಕ್ಷೆಯನ್ನು ಎದುರಿಸಬೇಕಾಗಿಲ್ಲ ಎಂದು ಸಹ ಹೇಳಲಾಗುತ್ತದೆ. ಈ ಕಾರಣಕ್ಕಾಗಿ, ತುಳಸಿ ಎಲೆಗಳನ್ನು ಸತ್ತವರ ಬಾಯಿಯಲ್ಲಿ ಇಡಲಾಗುತ್ತದೆ. ಇದು ಮೋಕ್ಷವನ್ನು ನೀಡುತ್ತದೆ. ಸತ್ತ ವ್ಯಕ್ತಿಯ ಬಾಯಿಗೆ ತುಳಸಿ ಮತ್ತು ಗಂಗಾಜಲವನ್ನು ಹಾಕುವುದರಿಂದ ಯಮ ಅವರನ್ನು ನೇರವಾಗಿ ಸ್ವರ್ಗಕ್ಕೆ ಕರೆದೊಯ್ಯುತ್ತಾನೆ ಎಂದು ಹೇಳಲಾಗುತ್ತದೆ. ವಿಷ್ಣು ತನ್ನ ಹಣೆಯ ಮೇಲೆ ತುಳಸಿ ಎಲೆಗಳನ್ನು ಧರಿಸುತ್ತಿದ್ದನು. ಹಾಗೆ ಮಾಡುವುದರಿಂದ ಮೃತ ವ್ಯಕ್ತಿಯು ವಿಷ್ಣುವಿಗೆ ಪ್ರಿಯವಾಗುತ್ತಾನೆ. ಸತ್ತ ವ್ಯಕ್ತಿಯ ಮೇಲೆ ತುಳಸಿ ಎಲೆಗಳನ್ನು ಇಟ್ಟರೆ ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ. ಅದಕ್ಕಾಗಿಯೇ ತುಳಸಿ ಎಲೆಗಳು ಮತ್ತು ಗಂಗಾ ಜಲವನ್ನು ಸತ್ತವರ ಬಾಯಿಯಲ್ಲಿ ಇಡಲಾಗುತ್ತದೆ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ (ಎಚ್‌ಟಿ ಕನ್ನಡ) ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ.)