ಗ್ರಹಗಳಿಗೂ ಗೋರಂಟಿಗೂ ಇರುವ ಸಂಬಂಧವೇನು? ಗರ್ಭಿಣಿಯರು ಕೈಗಳಿಗೆ ಮೆಹೆಂದಿ ಹಾಕಿಕೊಳ್ಳುವ ಮೊದಲು ಈ ವಿಚಾರ ತಿಳಿದುಕೊಳ್ಳಿ
ಮಹಿಳೆಯರಿಗೆ ಮೆಹೆಂದಿ ಚಿತ್ರಗಳನ್ನು ಬರೆದುಕೊಳ್ಳುವುದೆಂದರೆ ಅಚ್ಚುಮೆಚ್ಚು. ಗರ್ಭಿಣಿಯರು ಮೆಹೆಂದಿಯನ್ನು ಹಾಕಿಕೊಳ್ಳಬಾರದು ಎಂದು ಹಿರಿಯರು ಹೇಳುತ್ತಾರೆ. ಅದು ಏಕೆ? ಗ್ರಹಗಳಿಗೂ ಗೋರಂಟಿಗೂ ಏನಾದರೂ ಸಂಬಂಧವಿದೆಯಾ? ಇಲ್ಲಿದೆ ವಿವರ (ಬರಹ: ಅರ್ಚನಾ ವಿ.ಭಟ್)

ಗರ್ಭಿಣಿಯರು ಆರೋಗ್ಯವಾಗಿರಲು ಹಲವು ನಿಯಮಗಳನ್ನು ಪಾಲಿಸುತ್ತಾರೆ. ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದರ ಜೊತೆಗೆ ಹಿರಿಯರಿಂದ ಬಂದ ಒಳ್ಳೆಯ ನಂಬಿಕೆಗಳನ್ನು ಪಾಲಿಸುತ್ತಾರೆ. ಅನೇಕರು ತಮ್ಮ ಮನೆಯ ಹಿರಿಯರು ಪಾಲಿಸಿಕೊಂಡು ಬಂದ ಸಂಪ್ರದಾಯಗಳನ್ನು ಇಂದಿಗೂ ಅನುಸರಿಸುತ್ತಾರೆ. ಸೀಮಂತ ಸಮಾರಂಭದಿಂದ ಹಿಡಿದು ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದ ಸಂಪ್ರದಾಯಗಳನ್ನು ಒಳ್ಳೆಯ ನಂಬಿಕೆಯ ಮೇಲೆ ಪಾಲಿಸುತ್ತಾರೆ. ಗರ್ಭಿಣಿಯರು ಕೈಗೆ ಗೋರಂಟಿ ಅಥವಾ ಮೆಹೆಂದಿ ಹಾಕಿಕೊಳ್ಳಬಾರದು ಎಂದು ಹೇಳಲಾಗುತ್ತದೆ. ಇದನ್ನು ಪ್ರಾಚೀನ ಕಾಲದಿಂದಲೂ ಹಿರಿಯರು ಹೇಳುತ್ತಾ ಬಂದಿದ್ದಾರೆ. ಗರ್ಭಿಣಿಯರು ಕೈಗೆ ಮೆಹೆಂದಿಯನ್ನು ಏಕೆ ಹಾಕಿಕೊಳ್ಳಬಾರದು? ಹಾಗೆ ಹೇಳುವುದರ ಹಿಂದಿರುವ ಉದ್ದೇಶವೇನು? ಈ ಬರಹದಲ್ಲಿ ತಿಳಿಯೋಣ.
ಮೆಹೆಂದಿ ಅಲಂಕಾರ ಮಹಿಳೆಯರಿಗೆ ಇಷ್ಟ
ಮಹಿಳೆಯರಿಗೆ ಮೆಹೆಂದಿ ಅಥವಾ ಗೋರಂಟಿ ಎಂದರೆ ಬಹಳ ಇಷ್ಟ. ಚೆಂದದ ಚಿತ್ತಾರವನ್ನು ಕೈಮೇಲೆ ಬರೆದುಕೊಂಡರೆ ನೋಡುವವರಿಗೂ ಅಷ್ಟೇ ಇಷ್ಟವಾಗುತ್ತದೆ. ಹಿಂದೂ ಧರ್ಮದಲ್ಲಿ ಮೆಹೆಂದಿಯನ್ನು ಸೋಲಾ ಶೃಂಗಾರಗಳಲ್ಲಿ (16 ಆಭರಣ) ಒಂದೆಂದು ಪರಿಗಣಿಸಲಾಗಿದೆ. ಮದುವೆಗೆ ಮಾತ್ರವಲ್ಲದೆ ಇತರ ಶುಭ ಸಮಾರಂಭಗಳಿಗೆ, ಹಬ್ಬ ಹರಿದಿನಗಳಿಗೆ ಮತ್ತು ಯಾವುದೇ ಸಂತೋಷದ ಆಚರಣೆಗಳಲ್ಲೂ ಮೆಹೆಂದಿಯನ್ನು ಹಾಕಿಕೊಳ್ಳಲಾಗುತ್ತದೆ. ವೈವಾಹಿಕ ಸುಖಕ್ಕೆ ಸಂಬಂಧಿಸಿದ ಉಪವಾಸಗಳು ಮತ್ತು ಹಬ್ಬಗಳು ಮೆಹೆಂದಿಯಿಲ್ಲದೇ ಇಲ್ಲದೆ ಪೂರ್ಣಗೊಳ್ಳುವುದಿಲ್ಲ. ವಿವಾಹಿತ ಮಹಿಳೆಯರಿಗೆ ಮೆಹೆಂದಿ ಮಂಗಳಕರವೆಂದು ಪರಿಗಣಿಸಲಾಗುತ್ತದೆ.
ಗರ್ಭಿಣಿ ಮಹಿಳೆಯರು ಮೆಹೆಂದಿ ಹಾಕಿಕೊಳ್ಳಬಾರದೇ?
1. ಮಹಿಳೆ ಗರ್ಭಾವಸ್ಥೆಯಲ್ಲಿರುವಾಗ ಕೈಗೆ ಮೆಹೆಂದಿಯನ್ನು ಹಾಕಿಕೊಳ್ಳಬಾರದು ಎಂದು ಮನೆಯ ಹಿರಿಯರು ಮತ್ತು ಅಜ್ಜಿಯಂದಿರು ಹೇಳುತ್ತಾರೆ. ಗರ್ಭಾವಸ್ಥೆಯಲ್ಲಿ ಕೆಲವು ಕೆಲಸಗಳನ್ನು ಮಾಡಬಾರದು. ಏಕೆಂದರೆ ಅದು ಬೆಳೆಯುತ್ತಿರುವ ಮಗುವಿಗೆ ಹಾನಿ ಮಾಡಬಹುದು. ಅಂತಹವುಗಳಲ್ಲಿ ಮೆಹೆಂದಿಯೂ ಒಂದು. ಅದಕ್ಕಾಗಿಯೇ ಪೂರ್ವಜರು ಅದನ್ನು ನಿಷೇಧಿಸಿದ್ದಾರೆ.
2. ಅಜ್ಜಿಯರು ಹೇಳುವುದನ್ನು ಅನೇಕರು ತಳ್ಳಿಹಾಕಬಹುದು. ಆದರೆ, ಅದರ ಹಿಂದೆ ವಿಜ್ಞಾನವಿದೆ. ಹಾಗಾಗಿ ಪೂರ್ವಜರು ಹೇಳಿದ್ದನ್ನು ಪಾಲಿಸಿದರೆ ನೆಮ್ಮದಿಯಿಂದ ಇರಬಹುದಾಗಿದೆ.
3. ಗೋರಂಟಿಯು ಸಂತೋಷ, ಪ್ರೀತಿ ಮತ್ತು ಸೌಂದರ್ಯವನ್ನು ಪ್ರತಿನಿಧಿಸುವ ಶುಕ್ರ ಗ್ರಹಕ್ಕೆ ಸಂಬಂಧಿಸಿದೆ. ಮೆಹೆಂದಿ ಚಿತ್ರಗಳನ್ನು ಕೈ ಮೇಲೆ ಬರೆದುಕೊಳ್ಳುವುದು ಶುಕ್ರ ಗ್ರಹದ ಪ್ರಭಾವವನ್ನು ತೀವ್ರಗೊಳಿಸುತ್ತದೆ.
4. ಸಾಮರಸ್ಯ, ಯೋಗಕ್ಷೇಮ, ಭಾವನಾತ್ಮಕ ಸಮತೋಲನವನ್ನು ಸಹ ಮೆಹಂದಿಯು ನಿರ್ವಹಿಸುತ್ತದೆ. ಹಾಗಾಗಿ ಮದುವೆಯ ಸಂದರ್ಭದಲ್ಲಿ ಮದುಮಗಳು ತಮ್ಮ ಕೈಗೆ ಮೆಹೆಂದಿಯನ್ನು ಹಾಕಿಕೊಳ್ಳುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಗರ್ಭಿಣಿಯರು ಮೆಹೆಂದಿಯನ್ನು ಹಾಕಿಕೊಳ್ಳಬಾರದು ಎಂದು ಹೇಳಲಾಗುತ್ತದೆ.
5. ಇದು ಗರ್ಭಾವಸ್ಥೆಯಲ್ಲಿ, ಗ್ರಹಗಳ ಪ್ರಭಾವಕ್ಕೆ, ಮಹಿಳೆಯ ಸೂಕ್ಷ್ಮ ಮನಸ್ಸಿನ ಮೇಲೆ ಗಣನೀಯವಾಗಿ ಪರಿಣಾಮಬೀರುತ್ತದೆ. ಗರ್ಭಿಣಿಯರ ಜಾತಕದಲ್ಲಿ ಶುಕ್ರ ಗ್ರಹ ದುರ್ಬಲವಾಗಿದ್ದರೆ ಅಥವಾ ಅಶುಭವಾಗಿದ್ದರೆ ಮೆಹೆಂದಿಯನ್ನು ಹಾಕಿಕೊಳ್ಳುವುದರಿಂದ ಧನಾತ್ಮಕ ಪರಿಣಾಮಗಳ ಬದಲಾಗಿ ಋಣಾತ್ಮಕ ಪರಿಣಾಮಗಳನ್ನು ನೀಡುತ್ತದೆ.
6. ಗರ್ಭಾವಸ್ಥೆಯಲ್ಲಿ ಜಾತಕದಲ್ಲಿ ಶನಿ, ರಾಹು ಅಥವಾ ಕೇತುಗಳಂತಹ ಗ್ರಹಗಳು ಬಲವಾಗಿದ್ದರೆ ಗೋರಂಟಿಯು ಇನ್ನೂ ಹಾನಿಕಾರಕವಾಗಿದೆ. ತೊಂದರೆಗಳು, ಆತಂಕ ಮತ್ತು ಒತ್ತಡವನ್ನು ಹೆಚ್ಚಿಸುತ್ತದೆ. ಅಪಘಾತಗಳು ಅಥವಾ ತೊಡಕುಗಳನ್ನು ತಪ್ಪಿಸಲು ಗರ್ಭಾವಸ್ಥೆಯಲ್ಲಿ ಮೆಹೆಂದಿಯನ್ನು ಹಾಕಿಕೊಳ್ಳಬಾರದು ಎಂದು ಜ್ಯೋತಿಷಿಗಳು ಸಲಹೆ ಮಾಡುತ್ತಾರೆ.
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟಿಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)
