ವೈಕುಂಠ ಏಕಾದಶಿ ಏಕೆ ಆಚರಿಸಲಾಗುತ್ತದೆ? ವಿಷ್ಣುವನ್ನು ಪೂಜಿಸುವುದರಿಂದ ಏನು ಫಲ? -ಇಲ್ಲಿವೆ ಪುರಾಣ ಕಥೆಗಳು
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ವೈಕುಂಠ ಏಕಾದಶಿ ಏಕೆ ಆಚರಿಸಲಾಗುತ್ತದೆ? ವಿಷ್ಣುವನ್ನು ಪೂಜಿಸುವುದರಿಂದ ಏನು ಫಲ? -ಇಲ್ಲಿವೆ ಪುರಾಣ ಕಥೆಗಳು

ವೈಕುಂಠ ಏಕಾದಶಿ ಏಕೆ ಆಚರಿಸಲಾಗುತ್ತದೆ? ವಿಷ್ಣುವನ್ನು ಪೂಜಿಸುವುದರಿಂದ ಏನು ಫಲ? -ಇಲ್ಲಿವೆ ಪುರಾಣ ಕಥೆಗಳು

Vaikuntha Ekadashi 2025: ಜನವರಿ 10, 2025 ರಂದು ವೈಕುಂಠ ಏಕಾದಶಿ ಆಚರಣೆಗೆ ಎಲ್ಲಾ ದೇವಸ್ಥಾನಗಳಲ್ಲೂ ಸಿದ್ಧತೆ ನಡೆಯುತ್ತಿದೆ. ಈ ದಿನ ಉಪವಾಸವಿದ್ದು ವಿಷ್ಣುವನ್ನು ಪೂಜಿಸಿದರೆ ಪಾಪಗಳು ಪರಿಹಾರವಾಗುತ್ತದೆ, ಮೋಕ್ಷ ದೊರೆಯುತ್ತದೆ ಎಂಬ ನಂಬಿಕೆ ಇದೆ. ವೈಕುಂಠ ಏಕಾದಶಿ ಆಚರಣೆ ಹಿಂದಿನ ಪುರಾಣ ಕಥೆಗಳು ಹೀಗಿದೆ.

ವೈಕುಂಠ ಏಕಾದಶಿ ಆಚರಣೆ ಹಿಂದಿನ ಪುರಾಣ ಕಥೆಗಳು
ವೈಕುಂಠ ಏಕಾದಶಿ ಆಚರಣೆ ಹಿಂದಿನ ಪುರಾಣ ಕಥೆಗಳು

ಜನವರಿ 10, 2025 ರಂದು ವೈಕುಂಠ ಏಕಾದಶಿ ಆಚರಿಸಲಾಗುತ್ತಿದೆ. ಆ ದಿನ ಭಕ್ತರು ಉಪವಾಸವಿದ್ದು ವಿಷ್ಣು ಹಾಗೂ ಲಕ್ಷ್ಮೀಯನ್ನು ಪೂಜಿಸುತ್ತಾರೆ. ಮರುದಿನ ಉಪವಾಸ ಮುರಿಯುತ್ತಾರೆ. ಈ ಶುಭದಿನದಂದು ಎಲ್ಲಾ ದೇವಾಲಯಗಳಲ್ಲಿ ಉತ್ತರದ ಬಾಗಿಲಿನಿಂದ ಭಕ್ತರಿಗೆ ದರ್ಶನ ಸೌಲಭ್ಯ ಮಾಡಲಾಗುತ್ತದೆ. ಇದನ್ನು ಮುಕ್ಕೋಟಿ ಏಕಾದಶಿ ಎಂದೂ ಕರೆಯುತ್ತಾರೆ.

ಪುರಾಣಗಳ ಪ್ರಕಾರ ರಾಕ್ಷಸರ ಹಿಂಸೆಯನ್ನು ಸಹಿಸಲಾಗದೆ, ದೇವತೆಗಳು ಉತ್ತರ ದ್ವಾರದ ಮೂಲಕ ಮಹಾ ವಿಷ್ಣುವನ್ನು ಭೇಟಿಯಾಗಿ ತಮ್ಮ ಕಷ್ಟವನ್ನು ಪರಿಹರಿಸುವಂತೆ ಮನವಿ ಮಾಡಿಕೊಳ್ಳುತ್ತಾರೆ. ಆಗ ವಿಷ್ಣುವು ಮುರಾ ಎಂಬ ರಾಕ್ಷಸನನ್ನು ತನ್ನ ಏಕಾದಶ ಎಂಬ ಆಯುಧದಿಂದ ಸಂಹಾರ ಮಾಡಿ ದೇವತೆಗಳನ್ನು ರಕ್ಷಿಸುತ್ತಾನೆ. ಅಂದಿನಿಂದ, ಉತ್ತರ ದ್ವಾರದ ಮೂಲಕ ವಿಷ್ಣುವಿನ ದರ್ಶನ ಮಾಡಿದರೆ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ ಎನ್ನುವುದು ಭಕ್ತರ ನಂಬಿಕೆ. ಆದ್ದರಿಂದ ಭಕ್ತರು ಆ ದಿನ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ವೈಕುಂಠ ಏಕಾದಶಿಗೆ ಸಂಬಂಧಿಸಿದಂತೆ ಇನ್ನೂ ಕೆಲವೊಂದು ಕಥೆಗಳು ಪ್ರಚಲಿತದಲ್ಲಿದೆ.

ಸುಕೇತುಮನ್‌ ರಾಜ ಪುತ್ರದಾ ಏಕಾದಶಿ ಆಚರಿಸಿದ ಕಥೆ

ವೈಕುಂಠ ಏಕಾದಶಿಯನ್ನು ಪುತ್ರದಾ ಏಕಾದಶಿ ಎಂದೂ ಕರೆಯುತ್ತಾರೆ. ಇದರ ಹಿಂದೆ ಒಂದು ಕಥೆಯಿದೆ. ಹಿಂದೆ ಸುಕೇತುಮನ್ ಎಂಬ ರಾಜನಿದ್ದ. ಪ್ರಜೆಗಳು ಸಂತೋಷವಾಗಿರಬೇಕು, ಅವರಿಗೆ ಏನೂ ಕಷ್ಟ ಬರಬಾರದು ಎಂದು ರಾಜನು ಎಲ್ಲಾ ವ್ಯವಸ್ಥೆ ಮಾಡುತ್ತಿದ್ದ. ಆದರೆ ರಾಜನಿಗೆ ಮಕ್ಕಳಿಲ್ಲದ ಕೊರತೆ ಕಾಡುತ್ತಿತ್ತು. ಸಂತತಿಗಾಗಿ ರಾಜನು ಎಷ್ಟು ದೇವಸ್ಥಾನಗಳಿಗೆ ಭೇಟಿ ನೀಡಿದರೂ ಅವನಿಗೆ ಮಕ್ಕಳಾಗಿರುವುದಿಲ್ಲ. ಒಮ್ಮೆ ರಾಜನು ತನ್ನ ರಾಜ್ಯದ ಸಮೀಪದಲ್ಲಿದ್ದ ಒಬ್ಬ ಋಷಿಯ ಬಳಿಗೆ ಹೋಗಿ ತನ್ನ ಕೊರಗನ್ನು ಹೇಳಿ ಪರಿಹಾರಕ್ಕಾಗಿ ಮನವಿ ಮಾಡುತ್ತಾನೆ. ಆಗ ಋಷಿಗಳು ಪುತ್ರದಾ ಏಕಾದಶಿ ಬಗ್ಗೆ ತಿಳಿಸಿ ಆ ದಿನ ಉಪವಾಸ ಮಾಡುವುದು ಉತ್ತಮ ಎಂದು ಸಲಹೆ ನೀಡುತ್ತಾರೆ. ರಾಜನು ಋಷಿಗಳ ಮಾತಿನಂತೆ ಪುತ್ರದಾ ಏಕಾದಶಿ ವ್ರತವನ್ನು ಆಚರಿಸುತ್ತಾನೆ. ಇದಾದ ಕೆಲವು ದಿನಗಳ ನಂತರ ರಾಣಿ ಗರ್ಭ ಧರಿಸಿ ಗಂಡು ಮಗುವಿಗೆ ಜನ್ಮ ನೀಡುತ್ತಾಳೆ. ಮಕ್ಕಳಿಲ್ಲದವರು ವಿಷ್ಣುವನ್ನು ಪೂಜಿಸುವ ಮೂಲಕ ಪುತ್ರದಾ ಏಕಾದಶಿಯನ್ನು ಆಚರಿಸಿದರೆ ಸಂತಾನ ಲಾಭವಾಗುತ್ತದೆ ಎನ್ನುವ ಪ್ರತೀತಿ ಇದೆ. ಏಕಾದಶಿಯಂದು ಉಪವಾಸ ಮಾಡುವುದು ಬಹಳ ಮುಖ್ಯ.

ವಿಷ್ಣುವು ಏಕಾದಶ ಆಯುಧದ ಮೂಲಕ ಮುರ ಎಂಬ ರಾಕ್ಷಸನನ್ನು ಕೊಂದ ದಿನ

ಪದ್ಮ ಪುರಾಣದ ಪ್ರಕಾರ, ವೈಕುಂಠ ಏಕಾದಶಿಯು ವಿಷ್ಣುವು ಮುರ ಎಂಬ ರಾಕ್ಷಸನನ್ನು ಕೊಂದ ದಿನವಾಗಿದೆ. ಮುರ ಎಂಬ ರಾಕ್ಷಸನ ಕ್ರೌರ್ಯವನ್ನು ಸಹಿಸಲಾಗದೆ, ದೇವತೆಗಳು ವಿಷ್ಣುವಿನ ಮೊರೆ ಹೋಗುತ್ತಾರೆ. ಆ ರಾಕ್ಷಸನನ್ನು ಕೊಲ್ಲಲು ವಿಶೇಷ ಆಯುಧದ ಅಗತ್ಯವಿರುವ ವಿಚಾರ ವಿಷ್ಣುವಿಗೆ ತಿಳಿಯುತ್ತದೆ. ಒಮ್ಮೆ ಬದರಿಕಾಶ್ರಮದ ಹೈಮಾವತಿಯ ಗುಹೆಯಲ್ಲಿ ವಿಶ್ರಮಿಸುತ್ತಿದ್ದ ವಿಷ್ಣುವನ್ನು ಕೊಲ್ಲಲು ಮುರನು ಯತ್ನಿಸಿದಾಗ ವಿಷ್ಣುವಿನಿಂದ ಒಂದು ಶಕ್ತಿ ಹೊಮ್ಮಿ ಕಣ್ಣುಗಳಿಂದ ಮುರನನ್ನು ಸುಡುತ್ತದೆ. ಆಗ ವಿಷ್ಣುವು ಸಂತುಷ್ಟನಾಗಿ ತನ್ನಿಂದ ಹೊರಹೊಮ್ಮುವ ಶಕ್ತಿಗೆ ಏಕಾದಶಿ ಎಂದು ಹೆಸರಿಸಿ ವರವನ್ನು ಕೇಳಲು ಹೇಳುತ್ತಾನೆ. ಈ ದಿನ ಉಪವಾಸವಿದ್ದು ನಿನ್ನನ್ನು ಪೂಜಿಸುವವರ ಎಲ್ಲಾ ಪಾಪಗಳನ್ನು ತೊಡೆದುಹಾಕುವಂತೆ ಏಕಾದಶಿಯು, ವಿಷ್ಣುವಿನ ಬಳಿ ವರ ಕೇಳುತ್ತಾಳೆ. ಅದರಂತೆ ವಿಷ್ಣುವು ವೈಕುಂಠ ಏಕಾದಶಿಯಂದು ಉಪವಾಸವಿದ್ದು ತನ್ನನ್ನು ಪೂಜಿಸಿದವರ ಎಲ್ಲಾ ಕಷ್ಟಗಳು ಪರಿಹಾರವಾಗುತ್ತದೆ ಎಂದು ವರ ನೀಡುತ್ತಾನೆ.

ವೈಕುಂಠ ಏಕಾದಶಿ ದಿನ ಮುರನು ಅನ್ನದಲ್ಲಿ ಅಡಗಿಕೊಳ್ಳುತ್ತಾನೆ, ಆದ್ದರಿಂದ ಅನ್ನದಿಂದ ಮಾಡಿದ ಯಾವ ಆಹಾರವನ್ನೂ ಆ ದಿನ ತಿನ್ನಬಾರದು ಎಂಬ ನಂಬಿಕೆ ಇದೆ. ಈ ದಿನ ಉಪವಾಸವಿರುವುದು ಇತರ 23 ಏಕಾದಶಿಗಳ ಉಪವಾಸಕ್ಕೆ ಸಮ ಎಂದು ವಿಷ್ಣು ಪುರಾಣದಲ್ಲಿ ಹೇಳಲಾಗಿದೆ.

ಕೃಷ್ಣನು ಗೋಪಾಲಕರಿಗೆ ವಿವಿಧ ರೂಪಗಳ ದರ್ಶನ ಮಾಡಿಸಿದ ದಿನ

ಕೃಷ್ಣನ ಸಾಕು ತಂದೆ ನಂದಗೋಪನು ಒಮ್ಮೆ ಏಕಾದಶಿ ಆಚರಿಸಿ ಮರುದಿನ ದ್ವಾದಶಿ ಪಾರಣೆ ಮಾಡಲು ಸಿದ್ಧನಾಗುತ್ತಾನೆ. ಸ್ನಾನಕ್ಕೆಂದು ಬೆಳಗಿನ ಜಾವ ಯಮುನಾ ನದಿಗೆ ಹೋಗಿ ನೀರಿನಲ್ಲಿ ಮುಳುಗು ಹಾಕಿದಾಗ ವರುಣ ಎಂಬ ರಾಕ್ಷಸನ ಸೇವಕ ನಂದಗೋಪನನ್ನು ಹೊತ್ತೊಯ್ದು ವರುಣನಿಗೆ ಒಪ್ಪಿಸುತ್ತಾನೆ. ಸ್ನಾನಕ್ಕೆಂದು ಹೋದ ನಂದಗೋಪ ಬಹಳ ಹೊತ್ತಾದರೂ ಹಿಂತಿರುಗಿ ಬರದೆ ಇದ್ದ ವಿಚಾರ ಕೃಷ್ಣನಿಗೆ ತಿಳಿಯುತ್ತದೆ. ತಂದೆಯನ್ನು ಹುಡುಕಿ ವರುಣಲೋಕಕ್ಕೆ ಬರುತ್ತಾನೆ. ನಂದಗೋಪನು ಕೃಷ್ಣನ ತಂದೆ ಎಂದು ತಿಳಿದ ವರುಣನು ಕೃಷ್ಣನಿಗೆ ಆತಿಥ್ಯ ನೀಡಿ ತಂದೆಯನ್ನು ವಾಪಸ್‌ ಕಳಿಸುತ್ತಾನೆ. ಕೃಷ್ಣ ಕೂಡಾ ಆತನ ಭಕ್ತಿಗೆ ಮೆಚ್ಚಿ ವಿವಿಧ ರೂಪಗಳಲ್ಲಿ ದರ್ಶನ ನೀಡಿ ತಂದೆಯನ್ನು ಕರೆತರುತ್ತಾನೆ. ಈ ವಿಚಾರ ತಿಳಿದ ಗೋಪಾಲಕರು ಬೇಸರಗೊಳ್ಳುತ್ತಾರೆ. ನಮಗೆ ಮಾತ್ರ ಕೃಷ್ಣನ ರೂಪಗಳ ದರ್ಶನ ಭಾಗ್ಯವಿಲ್ಲ ಎಂದು ಗೋಪಾಲಕರು ಬೇಸರ ವ್ಯಕ್ತಪಡಿಸಿದಾಗ ಅವರಿಗೂ ಕೃಷ್ಣನು ತನ್ನ ವಿಶ್ವರೂಪ ದರ್ಶನ ಮಾಡಿಸುತ್ತಾನೆ. ಇದನ್ನು ಕಂಡು ಗೋಪಾಲಕರು ಧನ್ಯರಾಗುತ್ತಾರೆ. ಹೀಗೆ ಶ್ರೀಕೃಷ್ಣನು ಗೋಪಾಲಕರಿಗೆ ತನ್ನ ವಿವಿಧ ರೂಪಗಳ ದರ್ಶನ ಮಾಡಿಸಿದ ದಿನ ಏಕಾದಶಿಯಾಗಿರುತ್ತದೆ. ಹೀಗಾಗಿ ಏಕಾದಶಿ ಮಹತ್ವ ಪಡೆದಿದೆ.

ಏಕಾದಶಿ ದಿನ ಉಪವಾಸವಿದ್ದು ವಿಷ್ಣುವನ್ನು ಆರಾಧಿಸುವವರಿಗೆ ಜನನ, ಮರಣ ಚಕ್ರದಿಂದ ಮುಕ್ತಿ ಸಿಗುತ್ತದೆ, ಮೋಕ್ಷ ದೊರೆಯುತ್ತದೆ ಎಂಬ ನಂಬಿಕೆ ಇದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

---

ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ

2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.