ಸ್ತ್ರೀ ವಾರ ಭವಿಷ್ಯ: ಸಿಂಹ ರಾಶಿಯವರು ಉದ್ಯೋಗದಲ್ಲಿ ಉನ್ನತ ಮಟ್ಟಕ್ಕೆ ಹೋಗುತ್ತಾರೆ, ಕನ್ಯಾ ರಾಶಿಯ ಅವಿವಾಹಿತರಿಗೆ ವಿವಾಹ ಯೋಗವಿದೆ
ಸ್ತ್ರೀ ವಾರ ಭವಿಷ್ಯ: ಪ್ರತಿ ರಾಶಿಗೂ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಗಳನ್ನು ನೀಡುತ್ತವೆ. ಈ ವಾರ ಯಾವ ಮಹಿಳಾ ರಾಶಿಯವರಿಗೆ ಏನು ಫಲ? 1 ವಾರ ಭವಿಷ್ಯದ ವಿವರ ಇಲ್ಲಿದೆ.

ನಾಳೆ ಏನಾಗುವುದೋ ಬಲ್ಲವರು ಯಾರು ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ದಿನ ಭವಿಷ್ಯ ಹೇಗಿದೆ, ವಾರ ಭವಿಷ್ಯ, ಮಾಸ ಭವಿಷ್ಯ ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಕೆಲ ಮಹಿಳೆಯರು ಕೂಡ ತಮ್ಮ ಭವಿಷ್ಯವನ್ನು ನೋಡಿಕೊಳ್ಳುತ್ತಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. 2025ರ ಮೇ 9 ರ ಶುಕ್ರವಾರದಿಂದ 15ರ ಗುರುವಾರದವರೆಗೆ ಸಿಂಹ, ಕನ್ಯಾ, ತುಲಾ ಹಾಗೂ ವೃಶ್ಚಿಕ ರಾಶಿಯವರ ಸ್ತ್ರೀ ವಾರ ಭವಿಷ್ಯವನ್ನು ಇಲ್ಲಿ ನೀಡಲಾಗಿದೆ.
ಸಿಂಹ ರಾಶಿ
ಯಾವುದೇ ವಿಚಾರವನ್ನು ಹಗುರವಾಗಿ ತೆಗೆದುಕೊಳ್ಳುವುದಿಲ್ಲ. ನಂಬಿದವರಿಗೆ ಎಲ್ಲಾ ರೀತಿಯ ಸಹಾಯ ಸಹಕಾರ ನೀಡುವಿರಿ. ಉದ್ಯೋಗದಲ್ಲಿ ಉನ್ನತ ಮಟ್ಟ ತಲುಪುವಿರಿ. ಉತ್ತಮ ಅವಕಾಶ ದೊರೆತರೂ ಉದ್ಯೋಗವನ್ನು ಬದಲಿಸುವುದಿಲ್ಲ. ನಿಮ್ಮ ಧೈರ್ಯದ ಗುಣಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಕುಟುಂಬದಲ್ಲಿ ನಿಮ್ಮಿಂದಾಗಿ ಶಾಂತಿ ನೆಮ್ಮದಿ ನೆಲೆಸುತ್ತದೆ. ಮಕ್ಕಳ ಜೀವನದ ಬಗ್ಗೆ ಹೆಚ್ಚಿನ ಮಹತ್ವ ನೀಡುವಿರಿ. ಕಷ್ಟ ನಷ್ಟಕ್ಕೆ ಬೆದರುವುದಿಲ್ಲ. ಕುಟುಂಬದ ಸದಸ್ಯರ ಜೊತೆ ಯಾತ್ರಾ ಸ್ಥಳಕ್ಕೆ ಭೇಟಿ ನೀಡುವಿರಿ. ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಸಾಧಾರಣ ವರಮಾನ ದೊರೆಯುತ್ತದೆ. ದಾಂಪತ್ಯ ಜೀವನದಲ್ಲಿ ಯಾವುದೇ ತೊಂದರೆ ಕಂಡು ಬರದು. ಹೊಗಳಿಕೆಯನ್ನು ಇಷ್ಟಪಡುವಿರಿ. ಅವಶ್ಯಕ ಖರ್ಚು ವೆಚ್ಚಗಳಿರುತ್ತವೆ. ಕಲಾವಿದರಿಗೆ ವಿಶೇಷವಾದ ಅವಕಾಶ ಮತ್ತು ಗೌರವ ದೊರೆಯುತ್ತದೆ. ಆರೋಗ್ಯದ ಬಗ್ಗೆ ಗಮನವಿರಲಿ. ಹೃದಯ ಸಂಬಂಧಿ ತೊಂದರೆ ಇದ್ದರೆ ಎಚ್ಚರಿಕೆ ವಹಿಸಿ. ನಿಮ್ಮ ಮನಸ್ಸನ್ನಾಗಲಿ ಅಥವಾ ತೀರ್ಮಾನವನ್ನಾಗಲಿ ಬದಲಿಸಲು ಸಾಧ್ಯವಿರುವುದಿಲ್ಲ. ಪ್ರಯಾಣ ಮಾಡಲು ಇಷ್ಟಪಡುವುದಿಲ್ಲ.
ಪರಿಹಾರ: ಬಿಳಿ ಹಸುವಿಗೆ ಆಹಾರ ನೀಡಿ ದಿನದ ಕೆಲಸವನ್ನು ಆರಂಭಿಸಿ
ಅದೃಷ್ಟದ ಸಂಖ್ಯೆ: 5
ಅದೃಷ್ಟದ ದಿಕ್ಕು: ಪೂರ್ವ
ಅದೃಷ್ಟದ ಬಣ್ಣ: ರಕ್ತದ ಬಣ್ಣ
ಕನ್ಯಾ ರಾಶಿ
ಮನಸ್ಸಿನಲ್ಲಿಯೇ ಲೆಕ್ಕಾಚಾರ ಮಾಡಿ ಕೆಲಸ ಕಾರ್ಯಗಳನ್ನು ಆರಂಭಿಸುವಿರಿ. ಎಲ್ಲರೊಂದಿಗೆ ಸ್ನೇಹದಿಂದ ಇರಲು ಬಯಸುವಿರಿ. ಆದರೆ ಸಮಯಕ್ಕೆ ಸರಿಯಾಗಿ ಕೋಪದಿಂದ ದಿಟ್ಟ ಕ್ರಮವನ್ನು ತೆಗೆದುಕೊಳ್ಳಬಲ್ಲಿರಿ. ನಿಮ್ಮ ಬಗ್ಗೆ ಹೆಚ್ಚಿನ ಆತ್ಮವಿಶ್ವಾಸವಿರುತ್ತದೆ. ಬೇರೆಯವರು ಸುಲಭವಾಗಿ ನಿಮ್ಮ ಪ್ರಭಾವಕ್ಕೆ ಸಿಲುಕುತ್ತಾರೆ. ಅತಿಯಾದ ಮಾತುಕತೆ ಇರುತ್ತದೆ. ಬೇಸರವಿದ್ದರೂ ಕೆಲಸ ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸುವಿರಿ. ನೇರ ಮತ್ತು ನಿಷ್ಠುರದ ಗುಣವಿರುತ್ತದೆ. ಬಂಧು ಬಳಗದವರಿಂದ ಉತ್ತಮ ಸಹಕಾರ ಲಭ್ಯವಾಗುತ್ತದೆ. ಆರ್ಥಿಕ ಪರಿಸ್ಥಿತಿಯು ಕ್ರಮೇಣವಾಗಿ ಸುಸ್ಥಿತಿಗೆ ಬರಲಿದೆ. ಅವಿವಾಹಿತರಿಗೆ ವಿವಾಹ ಯೋಗವಿದೆ. ಪಾಲುಗಾರಿಕೆಯ ವ್ಯಾಪಾರ ವ್ಯವಹಾರದಲ್ಲಿ ನಿರೀಕ್ಷಿತ ಆದಾಯ ಇರಲಿದೆ. ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ. ತಪ್ಪು ಮಾಡಿದವರನ್ನು ಕಟುವಾಗಿ ಟೀಕಿಸುವಿರಿ. ಮಕ್ಕಳ ಜೊತೆ ಹಣಕಾಸಿನ ವಿಚಾರದಲ್ಲಿ ಮನಸ್ತಾಪ ಉಂಟಾಗುತ್ತದೆ.
ಪರಿಹಾರ: ಹಿರಿಯ ಸೋದರ ಅಥವಾ ಸೋದರಿಗೆ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿ
ಅದೃಷ್ಟದ ಸಂಖ್ಯೆ: 9
ಅದೃಷ್ಟದ ದಿಕ್ಕು: ದಕ್ಷಿಣ
ಅದೃಷ್ಟದ ಬಣ್ಣ: ಎಲೆಹಸಿರು ಬಣ್ಣ
ತುಲಾ ರಾಶಿ
ನಿಮ್ಮಲ್ಲಿ ಜನಾಕರ್ಷಕ ವ್ಯಕ್ತಿತ್ವವಿರುತ್ತದೆ. ಕೆಲಸ ಕಾರ್ಯಗಳಲ್ಲಿ ಸಮರ್ಪಣಾ ಮನೋಭಾವನೆ ಇರುತ್ತದೆ. ಮಕ್ಕಳನ್ನು ಪ್ರೀತಿ ವಾತ್ಸಲ್ಯದಿಂದ ನೋಡಿಕೊಳ್ಳುವಿರಿ. ಸ್ವಾಭಿಮಾನದ ಗುಣವಿರುತ್ತದೆ. ನೀವಾಗಿ ಬೇರೆಯವರಿಂದ ಸಹಾಯವನ್ನು ನಿರೀಕ್ಷಿಸುವುದಿಲ್ಲ. ಜೀವನದಲ್ಲಿ ದೊರೆಯುವ ಅವಕಾಶಗಳನ್ನು ಸಮರ್ಥಕವಾಗಿ ಬಳಸಿಕೊಳ್ಳುವಿರಿ. ಮನರಂಜನ ಕಾರ್ಯಕ್ರಮಗಳಲ್ಲಿ ನಿಮ್ಮ ಪಾತ್ರ ಮುಖ್ಯವಾಗುತ್ತದೆ. ಮಕ್ಕಳ ಜೀವನದಲ್ಲಿ ಎದುರಾಗುವ ಕಷ್ಟ ಕಾರ್ಪಣ್ಯಗಳು ನಿಮ್ಮಿಂದ ದೂರವಾಗುತ್ತವೆ. ಉದ್ಯೋಗದಲ್ಲಿ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ನಿಮ್ಮ ತಪ್ಪಿಗೆ ಬೇರೆಯವರನ್ನು ಹೊಣೆ ಮಾಡುವಿರಿ. ನರಕ್ಕೆ ಸಂಬಂಧಿಸಿದ ತೊಂದರೆ ಇರುತ್ತದೆ. ಕುಟುಂಬದಲ್ಲಿ ಎಲ್ಲರೊಡನೆ ಹೊಂದಿಕೊಂಡು ಬಾಳುವಿರಿ. ತಂದೆ ತಾಯಿಗೆ ಹಣದ ಸಹಾಯ ಮಾಡುವಿರಿ. ಹಣ ಗಳಿಕೆಯೊಂದೆ ಜೀವನದಲ್ಲಿ ಮುಖ್ಯವಾಗುವುದಿಲ್ಲ. ದಾಂಪತ್ಯ ಜೀವನದಲ್ಲಿ ಕುಟುಂಬದ ಹಿರಿಯರ ಆಶಯದಂತೆ ವಿವಾಹವಾಗುವಿರಿ. ಸ್ವಂತ ವಾಹನ ಕೊಳ್ಳುವಿರಿ.
ಪರಿಹಾರ: ಧಾರ್ಮಿಕ ಕೇಂದ್ರಕ್ಕೆ ಬಿಳಿ ಬಣ್ಣದ ಹೂಗಳನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿ
ಅದೃಷ್ಟದ ಸಂಖ್ಯೆ: 2
ಅದೃಷ್ಟದ ದಿಕ್ಕು: ಪಶ್ಚಿಮ
ಅದೃಷ್ಟದ ಬಣ್ಣ: ಕೇಸರಿ ಬಣ್ಣ
ವೃಶ್ಚಿಕ ರಾಶಿ
ನೋಡಲು ಕಠಿಣವಾಗಿ ತೋರಿದರು ಮನಸ್ಸಿನಲ್ಲಿ ಎಲ್ಲರ ಬಗ್ಗೆ ಕರುಣೆ ತುಂಬಿರುತ್ತದೆ. ಸದಾಕಾಲ ಸಹನೆಯಿಂದ ಎಲ್ಲರೊಡನೆ ವರ್ತಿಸುವಿರಿ. ಏಕಾಂಗಿಯಾಗಿ ನಿಮ್ಮ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಬಲ್ಲಿರಿ. ನಿಮ್ಮ ಮನದ ಭಾವನೆಯನ್ನು ಎಲ್ಲರೊಂದಿಗೆ ಹಂಚಿಕೊಳ್ಳುವಿರಿ. ಬೇಗನೆ ಕೋಪಗೊಳ್ಳುವಿರಿ. ಆದರೆ ಕೋಪದಲ್ಲಿಯೂ ಆತ್ಮೀಯರಿಗೆ ಸಹಾಯ ಮಾಡುವಿರಿ. ಪತಿಯ ಬಗ್ಗೆ ವಿಶೇಷ ಪ್ರೀತಿ ಮತ್ತು ಗಮನವನ್ನು ತೋರುವಿರಿ. ನಿಮ್ಮ ಮುಂದೆ ವಿರೋಧಿಗಳ ಆಟ ನಡೆಯುವುದಿಲ್ಲ. ಯಾವುದೇ ವಿಚಾರದಲ್ಲಿ ನಿರಾಸೆಯಾದಾಗ ಬೇರೆಯವರನ್ನು ದೂರುವಿರಿ. ಉದ್ಯೋಗದಲ್ಲಿ ಅನಿರೀಕ್ಷಿತ ಯಶಸ್ಸು ದೊರೆಯುತ್ತದೆ. ನಿಮ್ಮ ಅಥವಾ ಕುಟುಂಬದ ಗೌರವಕ್ಕೆ ಧಕ್ಕೆ ಬರುವ ಕೆಲಸದಿಂದ ದೂರ ಉಳಿಯುವಿರಿ. ಮಕ್ಕಳ ವಿಚಾರದಲ್ಲಿ ನಿಮ್ಮ ತೀರ್ಮಾನವೇ ಅಂತಿಮವಾಗುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಆದಾಯ ಪಡೆಯುವಿರಿ. ಪ್ರಯಾಣ ಬೆಳೆಸಲು ಮನೆ ಮಂದಿಯನ್ನು ಓಲೈಸುವಿರಿ.
ಪರಿಹಾರ: ಕುಟುಂಬದ ಹಿರಿಯರಿಗೆ ಸಹಾಯ ಮಾಡಿ ದಿನದ ಕೆಲಸ ಆರಂಭಿಸಿ
ಅದೃಷ್ಟದ ಸಂಖ್ಯೆ: 6
ಅದೃಷ್ಟದ ದಿಕ್ಕು: ಉತ್ತರ
ಅದೃಷ್ಟದ ಬಣ್ಣ: ಮಣ್ಣಿನ ಬಣ್ಣ
ಬರಹ: ಹೆಚ್. ಸತೀಶ್, ಜ್ಯೋತಿಷಿ, ಬೆಂಗಳೂರು
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ಸ್ತ್ರೀ ವಾರ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).