World Horoscope 2025: ಭಾರತಕ್ಕೆ ತೊಂದರೆ ಕೊಡಲು ಮುಂದಾಗುವ ದೇಶವೇ ಸಂಕಷ್ಟಕ್ಕೆ ಸಿಲುಕುತ್ತೆ,ಬಲಿಷ್ಠ ರಾಷ್ಟ ಆರ್ಥಿಕ ಕುಸಿತ ಎದುರಿಸುತ್ತೆ
2025 ರಲ್ಲಿ ಯಾವ ದೇಶಕ್ಕೆ ಆರ್ಥಿಕ ಕುಸಿತವನ್ನು ಕಾಣುತ್ತೆ, ಭಾರತಕ್ಕೆ ಏನೆಲ್ಲಾ ಸವಾಲುಗಳು ಇರುತ್ತದೆ, ಜಗತ್ತಿನಲ್ಲಿ ಗಲಿಬಿಲಿ ವಾತಾವರಣ ಇರುತ್ತಾ, ಯಾವುದಾದರೂ ವೈರಲ್ ಕಾಟ ಇರುತ್ತಾ ಎಲ್ಲಾ ಪ್ರಶ್ನೆಗಳು ನಿಮ್ಮಲ್ಲಿ ಇರಬಹುದು. 2025ರ ಜಗತ್ತಿನ ಭವಿಷ್ಯವನ್ನು ಇಲ್ಲಿ ತಿಳಿಯೋಣ. (ವರದಿ ಎಚ್. ಸತೀಶ್, ಜ್ಯೋತಿಷಿ)
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹಗಳು ರಾಶಿಗಳಲ್ಲಿನ ಸಂಚಾರವು ಪ್ರತಿಯೊಬ್ಬ ವ್ಯಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಯಾವ ರಾಶಿಯವರಿಗೆ ಹೆಚ್ಚು ಲಾಭ, ಸವಾಲುಗಳಿರುತ್ತವೆ ಎಂಬುದನ್ನು ತಿಳಿದುಕೊಳ್ಳಲು ನಿತ್ಯ ಭವಿಷ್ಯವನ್ನು ನೋಡುವ ಮಂದಿ ಇದ್ದಾರೆ. ಇದರ ನಡುವೆ ರಾಜ್ಯ, ದೇಶ, ಜಗತ್ತಿನ ಭವಿಷ್ಯದ ಬಗ್ಗೆಯೂ ಆಸಕ್ತಿಯನ್ನು ಹೊಂದಿರುತ್ತಾರೆ. 2025ರ ಹೊಸ ವರ್ಷದಲ್ಲಿ ಕರ್ನಾಟಕ, ಭಾರತ ಹಾಗೂ ಪ್ರಪಂಚಕ್ಕೆ ಸಂಬಂಧಿಸಿದಂತೆ ಯಾವೆಲ್ಲಾ ಸಂದೇಶಗಳಿವೆ, ಮುನ್ಸೂಚನೆಗಳೇನು ಎಂಬುದನ್ನು ತಿಳಿಯೋಣ.
ಜ್ಯೋತಿಷಿಗಳ ಪ್ರಕಾರ, 2025 ರಲ್ಲಿ ಇಡೀ ಪ್ರಪಂಚದಲ್ಲಿ ಭಯದ ಮತ್ತು ಗಲಿಬಿಲಿಯ ವಾತಾವರಣವಿರುತ್ತದೆ. ಧರ್ಮ ಮತ್ತು ಜಾತಿಯ ಹಿನ್ನೆಲೆಯಲ್ಲಿ ಆರಂಭವಾಗುವ ಗಲಭೆಗಳು ತಾನಾಗಿಯೇ ನಿಲ್ಲುತ್ತದೆ. ಶಕ್ತಿಶಾಲಿ ದೇಶಗಳು ತಮ್ಮ ಒತ್ತಡವನ್ನು ಸಣ್ಣ ಪುಟ್ಟ ದೇಶಗಳ ಮೇಲೆ ಹೇರುವಲ್ಲಿಯೂ ವಿಫಲವಾಗುತ್ತದೆ. ಪ್ರಪಂಚದ ನೇತೃತ್ವವನ್ನು ವಹಿಸಿರುವ ಸಂಸ್ಥೆಯಲ್ಲಿ ಬದಲಾವಣೆಗಳು ಉಂಟಾಗುತ್ತವೆ. ಇದರಿಂದಾಗಿ ಮುಂದುವರೆದ ದೇಶಗಳು ತಮ್ಮ ಪ್ರಾತಿನಿಧ್ಯವನ್ನು ಉಳಿಸಿಕೊಳ್ಳಲು ಕಷ್ಟಪಡಬೇಕಾಗುತ್ತದೆ. ಸಣ್ಣ ಪುಟ್ಟ ದೇಶಗಳು ಒಗ್ಗಟ್ಟಿನಿಂದ ಅಪಾಯಕಾರಿ ಸನ್ನಿವೇಶವನ್ನು ಎದುರಿಸುತ್ತವೆ.
‘ಧರ್ಮದ ತಳಹದಿಯಲ್ಲಿ ನಿಂತ ದೇಶಗಳಲ್ಲಿ ಅರಾಜಕತೆ ಹೆಚ್ಚಾಗುತ್ತೆ’
ದೊಡ್ಡ ದೇಶವೊಂದು ಹಣಕಾಸಿನ ವಿಚಾರದಲ್ಲಿ ದಿಢೀರ್ ಕುಸಿತ ಕಾಣುತ್ತದೆ. ಸಶಕ್ತವಾದ ದೇಶಗಳು ಪರಸ್ಪರ ಒಂದನ್ನೊಂದು ದೂಷಿಸಿಕೊಂಡು ನಡೆಯುತ್ತವೆ. ಧರ್ಮದ ತಳಹದಿಯಲ್ಲಿ ನಿಂತ ದೇಶಗಳಲ್ಲಿ ಅರಾಜಕತೆ ಮೂಡುತ್ತದೆ. ಅತಿಯಾದ ಬಿಸಿಲಿಗೆ ಜನರು ಜೀವ ತೆರುತ್ತಾರೆ. ಅತಿಯಾದ ಮಳೆಯಿಂದಲೂ ಕಷ್ಟವನ್ನು ಅನುಭವಿಸುತ್ತಾರೆ. ಇಡೀ ಪ್ರಪಂಚದಲ್ಲಿ ಸ್ತ್ರೀಯರ ಪ್ರಾಮುಖ್ಯ ಹೆಚ್ಚುತ್ತದೆ. ಪ್ರಪಂಚದ ಹಣಕಾಸಿನ ವ್ಯವಸ್ಥೆಯಲ್ಲಿ ಅವ್ಯವಸ್ಥೆ ತಲೆದೋರುತ್ತದೆ. ಯುದ್ಧದ ಭಯ ಇದ್ದರೂ ದೊಡ್ಡ ಮಟ್ಟದಲ್ಲಿ ಯುದ್ಧ ನಡೆಯುವುದಿಲ್ಲ. ಜಾಗತಿಕ ಮಟ್ಟದಲ್ಲಿ ಅಂತಾರಾಷ್ಟ್ರೀಯ ವ್ಯಾಪಾರವು ಮೌಲ್ಯವನ್ನು ಕಳೆದುಕೊಳ್ಳುತ್ತದೆ.
ದೊಡ್ಡ ದೇಶವಲ್ಲದೆ ಸಣ್ಣಪುಟ್ಟ ದೇಶಗಳು ಸಹ ಅಹಂಭಾವದಿಂದ ನಡೆದುಕೊಳ್ಳುತ್ತವೆ. ಇದರಿಂದಾಗಿ ಜಾಗತಿಕ ಮಟ್ಟದಲ್ಲಿ ಹಲವಾರು ಬದಲಾವಣೆಗಳು ಕಂಡುಬರುತ್ತವೆ. ಪರಸ್ಪರ ಪ್ರತಿಯೊಬ್ಬರು ಸಹಕಾರದಿಂದ ನಡೆದುಕೊಂಡಲ್ಲಿ ಮಾತ್ರ ಈ ವರ್ಷದಲ್ಲಿ ಜಾಗತಿಕ ನೆಮ್ಮದಿ ನೆಲೆಸುತ್ತದೆ. ಇಲ್ಲವಾದಲ್ಲಿ ವರ್ಷವಿಡೀ ಒಂದಲ್ಲ ಒಂದು ದೇಶಗಳಲ್ಲಿ ಅಸಂಬದ್ಧ ಸನ್ನಿವೇಶಗಳು ಎದುರಾಗುತ್ತವೆ. ಶಕ್ತಿಶಾಲಿಯಾದ ದೇಶಗಳು ಸಹ ಕೆಲವೊಮ್ಮೆ ಏನೂ ತಿಳಿಯದಂತೆ ಕಣ್ಣು ಮುಚ್ಚಿಕೊಳ್ಳುತ್ತವೆ. ನೈಸರ್ಗಿಕ ವಿಕೋಪದಿಂದ ಪಾರಾಗಲು ಯಾರಿಂದಲೂ ಸಾಧ್ಯವಾಗುವುದಿಲ್ಲ.
ದೊಡ್ಡ ದೇಶಗಳಿಗೆ ಭಾರತದ ಸಹಕಾರ ಬೇಕೇ ಬೇಕು
ಭಾರತದ ಸಹಕಾರವು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ದೊಡ್ಡ ದೇಶಗಳಿಗೆ ಬೇಕಾಗುತ್ತದೆ. ತಂತ್ರಜ್ಞಾನದ ವಿಚಾರದಲ್ಲಿ ಭಾರತವು ಪ್ರಪಂಚದ ಅತಿ ದೊಡ್ಡ ಶಕ್ತಿಯಾಗಿ ಬೆಳೆಯುತ್ತದೆ. ವಿದೇಶದಲ್ಲಿರುವ ಭಾರತೀಯ ಉದ್ಯೋಗಿಗಳು ಕಷ್ಟಕ್ಕೆ ಸಿಲುಕುತ್ತಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತದ ಉತ್ಪನ್ನಗಳಿಗೆ ದೊಡ್ಡ ಮಟ್ಟದ ಬೇಡಿಕೆ ಉಂಟಾಗಲಿದೆ. ನೆರೆ ಹೊರೆಯ ರಾಷ್ಟ್ರಗಳ ಜೊತೆಯಲ್ಲಿ ರಾಜಕೀಯ ವಿಚಾರದಲ್ಲಿತೊಂದರೆ ಎದುರಾಗುತ್ತದೆ. ದೇಶ ವಿರೋಧಿ ಶಕ್ತಿಗಳ ವಿರುದ್ಧ ಹೋರಾಡಲು ಸದಾ ಸನ್ನದ್ದವಾಗಿ ಇರಬೇಕಾಗುತ್ತದೆ.
ದಕ್ಷಿಣ, ಉತ್ತರ ಭಾರತದ 2025ರ ಭವಿಷ್ಯ
ದಕ್ಷಿಣ ಭಾರತದ ರಾಜಕೀಯ ರಂಗದಲ್ಲಿ ಅನಿರೀಕ್ಷ ಬದಲಾವಣೆಗಳು ಉಂಟಾಗುತ್ತವೆ. ಪರಸ್ಪರ ಹೊಂದಾಣಿಕೆ ಕಂಡು ಬರುವುದಿಲ್ಲ. ಕೆಲವು ಗಣ್ಯ ವ್ಯಕ್ತಿಗಳು ತಮ್ಮದೇ ತಪ್ಪು ನಿರ್ಧಾರಗಳಿಂದ ಕಷ್ಟಕ್ಕೆ ಸಿಲುಕುತ್ತಾರೆ. ಸಣ್ಣಪುಟ್ಟ ರಾಜಕೀಯ ಪಕ್ಷಗಳಿಗೆ ನೆಲೆ ಇಲ್ಲದಂತಾಗುತ್ತದೆ. ಒಗ್ಗಟ್ಟಿನ ಕೊರತೆಯು ಭಾರತದಲ್ಲಿ ಕೆಟ್ಟ ಬದಲಾವಣೆಗಳನ್ನು ತರುತ್ತವೆ. ನಿರುದ್ಯೋಗ ಸಮಸ್ಯೆಯು ಹೆಚ್ಚಲಿದೆ. ಕಾನೂನಿನ ವಿಚಾರದಲ್ಲಿ ಹತ್ತು ಹಲವು ಬದಲಾವಣೆಗಳು ಉಂಟಾಗುತ್ತವೆ. ಉತ್ತರ ಭಾರತದಲ್ಲಿ ಅನೇಕ ಸಮಸ್ಯೆಗಳು ಉಂಟಾಗುತ್ತವೆ. ಆದರೆ ಬಹುತೇಕ ಸಮಸ್ಯೆಗಳು ಪರಿಹಾರವಿಲ್ಲದೆ ಉಳಿಯಲಿವೆ. ದೇಶಕ್ಕೆ ಸಂಬಂಧಪಟ್ಟ ಮುಖ್ಯ ವಿಚಾರ ಒಂದರ ಬಗ್ಗೆ ಪಕ್ಷ ಭೇದ ಮರೆತು ಎಲ್ಲಾ ಪಕ್ಷಗಳು ಒಮ್ಮತದ ನಿರ್ಧಾರ ತೆಗೆದುಕೊಳ್ಳುತ್ತವೆ. ನೆರೆ ರಾಷ್ಟ್ರವೊಂದರ ಜೊತೆ ಸಣ್ಣ ಪ್ರಮಾಣದ ಯುದ್ಧವನ್ನು ಸಹ ಮಾಡಬೇಕಾಗುತ್ತದೆ.
ಭಾರತಕ್ಕೆ ತೊಂದರೆ ಕೊಡಲು ಮುಂದಾದ ದೇಶವೇ ಕಷ್ಟಕ್ಕೆ ಸಿಲುಕುತ್ತದೆ. ಭಾರತದ ಒಗ್ಗಟ್ಟನ್ನು ಮುರಿಯಲು ನೆರೆಯ ದೇಶವೊಂದು ದೊಡ್ಡದಾದ ರೂಪುರೇಷೆಯನ್ನು ಸಿದ್ಧಪಡಿಸುತ್ತದೆ. ಆದರೆ ದೇಶದ ಸಾರ್ವಭೌಮತ್ವವನ್ನು ಅಲುಗಾಡಿಸಲು ಯಾರಿಗೂ ಸಾಧ್ಯವಾಗುವುದಿಲ್ಲ. ನೈಸರ್ಗಿಕ ವಿಕೋಪಗಳು ಮತ್ತೊಮ್ಮೆ ದೇಶಕ್ಕೆ ಸವಾಲಾಗಿಯೇ ಉಳಿಯುತ್ತದೆ. ವಿದೇಶದಲ್ಲಿ ನೆಲೆಸಿರುವ ಭಾರತೀಯರು ಮನಸ್ಸಿಲ್ಲದೆ ಹೋದರು ಒತ್ತಡಕ್ಕೆ ಮಣಿದು ಮರಳಿ ದೇಶಕ್ಕೆ ಮರಳುತ್ತಾರೆ. ಒಟ್ಟಾರೆ ಭಾರತವು ಜಾಗತಿಕ ಮಟ್ಟದಲ್ಲಿ ಬೆಳೆದರು ಆಂತರಿಕವಾಗಿ ಸಾಧ್ಯವಾಗುವುದಿಲ್ಲ. ರಾಜಕೀಯ ನಾಯಕತ್ವದಲ್ಲಿ ಮಹತ್ತರ ಬದಲಾವಣೆಗಳು ಕಾಣಲಿವೆ. ಹೊಸ ರೀತಿಯ ಅಪರಾಧಗಳು ದೇಶದಲ್ಲಿ ಕಂಡು ಬರುತ್ತವೆ. ದೇಶದ ಬಗ್ಗೆ ಅಭಿಮಾನ ಮೂಡುವಂತಹ ಹಲವು ಕೆಲಸಗಳು ಕಣ್ಣೆದುರು ನಡೆಯಲಿವೆ.
ಸರ್ಕಾರದ ಆರೋಗ್ಯ ಸವಾಲಾಗುತ್ತಾ? 2025 ರ ಕರ್ನಾಟಕದ ಭವಿಷ್ಯ
ಕರ್ನಾಟಕದಲ್ಲಿ ಶ್ರೀಸಾಮಾನ್ಯರು ನೆಮ್ಮದಿ ಮತ್ತು ಸುಖ ಜೀವನ ನಡೆಸಲು ಹಣದ ಕೊರತೆ ಕಂಡುಬರುತ್ತದೆ. ಪ್ರಮುಖವಾಗಿ ಮಾರ್ಚ್ ತಿಂಗಳ ನಂತರ ಜೀವನ ನಿತ್ಯ ಬಳಸುವ ಆಹಾರಧಾನ್ಯಗಳು ಮತ್ತು ಅಗತ್ಯವಿರುವ ಇತರೆ ಪದಾರ್ಥಗಳ ಬೆಲೆಯು ಹೆಚ್ಚುತ್ತವೆ. ರಾಜಕೀಯದಲ್ಲಿ ದೊಡ್ಡ ಪಕ್ಷ ಒಂದರಲ್ಲಿ ಆಂತರಿಕ ಬಿಕ್ಕಟ್ಟು ಕೊನೆಯಿಲ್ಲದಂತಾಗುತ್ತದೆ. ಜನಪ್ರಿಯ ವ್ಯಕ್ತಿಗಳು ಸಮಸ್ಯೆಗಳಿಗೆ ಸಿಲುಕಲಿದ್ದಾರೆ. ಜನಸಾಮಾನ್ಯರ ಆರೋಗ್ಯದ ವಿಚಾರವೇ ಸರಕಾರಕ್ಕೆ ದೊಡ್ಡ ಸವಲಾಗಲಿದೆ. ಉದ್ಯೋಗದ ವಿಚಾರದಲ್ಲಿ ಯುವಕರ ನಂಬಿಕೆಯು ಹುಸಿಯಾಗಲಿದೆ.
ಉತ್ತರ ಭಾಗದಲ್ಲಿ ಹೆಚ್ಚಿನ ಸಮಸ್ಯೆಗಳು ಇರಲಿವೆ. ಉತ್ತರ ಕರ್ನಾಟಕದ ರಾಜಕೀಯ ನಾಯಕರ ಅಸ್ತಿತ್ವದಲ್ಲಿ ದೊಡ್ಡ ಸ್ಪರ್ಧೆ ನಡೆಯಲಿದೆ. ಜಾತಿ ಲೆಕ್ಕಾಚಾರವು ರಾಜಕೀಯ ರಂಗದಲ್ಲಿ ಮುಗಿಲು ಮುಟ್ಟುತ್ತದೆ. ಕ್ರೀಡಾಪಟುಗಳಿಗೆ ಸರಿಯಾದಂತಹ ಸಹಾಯ ಅಥವಾ ಸಹಕಾರವು ದೊರೆಯುವುದಿಲ್ಲ. ಉನ್ನತ ವಿದ್ಯಾಭ್ಯಾಸದಲ್ಲಿ ಕರ್ನಾಟಕವು ಇಡೀ ದೇಶದ ಗಮನ ಸೆಳೆಯಲಿದೆ. ಹಣಕಾಸಿನ ವಿಚಾರದಲ್ಲಿ ಕರ್ನಾಟವು ತೊಂದರೆಗೆ ಸಿಲುಕುತ್ತದೆ. ಈ ಕಾರಣದಿಂದಾಗಿ ಬೆಲೆಗಳು ಗಗನ ಮುಟ್ಟಲಿವೆ. ರಾಜಕೀಯ ಕ್ಷೇತ್ರಕ್ಕೆ ಹೊಸಬರ ಆಗಮನವಾಗುತ್ತದೆ. ಅಪರಾಧ ಮತ್ತು ಅಪರಾಧಿಗಳ ಸಂಖ್ಯೆಯು ಹೆಚ್ಚುತ್ತದೆ. ಅತ್ಯಂತ ಪ್ರಭಾವಿ ವ್ಯಕ್ತಿಯೊಬ್ಬರು ಕಾನೂನಿನ ತೊಂದರೆಗೆ ಒಳಪಡುತ್ತಾರೆ. ಗ್ರಾಮೀಣ ಪ್ರತಿಭೆಗಳಿಗೆ ಮೊದಲ ಆದ್ಯತೆ ದೊರೆಯುತ್ತದೆ. ಉತ್ತರ ಭಾಗದಲ್ಲಿ ಜನಾಂಗೀಯ ದ್ವೇಷವು ಹೆಚ್ಚುತ್ತದೆ. ನೈಸರ್ಗಿಕ ವಿಕೋಪವು ಹೆಚ್ಚಿನ ಮಟ್ಟದಲ್ಲಿಯೇ ಇರುತ್ತದೆ.
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.