ಕಾಂಚೀಪುರಂನ ದಕ್ಷಿಣಮೂರ್ತಿ ದೇವಾಲಯದಲ್ಲಿ ಪೂಜೆ ಮಾಡಿದರೆ ವಿದ್ಯ, ಬುದ್ಧಿ, ಜ್ಞಾನ ಹೆಚ್ಚಾಗುತ್ತೆ; ಆಸಕ್ತಿಕರ ಮಾಹಿತಿ ಇಲ್ಲಿದೆ
ಗುರು ಟೆಂಬಲ್ ಖ್ಯಾತಿಯಾಗಿರುವ ಕಾಂಚೀಪುರಂ ಸಮೀಪದ ದಕ್ಷಿಣಮೂರ್ತಿ ದೇವಾಲಯದಲ್ಲಿ ಪೂಜೆ ಮಾಡುವುದರಿಂದ ವಿದ್ಯಾರ್ಥಿಗಳಿಗೆ ಹಲವಾರು ಪ್ರಯೋಜನಗಳಿವೆ. ವಿದ್ಯೆ, ಬುದ್ಧಿ ಹಾಗೂ ಜ್ಞಾನ ಹೆಚ್ಚಾಗುತ್ತೆ ಎಂಬ ನಂಬಿಕೆ ಇದೆ.

ಪ್ರತಿಯೊಬ್ಬರಿಗೂ ವಿದ್ಯಾಭ್ಯಾಸವು ಅತಿ ಮುಖ್ಯವಾಗುತ್ತದೆ. ಆದರೆ ಸಾಮಾನ್ಯವಾಗಿ ವಿದ್ಯೆಗಿಂತಲೂ ಹೆಚ್ಚಿನ ಬುದ್ಧಿಶಕ್ತಿ ಇರುತ್ತದೆ. ಆದ್ದರಿಂದಲೇ ಸಾಮಾನ್ಯವಾಗಿ ವಿದ್ಯಾ-ಬುದ್ಧಿ ಎಂಬ ಜೋಡಿ ಪದವನ್ನು ಉಪಯೋಗಿಸುತ್ತೇವೆ. ಉತ್ತಮ ವಿದ್ಯೆ ಗಳಿಸಲು ಗುರುಗಳ ಅನುಗ್ರಹ ಇರಬೇಕು. ಶ್ರೀ ದಕ್ಷಿಣ ಮೂರ್ತಿಯನ್ನು ಸಹ ಗುರುಗಳೆಂದು ಸ್ವೀಕರಿಸಿದ್ದೇವೆ. ಪ್ರತಿಯೊಂದು ವಿದ್ಯೆಗೂ ಶ್ರೀ ಪರಮೇಶ್ವರನೇ ಮೂಲವಾಗುತ್ತಾನೆ. ದಕ್ಷಿಣಾಮೂರ್ತಿಯು ಭಗವಾನ್ ಪರಶಿವನ ಒಂದು ಅಂಶ. ಆದ್ದರಿಂದ ಎಲ್ಲಾ ರೀತಿಯ ವಿದ್ಯೆ, ಬುದ್ದಿ ಮತ್ತು ಜ್ಞಾನಕ್ಕೆ ದಕ್ಷಿಣಾಮೂರ್ತಿಯನ್ನು ಪೂಜಿಸುವುದು ಶ್ರೇಯಸ್ಕರ. ಇಲ್ಲಿ ದೇವರನ್ನು ಪೂಜಿಸುವುದರಿಂದ, ಆರಾಧಿಸುವುದರಿಂದ ಉನ್ನತ ಮಟ್ಟದ ಅರಿವು ಮತ್ತು ತಿಳುವಳಿಕೆ ದೊರೆಯುತ್ತದೆ ಎಂಬ ನಂಬಿಕೆ ಇದೆ.
ಶಿವನ ಅಂಶವಾದ ದಕ್ಷಿಣಾಮೂರ್ತಿಯು ಪ್ರಾಚೀನ ಕಲೆಗಳಾದ ಯೋಗ, ಸಂಗೀತ, ನಾಟ್ಯ ಮತ್ತು ಬುದ್ಧಿವಂತಿಕೆಯನ್ನು ಕರುಣಿಸುವ ಶಿಕ್ಷಕನಾಗಿದ್ದಾನೆ. ಬುದ್ಧಿಮತ್ತೆಯ ದೇವರೆಂದೇ ನಂಬುತ್ತಾರೆ. ಧರ್ಮಗ್ರಂಥಗಳ ಅನ್ವಯ ಪ್ರತಿಯೊಬ್ಬರಿಗೂ ಗುರುಗಳು ಇರಲೇಬೇಕು. ಒಂದು ವೇಳೆ ಇಲ್ಲದೆ ಹೋದರೆ ದಕ್ಷಿಣಾಮೂರ್ತಿಗೆ ಗುರುವಿನ ಸ್ಥಾನವನ್ನು ನೀಡಿ ಪೂಜಿಸಬಹುದು.
ಕಂಚೀಪುರ ಜಿಲ್ಲೆಯಲ್ಲಿರುವ ಗೋವಿಂದವಾಡಿಯಲ್ಲಿರುವ ದೇವಾಲಯ
ಇಂತಹ ಸಮಸ್ತವಿದ್ಯೆಗೂ ಒಡೆಯನಾದ ಶ್ರೀ ದಕ್ಷಿಣಾಮೂರ್ತಿಯ ದೇವಾಲಯವು ಭಾರತದಲ್ಲಿದೆ. ಈ ದೇವಾಲಯವು ತಮಿಳುನಾಡಿನ ಕಂಚೀಪುರ ಜಿಲ್ಲೆಯಲ್ಲಿರುವ ಗೋವಿಂದವಾಡಿ ಎಂಬ ಊರಿನಲ್ಲಿದೆ. ಇಲ್ಲಿರುವ ಆಲದ ಮರದಲ್ಲಿ ಸಾಕ್ಷಾತ್ ಶ್ರೀ ದಕ್ಷಿಣಾಮೂರ್ತಿಯು ನೆಲೆಸಿದ್ದಾರೆ ಎಂಬ ನಂಬಿಕೆ ಎಲ್ಲರಲ್ಲಿ ಇದೆ. ಶೀ ಗಣಪತಿ ಮತ್ತು ಶ್ರೀ ನಾಗದೇವತೆಗಳು ವಿಶೇಷ ಶೈಲಿಯಲ್ಲಿ ಇಲ್ಲಿ ಸ್ಥಿತರಾಗಿದ್ದಾರೆ. ಇಲ್ಲಿನ ಅತಿ ಮುಖ್ಯ ದೇವರುಗಳೆಂದರೆ ಕೈಲಾಸನಾಥಸ್ವಾಮಿ ಮತ್ತು ಅಖಿಲಾಂಡೇಶ್ವರಿ. ಇದರ ಜೊತೆಯಲ್ಲಿ ಶೀದೇವಿ ಮತ್ತು ಭೂದೇವಿಗಳ ದೇವಾಲಯವಿದೆ. ಶ್ರೀ ಆಂಜನೇಯ ಮತ್ತು ಗರುಡನ ವಿಗ್ರಹಗಳು ನೋಡಲು ವಿಶೇಷವಾಗಿವೆ. ಇದರೊಂದಿಗೆ ಜನರ ಆಕರ್ಷಣೆ ಮತ್ತು ನಂಬಿಕೆಗೆ ಕಾರಣವಾದ ದಕ್ಷಿಣಾಮೂರ್ತಿಯ ದೇವಾಲಯವಿದೆ. ಈ ದೇವಾಲಯವು ದಕ್ಷಿಣಾಭಿಮುಖವಾಗಿದೆ.
ಜನ್ಮ ಕುಂಡಲಿಯಲ್ಲಿನ ಗುರುಗ್ರಹದ ದೋಷಕ್ಕೂ ಇಲ್ಲಿದೆ ಪರಿಹಾರ
ವಿಷ್ಣುವು ಈ ಕ್ಷೇತ್ರದಲ್ಲಿ ಶಿವನ ಪೂಜೆಯನ್ನು ಮಾಡುತ್ತಾನೆ. ಮಂತ್ರಗಳಿಂದ ಸ್ತುತಿಸುತ್ತಾನೆ. ಈ ಕಾರಣಗಳಿಂದಲೇ ಈ ಸ್ಥಳಕ್ಕೆ ಗೋವಿಂದವಾಡಿ ಎಂಬ ಹೆಸರು ಬಂದಿದೆ. ಆದ್ದರಿಂದ ವೇದವಿದ್ಯೆಗೆ ಅಧಿಪತಿಯಾದ ಶ್ರೀ ವಿಷ್ಣುವಿನ ಅಭಯವು ಇಲ್ಲಿನ ಪೂಜೆ ಪುನಸ್ಕಾರಗಳಿಂದ ದೊರೆಯುತ್ತದೆ. ಪ್ರತಿಯೊಂದು ಕೆಲಸ ಕಾರ್ಯಗಳಿಗೂ ಗೋಚಾರದ ಗುರುವಿನ ಬಲಾಬಲಗಳನ್ನು ನೋಡುತ್ತೇವೆ. ಗುರುಬಲವು ಅತಿ ಮುಖ್ಯವಾಗುತ್ತದೆ. ಒಂದು ವೇಳೆ ಅನಿವಾರ್ಯದ ಪರಿಸ್ಥಿತಿಗಳಲ್ಲಿ ಗುರುಬಲ ಇರದ ಸಂದರ್ಭದಲ್ಲಿ ಶುಭಕಾರ್ಯಗಳನ್ನು ಮಾಡಬೇಕಾಗುತ್ತದೆ. ಅಂತಹ ವೇಳೆಯಲ್ಲಿ ಈ ದೇವಾಲಯದಲ್ಲಿ ಗುರುಪೂಜೆಯನ್ನು ನೆರವೇರಿಸಿದಲ್ಲಿ ದೋಷವು ಪರಿಹಾರವಾಗಿ ಕೆಲಸ ಕಾರ್ಯಗಳು ಸುಗಮವಾಗಿ ಸಾಗುತ್ತವೆ. ಇಲ್ಲಿ ಗುರುಪೂಜೆಯನ್ನು ಮಾಡುವುದರಿಂದ ಕೇವಲ ಗೋಚಾರ ಮಾತ್ರವಲ್ಲದೆ ಜನ್ಮ ಕುಂಡಲಿಯಲ್ಲಿನ ಗುರುಗ್ರಹದ ದೋಷಕ್ಕೂ ಪರಿಹಾರವನ್ನು ಪಡೆಯಬಹುದು. ಆದರೆ ಗುರುಬಲ ಇರದ ವೇಳೆಯಲ್ಲಿ ಉಪನಯನವನ್ನು ಮಾತ್ರಾ ಮಾಡಲೇಬಾರದು.
ಕುಜದೋಷಕ್ಕೆ ಪರಿಹಾರಗಳು
ಜನ್ಮಕುಂಡಲಿಯಲ್ಲಿ ಕುಜದೋಷ ಇದ್ದರೂ ಗುರುಗ್ರಹದ ದೃಷ್ಟಿ ಅಥವಾ ಸಂಯೋಗವಿದ್ದಲ್ಲಿ ಕುಜದೋಷ ನಿವಾರಣೆ ಆಗುತ್ತದೆ. ಈ ದೇವಾಲಯದಲ್ಲಿ ಶ್ರೀ ದಕ್ಷಿಣಾಮೂರ್ತಿಯನ್ನು ಪೂಜಿಸಿದಲ್ಲಿ ಕುಜದೋಷವು ನಿವಾರಣೆಯಾಗುತ್ತದೆ. ಉತ್ತಮ ಆರೋಗ್ಯವು ಲಭಿಸುತ್ತದೆ. ಈ ದೇವಾಲಯದಲ್ಲಿ ಭಕ್ತರು ವಿಶೇಷವಾದ ಪೂಜೆಯನ್ನು ಸಲ್ಲಿಸುತ್ತಾರೆ. ಈ ದೇವಾಲಯದಲ್ಲಿ ತೆಂಗಿನಕಾಯಿಯ ಎರಡು ಹೋಳುಗಳಲ್ಲಿ ತುಪ್ಪವನ್ನು ತುಂಬಿಸಿ ದೀಪಗಳನ್ನು ಬೆಳಗಿಸುತ್ತಾರೆ. ಇದರಿಂದಾಗಿ ದೂರವಾದ ದಂಪತಿ ನಡುವೆ ಉತ್ತಮ ಬಾಂಧವ್ಯ ಮೂಡುತ್ತದೆ ಎಂಬ ನಂಬಿಕೆ ಇದೆ.
ಶಿವ ಮತ್ತು ದಕ್ಷಿಣಾಮೂರ್ತಿಗಳಿಗೆ ಒಂದೇ ಗೋಪುರವಿದೆ. ಶಿವನಿಗೆ ಹಣೆಯಲ್ಲಿ ಮೂರನೆ ಕಣ್ಣಿದ್ದಂತೆ ಈ ದೇವಾಲಯದಲ್ಲಿ ನೆಲೆಸಿರುವ ಶ್ರೀ ದಕ್ಷಿಣಾಮೂರ್ತಿಯ ಹಣೆಯಲ್ಲಿಯೂ ಮೂರನೆಯ ಕಣ್ಣಿದೆ. ಇದರಂದಾಗಿ ಜೋತಿಷ್ಯ, ವಾಸ್ತುವಿನಂತಹ ಗೂಡವಿದ್ಯೆಯನ್ನೂ ಕಲಿಯಬಯಸುವವರು ಈ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ದೇವರಿಗೆ ವಿಭೂತಿಯ ಅಭಿಷೇಕ ಮಾಡಿ ಅದನ್ನೇ ಭಕ್ತಾಧಿಗಳಿಗೆ ಪ್ರಸಾದವನ್ನಾಗಿ ನೀಡಲಾಗುತ್ತದೆ.
(ಬರಹ: ಎಚ್ ಸತೀಶ್, ಜ್ಯೋತಿಷಿ)