ಯಾದಗಿರಿಗುಟ್ಟ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯದ ವಾರ್ಷಿಕ ಬ್ರಹ್ಮೋತ್ಸವಕ್ಕೆ ನಡೆದಿದೆ ಸಕಲ ಸಿದ್ಧತೆ; ಈ ಬಾರಿಯ ವಿಶೇಷತೆಗಳು ಇಲ್ಲಿವೆ
ಯಾದಗಿರಿಗುಟ್ಟ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದಲ್ಲಿ ವಾರ್ಷಿಕ ಬ್ರಹ್ಮೋತ್ಸವಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ಬ್ರಹ್ಮೋತ್ಸವ ಪ್ರಯುಕ್ತ ಮಾರ್ಚ್ 1ರಿಂದ ವಿವಿಧ ಧಾರ್ಮಿಕ ವಿಧಿಗಳು ಆರಂಭವಾಗಲಿವೆ.
ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿರುವ ಪ್ರಸಿದ್ಧ ಕ್ಷೇತ್ರ ಯಾದಗಿರಿಗುಟ್ಟ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯವನ್ನು ವಾರ್ಷಿಕ ಬ್ರಹ್ಮೋತ್ಸವಕ್ಕಾಗಿ ಅಲಂಕರಿಸಲಾಗಿದೆ. ದೇವಾಲಯದ ಗೋಪುರದ ಚಿನ್ನದ ಹೊದಿಕೆಯ ಕೆಲಸ ಈಗಾಗಲೇ ಪೂರ್ಣಗೊಂಡಿದೆ. ಬ್ರಹ್ಮೋತ್ಸವಕ್ಕೆ ಮೊದಲು 108 ಋತ್ವಿಕರರಿಂದ ವಿಶೇಷ ಪೂಜೆ, ಧಾರ್ಮಿಕ ವಿಧಿಗಳು ನೆರವೇರಲಿವೆ. ಭಾರತದ ವಿವಿಧೆಡೆಯಿರುವ ಪವಿತ್ರ ನದಿಗಳಿಂದ ನೀರು ತರಿಸಲಾಗುತ್ತದೆ. ಹೋಮಗಳನ್ನು ನಡೆಸಲೆಂದು ಬೆಟ್ಟದ ಮೇಲೆ ಐದು ಹೋಮಕುಂಡಗಳನ್ನು ಸ್ಥಾಪಿಸಲಾಗಿದೆ.
ಮಾರ್ಚ್ 1 ರಿಂದ ಉತ್ಸವ ಆರಂಭ
ಬೆಟ್ಟದ ಮೇಲಿರುವ ಸ್ವಾಮಿಯ ಸನ್ನಿಧಾನದಲ್ಲಿ ಶ್ರೀ ಸುದರ್ಶನ ನರಸಿಂಹ ಮತ್ತು ಶ್ರೀ ಲಕ್ಷ್ಮಿ ಹೋಮಗಳನ್ನು ನಡೆಸಲಾಗುತ್ತದೆ. 23ರಂದು ರಾಜಗೋಪುರಕ್ಕೆ 25 ಕಲಶಗಳಿಂದ ಅಭಿಷೇಕ ನಡೆಯಲಿದೆ. 19ರಿಂದ 22 ರವರೆಗೆ 108 ಋತ್ವಿಕರು ಸುದರ್ಶನ ಹೋಮ ಮತ್ತು ನರಸಿಂಹ ಹೋಮ ನಡೆಸಿಕೊಡಲಿದ್ದಾರೆ. 23ರಂದು ಸುಮಾರು ಒಂದು ಲಕ್ಷ ಜನರಿಗೆ ಪ್ರಸಾದ ವಿತರಿಸಲಾಗುತ್ತದೆ.
65. 84 ಕೆಜಿ ಚಿನ್ನ.
ಯಾದಗಿರಿಗುಟ್ಟ ಶ್ರೀಲಕ್ಷ್ಮೀ ನರಸಿಂಹ ದೇವಸ್ಥಾನದ ವಿಮಾನ ಗೋಪುರಕ್ಕಾಗಿ ಒಟ್ಟು 65.84 ಕೆಜಿ ಚಿನ್ನ ಬಳಸಲಾಗಿದೆ ಎಂದು ದೇಗುಲದ ಅಧಿಕಾರಿಗಳು ವಿವರಿಸಿದರು. ಭಕ್ತರು 10.5 ಕೆಜಿ ಬಂಗಾರವನ್ನು ದೇಣಿಗೆಯಾಗಿ ನೀಡಿದ್ದಾರೆ. ದೇಗುಲದ ಚಿನ್ನದ ಬಾಂಡ್‌ಗಳನ್ನು ಪರಿವರ್ತಿಸುವ ಮೂಲಕ 3.120 ಕೆಜಿ ಚಿನ್ನ ಸಂಗ್ರಹಿಸಲಾಗಿದೆ. ದೇಗುಲದ ಹುಂಡಿಯಲ್ಲಿ ಸಂಗ್ರಹವಾಗಿದ್ದ ಆಭರಣಗಳ ಮೂಲಕ 12.701 ಗ್ರಾಂ ಚಿನ್ನ ಸಿಕ್ಕಿದೆ. ದೇಗುಲದ ವಶದಲ್ಲಿದ್ದ ಬೆಳ್ಳಿಯನ್ನು ವಿನಿಮಯ ಮಾಡುವ ಮೂಲಕ 8.672 ಕೆಜಿ ಚಿನ್ನ ಬಂದಿದೆ. ಉಳಿದ 30.51 ಕೆಜಿ ಚಿನ್ನವನ್ನು ಹೊಸದಾಗಿ ಖರೀದಿಸಲಾಗಿದೆ. ದೇಗುಲದ ವಿಮಾನ ಗೋಪುರವು 10,753 ಚದರ ಅಡಿ ವಿಸ್ತೀರ್ಣ ಹೊಂದಿದೆ. ಪ್ರತಿ ಚದರ ಅಡಿಗೆ 6 ಗ್ರಾಂ ಚಿನ್ನ ಬಳಕೆಯಾಗಿದೆ ಎಂದು ಅಧಿಕಾರಿಗಳು ಹೇಳಿದರು.
ಇದು ದೇಶದಲ್ಲೇ ಅತಿ ದೊಡ್ಡದು.
ಅಧಿಕಾರಿಗಳ ಪ್ರಕಾರ ಇದು ದೇಶದ ಅತಿದೊಡ್ಡ ಕಲಶ ಗೋಪುರವಾಗಿದೆ. ಈ ಗೋಪುರವನ್ನು 5 ಅಂತಸ್ತಿನ ಪಂಚತಾಳ ಗೋಪುರ ಎಂದು ಕರೆಯಲಾಗುತ್ತದೆ. ಇದು 50.5 ಅಡಿ ಎತ್ತರದಲ್ಲಿದೆ. ಇದರಲ್ಲಿ 40 ವಿಗ್ರಹಗಳನ್ನು ಸ್ಥಾಪಿಸಲಾಗಿದೆ. ಪ್ರತಿ ಮಹಡಿಯಲ್ಲಿ ಎಂಟು ವಿಗ್ರಹಗಳನ್ನು ಸ್ಥಾಪಿಸಲಾಗಿದೆ. ಭಗವಂತನ ಗೋಪುರದ ಜೊತೆಗೆ, ದೇವಾಲಯದ ಮೇಲಿರುವ 39 ಕಲಶಗಳನ್ನೂ ಸಹ ಚಿನ್ನದಿಂದ ಅಲಂಕರಿಸಲಾಗಿದೆ. ಮಹಾಕುಂಭ ಸಂಪ್ರೋಕ್ಷಣಾ ಕಾರ್ಯಕ್ರಮವನ್ನು ಭಕ್ತರು ನೇರ ಪ್ರಸಾರದ ಮೂಲಕ ವೀಕ್ಷಿಸಲು ನಾಲ್ಕು ಬೀದಿಗಳಲ್ಲಿ LED ಪರದೆಗಳನ್ನು ಅಳವಡಿಸಲಾಗಿದೆ.
ದೇವಾಲಯದ ಇತಿಹಾಸ
ಯಾದಗಿರಿಗುಟ್ಟವು ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿದೆ. ಯಾದಗಿರಿಗುಟ್ಟ ದೇವಾಲಯದ ಇತಿಹಾಸವೂ ಆಸಕ್ತಿದಾಯಕವಾಗಿದೆ. ವಿಭಾಂಡಕ ಮುನಿಯ ಮಗ ಋಷ್ಯಶೃಂಗ. ಅವರ ಮಗ ಹದ ಋಷಿ. ಅವರನ್ನು ಹದರ್ಶಿ ಎಂದೂ ಕರೆಯುತ್ತಾರೆ. ಭೋಂಗೀರ್ ಮತ್ತು ರಾಯಗಿರಿ ನಡುವಿನ ಬೆಟ್ಟದ ಗುಹೆಯಲ್ಲಿ ಹದರ್ಶಿ ಋಷಿ ಧ್ಯಾನ ಮಾಡುತ್ತಿದ್ದರು. ಅವರ ಮುಂದೆ ನರಸಿಂಹ ದೇವರು ಐದು ರೂಪಗಳಲ್ಲಿ ಪ್ರತ್ಯಕ್ಷರಾದರು. ಜ್ವಾಲಾ ನರಸಿಂಹ, ಗಂಡಭೇರುಂಡ ನರಸಿಂಹ, ಯೋಗಾನಂದ ನರಸಿಂಹ, ಉಗ್ರ ನರಸಿಂಹ ಮತ್ತು ಲಕ್ಷ್ಮೀ ನರಸಿಂಹ ರೂಪಗಳಲ್ಲಿ ಕಾಣಿಸಿಕೊಂಡರು ಹದರ್ಶಿ ಭಗವಂತನನ್ನು ಬೆಟ್ಟದಲ್ಲಿ ನೆಲಸುವಂತೆ ಕೇಳಿಕೊಂಡರು. ಅವರ ಕೋರಿಕೆ ಮನ್ನಿಸಿ ಸ್ವಾಮಿಯು ಇಲ್ಲಿಯೇ ನೆಲೆಸಿದ ಎನ್ನುವ ಕಥೆ ಜನಪ್ರಿಯವಾಗಿದೆ. ಯಾದವ ಎನ್ನುವ ಮುನಿಯು ಇಲ್ಲಿ ತಪಸ್ಸು ಮಾಡಿದ ಕಾರಣದಿಂದ ಈ ಪ್ರದೇಶಕ್ಕೆ ಯಾದಗಿರಿ ಎನ್ನುವ ಹೆಸರು ಬಂತು ಎನ್ನುವ ಪ್ರತೀತಿಯೂ ಇದೆ.
