ಆರ್ದ್ರಾ ನಕ್ಷತ್ರ ವರ್ಷ ಭವಿಷ್ಯ 2025: ಅಂದುಕೊಂಡಂತೆ ಕೆಲಸ–ಕಾರ್ಯಗಳೆಲ್ಲವೂ ನಡೆಯಲಿವೆ, ಸಂಗಾತಿಯಿಂದ ಜೀವನದ ಸಮಸ್ಯೆಗಳು ದೂರಾಗಲಿವೆ
Ardra Nakshatra Bhavishya 2025: ಆರ್ದ್ರಾ ನಕ್ಷತ್ರದವರ ವರ್ಷ ಭವಿಷ್ಯದ ಪ್ರಕಾರ ನೀವು ಅಂದುಕೊಂಡಂತೆ ಕೆಲಸ–ಕಾರ್ಯಗಳೆಲ್ಲವೂ ನಡೆಯಲಿದೆ, ಸಂಗಾತಿಯಿಂದ ಜೀವನದ ಸಮಸ್ಯೆಗಳು ದೂರಾಗಲಿವೆ. (ಬರಹ: ಎಚ್.ಸತೀಶ್, ಜ್ಯೋತಿಷಿ)

ಆರ್ದ್ರಾ ನಕ್ಷತ್ರದ ಯುಗಾದಿ ವರ್ಷ ಭವಿಷ್ಯ: ಪಂಚಾಂಗದ ಪ್ರಕಾರ ಕೆಲವೇ ದಿನಗಳಲ್ಲಿ ಹಳೆಯ ವರ್ಷ ಮುಗಿದು ಹೊಸ ವರ್ಷಕ್ಕೆ ಕಾಲಿಡುತ್ತೇವೆ. ಯುಗಾದಿ ಹಬ್ಬವು ಹೊಸ ವರ್ಷದ ಮೊದಲ ದಿನ. ಈ ಹೊಸ ವರ್ಷದಲ್ಲಿ ಸಂಕಷ್ಟಗಳು ಕಳೆದು ಸುಖ, ಶಾಂತಿ, ನೆಮ್ಮದಿ, ಉತ್ತಮ ಆರೋಗ್ಯ, ಹೊಸ ಅವಕಾಶ, ಸಂಪತ್ತು ಸಮೃದ್ಧಿಯನ್ನು ನಿರೀಕ್ಷಿಸುತ್ತ ಆಶಾವಾದಿಗಳಾಗಿ ಬದುಕುವುದು ಸಾಮಾನ್ಯ. ಬಹುತೇಕ ಸಂದರ್ಭದಲ್ಲಿ ಜನರು ತಮ್ಮ ರಾಶಿಗೆ ಅನುಗುಣವಾಗಿ ವರ್ಷ ಭವಿಷ್ಯವನ್ನು ಕಾತರದಿಂದ ವೀಕ್ಷಿಸುತ್ತಾರೆ. ಇನ್ನೂ ನಿಖರವಾಗಿ ಬೇಕು ಎಂದುಕೊಳ್ಳುವವರು ನಕ್ಷತ್ರವಾರು ವರ್ಷ ಭವಿಷ್ಯ ನೋಡಿ ಕೊಂಚ ಸಮಾಧಾನ ಮಾಡಿಕೊಳ್ಳುತ್ತಾರೆ. ಅಂತಹ ಓದುಗರಿಗಾಗಿ 27 ನಕ್ಷತ್ರಗಳ ವರ್ಷ ಭವಿಷ್ಯವನ್ನು ಸರಣಿ ಪ್ರಕಾರ ‘ಎಚ್‌ಟಿ ಕನ್ನಡ’ ಒದುಗಿಸುತ್ತಿದೆ. ನಕ್ಷತ್ರಗಳ ಪೈಕಿ ಆರನೇಯದಾದ ಆರ್ದ್ರಾ ನಕ್ಷತ್ರದಲ್ಲಿ ಜನಿಸಿದವರ ಶ್ರೀ ವಿಶ್ವಾವಸುನಾಮ ಸಂವತ್ಸರದ ವರ್ಷ ಭವಿಷ್ಯ ಇಲ್ಲಿದೆ.
ಆರ್ದ್ರಾ ನಕ್ಷತ್ರದ ಹೆಸರು ಯಾವ ಅಕ್ಷರಗಳಿಂದ ಆರಂಭವಾಗುತ್ತದೆ
ಪ್ರತಿಯೊಂದು ನಕ್ಷತ್ರವೂ ನಾಲ್ಕು ಪಾದಗಳನ್ನು ಹೊಂದಿರುತ್ತವೆ. ಆರಿದ್ರಾ ನಕ್ಷತ್ರದ ಎಲ್ಲಾ 4 ಪಾದಗಳೂ ಮಿಥುನ ರಾಶಿಯಲ್ಲಿ ಇರಲಿವೆ. ಇದಲ್ಲದೆ ನಿಮ್ಮ ಹೆಸರು ಕು, ಘ, ಜ ಮತ್ತು ಛ ಅಕ್ಷರದಿಂದ ಆರಂಭವಾಗಿದ್ದಲ್ಲಿ ನಿಮ್ಮದು ಆರ್ದ್ರಾ ನಕ್ಷತ್ರವಾಗುತ್ತದೆ.
ಶ್ರೀ ವಿಶ್ವಾವಸು ಸಂವತ್ಸರದಲ್ಲಿ ಆರ್ದ್ರಾ ನಕ್ಷತ್ರದವರ ಭವಿಷ್ಯ
ನಿಮ್ಮ ಮನಸ್ಸನ್ನು ಬದಲಿಸಲು ಯಾರಿಂದಲೂ ಸಾಧ್ಯವಾಗುವುದಿಲ್ಲ. ನಿಮಗೆ ಹಠದ ಗುಣವಿರುವುದಿಲ್ಲ. ಆದರೆ ಬೇರೆಯವರ ಸಲಹೆಯನ್ನು ನೀವು ಪಾಲಿಸುವುದಿಲ್ಲ. ಇದರಿಂದ ಪ್ರಮುಖ ಕೆಲಸಗಳನ್ನು ಪೂರ್ಣಗೊಳಿಸಲು ವಿಫಲರಾಗುವಿರಿ. ಮನದಲ್ಲಿಯೇ ಯೋಚಿಸಿ ನಿಮ್ಮ ಯೋಜನೆಯನ್ನು ಕಾಯಕಗೊಳಿಸುವಿರಿ. ಯಾವುದೇ ವಿಚಾರದಲ್ಲಿಯೂ ಸ್ಥಿರವಾದ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ. ಕ್ಷಣಮಾತ್ರದಲ್ಲಿ ನಿಮ್ಮ ಮನಸ್ಸು ಬದಲಾಗುವ ಸಾಧ್ಯತೆಗಳಿವೆ. ಇದರಿಂದ ಬಂಧು ಬಳಗದವರು ನಿಮ್ಮಿಂದ ಅಂತರವನ್ನು ಕಾಯ್ದುಕೊಳ್ಳುತ್ತಾರೆ. ಉತ್ತಮ ವಿದ್ಯೆ ಇರುತ್ತದೆ. ವಿದ್ಯೆಗೆ ತಕ್ಕನಾದ ಉದ್ಯೋಗ ದೊರೆಯುತ್ತದೆ. ಅಧಿಕಾರಪ್ರಿಯರು. ನಿಮ್ಮದಲ್ಲದ ಜವಾಬ್ದಾರಿಗಳನ್ನು ನಿರ್ವಹಿಸಲು ಸಿದ್ಧರಾಗುವಿರಿ. ಹಣಕಾಸಿನ ತೊಂದರೆ ಇರುವುದಿಲ್ಲ. ಆರೋಗ್ಯದಲ್ಲಿ ತೊಂದರೆ ಉಂಟಾಗದಂತೆ ಬಾಳುವಿರಿ. ಒಂದಕ್ಕಿಂತಲೂ ಹೆಚ್ಚಿನ ರೀತಿಯ ಆದಾಯ ನಿಮ್ಮದಾಗುತ್ತದೆ. ಮನಸ್ಸಿನಲ್ಲಿ ಸದಾಕಾಲ ಧನಾತ್ಮಕ ಚಿಂತನೆಗಳು ಉಂಟಾಗುತ್ತದೆ.
ಆರ್ದ್ರಾ ನಕ್ಷತ್ರದ 1ನೇ ಪಾದ ಅಥವಾ ಕು ಅಕ್ಷರದಿಂದ ಆರಂಭವಾಗುವ ಹೆಸರಿನವರ ಭವಿಷ್ಯ
ನಿಮಗೆ ವಿಶೇಷವಾದ ಆತ್ಮಭಿಮಾನವಿರುತ್ತದೆ. ನಿಮ್ಮ ಮನಸ್ಸಿಗೆ ಸರಿ ಎನ್ನಿಸಿದರೂ ಬೇರೆಯವರ ಸಲಹೆಯನ್ನು ನೀವು ಒಪ್ಪುವುದಿಲ್ಲ. ಆತುರದಲ್ಲಿ ಕೆಲಸ–ಕಾರ್ಯಗಳನ್ನು ಆರಂಭಿಸಿ ತೊಂದರೆಗೆ ಸಿಲುಕುವಿರಿ. ಮುಂಗೋಪಿಗಳು. ಪ್ರತಿಯೊಬ್ಬರನ್ನು ಬೇರೆ ಬೇರೆ ರೀತಿಯಲ್ಲಿಯೇ ಕಾಣುವಿರಿ. ಯಾವುದೇ ಸಂದರ್ಭದಲ್ಲಿಯೂ ಧೈರ್ಯವನ್ನು ಕಳೆದುಕೊಳ್ಳುವುದಿಲ್ಲ. ದೇವರು ಕೊಟ್ಟ ಅವಕಾಶವನ್ನು ಬುದ್ಧಿವಂತಿಕೆಯಿಂದ ನಿಮ್ಮದಾಗಿಸಿಕೊಳ್ಳುವಿರಿ. ಸ್ನೇಹಿತರಂತೆ ವರ್ತಿಸುವ ಶತ್ರುಗಳು ನಿಮ್ಮೊಡನೆ ಇರುತ್ತಾರೆ. ನಿಧಾನಗತಿಯ ಗುಣವು ಉದ್ಯೋಗದಲ್ಲಿ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಮನಸ್ಸಿನಲ್ಲಿ ಒಳ್ಳೆಯ ಭಾವನೆ ಇದ್ದರೂ ಮಾತಿನಲ್ಲಿ ತೋರ್ಪಡಿಸುವುದಿಲ್ಲ. ಕುಟುಂಬದಲ್ಲಿ ನಿಮ್ಮಿಂದ ಒತ್ತಡದ ಸನ್ನಿವೇಶ ಎದುರಾಗುತ್ತದೆ. ಆದರೆ ಎಲ್ಲರ ಪ್ರೀತಿ ವಿಶ್ವಾಸದ ಕಾರಣ ಸುಖ ಸಂತೋಷ ಜೀವನವಿರುತ್ತದೆ. ಪ್ರತಿಯೊಂದು ವಿಚಾರದಲ್ಲಿಯೂ ಬಾಳ ಸಂಗಾತಿಯ ಸಹಾಯ ಮತ್ತು ಸಹಕಾರ ದೊರೆಯುತ್ತದೆ.
ಆರ್ದ್ರಾ ನಕ್ಷತ್ರದ 2ನೇ ಪಾದ ಅಥವಾ ಘ ಅಕ್ಷರದಿಂದ ಆರಂಭವಾಗುವ ಹೆಸರಿನವರ ಭವಿಷ್ಯ
ಉನ್ನತ ಸ್ಥಾನಮಾನವಿದ್ದರೂ ಸರಳ ಜೀವನವನ್ನು ನಡೆಸುವಿರಿ. ಸಮಾಜದಲ್ಲಿ ಗಣ್ಯ ವ್ಯಕ್ತಿಯಾಗಿ ಬಾಳುವಿರಿ. ನಿಮ್ಮ ಊಹೆಯಂತೆ ಕೆಲಸ ಕಾರ್ಯಗಳು ನಡೆಯಲಿವೆ. ನಿಮ್ಮಲ್ಲಿರುವ ಕಲ್ಪನಾ ಶಕ್ತಿಯು ಎಲ್ಲರನ್ನೂ ಮಂತ್ರ ಮುಗ್ಧರನ್ನಾಗಿಸುತ್ತದೆ. ನಿಮ್ಮ ಮನಸ್ಸಿನ ವಿಚಾರವನ್ನು ಯಾರಿಗೂ ತಿಳಿಸುವುದಿಲ್ಲ. ಆತ್ಮೀಯರು ಸಹ ಅದನ್ನು ತಿಳಿಯುವ ಪ್ರಯತ್ನವನ್ನು ಮಾಡುವುದಿಲ್ಲ. ನಿಮ್ಮನ್ನು ಹೊಗಳಿ ನಿಮ್ಮಿಂದ ಸಹಾಯ ಪಡೆಯುವ ಜನರ ಬಗ್ಗೆ ಎಚ್ಚರಿಕೆ ಇರಲಿ. ಉತ್ತಮ ಪ್ರಯತ್ನವಿಲ್ಲದೆ ಯಾವುದೇ ಕೆಲಸ ಕಾರ್ಯಗಳು ಪೂರ್ಣವಾಗದು. ಕೇಳುಗರಿಗೆ ಬೇಸರವಾಗುವಂತೆ ಮಾತನಾಡುವಿರಿ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಕಾರ್ಯ ವ್ಯಾಪ್ತಿಯು ಹೆಚ್ಚುತ್ತದೆ. ನಿಮ್ಮ ಕೆಲಸ ಕಾರ್ಯಕ್ಕೆ ತಕ್ಕಷ್ಟು ವರಮಾನ ಇರುವುದಿಲ್ಲ. ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿ ನಿರಾಸಕ್ತಿ ತೋರುವಿರಿ.
ಆರ್ದ್ರಾ ಆರಿದ್ರಾ ನಕ್ಷತ್ರದ 3ನೇ ಪಾದ ಅಥವಾ ಜ ಅಕ್ಷರದಿಂದ ಆರಂಭವಾಗುವ ಹೆಸರಿನವರ ಭವಿಷ್ಯ
ಆರಂಭಿಸಿದ ಕೆಲಸ ಕಾರ್ಯಗಳು ಯಶಸ್ವಿಯಾದರು ತೃಪ್ತಿ ಇರುವುದಿಲ್ಲ. ಆಶಾವಾದಿಗಳು. ಅಸಾಧ್ಯವಾದಂತಹ ಕೆಲಸ ಕಾರ್ಯಗಳನ್ನು ಆರಂಭಿಸುವುದಿಲ್ಲ. ವಿಫಲವಾದ ಕೆಲಸಗಳನ್ನು ಮತ್ತೆ ಮುಂದುವರಿಸುವುದಿಲ್ಲ. ಹಣಕಾಸಿನ ತೊಂದರೆ ಇರದು. ಉತ್ತಮ ಆದಾಯವಿರುತ್ತದೆ. ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿ ಅನಿಶ್ಚಿತ ವರಮಾನವಿರುತ್ತದೆ. ಉಳಿತಾಯ ಮಾಡುವ ನಿಮ್ಮ ಪ್ರಯತ್ನಕ್ಕೆ ಕುಟುಂಬದವರ ಸಹಕಾರವಿರುತ್ತದೆ. ನಿಮ್ಮ ಕರ್ತವ್ಯ ನಿಷ್ಠೆಯ ಬಗ್ಗೆ ಯಾರಿಗೂ ನಂಬಿಕೆ ಇರುವುದಿಲ್ಲ. ಮನಸ್ಸಿನಲ್ಲಿಯೇ ಯೋಜನೆ ರೂಪಿಸಿ ನಂತರ ಕಾರ್ಯದಲ್ಲಿ ತೊಡಗುವಿರಿ. ನಿಮ್ಮನ್ನು ಹೊಗಳುವ ಜನರ ಬಗ್ಗೆ ಎಚ್ಚರಿಕೆ ಇರಲಿ. ಕಷ್ಟಪಟ್ಟು ದುಡಿದ ಹಣವನ್ನು ಬೇರೆಯವರಿಗಾಗಿ ಖರ್ಚು ಮಾಡಬೇಕಾಗುತ್ತದೆ. ಆರೋಗ್ಯದ ಬಗ್ಗೆ ಗಮನ ಹರಿಸುವುದು ಒಳ್ಳೆಯದು. ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆ ಇರಲಿ. ದುಡುಕುತನದ ಮಾತಿನಿಂದ ವಿವಾದಕ್ಕೆ ಗುರಿಯಾಗುವಿರಿ.
ಆರ್ದ್ರಾ ನಕ್ಷತ್ರದ 4ನೇ ಪಾದ ಅಥವಾ ಛ ಅಕ್ಷರದಿಂದ ಆರಂಭವಾಗುವ ಹೆಸರಿನವರ ಭವಿಷ್ಯ
ಅತಿಯಾದ ಆಸೆ ಇರುತ್ತದೆ. ಆರೋಗ್ಯದ ವಿಚಾರದಲ್ಲಿ ವೈದ್ಯರ ಸಲಹೆಯನ್ನು ಪಾಲಿಸುವುದಿಲ್ಲ. ರುಚಿಕರವಾದ ಭೋಜನವನ್ನು ಸೇವಿಸುವಿರಿ. ಅಜೀರ್ಣದ ತೊಂದರೆ ಸದಾ ಕಾಡುತ್ತದೆ. ಗೆಲ್ಲಬೇಕೆನ್ನುವ ಆಸೆ ಮತ್ತು ವಿಶ್ವಾಸ ನಿಮ್ಮಲ್ಲಿರುತ್ತದೆ. ಆದರೆ ದೃಢವಾದ ಮನಸ್ಥಿತಿ ಇರುವುದಿಲ್ಲ. ನೇರವಾಗಿ ನಿಮ್ಮ ಮನದ ವಿಚಾರಗಳನ್ನು ಬೇರೆಯವರಿಗೆ ತಿಳಿಸುವುದಿಲ್ಲ. ಸೋಲಿನ ವೇಳೆಯಲ್ಲಿ ಆತ್ಮೀಯರ ಸಹಾಯವು ನಿಮಗೆ ದೊರೆಯುತ್ತದೆ. ಕುಟುಂಬದ ಹಿರಿಯ ವ್ಯಕ್ತಿಗಳಿಂದ ಬೇಸರವಿರುತ್ತದೆ. ನೀವಿರುವ ಸ್ಥಳಗಳಲ್ಲಿ ತೊಂದರೆ ಆಗಬಹುದು. ಯಾವುದೇ ಕೆಲಸವಾದರೂ ಒಂದೇ ಮನಸ್ಸಿನಿಂದ ಆರಂಭಿಸುವುದಿಲ್ಲ. ಮಕ್ಕಳ ವಿಚಾರದಲ್ಲಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ನಿಮ್ಮ ಸಂಗಾತಿಯಿಂದ ಜೀವನದಲ್ಲಿ ಸಮಸ್ಯೆಗಳು ದೂರವಾಗುತ್ತವೆ. ಉದ್ಯೋಗದಲ್ಲಿ ಸಹೋದ್ಯೋಗಿಗಳ ಬೆಂಬಲ ನಿಮಗಿರುತ್ತದೆ. ಒಟ್ಟಾರೆ ಯೋಚನೆ ಇಲ್ಲದೇ ತೃಪ್ತಿಕರ ಜೀವನವನ್ನು ನಡೆಸುವಿರಿ.
ಬರಹ: ಎಚ್. ಸತೀಶ್, ಜ್ಯೋತಿಷಿ
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)
