ಕನ್ನಡ ಸುದ್ದಿ / ಕ್ರಿಕೆಟ್ /
ಮಾರ್ಚ್ 18 ಕ್ರಿಕೆಟ್ ಪುಟಗಳಲ್ಲಿ ಸಿಹಿ-ಕಹಿಗಳ ಮಿಶ್ರಣ; ಒಬ್ಬರ ಸಾವು, 45,000+ ರನ್ ಗಳಿಸಿದ ಮೂವರ ನಿವೃತ್ತಿ, ಭಾರತಕ್ಕೆ ಪ್ರಶಸ್ತಿ
ಮಾರ್ಚ್ 18ರ ದಿನವನ್ನು ಕ್ರಿಕೆಟ್ ಕ್ಯಾಲೆಂಡರ್ನಲ್ಲಿ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಪಾಕಿಸ್ತಾನದ ತರಬೇತುದಾರ ನಿಧನರಾಗಿದ್ದು, ಮೂವರು ಆಟಗಾರರ ಕೊನೆಯ ಏಕದಿನ ಪಂದ್ಯ ಇದೇ ದಿನವಾಗಿತ್ತು. ಇದಲ್ಲದೆ, ನಿದಹಾಸ್ ಟ್ರೋಫಿಯ ಫೈನಲ್ ಕೂಡ ಮಾರ್ಚ್ 18ರಂದೇ ನಡೆದಿತ್ತು.

ಮಾರ್ಚ್ 18 ಕ್ರಿಕೆಟ್ ಪುಟಗಳಲ್ಲಿ ಸಿಹಿ-ಕಹಿಗಳ ಮಿಶ್ರಣ; ಒಬ್ಬರ ಸಾವು, 45,000+ ರನ್ ಗಳಿಸಿದ ಮೂವರ ನಿವೃತ್ತಿ, ಭಾರತಕ್ಕೆ ಪ್ರಶಸ್ತಿ
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಮಾರ್ಚ್ 18 ಸಿಹಿ-ಕಹಿಗಳ ಮಿಶ್ರಣವನ್ನು ಹೊಂದಿದೆ. ನಿಜ ಹೇಳಬೇಕೆಂದರೆ ಸಿಹಿಗಿಂತ ಕಹಿಯೇ ಜಾಸ್ತಿ. ಈ ದಿನವು ಪಾಕಿಸ್ತಾನಕ್ಕೆ ಕಪ್ಪು ಚುಕ್ಕೆ ಆಗಿದ್ದರೆ, ಭಾರತೀಯ ಕ್ರಿಕೆಟ್ ತಂಡಕ್ಕೆ ಕಹಿಯ ಜತೆಗೆ ಸ್ಮರಣೀಯವೂ ಆಗಿದೆ. ಶ್ರೀಲಂಕಾ ಕ್ರಿಕೆಟ್ಗೂ ಇದು ಕಹಿ. ಮಾರ್ಚ್ 18ರಂದು ಒಬ್ಬ ಕ್ರಿಕೆಟಿಗ ನಿಧನರಾದರೆ, 45,000 + ರನ್ ಸಿಡಿಸಿದ್ದ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ಶ್ರೀಲಂಕಾದ ಮಾಜಿ ವಿಕೆಟ್ ಕೀಪರ್-ಬ್ಯಾಟರ್ ಕುಮಾರ್ ಸಂಗಕ್ಕಾರ, ಮಾಜಿ ನಾಯಕ ಮಹೇಲಾ ಜಯವರ್ಧನೆ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ನಿಂದ ನಿವೃತ್ತರಾದರು. ಆದರೆ ಇದೇ ದಿನ ಭಾರತಕ್ಕೆ ಪ್ರತಿಷ್ಠಿತ ಟ್ರೋಫಿಯೊಂದು ದಕ್ಕಿತು.
ಮಾರ್ಚ್ 18ರ ಘಟನೆಗಳು
- ಮಾರ್ಚ್ 18, 2007 ರಂದು, ಪಾಕಿಸ್ತಾನದ ತಂಡದ ಮುಖ್ಯ ತರಬೇತುದಾರ ಬಾಬ್ ವೂಲ್ಮರ್ ನಿಧನರಾದರು. ಕಾರಣ ಈ ದಿನವನ್ನು ಪಾಕಿಸ್ತಾನಕ್ಕೆ ದುರದೃಷ್ಟಕರವೆಂದು ಪರಿಗಣಿಸಲಾಗಿದೆ. ಬಾಬ್ ಅವರು ಇಂಗ್ಲೆಂಡ್ನವರು. ಪಾಕಿಸ್ತಾನ ತಂಡದ ಪಂದ್ಯದ ಮರುದಿನ ಅವರು ತಮ್ಮ ಹೋಟೆಲ್ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ವೆಸ್ಟ್ ಇಂಡೀಸ್ನ ಜಮೈಕಾದ ಹೋಟೆಲ್ನಲ್ಲಿ ಈ ಘಟನೆ ನಡೆದಿತ್ತು. ಅವರು ನಿಗೂಢವಾಗಿ ನಿಧನರಾದರು ಎಂದು ಹೇಳಲಾಗುತ್ತದೆ. ಪ್ರಕರಣಕ್ಕೆ ಸಂಬಂಧಿಸಿ ಪಾಕಿಸ್ತಾನ ತಂಡದ ಆಟಗಾರರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಹಲವು ದಿನಗಳ ಕಾಲ ವಿಚಾರಣೆಗೆ ಭಾಗಿಯಾಗಿದ್ದರು. ಜಮೈಕಾ ಪೊಲೀಸರು ಕೊಲೆ ಇರಬಹುದು ಎಂದು ಅನುಮಾನ ವ್ಯಕ್ತಪಡಿಸಿ ತನಿಖೆ ನಡೆಸಿದ್ದರು. ಅನುಮಾನಾಸ್ಪದವಾಗಿ ಏನೂ ಸಿಕ್ಕಿರಲಿಲ್ಲ.
- ಮಾರ್ಚ್ 18, 2018ರಂದು ಭಾರತ ತಂಡಕ್ಕೆ ವಿಶೇಷವಾಗಿದೆ. ಏಕೆಂದರೆ ನಿದಹಾಸ್ ಟ್ರೋಫಿಯ ಫೈನಲ್ ಈ ದಿನದಂದು ನಡೆಯಿತು. 2018ರಲ್ಲಿ ಭಾರತ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ನಡುವೆ ತ್ರಿಕೋನ ಸರಣಿ ನಡೆದಿತ್ತು. ಇದನ್ನು ನಿದಹಾಸ್ ಟ್ರೋಫಿ ಎಂದು ಹೆಸರಿಸಲಾಗಿತ್ತು. ಭಾರತ ಮತ್ತು ಬಾಂಗ್ಲಾದೇಶ ನಡುವಿನ ಫೈನಲ್ನಲ್ಲಿ ದಿನೇಶ್ ಕಾರ್ತಿಕ್ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಭಾರತ ತಂಡಕ್ಕೆ ಗೆಲುವು ತಂದುಕೊಟ್ಟರು. ಇದು ನಿಯಮಿತ ಪಂದ್ಯಾವಳಿಯಾಗಿರಲಿಲ್ಲ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಪ್ರತಿಷ್ಠಿತ ಟ್ರೋಫಿಗೆ ಮುತ್ತಿಕ್ಕಿತು. ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾ 8 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ 6 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿತು. ಕೊನೆಯ ಎಸೆತದಲ್ಲಿ 5 ರನ್ ಬೇಕಿತ್ತು. ದಿನೇಶ್ ಕಾರ್ತಿಕ್ ಸಿಕ್ಸರ್ ಬಾರಿಸಿ ರೋಚಕ ಗೆಲುವು ತಂದುಕೊಟ್ಟಿದ್ದರು.
- ಮಾರ್ಚ್ 18 ರಂದು ವಿಶ್ವದ ಮೂವರು ಶ್ರೇಷ್ಠ ಕ್ರಿಕೆಟಿಗರು ಏಕದಿನ ಕ್ರಿಕೆಟ್ಗೆ ಒಂದೇ ದಿನ ವಿದಾಯ ಹೇಳಿದರು. ಶ್ರೇಷ್ಠ ಆಟಗಾರರಾದ ಸಚಿನ್ ತೆಂಡೂಲ್ಕರ್, ಶ್ರೀಲಂಕಾದ ಮಾಜಿ ವಿಕೆಟ್ ಕೀಪರ್ ಕುಮಾರ್ ಸಂಗಕ್ಕಾರ ಮತ್ತು ಮಾಜಿ ನಾಯಕ ಮಹೇಲಾ ಜಯವರ್ಧನೆ ಇದೇ ದಿನ ತಮ್ಮ ಕೊನೆಯ ಏಕದಿನ ಪಂದ್ಯವನ್ನಾಡಿದರು. ಸಚಿನ್ ತೆಂಡೂಲ್ಕರ್ ತಮ್ಮ ಕೊನೆಯ ಏಕದಿನ ಪಂದ್ಯವನ್ನು 2012ರ ಮಾರ್ಚ್ 18ರಂದು, ಕುಮಾರ್ ಸಂಗಕ್ಕಾರ ಮತ್ತು ಮಹೇಲಾ ಜಯವರ್ಧನೆ 2015ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಐಸಿಸಿ ಕ್ರಿಕೆಟ್ ವಿಶ್ವಕಪ್ನಲ್ಲಿ ತಮ್ಮ ಕೊನೆಯ ಏಕದಿನ ಪಂದ್ಯ ಆಡಿದರು. ಈ ಮೂವರು ದಂತಕಥೆಗಳು ಒಟ್ಟಾಗಿ 45,310 ರನ್ ಗಳಿಸಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ ಸಚಿನ್ 18426, ಸಂಗಕ್ಕಾರ 14234, ಜಯವರ್ಧನೆ 12650 ರನ್ ಸಿಡಿಸಿದ್ದಾರೆ.
ಇದನ್ನೂ ಓದಿ: Hardik Pandya: ಐಪಿಎಲ್ ಆರಂಭಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ಬಲ ಏನೆಂದು ವಿವರಿಸಿದ ಹಾರ್ದಿಕ್ ಪಾಂಡ್ಯ
