ಭಾರತ ಟೆಸ್ಟ್ ತಂಡದ ಮುಂದಿನ ನಾಯಕರಾಗಬಲ್ಲ ಆಟಗಾರರು ಯಾರು; ವಿರಾಟ್-ಬುಮ್ರಾ ಹೊರತುಪಡಿಸಿ ಮತ್ತಿಬ್ಬರು
ಭಾರತ ಕ್ರಿಕೆಟ್ ತಂಡದಲ್ಲಿ ರೋಹಿತ್ ಶರ್ಮಾ ಹೊರತುಪಡಿಸಿದರೆ, ಹೆಚ್ಚು ಅನುಭವ ಇರುವ ಆಟಗಾರ ವಿರಾಟ್ ಕೊಹ್ಲಿ. ಆದರೆ, ಅವರು ಟೀಮ್ ಇಂಡಿಯಾ ನಾಯಕತ್ವಕ್ಕೆ ಮರಳುವ ಸಾಧ್ಯತೆ ಇಲ್ಲ. ಉಳಿದಂತೆ ನಾಯಕನೆಂಬ ಹೆಸರು ಬಂದಾಗ ಮೊದಲು ಬರುವವರೇ ಜಸ್ಪ್ರೀತ್ ಬುಮ್ರಾ. ಅವರ ಹೊರತಾಗಿ ಯಾರೆಲ್ಲಾ ಇದ್ದಾರೆ ನೋಡೋಣ.
ಭಾರತ ತಂಡವು ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಸೋಲು ಕಂಡ ನಂತರ, ಟೀಮ್ ಇಂಡಿಯಾ ಮುಂದಿನ ನಾಯಕ ಯಾರು ಎಂಬ ಪ್ರಶ್ನೆಗಳು ಎದ್ದಿವೆ. ಅದರಲ್ಲೂ ಟೆಸ್ಟ್ ತಂಡವನ್ನು ಮುನ್ನಡೆಸಬಲ್ಲ ಸಮರ್ಥ ನಾಯಕನ ಅಗತ್ಯ ತಂಡಕ್ಕಿದೆ. ಬಿಜಿಟಿ ಸರಣಿಯ ಸಿಡ್ನಿ ಟೆಸ್ಟ್ ಪಂದ್ಯದಿಂದ ತಂಡದ ನಾಯಕ ತೋಹಿತ್ ಶರ್ಮಾ ಹೊರಗುಳಿದಿದ್ದರು. ಕಳಪೆ ಫಾರ್ಮ್‌ನಿಂದಾಗಿ ಆಡುವ ಬಳಗದಿಂದ ಹೊರಗುಳಿಯುತ್ತಿರುವುದಾಗಿ ಹಿಟ್‌ಮ್ಯಾನ್ ಹೇಳಿದ್ದರು. ಮುಂದೆ ಹೆಚ್ಚು ಸಮಯ ರೋಹಿತ್ ಶರ್ಮಾ ನಾಯಕನಾಗಿ ಇರುವುದಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಹಲವು ಹಿರಿಯ ಕ್ರಿಕೆಟಿಗರು ಕೂಡಾ ಇದನ್ನೇ ಪುನರುಚ್ಛರಿಸಿದ್ದಾರೆ. ಆಟಗಾರನಾಗಿ ಮತ್ತು ಭಾರತ ಟೆಸ್ಟ್ ತಂಡದ ನಾಯಕನಾಗಿ ಅವರ ಭವಿಷ್ಯ ಅನಿಶ್ಚಿತವಾಗಿದೆ. ಈ ಸಮಯದಲ್ಲಿ ತಂಡದ ಮುಂದಿನ ನಾಯಕ ಯಾರು ಎಂಬ ಲೆಕ್ಕಾಚಾರ ಚುರುಕಾಗಿದೆ.
ಸಿಡ್ನಿ ಟೆಸ್ಟ್ ಪಂದ್ಯದ ನಡುವೆ ಮಾತನಾಡಿದ್ದ ರೋಹಿತ್, ನಿವೃತ್ತಿಯಾಗುವ ಯೋಚನೆ ಸದ್ಯಕ್ಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಕೆಲವೇ ದಿನಗಳಲ್ಲಿ ಮತ್ತೆ ಫಾರ್ಮ್ ಕಂಡುಕೊಳ್ಳುವ ಭರವಸೆ ವ್ಯಕ್ತಪಡಿಸಿದ್ದಾರೆ. 38 ವರ್ಷದ ಅನುಭವಿ ಆಟಗಾರ, ಇನ್ನೊಂದಷ್ಟು ಸಮಯ ಭಾರತ ಟೆಸ್ಟ್ ತಂಡದಲ್ಲಿ ಆಡಿದರೂ, ನಾಯಕನಾಗಿ ಉಳಿಯುವ ಸಾಧ್ಯತೆ ಕಡಿಮೆ ಇದೆ. ಹೀಗಾಗಿ ತಂಡಕ್ಕೆ ಬದಲಿ ನಾಯಕ ಯಾರಾಗಬಹುದು ಎಂದು ಯೋಚಿಸಬೇಕಿದೆ.
ಸದ್ಯ, ರೋಹಿತ್ ಹೊರತುಪಡಿಸಿದರೆ ತಂಡದಲ್ಲಿರುವ ಅನುಭವಿ ಆಟಗಾರ ವಿರಾಟ್ ಕೊಹ್ಲಿ. ಆದರೆ, ಅವರು ನಾಯಕತ್ವಕ್ಕೆ ಮರಳುವ ಸಾಧ್ಯತೆ ಇಲ್ಲ. ಉಳಿದಂತೆ ನಾಯಕನೆಂಬ ಹೆಸರು ಬಂದಾಗ ಮೊದಲು ಬರುವವರೇ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ.
ಜಸ್ಪ್ರೀತ್ ಬುಮ್ರಾ
ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಮೊದಲ ಟೆಸ್ಟ್‌ನಲ್ಲಿ ಭಾರತ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದವರು ಬುಮ್ರಾ. ಐದನೇ ಟೆಸ್ಟ್‌ನಲ್ಲಿಯೂ ಇವರೇ ನಾಯಕನಾಗಿದ್ದರು. ಸದ್ಯ ತಂಡದ ಉಪನಾಯಕರಾಗಿರುವ ಇವರು, ರೋಹಿತ್ ನಂತರ ನಾಯಕನಾಗುವ ಸಾಧ್ಯತೆ ಹೆಚ್ಚು. ಬುಮ್ರಾ ಈವರೆಗೆ ಮೂರು ಟೆಸ್ಟ್ ಪಂದ್ಯ ಮತ್ತು ಎರಡು ಟಿ20ಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ. ಆದರೆ, ಬುಮ್ರಾ ಆಗಾಗ ಗಾಯದ ಸಮಸ್ಯೆಗಳಿಗೆ ಒಳಗಾಗುತ್ತಿರುವುದೇ ಸದ್ಯದ ಕಾಳಜಿ. ಅವರ ಕೆಲಸದ ಹೊರೆಯನ್ನು ಕಡಿಮೆ ಮಾಡುವ ಕುರಿತು ಬಿಸಿಸಿಐ ಯೋಚಿಸುತ್ತಿದೆ. ವೇಗಿಯಾಗಿ ಬುಮ್ರಾ ತಂಡಕ್ಕೆ ಪ್ರಮುಖ ಆಸ್ತಿಯಾಗಿದ್ದಾರೆ. ಹೀಗಾಗಿ ಅವರಿಗೆ ಹೆಚ್ಚುವರಿ ಹೊರೆ ಹಾಗೂ ಗಾಯ ಆಗದಂತೆ ನೋಡಿಕೊಳ್ಳುವುದು ತಂಡದ ಸವಾಲು.
ರಿಷಭ್ ಪಂತ್
ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ತಂಡದ ಎಕ್ಸ್-ಫ್ಯಾಕ್ಟರ್ ರಿಷಬ್ ಪಂತ್. ಸುದೀರ್ಘ ಸಮಯದಲ್ಲಿ ಟೆಸ್ಟ್ ಶ್ರೇಯಾಂಕದಲ್ಲಿ ಇತರ ಭಾರತೀಯರಿಗಿಂತ ಮುಂದಿದ್ದ ಪಂತ್, ಅಪಘಾತದಿಂದ ಚೇತರಿಸಿಕೊಂಡ ನಂತರ ಮತ್ತೆ ಹಳೆಯ ಖದರ್ ತೋರಿಸುತ್ತಿದ್ದಾರೆ. ಅಲ್ಲದೆ ವಿಕೆಟ್ ಕೀಪರ್ ಆಗಿಯೂ ಮಿಂಚುತ್ತಿದ್ದಾರೆ. 27 ವರ್ಷ ಆಟಗಾರ ಈಗಾಗಲೇ ಭಾರತ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ನಂಬರ್ ವನ್ ಆಯ್ಕೆಯಾಗಿರುವ ಅವರು, ಭಾರತದ ಭವಿಷ್ಯದ ಭರವಸೆಯ ನಾಯಕನಾಗಿದ್ದಾರೆ. ಆಯ್ಕೆಯಾಗಿದ್ದಾರೆ.
ಕೆಎಲ್ ರಾಹುಲ್
ಅನುಭವಿ ಕನ್ನಡಿಗನಿಗೂ ನಾಯಕತ್ವದ ಅನುಭವವಿದೆ. 2021ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದಿಂದ 2023ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸ್ವದೇಶಿ ಸರಣಿಯವರೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ತಂಡದ ನಿಯೋಜಿತ ಉಪನಾಯಕರಾಗಿದ್ದರು. ಭಾರತ ತಂಡವನ್ನು ಮೂರು ಪಂದ್ಯಗಳಲ್ಲಿ ಅವರು ಮುನ್ನಡೆಸಿದ್ದಾರೆ. ಆದರೆ, ಅವರಿಗೆ ಟೀಮ್ ಇಂಡಿಯಾದಲ್ಲಿ ಕಾಯಂ ಸ್ಥಾನ ಸಿಗುತ್ತಿಲ್ಲ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಉತ್ತಮ ಪ್ರದರ್ಶನ ನೀಡಿದ್ದ ಆಟಗಾರನನ್ನು ನಾಯಕತ್ವದ ಆಯ್ಕೆಯಾಗಿ ಬಿಸಿಸಿಐ ನೋಡುತ್ತಿದೆ.