ಕುಣಿಯಲಾರದವನಿಗೆ ನೆಲ ಡೊಂಕೆಂದರಂತೆ! 22 ಪುರೋಹಿತರಿಂದ ವಾಮಾಚಾರ ಮಾಡಿಸಿ ಭಾರತ ಗೆಲ್ತು ಎಂದ ಪಾಕ್ ಮೀಡಿಯಾ, VIDEO
ದುಬೈಗೆ 22 ಪುರೋಹಿತರನ್ನು ಕರೆಸಿಕೊಂಡು ವಾಮಾಚಾರ ಮಾಡಿಸಿದ ಭಾರತ ತಂಡವು, ಪಾಕಿಸ್ತಾನ ವಿರುದ್ಧ ಗೆದ್ದುಕೊಂಡಿತು ಎಂದು ಪಾಕ್ ಮಾಧ್ಯಮ ನಡೆಸಿದ ಚರ್ಚೆಯೊಂದು ವೈರಲ್ ಆಗುತ್ತಿದೆ.

ಕುಣಿಯಲಾರದವನಿಗೆ ನೆಲ ಡೊಂಕು, ಕೈಲಾಗದವನು, ಮೈಯೆಲ್ಲಾ ಪರಚಿಕೂಂಡ - ಈ ಗಾದೆ ಮಾತುಗಳನ್ನು ಕೇಳಿಯೇ ಇರ್ತೀರಿ. ಇದು ಪ್ರಸ್ತುತ ಪಾಕಿಸ್ತಾನಕ್ಕೆ ಪಕ್ಕಾ ಸೂಟ್ ಆಗುತ್ತಿದೆ. ಫೆಬ್ರವರಿ 23ರಂದು ಟೀಮ್ ಇಂಡಿಯಾ ವಿರುದ್ಧ ಸೋತಿದ್ದನ್ನು ಅರಗಿಸಿಕೊಳ್ಳದ ನೆರೆಯ ರಾಷ್ಟ್ರ ಹೊಟ್ಟೆ ಉರಿಯಿಂದ ಏನೇನೋ ಮಾತನಾಡುತ್ತಿದೆ. ತಮ್ಮ ದೇಶದ ಮಾಜಿ ಕ್ರಿಕೆಟರ್ಗಳೇ ಪಾಕಿಸ್ತಾನ ತಂಡದ ಕಳಪೆ ಬ್ಯಾಟಿಂಗನ್ನು ಟೀಕಿಸುತ್ತಿದ್ದರೆ, ಅಲ್ಲಿನ ಮಾಧ್ಯಮಗಳು ದುಬೈಗೆ 22 ಪುರೋಹಿತರನ್ನು ಕರೆಸಿಕೊಂಡು ಮಾಟ-ಮಂತ್ರ ಮಾಡಿಸಿ ಭಾರತ ಗೆದ್ದಿದೆ ಎಂದು ವಿಚಿತ್ರ ಕಾರಣವೊಂದನ್ನು ನೀಡಿದೆ. ಇದು ನಗೆಪಾಟಲಿಗೆ ಕಾರಣವಾಗಿದೆ. ಗೆಲ್ಲಲು ಸಾಧ್ಯವಾಗದವರು ಹೀಗೆ ನಾನಾ ಕಾರಣ ಹುಡುಕಿ ತಾವೇ ಟ್ರೋಲ್ ಆಗುತ್ತಿದ್ದಾರೆ.
ಚಾಂಪಿಯನ್ಸ್ ಟ್ರೋಫಿಗೆ ಆತಿಥ್ಯ ವಹಿಸಿರುವ ಪಾಕಿಸ್ತಾನ ತಂಡವು ಟೂರ್ನಿಯಿಂದ ಹೊರಬಿದ್ದಿದೆ. ಭಾರತ ಮತ್ತು ನ್ಯೂಜಿಲೆಂಡ್ ತಮ್ಮ ಸೆಮಿಫೈನಲ್ ಸ್ಥಾನಗಳನ್ನು ಖಚಿತಪಡಿಸಿಕೊಂಡ ಕಾರಣ ಪಾಕ್ ಒಂದು ವಾರದೊಳಗೆ ಐಸಿಸಿ ಟೂರ್ನಮೆಂಟ್‌ನಿಂದ ಹೊರಬಿದ್ದಿತು. ಪಾಕಿಸ್ತಾನ ಭಾರತದ ವಿರುದ್ಧ ಅವಮಾನಕರ ಸೋಲು ಅನುಭವಿಸಿದ ನಂತರ ಸ್ಪರ್ಧೆಯಲ್ಲಿ ಉಳಿಯಲು ನ್ಯೂಜಿಲೆಂಡ್ ವಿರುದ್ಧ ಬಾಂಗ್ಲಾದೇಶ ಗೆಲ್ಲಲು ಪ್ರಾರ್ಥಿಸಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ತಮ್ಮ ತಂಡವು ಗುಂಪು ಹಂತದಿಂದಲೇ ಅಧಿಕೃತವಾಗಿ ಹೊರಬಿದ್ದ ಬೆನ್ನಲ್ಲೇ ಪಾಕಿಸ್ತಾನದ ಮಾಧ್ಯಮಗಳು ಭಾರತದ ವಿರುದ್ಧ ಬಾಯಿಗೆ ಬಂದ ಆರೋಪವನ್ನು ಮಾಡಿ ಟ್ರೋಲ್ ಆಗುತ್ತಿದೆ.
ವಾಮಾಚಾರ ಮಾಡಿ ಭಾರತ ಗೆದ್ದಿದ್ಯಂತೆ!
ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿತು. ಅದರಂತೆ ಬ್ಯಾಟಿಂಗ್ ನಡೆಸಿದ ಪಾಕ್, 49.4 ಓವರ್ಗಳಲ್ಲಿ 241 ರನ್ ಗಳಿಸಿ ಆಲೌಟ್ ಆಯಿತು. ಇದಕ್ಕೆ ಪ್ರತ್ಯುತ್ತರವಾಗಿ ಭಾರತ ತಂಡವು 42.3 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು ಜಯದ ನಗೆ ಬೀರಿತ್ತು. ರಿಜ್ವಾನ್ ಪಡೆ 6 ವಿಕೆಟ್ಗಳ ಸೋಲನುಭವಿಸಿದ ಬೆನ್ನಲ್ಲೇ ಕ್ರಿಕೆಟ್ ತಜ್ಞರು ನಿಖರವಾದ ಕಾರಣಗಳ ಕುರಿತು ವಿಶ್ಲೇಷಣೆ ಮಾಡುತ್ತಿದ್ದಾರೆ. ಆದರೆ ಪಾಕಿಸ್ತಾನದ ಮಾಧ್ಯಮಗಳು ಮಾಟ-ಮಂತ್ರದಿಂದ ಪಂದ್ಯವನ್ನು ಗೆದ್ದುಕೊಂಡಿದೆ ಎಂದು ಪಾಕ್ ಮಾಧ್ಯಮಗಳು ಹೇಳಿವೆ.
ನಿರೂಪಕರು-ಪ್ಯಾನೆಲಿಸ್ಟ್ ಚರ್ಚೆಯ ವಿವರ ಇಲ್ಲಿದೆ
22 ಪುರೋಹಿತರನ್ನು ದುಬೈಗೆ ಕರೆಸಿಕೊಂಡು ವಾಮಾಚಾರ ಮಾಡಿಸಿದ ಕಾರಣ ಭಾರತ ಪಂದ್ಯವನ್ನು ಗೆದ್ದುಕೊಂಡಿದೆ ಎಂದು ಪಾಕಿಸ್ತಾನದ ಮಾಧ್ಯಮವೊಂದರಲ್ಲಿ ನಡೆದ ಚರ್ಚೆ ವೈರಲ್ ಆಗುತ್ತಿದೆ. ಟೀಮ್ ಇಂಡಿಯಾ ವಿರುದ್ಧ ಪಾಕ್ ಸೋಲಲು ನಿಖರವಾದ ಕಾರಣವೇನು? ಇದಕ್ಕೆ ಮಂತ್ರವಾದಿಗಳ ಕೈವಾಡವಿದೆಯೇ ಎಂದು ನಿರೂಪಕರೊಬ್ಬರು ಕೇಳುತ್ತಾರೆ. ನಿಜ, ಪಾಕ್ ಸೋಲಿಗೆ ಕಾಯುತ್ತಿದ್ದ ಭಾರತ ತಂಡ, ದುಬೈಗೆ 22 ಹಿಂದೂ ಪುರೋಹಿತರನ್ನು ಕರೆಸಿಕೊಂಡಿತ್ತು. ಇವರು ಮೈದಾನದಲ್ಲಿ ನಡೆಸಿದ ಬ್ಲ್ಯಾಕ್ ಮ್ಯಾಜಿಕ್‌ನಿಂದ ನಮ್ಮ ತಂಡದ ಸೋತಿದೆ ಎಂದು ಪ್ಯಾನೆಲಿಸ್ಟ್ವೊಬ್ಬರು ಹೇಳಿದ್ದಾರೆ.
ಪುರೋಹಿತರು ಬ್ಲ್ಯಾಕ್ ಮ್ಯಾಜಿಕ್ ಮಾಡಿದ್ದು ಹೇಗೆ ಎಂದು ಮತ್ತೊಂದು ಪ್ರಶ್ನೆಯನ್ನು ನಿರೂಪಕರು ಮುಂದಿಡುತ್ತಾರೆ. ಅದಕ್ಕೆ ಪ್ಯಾನೆಲಿಸ್ಟ್ ಹೇಳಿದ್ದು ಹೀಗೆ... 'ಮೈದಾನ ಪ್ರೇಕ್ಷಕರಿಂದ ತುಂಬಿದ್ದ ಕಾರಣ ಯಾರಿಗೂ ತಿಳಿಯದಂತೆ ಪುರೋಹಿತರು ಮಾಟಮಂತ್ರ ಆರಂಭಿಸಿದ್ದರು. ಇದು ಪಾಕಿಸ್ತಾನ ಆಟಗಾರರ ಗಮನ ಬೇರೆಡೆ ಸೆಳೆಯುವಂತೆ ಮಾಡಿತು'.
ಇದೇ ಕಾರಣಕ್ಕೆ ಭಾರತ ತಂಡವನ್ನು ಪಾಕ್ಗೆ ಕಳುಹಿಸಲಿಲ್ಲವೇ ಎಂದು ಮತ್ತೊಂದು ಪ್ರಶ್ನೆ ಮುಂದಿಟ್ಟ ನಿರೂಪಕ. ನಿಜ, ಒಂದು ವೇಳೆ ಭಾರತ ಇಲ್ಲಿಗೆ ಬಂದಿದ್ದರೆ ಪುರೋಹಿತರಿಗೆ ಮಾಟಮಂತ್ರ ಮಾಡಲು ಅವಕಾಶವೇ ಸಿಗುತ್ತಿರಲಿಲ್ಲ. ಹಾಗಾಗಿ, ಭಾರತ ದುಬೈನಲ್ಲಿ ಆಡುತ್ತಿದೆ ಎಂದರು ಪ್ಯಾನೆಲಿಸ್ಟ್.
ಈ ಷಡ್ಯಂತ್ರ ನಡೆದಿದ್ದಾದರೂ ಹೇಗೆ ಎಂದು ನಿರೂಪಕ ಹೀಗೊಂದು ಪ್ರಶ್ನೆಯನ್ನು ಕೇಳಿದರು. ದುಬೈಗೆ ಬಂದಿದ್ದ 22 ಪುರೋಹಿತರ ಪೈಕಿ 7 ಮಂದಿ ಪಂದ್ಯಕ್ಕೂ ಮುನ್ನಾದಿನವೇ ಮೈದಾನಕ್ಕೆ ಭೇಟಿ ಕೊಟ್ಟಿದ್ದರು. ಬಳಿಕ ಪಂದ್ಯದ ದಿನ ಉಳಿದವರು ಜೊತೆಗೂಡಿ ಲೈವ್ ಮ್ಯಾಚ್‌ನಲ್ಲೇ ವಾಮಾಚಾರ ಮಾಡಿ ನಮ್ಮವರ ಮೇಲೆ ಪ್ರಭಾವ ಬೀರಿದರು ಎಂದು ಪ್ಯಾನೆಲಿಸ್ಟ್ ಹೇಳಿದ್ದಾರೆ. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಪ್ರಶ್ನೆ ಕೇಳೋ ಆ್ಯಂಕರ್ಗೂ, ಉತ್ತರ ಹೇಳೋ ಆ ಪ್ಯಾನೆಲಿಸ್ಟ್ಗೂ ಒಂಚೂರು ಬುದ್ದಿ ಇಲ್ಲ ಅನ್ನೋದು ಈ ಚರ್ಚೆಯೇ ಉತ್ತರ ಕೊಡ್ತಿದೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.
