ಹೆಡ್ ಕೋಚ್ ರಾಹುಲ್ ದ್ರಾವಿಡ್ ಗುತ್ತಿಗೆ ಅಂತ್ಯ; ಅವರ ಸ್ಥಾನ ತುಂಬಬಲ್ಲ ಭಾರತದ ಮೂವರು ದಿಗ್ಗಜರು ಇವರೇ
Team India head Coach: ಟೀಮ್ ಇಂಡಿಯಾದ ಹೆಡ್ ಕೋಚ್ ಅವಧಿ ಮುಕ್ತಾಯಗೊಂಡಿದೆ. ಹೀಗಾಗಿ ರಾಹುಲ್ ದ್ರಾವಿಡ್ ಸ್ಥಾನವನ್ನು ತುಂಬುವ ಸಾಮರ್ಥ್ಯ ಇರುವ ಮೂವರು ಮಾಜಿ ಕ್ರಿಕೆಟಿಗರನ್ನು ಈ ಮುಂದೆ ನೋಡೋಣ.
2023ರ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದೊಂದಿಗೆ ಹೆಡ್ಕೋಚ್ ರಾಹುಲ್ ದ್ರಾವಿಡ್ (Rahul dravid) ಅವರ ಒಪ್ಪಂದವೂ ಕೊನೆಗೊಂಡಿದೆ. ಲೆಜೆಂಡರಿ ಆಟಗಾರ 2021ರಲ್ಲಿ ರವಿ ಶಾಸ್ತ್ರಿ (Ravi Shastri) ಬಳಿಕ ಭಾರತ ತಂಡದ ಹೆಡ್ ಕೋಚ್ ಆಗಿ ನೇಮಕಗೊಂಡಿದ್ದರು. ಬಿಸಿಸಿಐ, ಅವರಿಗೆ ಎರಡು ವರ್ಷಗಳ ಗುತ್ತಿಗೆಯನ್ನು ನೀಡಿತ್ತು. ಕೋಚ್ ಆಗಲು ದ್ರಾವಿಡ್ಗೆ ಇಷ್ಟವಿರಲಿಲ್ಲ. ಆದರೆ ಅಂದಿನ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ಅವರು ಮನವೊಲಿಸಿ ಹೆಡ್ ಕೋಚ್ ಸ್ಥಾನಕ್ಕೆ ನೇಮಿಸಿದ್ದರು.
ಸದ್ಯದ ಮಟ್ಟಿಗೆ ದ್ರಾವಿಡ್ ಭವಿಷ್ಯದ ಕುರಿತು ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ. ನವೆಂಬರ್ 23ರಿಂದ ಶುರುವಾಗುವ ಆಸ್ಟ್ರೇಲಿಯಾ ಎದುರಿನ 5 ಪಂದ್ಯಗಳ ಟಿ20 ಸರಣಿಗೆ ಅವರು ಭಾರತ ತಂಡದ ಕೋಚ್ ಆಗಿರುವುದಿಲ್ಲ. ಮಾಜಿ ಕ್ರಿಕೆಟಿಗ ಮತ್ತು ಎನ್ಸಿಎ ನಿರ್ದೇಶಕನಾಗಿರುವ ವಿವಿಎಸ್ ಲಕ್ಷ್ಮಣ್ ಅವರು ಹಂಗಾಮಿ ಹೆಡ್ ಕೋಚ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಮಂಡಳಿಯು ದ್ರಾವಿಡ್ ಅವರ ಒಪ್ಪಂದವನ್ನು ನವೀಕರಿಸಲು ಬಯಸಿದ್ದರೂ, ಬಿಸಿಸಿಐ ಕಾರ್ಯವಿಧಾನವನ್ನು ಅನುಸರಿಸಬೇಕು.
ದ್ರಾವಿಡ್ ಸ್ಥಾನಕ್ಕೆ ಯಾರು ಸೂಕ್ತ
ಕೋಚ್ ಆಗಿ ಮುಂದುವರಿಸಲು ಇಚ್ಛಿಸಿದರೆ, ದ್ರಾವಿಡ್ ಮತ್ತೆ ಮುಖ್ಯಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಬೇಕು. 2019ರಲ್ಲಿ ಇದೇ ರೀತಿ ರವಿ ಶಾಸ್ತ್ರಿ ಅವರನ್ನು ಕೋಚ್ ಆಗಿ ಉಳಿಸಿಕೊಳ್ಳಲಾಗಿತ್ತು. ಬಿಸಿಸಿಐ ಶೀಘ್ರದಲ್ಲೇ ಉನ್ನತ ಹುದ್ದೆಗೆ ಅರ್ಜಿ ಆಹ್ವಾನಿಸುವ ನಿರೀಕ್ಷೆ ಇದೆ. ಇದು ದ್ರಾವಿಡ್ ಭವಿಷ್ಯದ ಕುರಿತು ಸ್ಪಷ್ಟ ಸುಳಿವು ನೀಡುತ್ತದೆ. ಬಿಸಿಸಿಐನಿಂದ ಅಧಿಕೃತ ಮಾಹಿತಿ ಬರುವುದಕ್ಕೂ ಮುನ್ನವೇ ರಾಹುಲ್ ದ್ರಾವಿಡ್ ಸ್ಥಾನವನ್ನು ತುಂಬುವ ಸಾಮರ್ಥ್ಯ ಇರುವ ಮೂವರು ಮಾಜಿ ಕ್ರಿಕೆಟಿಗರನ್ನು ಈ ಮುಂದೆ ನೋಡೋಣ.
1. ವಿವಿಎಸ್ ಲಕ್ಷ್ಮಣ್
ಅಪಾರ ಕ್ರಿಕೆಟ್ ಆಡಿದ ಮತ್ತು ಕೋಚಿಂಗ್ ಅನುವಭ ಹೊಂದಿರುವ ವಿವಿಎಸ್ ಲಕ್ಷ್ಮಣ್ ಅವರ ಭಾರತದ ಹೆಡ್ ಕೋಚ್ ಆಗುವ ರೇಸ್ನಲ್ಲಿದ್ದಾರೆ. ಪ್ರಸ್ತುತ ಅವರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (NCA) ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜೊತೆಗೆ ದ್ರಾವಿಡ್ ವಿಶ್ರಾಂತಿ ವೇಳೆ ಹಂಗಾಮಿ ಕೋಚ್ ಆಗಿ ಭಾರತ ತಂಡಕ್ಕೆ ಮಾರ್ಗದರ್ಶನಕವಾಗಿ ಸೇವೆ ಸಲ್ಲಿಸಿದ್ದಾರೆ. ದ್ರಾವಿಡ್ ಕೋಚ್ ಆಗುವ ಮೊದಲು ಎನ್ಸಿಎ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು.
ಲಕ್ಷ್ಮಣ್ ಅವರಿಗೆ ಕೋಚಿಂಗ್ ಅನುಭವ ಹೆಚ್ಚಿದೆ. 2013ರಲ್ಲಿ ತಮ್ಮ ಕೋಚಿಂಗ್ ವೃತ್ತಿ ಜೀವನ ಪ್ರಾರಂಭಿಸಿದರು. ಅವರು ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ಮಾರ್ಗದರ್ಶಕರಾಗಿದ್ದರು. 2021ರಲ್ಲಿ ಬಿಸಿಸಿಐಗೆ ಸೇರಿದ ನಂತರ ಐಪಿಎಲ್ ತೊರೆಯಬೇಕಾಯಿತು. ಅವರು ತಂಡಕ್ಕೆ ಮಾರ್ಗದರ್ಶಕರಾಗಿದ್ದಾಗ ಎಸ್ಆರ್ಹೆಚ್ ಸ್ಥಿರ ತಂಡಗಳಲ್ಲಿ ಒಂದಾಗಿತ್ತು. ಅಲ್ಲದೆ, ಏಷ್ಯನ್ ಗೇಮ್ಸ್ ತಂಡಕ್ಕೂ ಕೋಚ್ ಆಗಿದ್ದ ಅವರು, ಭಾರತ ಚಿನ್ನ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
2. ಅನಿಲ್ ಕುಂಬ್ಳೆ
ಈಗಾಗಲೇ ಭಾರತ ತಂಡಕ್ಕೆ ಕೋಚ್ ಆಗಿದ್ದ ಅನಿಲ್ ಕುಂಬ್ಳೆ, ಈಗ ಮತ್ತೊಮ್ಮೆ ಅವಕಾಶ ಸಿಕ್ಕರೆ ಮುಖ್ಯ ಜವಾಬ್ದಾರಿ ಹೊರುವ ನಿರೀಕ್ಷೆಯಲ್ಲಿದ್ದಾರೆ. ಭಾರತ ತಂಡದ ಮುಖ್ಯ ಕೋಚ್ ಆಗಿ ಅತ್ಯಂತ ಯಶಸ್ವಿಯಾಗಿದ್ದಾರೆ. ವಿರಾಟ್ ಕೊಹ್ಲಿ ನಾಯಕನಾಗಿದ್ದ ಆ ಅವಧಿಯಲ್ಲಿ ತರಬೇತುದಾರರಾಗಿದ್ದರು. ಕುಂಬ್ಳೆ ತರಬೇತುದಾರರಾಗಿದ್ದ ಅವಧಿಯಲ್ಲಿ ಭಾರತ ಒಂದೇ ಟೆಸ್ಟ್ ಪಂದ್ಯ ಮಾತ್ರ ಸೋತಿತ್ತು. ಅಲ್ಲದೆ, ಭಾರತವು 2017ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ಗೂ ಪ್ರವೇಶಿಸಿತ್ತು. ಆದರೆ ಫೈನಲ್ನಲ್ಲಿ ಪಾಕ್ ವಿರುದ್ಧ ಭಾರತ ಮುಗ್ಗರಿಸಿತ್ತು.
ಆದರೆ ವಿರಾಟ್ ಕೊಹ್ಲಿ ಜೊತೆಗಿನ ಮನಸ್ಥಾಪದಿಂದ ಅವರು ಭಾರತ ತಂಡದ ಕೋಚ್ ಸ್ಥಾನದಿಂದ ಹೊರ ನಡೆದರು ಎಂಬ ಸುದ್ದಿ ಈಗಲೂ ಇದೆ. ಆದರೀಗ ತಂಡದಲ್ಲಿ ಎಲ್ಲವೂ ಬದಲಾಗಿದೆ. ಇದೀಗ ತಮ್ಮ ಕೋಚಿಂಗ್ ಅವಧಿಯಲ್ಲಿ ಭಾರತಕ್ಕೆ ಐಸಿಸಿ ಟ್ರೋಫಿ ಗೆದ್ದುಕೊಡಲು ಕುಂಬ್ಳೆ ಉತ್ಸುಕರಾಗಿದ್ದಾರೆ. ಅಲ್ಲದೆ, ಅವರು ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ತಂಡಕ್ಕೆ ಕೋಚ್ ಕೂಡ ಆಗಿದ್ದರು.
3. ವೀರೇಂದ್ರ ಸೆಹ್ವಾಗ್
ಇತ್ತೀಚೆಗಷ್ಟೆ ಹಾಲ್ ಆಫ್ ಫೇಮ್ ಗೌರವಕ್ಕೆ ಪಾತ್ರರಾದ ಭಾರತದ ಸ್ಪೋಟಕ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಕೂಡ ಹೆಡ್ಕೋಚ್ ಹುದ್ದೆಗೆ ಪ್ರಮುಖ ಆಕಾಂಕ್ಷಿ. ಸೆಹ್ವಾಗ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಹೊಂದಿದ್ದ ಎರಡು ವರ್ಷಗಳ ನಂತರ ಟೀಮ್ ಇಂಡಿಯಾ ಹೆಡ್ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. 2017ರಲ್ಲಿ ಅರ್ಜಿ ಸಲ್ಲಿಸಿದ್ದರೂ ಆಯ್ಕೆಯಾಗಿರಲಿಲ್ಲ. ಈ ಬಾರಿ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳುತ್ತಿವೆ.