4301 ರನ್, 12 ಗೆಲುವು, 47.80 ಸರಾಸರಿ: ರೋಹಿತ್ ಶರ್ಮಾ 12 ವರ್ಷಗಳ ಟೆಸ್ಟ್ ಕ್ರಿಕೆಟ್ ಪ್ರಯಾಣದ ಅಂಕಿ-ಸಂಖ್ಯೆಗಳು
ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿರುವ ಹಿನ್ನೆಲೆಯಲ್ಲಿ ಅವರ ಟೆಸ್ಟ್ ವೃತ್ತಿಜೀವನದ ಕೆಲವೊಂದಿಷ್ಟು ದಾಖಲೆಗಳ ನೋಟ ಇಲ್ಲಿದೆ ನೋಡಿ.

ಜೂನ್ 20ರಿಂದ ಶುರುವಾಗುವ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಗೆ ಪ್ರವಾಸ ಕೈಗೊಳ್ಳುವುದಕ್ಕೂ ಮುನ್ನವೇ 38 ವರ್ಷದ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ನಿವೃತ್ತಿ ಕುರಿತು ಪ್ರಕಟಿಸಿದ್ದಾರೆ. ನಿವೃತ್ತಿ ಘೋಷಿಸಿದ್ದರೂ ಹಿಟ್ಮ್ಯಾನ್ ಖ್ಯಾತಿಯ ರೋಹಿತ್ ಏಕದಿನ ಕ್ರಿಕೆಟ್ನಲ್ಲಿ ಮುಂದುವರೆಯುವುದಾಗಿ ಪ್ರಕಟಿಸಿದ್ದಾರೆ.
'ಎಲ್ಲರಿಗೂ ನಮಸ್ಕಾರ, ನಾನು ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿ ಹೊಂದುತ್ತಿದ್ದೇನೆ ಎಂದು ಹಂಚಿಕೊಳ್ಳಲು ಬಯಸುತ್ತೇನೆ. ನನ್ನ ದೇಶವನ್ನು ಬಿಳಿ ಜೆರ್ಸಿಯಲ್ಲಿ ಪ್ರತಿನಿಧಿಸುವುದು ಸಂಪೂರ್ಣ ಗೌರವವಾಗಿದೆ. ನಿಮ್ಮೆಲ್ಲರ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು. ನಾನು ಏಕದಿನ ಮಾದರಿಯಲ್ಲಿ ಭಾರತವನ್ನು ಪ್ರತಿನಿಧಿಸುವುದನ್ನು ಮುಂದುವರಿಸುತ್ತೇನೆ' ಎಂದು ಇನ್ಸ್ಟಾಗ್ರಾಮ್ನಲ್ಲಿ ತಿಳಿಸಿದ್ದಾರೆ.
2013ರಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ರೋಹಿತ್ ತನ್ನ ಮೊದಲ ಎರಡೂ ಪಂದ್ಯಗಳಲ್ಲಿ ಶತಕ ಬಾರಿಸಿದ್ದರು. ಆರಂಭದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಿದ್ದ ರೋಹಿತ್, 2019ರಲ್ಲಿ ಓಪನಿಂಗ್ ಸ್ಥಾನಕ್ಕೆ ಮರಳಿದರು. ಅದ್ಭುತ ಪ್ರದರ್ಶನ ನೀಡುವ ಮೂಲಕ ಆರಂಭಿಕನಾಗಿ ಸ್ಥಾನ ಭದ್ರಪಡಿಸಿಕೊಂಡರು. ಬಳಿಕ ಕೊಹ್ಲಿಗೆ ಉಪನಾಯಕನಾಗಿ, 2022ರಲ್ಲಿ ನಾಯಕನಾಗಿ ನೇಮಕಗೊಂಡರು.
ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿರುವ ಹಿನ್ನೆಲೆಯಲ್ಲಿ ಅವರ ಟೆಸ್ಟ್ ವೃತ್ತಿಜೀವನದ ಕೆಲವೊಂದಿಷ್ಟು ದಾಖಲೆಗಳ ನೋಟ ಇಲ್ಲಿದೆ ನೋಡಿ.
4301 ರನ್: ರೋಹಿತ್ ಭಾರತ ಪರ 67 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಇದರಲ್ಲಿ 40.57ರ ಸರಾಸರಿಯಲ್ಲಿ 4301 ರನ್ ಗಳಿಸಿದ್ದಾರೆ. ಹಿಟ್ಮ್ಯಾನ್ ತಮ್ಮ ಟೆಸ್ಟ್ ವೃತ್ತಿಜೀವನವನ್ನು ಟೆಸ್ಟ್ನಲ್ಲಿ ಭಾರತದ 16ನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಕೊನೆಗೊಳಿಸಿದ್ದಾರೆ.
12 ಶತಕ: ಟೆಸ್ಟ್ ಕ್ರಿಕೆಟ್ನಲ್ಲಿ ರೋಹಿತ್ ಭಾರತ ಪರ ಟೆಸ್ಟ್ 12 ಶತಕ ಗಳಿಸಿದ್ದಾರೆ. ಈ ಪೈಕಿ 9 ಶತಕಗಳನ್ನು ಆರಂಭಿಕನಾಗಿ ಬ್ಯಾಟಿಂಗ್ ಮಾಡುವಾಗ ಸಿಡಿಸಿದ್ದಾರೆ. ಟೆಸ್ಟ್ನಲ್ಲಿ ಭಾರತೀಯ ಕ್ರಿಕೆಟಿಗ ಗಳಿಸಿದ 12ನೇ ಅತಿ ಹೆಚ್ಚು ಶತಕಗಳನ್ನು ಹೊಂದಿದ್ದಾರೆ. ರೋಹಿತ್ 12 ಟೆಸ್ಟ್ ಶತಕಗಳಲ್ಲಿ ಪ್ರತಿಯೊಂದೂ ಭಾರತದ ಗೆಲುವಿನಲ್ಲಿ ಬಂದಿದ್ದು, ಇದು ವಿಶ್ವ ದಾಖಲೆಯಾಗಿದೆ.
18 ಅರ್ಧಶತಕ: ರೋಹಿತ್ ಭಾರತ ಪರ 18 ಅರ್ಧಶತಕ ಗಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್ನ ತಮ್ಮ ವೃತ್ತಿಜೀವನದಲ್ಲಿ 30 ಫಿಫ್ಟಿ ಪ್ಲಸ್ ಸ್ಕೋರ್ಗಳೊಂದಿಗೆ ಕೊನೆಗೊಳಿಸುತ್ತಾರೆ.
47.80 ಸರಾಸರಿ: ಟೆಸ್ಟ್ ಕ್ರಿಕೆಟ್ನಲ್ಲಿ ಆರಂಭಿಕನಾಗಿ ರೋಹಿತ್ 66 ಇನ್ನಿಂಗ್ಸ್ಗಳನ್ನು (38 ಪಂದ್ಯಗಳು) ಆಡಿದ್ದಾರೆ. 9 ಶತಕಗಳೊಂದಿಗೆ 2697 ರನ್ ಗಳಿಸಿದ್ದಾರೆ. 47.80ರ ಸರಾಸರಿಯು ಟೆಸ್ಟ್ನಲ್ಲಿ ಭಾರತೀಯ ಆರಂಭಿಕನೊಬ್ಬ ಗಳಿಸಿದ 7ನೇ ಅತ್ಯುತ್ತಮ ಸರಾಸರಿಯಾಗಿದೆ.
10 ಶತಕ: ರೋಹಿತ್ ಸಿಡಿಸಿರುವ 12 ಟೆಸ್ಟ್ ಶತಕಗಳ ಪೈಕಿ ಭಾರತದಲ್ಲಿ 10 ಶತಕಗಳು ಬಂದಿವೆ. ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ನಲ್ಲಿ ತಲಾ ಒಂದು ಶತಕ ಮಾತ್ರ ತವರಿನಿಂದ ಹೊರಗೆ ಬಂದಿದೆ.
3ನೇ ಆಟಗಾರ: ಮೊಹಮ್ಮದ್ ಅಜರುದ್ದೀನ್ ಮತ್ತು ಸೌರವ್ ಗಂಗೂಲಿ ಬಳಿಕ ತಮ್ಮ ಮೊದಲ 2 ಟೆಸ್ಟ್ ಪಂದ್ಯಗಳಲ್ಲಿ ಶತಕ ಗಳಿಸಿದ ಮೂವರು ಭಾರತೀಯ ಆಟಗಾರರಲ್ಲಿ ರೋಹಿತ್ ಒಬ್ಬರು. ಬಿಲ್ ಬಿಲ್ ಪಾನ್ಸ್ಫೋರ್ಡ್, ಡೌಗ್ ವಾಲ್ಟರ್ಸ್, ಆಲ್ವಿನ್ ಕಲ್ಲಿಚರಣ್, ಗ್ರೆಗ್ ಬ್ಲೆವೆಟ್, ಜೇಮ್ಸ್ ನೀಶಮ್ ಮತ್ತು ಅಬಿದ್ ಅಲಿ ಈ ಸಾಧನೆ ಮಾಡಿದ ವಿಶ್ವದ ಇತರ ಆಟಗಾರರು.
5ನೇ ಯಶಸ್ವಿ ನಾಯಕ: 24 ಪಂದ್ಯಗಳಲ್ಲಿ 12 ಗೆಲುವುಗಳೊಂದಿಗೆ ಭಾರತದ 5ನೇ ಅತ್ಯಂತ ಯಶಸ್ವಿ ನಾಯಕನಾಗಿ ರೋಹಿತ್ ತಮ್ಮ ಟೆಸ್ಟ್ ನಾಯಕತ್ವದ ಅವಧಿಯನ್ನು ಕೊನೆಗೊಳಿಸಿದ್ದಾರೆ. ವಿರಾಟ್ ಕೊಹ್ಲಿ (40), ಎಂಎಸ್ ಧೋನಿ (27), ಸೌರವ್ ಗಂಗೂಲಿ (21), ಮೊಹಮ್ಮದ್ ಅಜರುದ್ದೀನ್ (14) ಮಾತ್ರ ರಾಷ್ಟ್ರೀಯ ತಂಡವನ್ನು ರೆಡ್-ಬಾಲ್ ಕ್ರಿಕೆಟ್ನಲ್ಲಿ ಮುನ್ನಡೆಸುವ ಮೂಲಕ ಹೆಚ್ಚು ಪಂದ್ಯ ಗೆದ್ದಿದ್ದಾರೆ.
ಶೇ 50ರಷ್ಟು ಗೆಲುವು: ಟೆಸ್ಟ್ ಕ್ರಿಕೆಟ್ನಲ್ಲಿ ರೋಹಿತ್ ಅವರು ಶೇ 50 ರಷ್ಟು ಗೆಲುವಿನ ಶೇಕಡಾವಾರು ಹೊಂದಿದ್ದಾರೆ. ಕೊಹ್ಲಿ (58%) ನಂತರ ಹೆಚ್ಚು ಶೇಕಡವಾರು ಹೊಂದಿರುವ ಎರಡನೇ ನಾಯಕ ಎನಿಸಿದ್ದಾರೆ.