ಆರ್‌ಸಿಬಿಯಲ್ಲಿದ್ದಾಗ ಶಿವಂ ದುಬೆ ಎಂದಿಗೂ ಮುಕ್ತವಾಗಿರಲು ಸಾಧ್ಯವಾಗಿಲ್ಲ; ಇದು ಸಿಎಸ್‌ಕೆ ಮತ್ತು ಧೋನಿ ಮ್ಯಾಜಿಕ್ ಎಂದ ಎಬಿಡಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಶಿವಂ ದುಬೆ ಅವರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದ ಎಬಿ ಡಿವಿಲಿಯರ್ಸ್, ಸದ್ಯ ಸಿಎಸ್‌ಕೆ ತಂಡದಲ್ಲಿರುವ ದುಬೆ ಆರ್‌ಸಿಬಿ ತಂಡದಲ್ಲಿದ್ದಾ ಎಂದಿಗೂ ಮುಕ್ತವಾಗಿರಲಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಆಲ್‌ರೌಂಡರ್ ಪ್ರದರ್ಶನಕ್ಕೆ ಧೋನಿ ಹಾಗೂ ಸಿಎಸ್‌ಕೆ ತಂಡಕ್ಕೆ ಶ್ರೇಯಸ್ಸು ನೀಡಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ಪರ ಸ್ಫೋಟಕ ಫಾರ್ಮ್‌ನಲ್ಲಿರುವ ಶಿವಂ ದುಬೆ, ಈ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದರು. ಆದರೆ ಅಲ್ಲಿ ಅವರ ನಿಜವಾದ ಸಾಮರ್ಥ್ಯ ಬಹಿರಂಗವಾಗಿರಲಿಲ್ಲ. ಇದೀಗ ಚೆನ್ನೈ ಪರ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡುತ್ತಿರುವ ದುಬೆ, ತಮ್ಮ ನೈಜ ಸಾಮರ್ಥ್ಯಕ್ಕೆ ತಕ್ಕಂತೆ ಬ್ಯಾಟ್ ಬೀಸುತ್ತಿದ್ದಾರೆ. ಈ ಕುರಿತು ಮಾತನಾಡಿದರುವ ಆರ್‌ಸಿಬಿ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್, ಶಿವಂ ದುಬೆ ಆರ್‌ಸಿಬಿ ಪರ ಆಡುವಾಗ ಎಂದಿಗೂ ಇಷ್ಟು ಆರಾಮವಾಗಿ ಕಾಣಿಸಲಿಲ್ಲ ಎಂದು ಹೇಳಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೇರಿಕೊಂಡ ನಂತರವೇ ದುಬೆ ತಮ್ಮ ನಿಜವಾದ ಸಾಮರ್ಥ್ಯವನ್ನು ಅರಿತುಕೊಂಡರು ಎಂದು ಎಬಿಡಿ ಅಭಿಪ್ರಾಯಪಟ್ಟಿದ್ದಾರೆ.
ಸದ್ಯ ಸಿಎಸ್‌ಕೆ ತಂಡದಲ್ಲಿರುವ ದುಬೆ, ತಮ್ಮ ಐಪಿಎಲ್ ವೃತ್ತಿಜೀವನವನ್ನು ಆರಂಭಿಸಿದ್ದ 2019ರಲ್ಲಿ. ಆರ್‌ಸಿಬಿ ತಂಡದ ಪರ ಮಿಲಿಯನ್ ಡಾಲರ್ ಟೂರ್ನಿಗೆ ಕಾಲಿಟ್ಟ ಆಲ್‌ರೌಂಡರ್, ತಂಡದಲ್ಲಿ ಮುನ್ನೆಲೆಗೆ ಬರಲಿಲ್ಲ. ವಿರಾಟ್ ಕೊಹ್ಲಿ ಬಳಗದ ಪರವಾಗಿ ಸತತ ಎರಡು ಋತುಗಳಲ್ಲಿ ಆಡಿದ ದುಬೆ, ಒಟ್ಟು 15 ಪಂದ್ಯಗಳಲ್ಲಿ ಕೇವಲ 169 ರನ್ ಮಾತ್ರ ಗಳಿಸುವಲ್ಲಿ ಯಶಸ್ವಿಯಾದರು. ಪವರ್ ಹಿಟ್ಟರ್ ಸ್ಟ್ರೈಕ್ ರೇಟ್ (122) ಕೂಡಾ ಹೇಳಿಕೊಳ್ಳುವಂತಿರಲಿಲ್ಲ. ಸಹಜವಾಗಿಯೇ, ಫ್ರಾಂಚೈಸಿಯು ಆಟಗಾರನನ್ನು ತಂಡದಿಂದ ಕೈಬಿಟ್ಟಿತು.
ಐಪಿಎಲ್ 2021ರ ಆವೃತ್ತಿಯ ವೇಳೆ, ದುಬೆ ರಾಜಸ್ಥಾನ್ ರಾಯಲ್ ಬಳಗ ಸೇರಿಕೊಂಡರು. ತಂಡ ಬದಲಾಯಿತಾದರೂ ಅದೃಷ್ಟ ಬದಲಾಗಲಿಲ್ಲ. ಆರ್‌ಸಿಬಿ ತಂಡಕ್ಕಿಂತ ಉತ್ತಮ ಪ್ರದರ್ಶನ ನೀಡಿದ ದುಬೆ, 9 ಪಂದ್ಯಗಳಲ್ಲಿ 230 ರನ್ ಗಳಿಸಿದರು. ಆದರೆ ಸ್ಟ್ರೈಕ್ ರೇಟ್ ಏರಿಕೆ ಕಾಣಲಿಲ್ಲ. 119ರ ಸ್ಟ್ರೈಕ್ ರೇಟ್ ಕಾಯ್ದುಕೊಂಡರೂ, ಫ್ರಾಂಚೈಸಿ ಮನವೊಲಿಸುವಲ್ಲಿ ಸಫಲರಾಗಲಿಲ್ಲ. ರಾಜಸ್ಥಾನ ಕೂಡಾ ದುಬೆಯನ್ನು ಕೈಬಿಟ್ಟಿತು. ಇದು ದುಬೆ ಅದೃಷ್ಟವನ್ನು ಬದಲಿಸಿತು.
ಇದನ್ನೂ ಓದಿ | ಸಿಎಸ್‌ಕೆ ಆಲ್‌ರೌಂಡ್ ಆಟಕ್ಕೆ ತಲೆಬಾಗಿದ ಗುಜರಾತ್ ಟೈಟಾನ್ಸ್; ಚೆಪಾಕ್‌ನಲ್ಲಿ ಎರಡನೇ ಗೆಲುವು ಸಾಧಿಸಿದ ಚೆನ್ನೈ
2022ರ ಮೆಗಾ ಹರಾಜಿನಲ್ಲಿ ದುಬೆ ಅವರನ್ನು ಎಂಎಸ್ ಧೋನಿ ನೇತೃತ್ವದ ಸಿಎಸ್‌ಕೆ ತಂಡ ಖರೀದಿಸಿತು. ಇದು ದುಬೆ ಬದುಕಿನ ಟರ್ನಿಂಗ್ ಪಾಯಿಂಟ್ ಆಯ್ತು. ಚೆನ್ನೈ ಪರ ಮೊದಲ ಆವೃತ್ತಿಯಲ್ಲೇ 156ರ ಸ್ಟ್ರೈಕ್ ರೇಟ್‌ನಲ್ಲಿ 289 ರನ್ ಗಳಿಸಿದರು. ಹಲವು ಪಂದ್ಯಗಳಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದರು. ತಂಡದಲ್ಲಿ ತನಗೆ ಸ್ವಾತಂತ್ರ್ಯವಿದೆ. ತನ್ನದೇ ಆಟವನ್ನು ಆಡಲು ಫ್ರಾಂಚೈಸಿ ಅವಕಾಶ ನೀಡುತ್ತಿದೆ ಎಂದು ದುಬೆ ಹಲವು ಬಾರಿ ಹೇಳಿದ್ದರು.
ದುಬೆ ಅವರು ಆರ್‌ಸಿಬಿ ಪರ ಆಡುತ್ತಿದ್ದಾಗ, ಅವರೊಂದಿಗೆ ಮಾಜಿ ಆಟಗಾರ ಡಿವಿಲಿಯರ್ಸ್ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದರು. ದುಬೆ ಎಂದಿಗೂ ತಂಡದೊಳಗೆ ಮುಕ್ತರಾಗಿರಲಿಲ್ಲ. ಆದರೆ, ಎಂಎಸ್ ಧೋನಿ ಮತ್ತು ಸ್ಟೀಫನ್ ಫ್ಲೆಮಿಂಗ್ ಅವರ ನೇತೃತ್ವದಲ್ಲಿ ಅವರು ಅಂತಿಮವಾಗಿ ನೆಲೆ ಕಂಡುಕೊಂಡಿದ್ದಾರೆ ಎಂದು ಎಬಿಡಿ ಹೇಳಿದ್ದಾರೆ.
ಆರ್‌ಸಿಬಿಯಲ್ಲಿದ್ದಾಗ ದುಬೆ ಹೀಗಿರಲಿಲ್ಲ
“ಶಿವಂ ಅವರ ಈ ರೀತಿಯ ಆಟ ನೋಡಲು ಖುಷಿಯಾಗುತ್ತಿದೆ. ಆರ್‌ಸಿಬಿ ಚೇಂಜಿಂಗ್ ರೂಮ್‌ನಲ್ಲಿ ಅವರು ಎಂದಿಗೂ ಮುಕ್ತರಾಗಲಿಲ್ಲ. ಅವರು ನಾಚಿಕೆ ಸ್ವಭಾವದ ವ್ಯಕ್ತಿ. ನಿಜಕ್ಕೂ ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ತಂಡದಲ್ಲಿದ್ದಾಗ ಆ ದಿನಗಳಲ್ಲಿ ಸಾಕಷ್ಟು ಪ್ರಶ್ನೆಗಳನ್ನು ಕೇಳುತ್ತಿದ್ದರು. ಅಲ್ಲಿದ್ದಾಗ ಸ್ವಲ್ಪ ಕಲಿತರು. ಆದರೆ ಎಂದಿಗೂ ಆರಾಮದಾಯಕವಾಗಿ ಇದ್ದಂತೆ ಕಾಣಿಸಲಿಲ್ಲ ಎಂದು ನನಗನಿಸುತ್ತಿದೆ”.
ಸಿಎಸ್‌ಕೆ ತಂಡದಲ್ಲಿ ಮುಕ್ತವಾಗಿರುವುದರ ಬಗ್ಗೆ, ತಮ್ಮದೇ ಆಟವನ್ನು ಆಡುತ್ತಿರುವ ಸ್ವಾತಂತ್ರ್ಯದ ಬಗ್ಗೆ ದುಬೆ ಮಾತನಾಡುತ್ತಾರೆ. ಇದು ಧೋನಿ, ಗಾಯಕ್ವಾಡ್, ಸ್ಟೀಫನ್ ಫ್ಲೆಮಿಂಗ್ ಮತ್ತು ತಂಡದ ಎಲ್ಲಾ ಆಟಗಾರರು ಮಾಡಿದ ಮ್ಯಾಜಿಕ್. ಸಿಎಸ್‌ಕೆ ಫ್ರಾಂಚೈಸಿಯು ಪ್ರತಿ ಬಾರಿಯೂ, ಪ್ರತಿ ಋತುವಿನಲ್ಲಿಯೂ ತಮ್ಮನ್ನು ತಾವು ವ್ಯಕ್ತಪಡಿಸಲು ಮುಕ್ತವಾಗಿರುವ ಹೊಸ ಆಟಗಾರರೊಂದಿಗೆ ಕೆಲಸ ಮಾಡುತ್ತದೆ ಎಂದು ಡಿವಿಲಿಯರ್ಸ್ ಜಿಯೋ ಸಿನಿಮಾದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ | ಸೋಲಿನ ಬೆನ್ನಲ್ಲೇ ಶುಭ್ಮನ್ ಗಿಲ್ಗೆ ದಂಡದ ಬಿಸಿ; ಗುಜರಾತ್ ಟೈಟಾನ್ಸ್ ಯುವ ನಾಯಕನಿಗೆ 12 ಲಕ್ಷ ರೂ ಫೈನ್
ಐಪಿಎಲ್ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ