ಗುಡ್ ಲಕ್ ಮೈ ಬಿಸ್ಕತ್; ವಿರಾಟ್ ಕೊಹ್ಲಿಗೆ ವಿಶೇಷವಾಗಿ ಶುಭ ಕೋರಿದ ಆರ್ಸಿಬಿ ಆಪತ್ಭಾಂದವ ಎಬಿ ಡಿವಿಲಿಯರ್ಸ್
AB De Villiers : ಮಾರ್ಚ್ 22ರಂದು ಚೆನ್ನೈನ ಎಂಎ ಚಿದಂಬರಂ ಕ್ರಿಕೆಟ್ ಮೈದಾನದಲ್ಲಿ ಆರ್ಸಿಬಿ ಮತ್ತು ಸಿಎಸ್ಕೆ ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿ ಅವರನ್ನು ಎಬಿ ಡಿವಿಲಿಯರ್ಸ್ ಬೆಂಬಲಿಸಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ತಮ್ಮ ಸಹ ಆಟಗಾರ ಮತ್ತು ಆಪ್ತ ಗೆಳೆಯ ವಿರಾಟ್ ಕೊಹ್ಲಿ ಅವರು ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡಲಿದ್ದಾರೆ ಎಂದು ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ (AB De Villiers) ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಾರ್ಚ್ 22ರಂದು ಚೆನ್ನೈನ ಎಂಎ ಚಿದಂಬರಂ ಕ್ರಿಕೆಟ್ ಮೈದಾನದಲ್ಲಿ ಆರ್ಸಿಬಿ ಮತ್ತು ಸಿಎಸ್ಕೆ ಪಂದ್ಯಕ್ಕೂ ಮುನ್ನ ಕೊಹ್ಲಿಯನ್ನು ಎಬಿಡಿ ಬೆಂಬಲಿಸಿದ್ದಾರೆ.
ಮಗ ಜನಿಸಿದ ಹಿನ್ನೆಲೆಯಲ್ಲಿ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ಸುಮಾರು ಎರಡು ತಿಂಗಳ ವಿರಾಮ ಪಡೆದಿದ್ದ ಕೊಹ್ಲಿ, ಇದೀಗ ಐಪಿಎಲ್ ಮೂಲಕ ಮರಳುತ್ತಿದ್ದಾರೆ. ತಮ್ಮ ಮಗ ಅಕಾಯ್‌ನ ಜನನದ ಕಾರಣ ಇತ್ತೀಚೆಗಷ್ಟೇ ಮುಕ್ತಾಯಗೊಂಡ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಹಿಂದೆ ಸರಿದಿದ್ದರು. ಇದರ ನಡುವೆಯೂ ಡಿವಿಲಿಯರ್ಸ್ ಕೊಹ್ಲಿಯ ಆಟ ಮತ್ತು ಸಾಮರ್ಥ್ಯದ ಬಗ್ಗೆ ಭರವಸೆ ಹೊಂದಿದ್ದಾರೆ. ಇದೇ ವೇಳೆ ವಿರಾಟ್ರ ಐಪಿಎಲ್ ವೃತ್ತಿಜೀವನ ಹೈಲೈಟ್ ಮಾಡಿದ್ದಾರೆ.
ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಸೇರಿದಂತೆ ಕೊಹ್ಲಿಯ ಗಮನಾರ್ಹ ಸಾಧನೆಗಳನ್ನು ಶ್ಲಾಘಿಸಿದ್ದಾರೆ. ಅವರ ಅಸಾಧಾರಣ ಪ್ರತಿಭೆ ಮತ್ತು ಸ್ಥಿರತೆಗೆ ಸಾಕ್ಷಿಯಾಗಿದೆ. ಮುಂಬರುವ ಐಪಿಎಲ್ ಆವೃತ್ತಿಯಲ್ಲೂ ನಿರೀಕ್ಷೆಯಂತೆ ಎಲ್ಲರ ಕಣ್ಣುಗಳು ಕೊಹ್ಲಿ ಮೇಲಿವೆ. ಆರ್ಸಿಬಿ ಪರ ಮತ್ತೊಂದು ಅದ್ಭುತ ಪ್ರದರ್ಶನದೊಂದಿಗೆ ತಮ್ಮ ಐಪಿಎಲ್ ಪರಂಪರೆ ಮುಂದುವರೆಸಲು ಕಾಯುತ್ತಿದ್ದಾರೆ. ಈ ಬಗ್ಗೆ ಎಬಿಡಿ ಏನೆಲ್ಲಾ ಹೇಳಿದ್ದಾರೆ ಎಂಬುದನ್ನು ಮುಂದೆ ಓದಿ.
ಗುಡ್ ಲಕ್ ಮೈ ಬಿಸ್ಕತ್ ಎಂದ ಎಬಿ ಡಿವಿಲಿಯರ್ಸ್
ಸ್ಟಾಲ್ವರ್ಟ್, ಕಿಂಗ್ ಕೊಹ್ಲಿ. 7000ಕ್ಕೂ ಹೆಚ್ಚು ರನ್, 200ಕ್ಕೂ ಹೆಚ್ಚು ಐಪಿಎಲ್ ಪಂದ್ಯಗಳು.. ಆದರೆ ಇದು ನಂಬಲಾಗದ ಸಂಗತಿಯಾಗಿದೆ. ವಿರಾಟ್ ಕಂಬ್ಯಾಕ್ ಮಾಡುತ್ತಾರೆ. ನಾವು ಅವರನ್ನು ತುಂಬಾ ಮಿಸ್ ಮಾಡಿಕೊಂಡಿದ್ದೇವೆ. ಮುಂಬರುವ ಆವೃತ್ತಿಯಲ್ಲಿ ಅವರ ಅತ್ಯುತ್ತಮ ಪ್ರದರ್ಶನ ವೀಕ್ಷಿಸಲು ಕಾತರದಿಂದ ಕಾಯುತ್ತಿದ್ದೇನೆ ಎಂದು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ. ಇನ್ಸ್ಟಾಗ್ರಾಂನಲ್ಲೂ ಕೊಹ್ಲಿ ಜತೆಗಿನ ಫೋಟೋ ಹಂಚಿಕೊಂಡು 'ಗುಡ್ ಲಕ್ ಮೈ ಬಿಸ್ಕತ್' ಎಂದು ಶುಭಕೋರಿದ್ದಾರೆ.
ಕೊಹ್ಲಿ ಬಳಿಕ ಆರ್ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಡು ಪ್ಲೆಸಿಸ್ ಇತ್ತೀಚಿನ ಕಳಪೆ ಫಾರ್ಮ್ ಒಪ್ಪಿಕೊಂಡ ಎಬಿಡಿ, ಅದ್ಭುತ ಪ್ರದರ್ಶನದ ಮೂಲಕ ಲಯಕ್ಕೆ ಮರಳಲಿದ್ದಾರೆ ಎಂದು ಹೇಳಿದ್ದಾರೆ. ಕ್ರಿಕೆಟಿಗನಾಗಿ ಫಾಫ್ ಅವರ ಸಾಮರ್ಥ್ಯ ಮತ್ತು ಸ್ಥಿತಿಸ್ಥಾಪಕತ್ವ ಒತ್ತಿಹೇಳಿದ್ದಾರೆ. ಇದೇ ವೇಳೆ ಆರ್ಸಿಬಿ ಬೌಲಿಂಗ್ ದಾಳಿಯನ್ನು ದಾಳಿಗೆ ಹೊಗಳಿದ್ದಾರೆ. ಮೊಹಮ್ಮದ್ ಸಿರಾಜ್ ನೇತೃತ್ವದ ಬೌಲಿಂಗ್ ವಿಭಾಗವು ದೊಡ್ಡ ಪಾತ್ರವನ್ನು ವಹಿಸುತ್ತದೆ ಎಂದಿದ್ದಾರೆ.
ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಉತ್ತಮ ಆಳ ಹೊಂದಿರುವ ಆರ್ಸಿಬಿ, ಈ ಬಾರಿ ಎಲ್ಲಾ ರೀತಿಯಾಗಿ ಉತ್ತಮ ಪ್ರದರ್ಶನ ನೀಡಲು ಕಾರಣವಾಗಿದೆ. ಆರ್‌ಸಿಬಿಯ ವೇಗದ ದಾಳಿಯಲ್ಲಿ ಆಸ್ಟ್ರೇಲಿಯಾದ ಆಲ್‌ರೌಂಡರ್‌ಗಳಾದ ಕ್ಯಾಮರೂನ್ ಗ್ರೀನ್, ನ್ಯೂಜಿಲೆಂಡ್‌ನ ಲಾಕಿ ಫರ್ಗುಸನ್, ವೆಸ್ಟ್ ಇಂಡೀಸ್‌ನ ಅಲ್ಜಾರಿ ಜೋಸೆಫ್ ಮತ್ತು ಇಂಗ್ಲೆಂಡ್‌ನ ರೀಸ್ ಟೋಪ್ಲೆ ಹಾಗೂ ಭಾರತೀಯ ಬೌಲರ್‌ಗಳಾದ ಯಶ್ ದಯಾಲ್ ಮತ್ತು ವಿಜಯ್‌ಕುಮಾರ್ ವೈಶಾಕ್ ಇದ್ದಾರೆ.