ಬಾಯ್ತಪ್ಪಿ ಮಾತನಾಡಿದೆ; ಐಶ್ವರ್ಯಾ ರೈ ಕುರಿತ ಅವಹೇಳನಕಾರಿ ಹೇಳಿಕೆಗೆ ಬಹಿರಂಗ ಕ್ಷಮೆಯಾಚಿಸಿದ ರಜಾಕ್
ಕನ್ನಡ ಸುದ್ದಿ  /  ಕ್ರಿಕೆಟ್  /  ಬಾಯ್ತಪ್ಪಿ ಮಾತನಾಡಿದೆ; ಐಶ್ವರ್ಯಾ ರೈ ಕುರಿತ ಅವಹೇಳನಕಾರಿ ಹೇಳಿಕೆಗೆ ಬಹಿರಂಗ ಕ್ಷಮೆಯಾಚಿಸಿದ ರಜಾಕ್

ಬಾಯ್ತಪ್ಪಿ ಮಾತನಾಡಿದೆ; ಐಶ್ವರ್ಯಾ ರೈ ಕುರಿತ ಅವಹೇಳನಕಾರಿ ಹೇಳಿಕೆಗೆ ಬಹಿರಂಗ ಕ್ಷಮೆಯಾಚಿಸಿದ ರಜಾಕ್

ಐಶ್ವರ್ಯಾ ರೈ ಬಚ್ಚನ್ ಕುರಿತ ಹೇಳಿಕೆಗಾಗಿ ಪಾಕ್‌ ಮಾಜಿ ಕ್ರಿಕೆಟಿಗ ಅಬ್ದುಲ್ ರಜಾಕ್ ಕ್ಷಮೆಯಾಚಿಸಿದ್ದಾರೆ.

ಐಶ್ವರ್ಯಾ ರೈ ಕುರಿತ ಅವಹೇಳನಕಾರಿ ಹೇಳಿಕೆಗೆ ಕ್ಷಮೆಯಾಚಿಸಿದ ಅಬ್ದುಲ್ ರಜಾಕ್
ಐಶ್ವರ್ಯಾ ರೈ ಕುರಿತ ಅವಹೇಳನಕಾರಿ ಹೇಳಿಕೆಗೆ ಕ್ಷಮೆಯಾಚಿಸಿದ ಅಬ್ದುಲ್ ರಜಾಕ್ (File)

ಬಾಲಿವುಡ್ ನಟಿ ಐಶ್ವರ್ಯಾ ರೈ ಹೆಸರು ಪ್ರಸ್ತಾಪಿಸಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಅಬ್ದುಲ್ ರಜಾಕ್ (Abdul Razzaq) ಇದೀಗ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ. ತಮ್ಮ ದೇಶದ ಕ್ರಿಕೆಟ್‌ ತಂಡದ ಕುರಿತು ಹೇಳಿಕೆ ನೀಡುವಾಗ ಐಶ್ವರ್ಯ ರೈ ಹೆಸರನ್ನು ಪ್ರಸ್ತಾಪಿಸಿದ್ದಕ್ಕೆ ವ್ಯಾಪಕ ಟೀಕೆಗಳು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಮಾಜಿ ಆಟಗಾರ ಕ್ಷಮೆ ಕೋರಿದ್ದಾರೆ.

ಮಂಗಳವಾರದ ತಡರಾತ್ರಿಯಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ ರಜಾಕ್ ಮಾತನಾಡಿದ್ದಾರೆ. ತನ್ನ ಮಾತುಗಳು 'ಉದ್ದೇಶಪೂರ್ವಕ ಆಗಿರಲಿಲ್ಲ ಎಂದ ಅವರು, ಮಾತಿನ ಭರದಲ್ಲಿ ಬಾಯ್ತಪ್ಪಿ ಆ ರೀತಿ ಹೇಳಿದ್ದಾಗಿ ಒಪ್ಪಿಕೊಂಡಿದ್ದಾರೆ.

ಆಗಿದ್ಧೇನು?

ಏಕದಿನ ವಿಶ್ವಕಪ್‌ ಟೂರ್ನಿಯಿಂದ ಹೊರಬಿದ್ದ ಪಾಕಿಸ್ತಾನ ಕ್ರಿಕೆಟ್‌ ತಂಡದ ಕುರಿತು ಪತ್ರಕಾಗೋಷ್ಠಿಯಲ್ಲಿ ಮಾತನಾಡುವಾಗ ಪಾಕ್‌ ಮಾಜಿ ಕ್ರಿಕೆಟಿಗನಿಂದ ವಿವಾದಾತ್ಮಕ ಹೇಳಿಕೆ ಬಂದಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯನ್ನು ತರಾಟೆಗೆ ತೆಗೆದುಕೊಳ್ಳುವ ಭರದಲ್ಲಿ ತಮ್ಮ ನಾಲಗೆಯನ್ನು ಹರಿಬಿಟ್ಟಿದ್ದಾರೆ.

“ಸದ್ಯ ಪ್ರಸಕ್ತ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ಮತ್ತು ಆಟಗಾರರ ಪ್ರದರ್ಶನಗಳ ಕುರಿತು ಬಹಳಷ್ಟು ಚರ್ಚೆಗಳು ನಡೆಯುತ್ತಿವೆ. ನಮ್ಮ ಆಟಗಾರರನ್ನು ತಿದ್ದಿ, ಅವರನ್ನು ಬೆಳೆಸುವ ಉದ್ದೇಶ ನಮಗಿಲ್ಲ ಎಂದು ನಾನು ಭಾವಿಸುತ್ತೇನೆ. ಒಂದು ವೇಳೆ ನಾನು ಐಶ್ವರ್ಯಾ ರೈ ಅವರನ್ನು ಮದುವೆಯಾಗಿ ಮತ್ತು ನಂತರ ನಮಗೆ ಸುಂದರವಾದ ಮಕ್ಕಳಾಗುತ್ತವೆ ಎಂದು ನೀವು ಭಾವಿಸಿದರೆ, ಅದು ಸಾಧ್ಯವಾಗದ ಮಾತು. ಹೀಗಾಗಿ ಸರಿಯಾದ ಉದ್ದೇಶ ಇಟ್ಟುಕೊಳ್ಳಬೇಕು. ಮೊದಲು ನಿಮ್ಮ ಉದ್ದೇಶಗಳನ್ನು ಸರಿಪಡಿಸಿಕೊಳ್ಳಬೇಕು” ಎಂದು ರಜಾಕ್ ಪಿಸಿಬಿ ಕುರಿತು ಹೇಳಿದ್ದರು. ಇದು ನೆಟ್ಟಿಗರಿಂದ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.

ಪಾಕ್‌ ಮಾಜಿ ಕ್ರಿಕೆಟಿಗರಿಂದ ಖಂಡನೆ

ಬಾಲಿವುಡ್‌ ನಟಿಯ ಹೆಸರು ಪ್ರಸ್ತಾಪಿಸಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಯ್ತು. ಅತ್ಯಂತ ಸಂವೇದನಾಶೀಲ ಹೇಳಿಕೆಯಿಂದಾಗಿ, ಪಾಕಿಸ್ತಾನದ ಮಾಜಿ ಸಹ ಆಟಗಾರ ಶೋಯೆಬ್ ಅಖ್ತರ್ ಕೂಡಾ ಅಸಮಾಧಾನಗೊಂಡರು. ಈ ಕುರಿತು ಟ್ವೀಟ್‌ ಮಾಡಿದ್ದ ಅವರು, “ರಜಾಕ್ ಮಾಡಿದ ಅನುಚಿತ ಹೋಲಿಕೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಯಾವ ಹೆಣ್ಣಿಗೂ ಈ ರೀತಿ ಅಗೌರವ ತೋರಬಾರದು. ಅವರ ಪಕ್ಕದಲ್ಲಿ ಕುಳಿತಿರುವ ಜನರು ನಗುವ ಮತ್ತು ಚಪ್ಪಾಳೆ ತಟ್ಟುವ ಬದಲು ತಕ್ಷಣವೇ ಧ್ವನಿ ಎತ್ತಬೇಕಿತ್ತು ಎಂದು ಅಖ್ತರ್ ಬರೆದುಕೊಂಡಿದ್ದಾರೆ.

ರಜಾಕ್‌ ಮಾತನಾಡುತ್ತಿದ್ದ ಅದೇ ವೇದಿಕೆಯಲ್ಲಿ ಅವರೊಂದಿಗೆ ಪಾಕ್‌ನ ದಿಗ್ಗಜ ಆಟಗಾರರಾದ ಶಾಹಿದ್ ಅಫ್ರಿದಿ, ಯೂನಿಸ್ ಖಾನ್, ಮಿಸ್ಬಾ ಉಲ್-ಹಕ್, ಉಮರ್ ಗುಲ್, ಸಯೀದ್ ಅಜ್ಮಲ್, ಶೋಯೆಬ್ ಮಲಿಕ್ ಮತ್ತು ಕಮ್ರಾಲ್ ಅಕ್ಮಲ್ ಅವರಂಥ ದಿಗ್ಗಜ ಆಟಗಾರರು ಕೂಡಾ ಇದ್ದರು. ಆದರೆ, ಆ ಸಂದರ್ಭದಲ್ಲಿ ಅವರು ನಕ್ಕು ಚಪ್ಪಾಳೆ ತಟ್ಟಿದ್ದರು. ವಿಡಿಯೋ ಎಲ್ಲೆಡೆ ವೈರಲ್‌ ಆದ ಬಳಿಕ ರಜಾಕ್‌ ಮಾತುಗಳನ್ನು ಸೂಕ್ಷಮವಾಗಿ ಆಲಿಸಿದ ಅಫ್ರಿದಿ ಕೂಡಾ, ಆ ಬಳಿಕ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ.

ಕ್ಷಮೆ ಯಾಚಿಸಿದ ರಜಾಕ್

ವ್ಯಾಪಕ ಖಂಡನೆ ಹಿನ್ನೆಲೆಯಲ್ಲಿ ರಜಾಕ್‌ ಕ್ಷಮೆ ಯಾಚಿಸಿದ್ದಾರೆ. “ನಾನು ಅಬ್ದುಲ್ ರಜಾಕ್. ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ನಾವು ಕ್ರಿಕೆಟ್ ತರಬೇತಿ ಮತ್ತು ಉದ್ದೇಶಗಳ ಕುರಿತು ಚರ್ಚಿಸುತ್ತಿದ್ದೆವು. ಈ ವೇಳೆ ಬಾಯಿತಪ್ಪಿ ನಾನು ಐಶ್ವರ್ಯಾ ರೈ ಹೆಸರನ್ನು ಪ್ರಸ್ತಾಪಿಸಿದೆ. ನಾನು ಅವರ ಬಳಿ ವೈಯಕ್ತಿಕವಾಗಿ ಕ್ಷಮೆಯಾಚಿಸುತ್ತೇನೆ. ಯಾರನ್ನೂ ನೋಯಿಸುವ ಉದ್ದೇಶ ನನಗಿರಲಿಲ್ಲ. ನಾನು ಬೇರೆ ಉದಾಹರಣೆ ನೀಡಬೇಕಾಗಿತ್ತು. ಆದರೆ ತಪ್ಪಾಗಿ ಅವರ ಹೆಸರನ್ನು ಬಳಸಿದ್ದೇನೆ,” ಎಂದು ರಜಾಕ್ ಅವರು ಟ್ವಿಟರ್‌ನಲ್ಲಿ ಸಮಾ ಟಿವಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ರಜಾಕ್ ಹೇಳಿದ್ದಾರೆ.

Whats_app_banner