ಕೇವಲ 37 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ ಅಭಿಷೇಕ್ ಶರ್ಮಾ; 24 ವರ್ಷದ ಆಟಗಾರನ ಹಲವು ದಾಖಲೆ
ಇಂಗ್ಲೆಂಡ್ ವಿರುದ್ಧ ಅಭಿಷೇಕ್ ಶರ್ಮಾ ಅಬ್ಬರಿಸಿದ್ದಾರೆ. ಕೇವಲ 37 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿ ಮಿಂಚಿದ್ದಾರೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಎರಡನೇ ಶತಕ ಸಿಡಿಸಿ ಹಲವು ದಾಖಲೆ ನಿರ್ಮಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಐದನೇ ಟಿ20 ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅಬ್ಬರಿಸಿದ್ದಾರೆ. ಕೇವಲ 37 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿ ಮಿಂಚಿದ್ದಾರೆ. ಇಂಗ್ಲೆಂಡ್ ಬೌಲರ್‌ಗಳ ಬೆವರಿಳಿಸಿದ ಅವರು, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಎರಡನೇ ಶತಕ ಸಿಡಿಸಿದ ದಾಖಲೆ ನಿರ್ಮಿಸಿದ್ದಾರೆ. ಇದರೊಂದಿಗೆ ಹಲವು ದಾಖಲೆ ಮಾಡಿದ್ದಾರೆ.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐದನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಇಂಗ್ಲೆಂಡ್ ಬೌಲರ್‌ಗಳನ್ನು ಕಾಡಿದ್ದಾರೆ. ಸಂಜು ಸ್ಯಾಮ್ಸನ್ ಔಟಾದ ನಂತರ ಪವರ್‌ಪ್ಲೇ ಲಾಭ ಪಡೆದ ಆಟಗಾರ, ಬೌಂಡರಿ ಸಿಕ್ಸರ್‌ಗಳ ಸುರಿಮಳೆ ಸುರಿಸಿದರು. ಆ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ ಎರಡನೇ ಅತಿ ವೇಗದ ಶತಕ ದಾಖಲಿಸಿದ್ದಾರೆ. 2017ರಲ್ಲಿ ಇಂದೋರ್‌ನಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ರೋಹಿತ್ ಶರ್ಮಾ 35 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಅದಾದ ಬಳಿಕ ಇಂದು ಅಭಿಷೇಕ್ 37 ಎಸೆತಗಳಲ್ಲಿ ಸೆಂಚುರಿ ಬಾರಿಸಿದ್ದಾರೆ. ವಿಶ್ವದ ಫುಲ್ ಮೆಂಬರ್ ತಂಡಗಳ ಪೈಕಿ ಇದು ಎರಡನೇ ವೇಗದ ಶತಕವಾಗಿದೆ. ಮೊದಲ ಸ್ಥಾನದಲ್ಲಿ ರೋಹಿತ್ ಜೊತೆಗೆ ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್ ಸ್ಥಾನ ಪಡೆದಿದ್ದಾರೆ.
ಅಭಿಷೇಕ್ ಶರ್ಮಾ ಭಾರತದ ಇನ್ನಿಂಗ್ಸ್‌ನ 10.1 ಓವರ್ ವೇಳೆಗೆ ಶತಕ ಸಿಡಿಸಿದರು. ಅಂತಾರಾಷ್ಟ್ರೀಯ ಟಿ20 ಇನ್ನಿಂಗ್ಸ್‌ನಲ್ಲಿ ಇಷ್ಟು ವೇಗವಾಗಿ ಶತಕ ಗಳಿಸಿದ ಮೊದಲ ಆಟಗಾರ ಎಂಬ ದಾಖಲೆ ನಿರ್ಮಾಣವಾಗಿದೆ. ಈ ಹಿಂದೆ 2023ರಲ್ಲಿ ಸೆಂಚುರಿಯನ್‌ನಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ 10.2 ಓವರ್‌ಗಳಲ್ಲಿ ಶತಕ ದಾಖಲಿಸಿದ್ದರು
ಫುಲ್ ಮೆಂಬರ್ ತಂಡಗಳ ನಡುವಿನ ಟಿ20 ಪಂದ್ಯಗಳಲ್ಲಿ ವೇಗದ ಶತಕ ಸಿಡಿಸಿದ ಆಟಗಾರರು
- 35 ಎಸೆತ: ಡೇವಿಡ್ ಮಿಲ್ಲರ್ vs ಬಾಂಗ್ಲಾದೇಶ (ಪೊಚೆಫ್‌ಸ್ಟ್ರೂಮ್ 2017)
- 35 ಎಸೆತ: ರೋಹಿತ್ ಶರ್ಮಾ vs ಶ್ರೀಲಂಕಾ (ಇಂದೋರ್ 2017)
- 37 ಎಸೆತ: ಅಭಿಷೇಕ್ ಶರ್ಮಾ vs ಇಂಗ್ಲೆಂಡ್ (ವಾಂಖೆಡೆ 2025)
- 39 ಎಸೆತ: ಜಾನ್ಸನ್ ಚಾರ್ಲ್ಸ್ vs ದಕ್ಷಿಣ ಆಫ್ರಿಕಾ (ಸೆಂಚುರಿಯನ್ 2023)
- 40 ಎಸೆತ: ಸಂಜು ಸ್ಯಾಮ್ಸನ್ vs ಬಾಂಗ್ಲಾದೇಶ (ಹೈದರಾಬಾದ್ 2024)
ಭಾರತವು ಈ ಪಂದ್ಯದಲ್ಲಿ ಕೇವಲ 6.3 ಓವರ್‌ಗಳಲ್ಲಿ 100 ರನ್ ಗಳಿಸಿತು. ಇದರಲ್ಲಿ ಅಭಿಷೇಕ್ ಕೊಡುಗೆ ಮಹತ್ವದ್ದು. ಭಾರತವು ಟಿ20ಐ ಕ್ರಿಕೆಟ್‌ನಲ್ಲಿ ವೇಗವಾಗಿ 100 ರನ್ ಗಳಿಸಿದ ದಾಖಲೆಯಾಗಿದೆ.
ಭಾರತ ಪರ ವೇಗದ ಟಿ20ಐ ಅರ್ಧಶತಕ
- 12 ಎಸೆತ: ಯುವರಾಜ್ ಸಿಂಗ್ vs ಇಂಗ್ಲೆಂಡ್ (ಡರ್ಬನ್ 2007)
- 17 ಎಸೆತ: ಅಭಿಷೇಕ್ ಶರ್ಮಾ vs ಇಂಗ್ಲೆಂಡ್ (ವಾಂಖೆಡೆ 2025)
- 18 ಎಸೆತ: ಕೆಎಲ್ ರಾಹುಲ್ vs ಸ್ಕಾಟ್ಲೆಂಡ್ (ದುಬೈ 2021)
- 18 ಎಸೆತ: ಸೂರ್ಯಕುಮಾರ್ ಯಾದವ್ vs ದಕ್ಷಿಣ ಆಫ್ರಿಕಾ (ಗುವಾಹಟಿ 2022)
ಇದನ್ನೂ ಓದಿ | 4ನೇ ಟಿ20ಯಲ್ಲಿ ಗೆಲುವಿನ ಹಳಿಗೆ ಮರಳಿದ ಭಾರತ; ಇಂಗ್ಲೆಂಡ್ ವಿರುದ್ಧ 15 ರನ್ ವಿಜಯ, ಸರಣಿ ವಶ
ಪವರ್‌ಪ್ಲೇ ಒಳಗಡೆ ಅಭಿಷೇಕ್ ಶರ್ಮಾ 58 ರನ್ ಗಳಿಸಿದರು. 2023ರಲ್ಲಿ ತಿರುವನಂತಪುರದಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಯಶಸ್ವಿ ಜೈಸ್ವಾಲ್ ಪವರ್‌ಪ್ಲೇ ಒಳಗೆ 53 ರನ್ ಗಳಿಸಿದ್ದ ಈವರೆಗಿನ ದಾಖಲೆಯಾಗಿತ್ತು. ಇದೀಗ ಅಂತಾರಾಷ್ಟ್ರೀಯ ಟಿ20ಯಲ್ಲಿ ಪವರ್‌ಪ್ಲೇನಲ್ಲಿ ಭಾರತೀಯ ಬ್ಯಾಟರ್ ಗಳಿಸಿದ ಅತ್ಯಧಿಕ ರನ್ ಅಭಿಷೇಕ್ ಹೆಸರಲ್ಲಿ ದಾಖಲಾಗಿದೆ.
ಪಂದ್ಯದಲ್ಲಿ ಕೇವಲ 54 ಎಸೆತ ಎದುರಿಸಿದ ಆಟಗಾರ 7 ಬೌಂಡರಿ ಹಾಗೂ 13 ಸ್ಫೋಟಕ ಸಿಕ್ಸರ್ ಸಹಿತ 135 ರನ್ ಸಿಡಿಸಿ ಔಟಾದರು. ಇದು ಭಾರತದ ಪರ ಚುಟುಕು ಸ್ವರೂಪದಲ್ಲಿ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ.
