ಐಪಿಎಲ್ ಆರಂಭಕ್ಕೂ ಮುನ್ನವೇ ಅಭಿಷೇಕ್ ಶರ್ಮಾ ಆರ್ಭಟ; ಹೊಡೆದ ಸಿಕ್ಸರ್‌ಗೆ ಗಾಜು ಪುಡಿಪುಡಿ -Video
ಅಭ್ಯಾಸದ ವೇಳೆ ಅಭಿಷೇಕ್ ಶರ್ಮಾ ಆರ್ಭಟಿಸಿದ್ದಾರೆ. ಸ್ಟೇಡಿಯಂನಲ್ಲಿದ್ದ ಫೈರ್ ಎಕ್ಸ್‌ಟಿಂಗ್ವಿಷರ್ ಪೆಟ್ಟಿಗೆಯ ಗಾಜು ಪುಡಿಪುಡಿಯಾಗಿದೆ. ಇದಕ್ಕೆ ಕಾರಣ ಅಭಿಷೇಕ್ ಹೊಡೆದ ಸಿಕ್ಸರ್. ಈ ವಿಡಿಯೋ ಇಲ್ಲಿದೆ ನೋಡಿ.

ಐಪಿಎಲ್ 2025ರ ಸೀಸನ್ ಇನ್ನೂ ಆರಂಭವಾಗಿಲ್ಲ. ಆದರೆ ಕೆಲವು ತಂಡಗಳ ಅಬ್ಬರದಾಟ ಆಗಲೇ ಶುರುವಾಗಿದೆ. ಹೆಚ್ಚಿನ ತಂಡಗಳ ಆಟಗಾರರು ರೋಚಕ ಪಂದ್ಯಾವಳಿಗಾಗಿ ಭರ್ಜರಿ ತಯಾರಿಯಲ್ಲಿದ್ದಾರೆ. ತಂಡದ ಆಡುವ ಬಳಗದಲ್ಲಿ ಸ್ಥಾನ ಪಡೆಯಲು ಮತ್ತು ಫಾರ್ಮ್ ಕಂಡುಕೊಳ್ಳಲು ಹಲವು ಆಟಗಾರರು ಜಿದ್ದಿಗೆ ಬಿದ್ದಿದ್ದಾರೆ. ಈ ನಡುವೆ ಆಟಗಾರರ ತೀವ್ರತೆಯ ಆಟಕ್ಕೆ ಸ್ಟೇಡಿಯಂನ ವಸ್ತುಗಳಿಗೆ ಕೂಡಾ ಹಾನಿಯಾಗುತ್ತಿವೆ. ಕಳೆದ ಆವೃತ್ತಿಯ ಐಪಿಎಲ್‌ನ ರನ್ನರ್ ಅಪ್ ತಂಡ ಸನ್‌ರೈಸರ್ಸ್ ಹೈದರಾಬಾದ್ (Sunrisers Hyderabad), ಈಗಾಗಲೇ ಬಿರುಸಿನ ಸಿದ್ಧತೆ ನಡೆಸುತ್ತಿದೆ. ತಂಡದಲ್ಲಿ ಸ್ಫೋಟಕ ಬ್ಯಾಟರ್‌ಗಳ ದೊಡ್ಡ ಪಡೆಯೇ ಇದ್ದು, ತಂಡದ ಬೌಲರ್‌ಗಳನ್ನು ಬೆವರಿಳಿಸುವಂತೆ ಮಾಡಿದೆ. ಇದಕ್ಕೊಂದು ಉತ್ತಮ ಉದಾಹರಣೆ ಇಲ್ಲಿದೆ.
ಹೈದರಾಬಾದ್ ಸ್ಟೇಡಿಯಂನಲ್ಲಿ ಎಸ್‌ಆರ್‌ಎಚ್ ತಂಡದ ಆಟಗಾರರು ಅಭ್ಯಾಸ ನಡೆಸುತ್ತಿದ್ದಾರೆ. ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ (Abhishek Sharma), ಈ ಬಾರಿ ಕೂಡಾ ಸಿಡಿಯುವ ಸುಳಿವು ನೀಡಿದ್ದಾರೆ. ಇವರ ಅಬ್ಬರಕ್ಕೆ ಮೈದಾನದ ವಸ್ತುಗಳಿಗೂ ಹಾನಿಯಾಗುತ್ತಿದೆ. ಅಷ್ಟಕ್ಕೂ ಆಗಿದ್ದೇನು ಎಂಬುದನ್ನು ಮುಂದೆ ಓದಿ.
ಎಸ್ಆರ್‌ಎಚ್ ಫ್ರಾಂಚೈಸಿಯು ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದೆ. ಇದರಲ್ಲಿ ಆರಂಭಿಕ ಆಟಗಾರ ಮಾಡಿರುವ ಹಾನಿಯನ್ನು ನೋಡಬಹುದು. ಅಭಿಷೇಕ್ ಹೊಡೆದಿರುವ ಸಿಕ್ಸರ್‌ಗೆ ಬೆಂಕಿ ನಂದಿಸುವ ಫೈರ್ ಎಕ್ಸ್‌ಟಿಂಗ್ವಿಷರ್ ಪೆಟ್ಟಿಗೆಯ ಗಾಜು ಪುಡಿಪುಡಿಯಾಗಿದೆ. ಇದನ್ನು ಖುದ್ದು ಫ್ರಾಂಚೈಸ್ ಹೇಳಿಕೊಂಡಿದೆ.
ಫ್ರಾಂಚೈಸ್ ಹಂಚಿಕೊಂಡ ವಿಡಿಯೊದಲ್ಲಿ, ಅಭಿಷೇಕ್ ಅವರನ್ನು "ನೀವು ಏನು ಮುರಿದಿದ್ದೀರಿ" ಎಂದು ಕೇಳಲಾಗಿದೆ. ಅದಕ್ಕೆ ಉತ್ತರಿಸಿದ ಅಭಿಷೇಕ್, “ಬಹುಶಃ ನನ್ನ ಬ್ಯಾಟ್‌ಗಳನ್ನು ಮುರಿದಿದ್ದೇನೆ. ಆದರೆ, ಬೌಂಡರಿಗಿಂತ ಸ್ವಲ್ಪ ದೂರ ಗಾಜು ಒಡೆದ ಶಬ್ದ ನನಗೆ ಕೇಳಿತು,” ಎಂದು ಹೇಳಿದ್ದಾರೆ.
ಇಲ್ಲಿದೆ ವಿಡಿಯೋ
ಅಭಿಷೇಕ್ ಅವರು ಚೆಂಡನ್ನು ಲಾಂಗ್ ಆನ್‌ಗೆ ಹೊಡೆಯುವ ದೃಶ್ಯವನ್ನು ವಿಡಿಯೋದಲ್ಲಿ ತೋರಿಸಲಾಗುತ್ತದೆ. ಅಭಿಷೇಕ್ ಹೊಡೆತವು ಬೌಂಡರಿ ಲೈನ್ ದಾಟಿ ಗಾಜಿನ ಪೆಟ್ಟಿಗೆಯ ಗಾಜನ್ನು ಪುಡಿಪುಡಿ ಮಾಡಿದೆ. ಟೂರ್ನಿ ಆರಂಭಕ್ಕೂ ಮುನ್ನವೇ ಅಭಿಷೇಕ್ ಆಟಕ್ಕೆ ಮೈದಾನದ ವಸ್ತುಗಳು ಪುಡಿಯಾಗತೊಡಗಿವೆ. ಹೀಗಾಗಿ ಪಂದ್ಯಾವಳಿ ಆರಂಭವಾದ ನಂತರವೂ ಇನ್ನಷ್ಟು ಅಬ್ಬರವನ್ನು ನಿರೀಕ್ಷಿಸಬಹುದು.
ಕಳೆದ ಬಾರಿಯಂತೆ ಈ ಬಾರಿಯೂ ಅಭಿಷೇಕ್ ಮತ್ತು ಟ್ರಾವಿಸ್ ಹೆಡ್ ಎಸ್‌ಆರ್‌ಎಚ್ ಪರ ಆರಂಭಿಕರಾಗಿ ಕಣಕ್ಕಿಳಿಯುವುದು ಖಚಿತವಾಗಿದೆ. ಐಸಿಸಿ ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ ಮೊದಲ ಎರಡು ಸ್ಥಾನಗಳಲ್ಲಿರುವ ಆಟಗಾರರು ಈ ಬಾರಿ ಮತ್ತಷ್ಟು ಸ್ಫೋಟಕ ಪ್ರದರ್ಶನ ನೀಡುವುದರಲ್ಲಿ ಯಾವುದೇ ಅನುಮಾನಗಳಿಲ್ಲ.
ಪ್ರಚಂಡ ಪ್ರದರ್ಶನ
2024ರ ಐಪಿಎಲ್‌ನಲ್ಲಿ ಅಭಿಷೇಕ್ ಶರ್ಮಾ 204ರ ಅದ್ಭುತ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿ ಬರೋಬ್ಬರಿ 484 ರನ್ ಗಳಿಸಿದ್ದರು. ಟೂರ್ನಿಯುದ್ದಕ್ಕೂ ಇವರು ಬಾರಿಸಿದ ಸಿಕ್ಸರ್‌ಗಳ ಸಂಖ್ಯೆ 42. ಒಂದೇ ಐಪಿಎಲ್ ಋತುವಿನಲ್ಲಿ ಕನಿಷ್ಠ 40 ಸಿಕ್ಸರ್‌ಗಳನ್ನು ಬಾರಿಸಿದ ಭಾರತದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಅಭಿಷೇಕ್ ಪಾತ್ರರಾಗಿದ್ದಾರೆ. ಎಸ್‌ಆರ್‌ಎಚ್ ತಂಡವು ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಾರ್ಚ್ 23ರ ಭಾನುವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ ಮೊದಲ ಪಂದ್ಯ ಆಡಲಿದೆ.
