ಟಿ20ಐ ರ‍್ಯಾಂಕಿಂಗ್ ಪ್ರಕಟ; ಅಭಿಷೇಕ್ ಶರ್ಮಾ, ವರುಣ್ ಚಕ್ರವರ್ತಿಗೆ ಭರ್ಜರಿ ಬಡ್ತಿ, ಬರೋಬ್ಬರಿ 38 ಸ್ಥಾನ ಜಿಗಿದ ಯುವರಾಜ್ ಶಿಷ್ಯ
ICC mens T20I ranking: ಟಿ20ಐ ರ‍್ಯಾಂಕಿಂಗ್ ಪ್ರಕಟಗೊಂಡಿದ್ದು ಬ್ಯಾಟಿಂಗ್ನಲ್ಲಿ ಅಭಿಷೇಕ್ ಶರ್ಮಾ, ಬೌಲಿಂಗ್ನಲ್ಲಿ ವರುಣ್ ಚಕ್ರವರ್ತಿ ಭರ್ಜರಿ ಬಡ್ತಿ ಪಡೆದಿದ್ದಾರೆ. ಯುವರಾಜ್ ಶಿಷ್ಯ ಬರೋಬ್ಬರಿ 38 ಸ್ಥಾನ ಜಿಗಿದು 2ನೇ ಸ್ಥಾನಕ್ಕೇರಿದ್ದಾರೆ.

ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟಿ20ಐ ಸರಣಿಯಲ್ಲಿ ಭರ್ಜರಿ ಶತಕ ಸಹಿತ 279 ರನ್ ಗಳಿಸಿ ಭಾರತ ತಂಡದ ಪರ ಸರಣಿಯೊಂದರಲ್ಲಿ ಅತ್ಯಧಿಕ ರನ್ ಕಲೆ ಹಾಕಿದ ಎರಡನೇ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದ ಭಾರತದ ಆರಂಭಿಕ ಎಡಗೈ ಆಟಗಾರ ಅಭಿಷೇಕ್ ಶರ್ಮಾ, ಇದೀಗ ಟಿ20ಐ ಪುರುಷರ ಬೌಲಿಂಗ್ ರ್ಯಾಂಕಿಂಗ್ನಲ್ಲಿ ಅಮೋಘ ಬಡ್ತಿ ಪಡೆದಿದ್ದಾರೆ. ಸುನಾಮಿ ಸೃಷ್ಟಿಸಿದ್ದ ಯುವರಾಜ್ ಸಿಂಗ್ ಶಿಷ್ಯ, ಒಟ್ಟು 38 ಸ್ಥಾನ ಜಿಗಿದು ಐಸಿಸಿ ಟಿ20ಐ ರ್ಯಾಂಕಿಂಗ್ನಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ.
ಪ್ರಕಟಗೊಂಡ ಐಸಿಸಿ ಟಿ20ಐ ಕ್ರಿಕೆಟ್ನ ನೂತನ ಶ್ರೇಯಾಂಕದಲ್ಲಿ ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ಅಗ್ರಸ್ಥಾನದಲ್ಲೇ ಮುಂದುವರೆದಿದ್ದಾರೆ. ಅಲ್ಲದೆ, ಟಾಪ್-5 ರ್ಯಾಂಕಿಂಗ್ನಲ್ಲಿ ಭಾರತ ತಂಡದವರೇ ಮೂವರು ಇರುವುದು ಮತ್ತೊಂದು ವಿಶೇಷ. ಅಭಿಷೇಕ್ 2ರಲ್ಲಿ ಸ್ಥಾನ ಪಡೆದಿದ್ದರೆ, ತಿಲಕ್ ವರ್ಮಾ 3 ಮತ್ತು ಸೂರ್ಯಕುಮಾರ್ ಯಾದವ್ 5ನೇ ಸ್ಥಾನ ಪಡೆದಿದ್ದಾರೆ. ಸೂರ್ಯ ಕಳೆದ 4 ಸರಣಿಗಳಿಂದ ನೀಡಿರುವ ಕಳಪೆ ಪ್ರದರ್ಶನದ ಹೊರತಾಗಿಯೂ ಅಗ್ರ 5ರಲ್ಲೇ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ.
ಫೆಬ್ರವರಿ 2ರ ಭಾನುವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ಅಭಿಷೇಕ್, 54 ಎಸೆತಗಳಲ್ಲಿ 13 ಸಿಕ್ಸರ್, 7 ಬೌಂಡರಿ ಸಹಿತ 135 ರನ್ ಚಚ್ಚಿದ್ದರು. 2ನೇ ಸ್ಥಾನಕ್ಕೆ ಜಿಗಿದಿರುವ ಭಾರತದ ಆಟಗಾರ 829 ರೇಟಿಂಗ್ ಹೊಂದಿದ್ದಾರೆ. ನಂಬರ್ ಸ್ಥಾನ ಪಡೆದಿರುವ ಟ್ರಾವಿಸ್ ಹೆಡ್ 855 ರೇಟಿಂಗ್ ಹೊಂದಿದ್ದಾರೆ. ಈ ಹಿಂದೆ 2ನೇ ಸ್ಥಾನದಲ್ಲಿದ್ದ ತಿಲಕ್ ವರ್ಮಾ ಒಂದು ಸ್ಥಾನ ಕುಸಿದು 803 ರೇಟಿಂಗ್‌ನೊಂದಿಗೆ 3ನೇ ಸ್ಥಾನದಲ್ಲಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ವರುಣ್ಗೆ ಬಡ್ತಿ
ಭಾರತದ ಸ್ಪಿನ್ನರ್ ವರುಣ್ ಚಕ್ರವರ್ತಿ ಐಸಿಸಿ ಪುರುಷರ ಟಿ20ಐ ಬೌಲರ್‌ಗಳ ಶ್ರೇಯಾಂಕದಲ್ಲಿ 3 ಸ್ಥಾನ ಜಿಗಿತ ಕಂಡು 3ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಸರಣಿಯಲ್ಲಿ ಅದ್ಭುತ ಪ್ರದರ್ಶನದ ಮೂಲಕ ಸರಣಿಶ್ರೇಷ್ಠ ಆಟಗಾರ ಪ್ರಶಸ್ತಿ ಗೆದ್ದುಕೊಂಡಿದ್ದ ವರುಣ್, 9.86ರ ಸರಾಸರಿಯಲ್ಲಿ 14 ವಿಕೆಟ್‌ಗಳನ್ನು ಕಬಳಿಸಿದ್ದರು. ಭಾರತದ ವಿರುದ್ಧ ಕಳಪೆ ಪ್ರದರ್ಶನ ನೀಡಿದ್ದ ಸ್ಪಿನ್ನರ್ ಆದಿಲ್ ರಶೀದ್ ನಂಬರ್ 1 ಪಟ್ಟದಿಂದ ಕುಸಿದಿದ್ದಾರೆ. ಬದಲಾಗಿ ವೆಸ್ಟ್ ಇಂಡಿಸ್ನ ಅಕೇಲ್ ಹೊಸೈನ್ ಅಗ್ರಸ್ಥಾನಕ್ಕೇರಿದ್ದಾರೆ.
ಟಿ20ಐ ಬ್ಯಾಟರ್ಗಳ ಶ್ರೇಯಾಂಕ
1. ಟ್ರಾವಿಸ್ ಹೆಡ್ - 855
2. ಅಭಿಷೇಕ್ ಶರ್ಮಾ - 829
3. ತಿಲಕ್ ವರ್ಮಾ - 803
4. ಫಿಲ್ ಸಾಲ್ಟ್ - 798
5. ಸೂರ್ಯಕುಮಾರ್ ಯಾದವ್ - 738
6. ಜೋಸ್ ಬಟ್ಲರ್ - 729
7. ಬಾಬರ್ ಅಜಮ್ - 712
8. ಪಾತುಮ್ ನಿಸ್ಸಂಕ - 707
9. ಮೊಹಮ್ಮದ್ ರಿಜ್ವಾನ್ - 704
10. ಕುಸಾಲ್ ಪೆರೆರಾ - 675
ಟಿ20ಐ ಬೌಲರ್‌ಗಳ ಶ್ರೇಯಾಂಕ
1. ಅಕೇಲ್ ಹೊಸೈನ್ - 707
2. ಆದಿಲ್ ರಶೀದ್ - 705
2. ವರುಣ್ ಚಕ್ರವರ್ತಿ - 705
4. ವನಿಂದು ಹಸರಂಗ - 698
5. ಆಡಮ್ ಜಂಪಾ - 694
6. ರವಿ ಬಿಷ್ಣೋಯ್ - 671
7. ಮಹೇಶ್ ತೀಕ್ಷಣ - 665
8. ರಶೀದ್ ಖಾನ್ - 664
9. ಅರ್ಷದೀಪ್ ಸಿಂಗ್ - 652
10. ಜೋಫ್ರಾ ಆರ್ಚರ್ - 649
