ಕನ್ನಡ ಸುದ್ದಿ  /  ಕ್ರಿಕೆಟ್  /  ಜಿಂಬಾಬ್ವೆ ಸರಣಿಗೆ ತಂಡ ಸೇರಿಕೊಂಡ ಯಶಸ್ವಿ ಜೈಸ್ವಾಲ್; ಶತಕ ಬಾರಿಸಿದರೂ ಅಭಿಷೇಕ್ ಶರ್ಮಾ ಸ್ಥಾನಕ್ಕೆ ಕಂಟಕ

ಜಿಂಬಾಬ್ವೆ ಸರಣಿಗೆ ತಂಡ ಸೇರಿಕೊಂಡ ಯಶಸ್ವಿ ಜೈಸ್ವಾಲ್; ಶತಕ ಬಾರಿಸಿದರೂ ಅಭಿಷೇಕ್ ಶರ್ಮಾ ಸ್ಥಾನಕ್ಕೆ ಕಂಟಕ

ಭಾರತ ಕ್ರಿಕೆಟ್‌ ತಂಡದಲ್ಲಿ ದಿನಕ್ಕೊಂದು ಹೊಸ ಪ್ರತಿಭೆ ಜನ್ಮ ತಾಳುತ್ತಿದೆ. ಜಿಂಬಾಬ್ವೆ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಶತಕ ಸಿಡಿಸಿದ ಅಭಿಷೇಕ್ ಶರ್ಮಾ ಇದಕ್ಕೆ ಹೊಸ ಸೇರ್ಪಡೆ. ಆದರೆ, ಮುಂದಿನ ಪಂದ್ಯದಲ್ಲಿ ಅವರು ಆಡುತ್ತಾರಾ ಎಂಬ ಅನುಮಾನವಿದೆ. ಇದಕ್ಕೆ ಕಾರಣ ಹೀಗಿದೆ.

ಜಿಂಬಾಬ್ವೆ ಸರಣಿಗೆ ತಂಡ ಸೇರಿಕೊಂಡ ಯಶಸ್ವಿ ಜೈಸ್ವಾಲ್; ಅಭಿಷೇಕ್ ಶರ್ಮಾ ಸ್ಥಾನಕ್ಕೆ ಕಂಟಕ
ಜಿಂಬಾಬ್ವೆ ಸರಣಿಗೆ ತಂಡ ಸೇರಿಕೊಂಡ ಯಶಸ್ವಿ ಜೈಸ್ವಾಲ್; ಅಭಿಷೇಕ್ ಶರ್ಮಾ ಸ್ಥಾನಕ್ಕೆ ಕಂಟಕ (ANI and AFP Images)

ಐಪಿಎಲ್ 2024ರ ಆವೃತ್ತಿಯಲ್ಲಿ ಅತಿ ಹೆಚ್ಚು ಸಿಕ್ಸರ್‌ ಸಿಡಿಸಿ ಗಮನ ಸೆಳೆದಿದ್ದ ಅಭಿಷೇಕ್‌ ಶರ್ಮಾ, ಟೀಮ್‌ ಇಂಡಿಯಾ ಪರ ಆರ್ಭಟ ಮುಂದುವರೆಸಿದ್ದಾರೆ. 23ರ ಹರೆಯದ ಯುವ ಆಟಗಾರ ತಮ್ಮ ಎರಡನೇ ಅಂತಾರಾಷ್ಟ್ರೀಯ ಪಂದ್ಯದಲ್ಲಿಯೇ ಸ್ಫೋಟಕ ಶತಕ ಬಾರಿಸಿ ಗಮನ ಸೆಳೆದಿದ್ದಾರೆ. ಮೊದಲ ಪಂದ್ಯದಲ್ಲಿ ಡಕೌಟ್‌ ಆಗಿ ನಿರಾಶೆ ಅನುಭವಿಸಿದ್ದ ಅವರು, ಜಿಂಬಾಬ್ವೆ ವಿರುದ್ಧದ ಸರಣಿಯ ಎರಡನೇ ಪಂದ್ಯದಲ್ಲಿ ಭರ್ಜರಿ ಫಾರ್ಮ್‌ ಕಂಡುಕೊಂಡಿದ್ದಾರೆ. ಯುವ ಆಟಗಾರರ ಬಲದಿಂದ ನಡೆಯುತ್ತಿರುವ ಜಿಂಬಾಬ್ವೆ ಸರಣಿಯಲ್ಲಿ ಸದ್ಯ ಭಾರತ ಸರಣಿಯಲ್ಲಿ ಸಮಬಲ ಸಾಧಿಸಿದೆ.

ಎರಡನೇ ಪಂದ್ಯದಲ್ಲೇ ಪಂದ್ಯಶ್ರೇಷ್ಠ ಪ್ರದರ್ಶನ ನೀಡಿದ ಅಭಿಷೇಕ್‌, ಇದೀಗ ಮೂರನೇ ಪಂದ್ಯಕ್ಕೂ ಮುನ್ನ ಭಾರಿ ನಿರೀಕ್ಷೆ ಮೂಡಿಸಿದ್ದಾರೆ. ಆದರೆ, ಈ ನಡುವೆ ಮೂರನೇ ಟಿ20 ಪಂದ್ಯದಲ್ಲಿ ಅವರು ತಂಡದಲ್ಲಿ ಸ್ಥಾನ ಪಡೆಯುತ್ತಾರಾ ಇಲ್ವಾ ಎಂಬ ಪ್ರಶ್ನೆ ಎದ್ದಿದೆ. ಅತ್ತ ವಿಶ್ವಕಪ್‌ ಗೆಲುವಿನ ಅಭಿಯಾನ ಮುಗಿಸಿರುವ ಯಶಸ್ವಿ ಜೈಸ್ವಾಲ್ ಜಿಂಬಾಬ್ವೆಗೆ ಮರಳಿದ್ದಾರೆ. ಅವರು ತಂಡ ಸೇರಿಕೊಂಡಿದ್ದು, ಮೂರನೇ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆಯೂ ಇದೆ. ಹೀಗಾಗಿ ಜೈಸ್ವಾಲ್‌ ಹಾಗೂ ಅಭಿಷೇಕ್‌ ನಡುವೆ ಪ್ರಬಲ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ.

ವೆಸ್ಟ್‌ ಇಂಡೀಸ್‌ ಆತಿಥ್ಯದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಜೈಸ್ವಾಲ್ ಭಾರತ ತಂಡದ ಭಾಗವಾಗಿದ್ದರು. ಆದರೆ ಪಂದ್ಯಾವಳಿಯಲ್ಲಿ ಅವರಿಗೆ ಒಂದು ಪಂದ್ಯದಲ್ಲಿಯೂ ಆಡಲು ಅವಕಾಶ ಸಿಗಲಿಲ್ಲ. ಹೀಗಾಗಿ ಅವರನ್ನು ಜಿಂಬಾಬ್ವೆ ವಿರುದ್ಧದ ಕೊನೆಯ ಮೂರು ಟಿ20 ಪಂದ್ಯಗಳಿಗಾಗಿ ತಂಡಕ್ಕೆ ಆಯ್ಕೆ ಮಾಡಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಸದ್ಯ, ಟೀಮ್‌ ಇಂಡಿಯಾದಲ್ಲಿ ಆಟಗಾರರ ನಡುವಿನ ಸ್ಪರ್ಧೆ ಕುರಿತು ಜಿಂಬಾಬ್ವೆಯ ಅನುಭವಿ ಕ್ರಿಕೆಟಿಗ ಆಂಡಿ ಫ್ಲವರ್ ಮಾತನಾಡಿದ್ದಾರೆ. ಭಾರತ ತಂಡವು ಪರಿವರ್ತನೆಯ ಹಂತವನ್ನು ಪ್ರವೇಶಿಸುತ್ತಿದೆ. ಆರಂಭಿಕ ಸ್ಥಾನಕ್ಕಾಗಿ ಜೈಸ್ವಾಲ್ ಮತ್ತು ಅಭಿಷೇಕ್ ಇಬ್ಬರೂ ಎದುರು ನೋಡುತ್ತಿದ್ದಾರೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಐಪಿಎಲ್‌ನಲ್ಲಿ ಅಬ್ಬರಿಸಿದಂತೆಯೇ, ಅಭಿಷೇಕ್ ಶರ್ಮಾ ಭಾರತದ ಪರವೂ ತಮ್ಮ ನಿರ್ಭೀತ ಆಟದ ವಿಧಾನವನ್ನು ಮುಂದುವರೆಸಿದ್ದಾರೆ. ಭಾನುವಾರ ಜಿಂಬಾಬ್ವೆ ವಿರುದ್ಧ ಕೇವಲ 47 ಎಸೆತಗಳಲ್ಲಿ 100 ರನ್ ಗಳಿಸುವ ಮೂಲಕ ಜಿಂಬಾಬ್ವೆ ಬೌಲರ್‌ಗಳ ಬೆವರಿಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ ಮತ್ತು ಎಂಟು ಸಿಕ್ಸರ್‌ಗಳು ಕೂಡಾ ಸೇರಿದ್ದವು.

ಆತ್ಮವಿಶ್ವಾಸ ಮುಖ್ಯ

ಐಪಿಎಲ್ 2024ರಲ್ಲಿ ಕಂಡ ಫಾರ್ಮ್ ಅನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲೂ ಪರಿವರ್ತಿಸಿದ್ದಕ್ಕೆ ಫ್ಲವರ್ ಖುಷಿಪಟ್ಟಿದ್ದಾರೆ, “ಅವರು ಐಪಿಎಲ್‌ ಫಾರ್ಮ್‌ಅನ್ನು ತಮ್ಮ ಎರಡನೇ ಅಂತರರಾಷ್ಟ್ರೀಯ ಪಂದ್ಯದಲ್ಲಿ ಶತಕ ಗಳಿಸುವ ಮೂಲಕ ಮುಂದುವರೆಸಿ ವಿಶ್ವಾಸ ಹೆಚ್ಚಿಸಿಕೊಂಡಿದ್ದಾರೆ. ಯುವ ಆಟಗಾರನಾಗಿ ಆ ರನ್‌ಗಳನ್ನು ಗಳಿಸುವುದು ನಿಜಕ್ಕೂ ಮುಖ್ಯ. ಉತ್ತಮ ಪ್ರದರ್ಶನ ನೀಡಲು ಆತ್ಮವಿಶ್ವಾಸ ತುಂಬಾ ಮುಖ್ಯ. ನಾನು ಅವರ ಬಗ್ಗೆ ತುಂಬಾ ಸಂತೋಷಪಡುತ್ತೇನೆ,” ಎಂದು ಫ್ಲವರ್ ವಿವರಿಸಿದ್ದಾರೆ.

ಜುಲೈ 10ರಂದು ಉಭಯ ತಂಡಗಳ ನಡುವಿನ ಸರಣಿಯ ಮೂರನೇ ಪಂದ್ಯ ನಡೆಯಲಿದೆ. 13 ಹಾಗೂ 14ರಂದು ನಾಲ್ಕು ಹಾಗೂ ಐದನೇ ಪಂದ್ಯಗಳು ನಡೆಯಲಿವೆ.