ಯಶ್ ಠಾಕೂರ್ ಮಾಡಿದ ಆ ಒಂದು ತಪ್ಪಿನಿಂದ ಅಭಿಷೇಕ್ 28 ರನ್​ಗೆ ಔಟಾಗಬೇಕಿತ್ತು; ಶತಕ ಇರಲಿ, ಅರ್ಧಶತಕವೂ ಬರುತ್ತಿರಲಿಲ್ಲ!
ಕನ್ನಡ ಸುದ್ದಿ  /  ಕ್ರಿಕೆಟ್  /  ಯಶ್ ಠಾಕೂರ್ ಮಾಡಿದ ಆ ಒಂದು ತಪ್ಪಿನಿಂದ ಅಭಿಷೇಕ್ 28 ರನ್​ಗೆ ಔಟಾಗಬೇಕಿತ್ತು; ಶತಕ ಇರಲಿ, ಅರ್ಧಶತಕವೂ ಬರುತ್ತಿರಲಿಲ್ಲ!

ಯಶ್ ಠಾಕೂರ್ ಮಾಡಿದ ಆ ಒಂದು ತಪ್ಪಿನಿಂದ ಅಭಿಷೇಕ್ 28 ರನ್​ಗೆ ಔಟಾಗಬೇಕಿತ್ತು; ಶತಕ ಇರಲಿ, ಅರ್ಧಶತಕವೂ ಬರುತ್ತಿರಲಿಲ್ಲ!

ಸನ್​ರೈಸರ್ಸ್ ಹೈದರಾಬಾದ್ ಇನ್ನಿಂಗ್ಸ್​ನ 4ನೇ ಓವರ್​​ನಲ್ಲಿ ಅಭಿಷೇಕ್ ಶರ್ಮಾ ವೈಯಕ್ತಿಕ ಸ್ಕೋರ್ 28 ರನ್ ಗಳಿಸಿದ್ದಾಗ ಈ ಜೀವದಾನ ಪಡೆದರು. ಯಶ್ ಠಾಕೂರ್ ಅವರ ಬೌಲಿಂಗ್​ನಲ್ಲಿ ಅಭಿಷೇಕ್ ಶಶಾಂಕ್ ಸಿಂಗ್ ಕ್ಯಾಚ್ ಹಿಡಿದಿದ್ದರು. ಆದರೆ ಅದು ನೋ ಬಾಲ್ ಆಗಿತ್ತು.

ಯಶ್ ಠಾಕೂರ್ ಮಾಡಿದ ಆ ಒಂದು ತಪ್ಪಿನಿಂದ ಅಭಿಷೇಕ್ 28 ರನ್​ಗೆ ಔಟಾಗಬೇಕಿತ್ತು; ಶತಕ ಇರಲಿ, ಅರ್ಧಶತಕವೂ ಬರುತ್ತಿರಲಿಲ್ಲ!
ಯಶ್ ಠಾಕೂರ್ ಮಾಡಿದ ಆ ಒಂದು ತಪ್ಪಿನಿಂದ ಅಭಿಷೇಕ್ 28 ರನ್​ಗೆ ಔಟಾಗಬೇಕಿತ್ತು; ಶತಕ ಇರಲಿ, ಅರ್ಧಶತಕವೂ ಬರುತ್ತಿರಲಿಲ್ಲ!

ಪ್ರಯತ್ನದ ಜೊತೆಗೆ ಅದೃಷ್ಟವೂ ಬೇಕು ಮತ್ತು ಅದೃಷ್ಟ ಕೂಡ ಧೈರ್ಯಶಾಲಿಗಳ ಪರವಾಗಿರುತ್ತದೆ ಎನ್ನುವುದಕ್ಕೆ ಇಲ್ಲೊಂದು ತಾಜಾ ಉದಾಹರಣೆ ಇದೆ. ಈ ಸಾಲುಗಳು ಸನ್​ರೈಸರ್ಸ್ ಹೈದರಾಬಾದ್ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾಗೆ ಸರಿಯಾಗುತ್ತೆ. ಏಪ್ರಿಲ್ 12ರ ಶನಿವಾರ ಸಂಜೆ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಅಭಿಷೇಕ್ ಶರ್ಮಾ 28 ರನ್​ಗೆ ಔಟಾಗಿ ಹೋಗಬೇಕಿತ್ತು! ಆದರೆ ಯಶ್ ಠಾಕೂರ್ ಮಾಡಿದ ಆ ಒಂದು ತಪ್ಪಿನಿಂದ ಪಂಜಾಬ್ ಭಾರಿ ಬೆಲೆ ತೆತ್ತಿದೆ.

ಪಂಜಾಬ್ ನೀಡಿದ್ದ 246 ರನ್​ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಸನ್​ರೈಸರ್ಸ್, ಇನ್ನೂ 9 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತು. ಈ ಗೆಲುವಿನ ಕಾರಣಕರ್ತ ಅಭಿಷೇಕ್ ಶರ್ಮಾ. ಇನ್ನಿಂಗ್ಸ್ ಆರಂಭದಿಂದ ಕೊನೆಯ ತನಕ ಅಬ್ಬರಿಸಿ ಬೊಬ್ಬಿರಿಸಿ ಪಂಜಾಬ್ ಬೌಲರ್​ಗಳ ಚಳಿ ಬಿಡಿಸಿದ ಅಭಿ, ಕೇವಲ 55 ಎಸೆತಗಳಲ್ಲಿ 14 ಬೌಂಡರಿ, 10 ಗಗನಚುಂಬಿ ಸಿಕ್ಸರ್​ಗಳ ಸಹಿತ ದಾಖಲೆಯ 141 ರನ್ ಚಚ್ಚಿದರು. ಸ್ಟ್ರೈಕ್​ರೇಟ್ 256.36 ಇತ್ತು. ಈ ಅಮೋಘ ಇನ್ನಿಂಗ್ಸ್​ಗೆ ಕಾರಣವಾಗಿದ್ದು, ಆ ಕ್ಯಾಚ್ ಡ್ರಾಪ್.

ಹೌದು, ಅಭಿಷೇಕ್ ಶರ್ಮಾ 28 ರನ್ ಗಳಿಸಿದ್ದ ಅವಧಿಯಲ್ಲಿ ಫೀಲ್ಡರ್ ಶಶಾಂಕ್ ಸಿಂಗ್ ಕೈಗೆ ಕ್ಯಾಚ್ ಕೊಟ್ಟರು. ಆ ಓವರ್​​ ಬೌಲಿಂಗ್ ಮಾಡಿದ್ದು ಯಶ್ ಠಾಕೂರ್. ಅತ್ತ ಆಟಗಾರರ ಸಂಭ್ರಮವೂ ಜೋರಾಗಿತ್ತು, ಇತ್ತ ಅಭಿಷೇಕ್ ಕೂಡ ನಿರಾಸೆಯೊಂದಿಗೆ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕುತ್ತಿದ್ದ. ಆಗ ಬಂತು ಅಂಪೈರ್​ ಕಡೆಯಿಂದ ನೋಬಾಲ್ ಎಂದು ದೊಡ್ಡ ಸಿಗ್ನಲ್ ಎಂದು. ಇದು ಪಂದ್ಯದ ಚಿತ್ರಣವನ್ನೇ ಬದಲಿಸಿತು. ಆ ಒಂದು ನೋಬಾಲ್ ಪಂಜಾಬ್ ಗೆಲುವಿನ ಕನಸನ್ನೇ ಕಸಿದುಬಿಟ್ಟಿತು.

ಈ ಇನ್ನಿಂಗ್ಸ್​​ನಲ್ಲಿ ಅಭಿಷೇಕ್ ಅನೇಕ ಜೀವದಾನ ಪಡೆದರು. ನೋ ಬಾಲ್ ಕ್ಯಾಚ್ ಜತೆಗೆ ಒಂದೆರಡು ಕ್ಯಾಚ್​ಗಳನ್ನು ಡ್ರಾಪ್ ಮಾಡಲಾಯಿತು. ಒಮ್ಮೆ ರನೌಟ್​ನಿಂದಲೂ ಔಟ್​ನಿಂದ ತಪ್ಪಿಸಿಕೊಂಡರು. ಈ ಎಲ್ಲಾ ಅವಕಾಶಗಳನ್ನು ಮಿಸ್ ಮಾಡಿಕೊಂಡ ಪಂಜಾಬ್ 246 ರನ್​ಗಳ ಗುರಿ ರಕ್ಷಿಸಿಕೊಳ್ಳಲು ಸಾಧ್ಯವಾಗದೆ ಸೋಲಿಗೆ ಶರಣಾಯಿತು. ನೋ ಬಾಲ್ ಕ್ಯಾಚ್​ಗೂ ಮುನ್ನ ಮೊದಲ ಮೂರು ಎಸೆತಗಳಲ್ಲಿ 10 ರನ್ ಸಿಡಿಸಿದ್ದರು. 4ನೇ ಬಾಲ್​ನಲ್ಲಿ ರಿಸ್ಕ್ ತೆಗೆದುಕೊಂಡ ಅಭಿ, ಕ್ಯಾಚ್ ಕೊಟ್ಟರು. ಆದರೆ ಅದು ನೋ ಬಾಲ್ ಆಗಿತ್ತು.

ಅಭಿಷೇಕ್ ಶರ್ಮಾ ದಾಖಲೆಗಳು

  1. ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ವೈಯಕ್ತಿಕ ಗರಿಷ್ಠ ಸ್ಕೋರ್ ದಾಖಲಿಸಿದ ಭಾರತದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಭಿಷೇಕ್ 141 ರನ್ ಸಿಡಿಸಿ ಈ ಮೈಲಿಗಲ್ಲು ತಲುಪಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಕೆಎಲ್ ರಾಹುಲ್ ಹೆಸರಿನಲ್ಲಿ ಇತ್ತು. ಅವರು 132 ರನ್ ಬಾರಿಸಿದ್ದರು.
  2. ವೈಯಕ್ತಿಕ ಗರಿಷ್ಠ ಸ್ಕೋರ್ ಮಾಡಿದ ಐಪಿಎಲ್​ನ ಒಟ್ಟಾರೆ ಮೂರನೇ ಆಟಗಾರ ಎಂಬ ಹಿರಿಮೆಗೂ ಅಭಿಷೇಕ್ ಪಾತ್ರರಾಗಿದ್ದಾರೆ. ಕ್ರಿಸ್​ಗೇಲ್ 175 ರನ್ ಗಳಿಸಿದ್ದರೆ, ಬ್ರೆಂಡನ್ ಮೆಕಲಮ್ 158 ರನ್ ಗಳಿಸಿದ್ದರು.
  3. ಶ್ರೀಮಂತ ಲೀಗ್​ನಲ್ಲಿ ವೇಗದ ಶತಕ ಬಾರಿಸಿದ ಆರನೇ ಹಾಗೂ ಭಾರತದ ಮೂರನೇ ಕ್ರಿಕೆಟಿಗ ಎಂಬ ಇತಿಹಾಸವನ್ನೂ ಸೃಷ್ಟಿಸಿದ್ದಾರೆ. ಅಭಿಷೇಕ್ 40 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದಾರೆ.
  4. ಅಭಿಷೇಕ್ ಶರ್ಮಾ ಮತ್ತು ಟ್ರಾವಿಸ್ ಹೆಡ್ ಆರಂಭಿಕ ವಿಕೆಟ್​ಗೆ 171 ರನ್ ಪೇರಿಸಿದರು. ಇದು ಐಪಿಎಲ್​ನಲ್ಲಿ ಮೊದಲ ವಿಕೆಟ್​​ಗೆ ದಾಖಲಾದ 10ನೇ ಅತ್ಯಧಿಕ ಜೊತೆಯಾಟ.

ಇದನ್ನೂ ಓದಿ: ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದ ಸನ್​ರೈಸರ್ಸ್​ ಹೈದರಾಬಾದ್ ದಾಖಲೆಗಳ ಪಟ್ಟಿ

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner