ಕನ್ನಡ ಸುದ್ದಿ  /  ಕ್ರಿಕೆಟ್  /  ಸಚಿನ್, ಧೋನಿ ಮತ್ತು ಯುವಿಯನ್ನು ಕರೆಸಿ; ಭಾರತ ವಿಶ್ವಕಪ್‌ ಗೆಲುವಿಗೆ ಗಿಲ್‌ಕ್ರಿಸ್ಟ್‌ ಭಿನ್ನ ಸಲಹೆ

ಸಚಿನ್, ಧೋನಿ ಮತ್ತು ಯುವಿಯನ್ನು ಕರೆಸಿ; ಭಾರತ ವಿಶ್ವಕಪ್‌ ಗೆಲುವಿಗೆ ಗಿಲ್‌ಕ್ರಿಸ್ಟ್‌ ಭಿನ್ನ ಸಲಹೆ

ODI World Cup 2023: ಏಕದಿನ ವಿಶ್ವಕಪ್‌ಗೂ ಮುನ್ನ ಭಾರತ ತಂಡದ ಆಟಗಾರರೊಂದಿಗೆ ಸಮಯ ಕಳೆಯಲು ಸಚಿನ್ ತೆಂಡೂಲ್ಕರ್, ಎಂಎಸ್ ಧೋನಿ ಮತ್ತು ಯುವರಾಜ್ ಸಿಂಗ್ ಅವರನ್ನು ಕರೆಸುವುದು ಉತ್ತಮ ಎಂದು ಆಸ್ಟ್ರೇಲಿಯಾದ ಮಾಜಿ ಆಟಗಾರ ಆಡಮ್ ಗಿಲ್‌ಕ್ರಿಸ್ಟ್ ಸಲಹೆ ನೀಡಿದ್ದಾರೆ.

ಆಡಮ್ ಗಿಲ್‌ಕ್ರಿಸ್ಟ್, ಸಚಿನ್ ತೆಂಡೂಲ್ಕರ್ ಮತ್ತು ಎಂಎಸ್ ಧೋನಿ
ಆಡಮ್ ಗಿಲ್‌ಕ್ರಿಸ್ಟ್, ಸಚಿನ್ ತೆಂಡೂಲ್ಕರ್ ಮತ್ತು ಎಂಎಸ್ ಧೋನಿ (Getty Images)

ಭಾರತದ ಆತಿಥ್ಯದಲ್ಲಿ ನಡೆಯುವ ಏಕದಿನ ವಿಶ್ವಕಪ್‌ (World Cup 2023) ಪಂದ್ಯಾವಳಿಗೆ ಅಭಿಮಾನಿಗಳು ದಿನಗಣನೆ ಆರಂಭಿಸಿದ್ದಾರೆ. 2011ರಲ್ಲಿ ಭಾರತದ ಆತಿಥ್ಯದಲ್ಲಿಯೇ ನಡೆದ ಟೂರ್ನಿಯಲ್ಲಿ ಟೀಮ್‌ ಇಂಡಿಯಾವು ಬರೋಬ್ಬರಿ 28 ವರ್ಷಗಳ ಬಳಿಕ ವಿಶ್ವಕಪ್ ಎತ್ತಿ ಹಿಡಿದು ಸಂಭ್ರಮಿಸಿತ್ತು. ಆಗ ಸಚಿನ್ ತೆಂಡೂಲ್ಕರ್, ನಾಯಕ ಎಂಎಸ್‌ ಧೋನಿ ಮತ್ತು ಯುವರಾಜ್ ಸಿಂಗ್ ಟೂರ್ನಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಅಂತಿಮ ವಿಶ್ವಕಪ್ ಆಡಿದ್ದ ತೆಂಡೂಲ್ಕರ್‌, 482 ರನ್‌ಗಳೊಂದಿಗೆ ಭಾರತದ ಪರ ಟೂರ್ನಿಯಲ್ಲಿ ಗರಿಷ್ಠ ಸ್ಕೋರ್ ಗಳಿಸಿದರು. ಮತ್ತೊಂದೆಡೆ 357 ರನ್‌ ಹಾಗೂ 15 ವಿಕೆಟ್ ಸಂಪಾದಿಸಿದ ಯುವರಾಜ್ ಸಿಂಗ್‌, ಸರಣಿಶ್ರೇಷ್ಠರಾಗಿ ಹೊರಹೊಮ್ಮಿದರು. ಆದರೆ, ಪ್ರಸಕ್ತ ಆವೃತ್ತಿಯಲ್ಲಿ ಈ ಮೂವರೂ ತಂಡದಲ್ಲಿಲ್ಲ. 10 ವರ್ಷಗಳ ಹಿಂದೆ ವಿಶ್ವಕಪ್‌ ಆಡಿದ್ದ ಏಕೈಕ ಆಟಗಾರ ವಿರಾಟ್‌ ಕೊಹ್ಲಿ, ಈಗಲೂ ಟೀಮ್‌ ಇಂಡಿಯಾವನ್ನು ಪ್ರತಿನಿಧಿಸುತ್ತಿದ್ದಾರೆ.

12 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಭಾರತದ ಆತಿಥ್ಯದಲ್ಲಿ ಸಂಪೂರ್ಣ ವಿಶ್ವಕಪ್ ಪಂದ್ಯಾವಳಿ ನಡೆಯುತ್ತಿದೆ. ಮತ್ತೊಂದು ಈ ಬಾರಿ ಟ್ರೋಫಿ ಎತ್ತಿಹಿಡಿಯುವಲ್ಲಿ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಹಾಗೂ ಇತಿಹಾಸವನ್ನು ಮತ್ತೆ ಪುನರಾವರ್ತಿಸುವ ಅವಕಾಶವು ರೋಹಿತ್ ಶರ್ಮಾಗೆ ಲಭ್ಯವಾಗಿದೆ. ಈ ನಡುವೆ ಮೂರು ಬಾರಿಯ ವಿಶ್ವಕಪ್ ವಿಜೇತ ತಂಡದಲ್ಲಿ ಆಡಿದ್ದ ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗ ಆಡಮ್ ಗಿಲ್‌ಕ್ರಿಸ್ಟ್ ಅವರು ಭಾರತ ತಂಡಕ್ಕೆ ಅಮೂಲ್ಯ ಸಲಹೆಯೊಂದನ್ನು ನೀಡಿದ್ದಾರೆ. ಟೀಮ್‌ ಇಂಡಿಯಾವು ವಿಶ್ವಕಪ್‌ ಗೆಲ್ಲುವ ಅವಕಾಶಗಳನ್ನು ದುಪ್ಪಟ್ಟಾಗಿಸಲು, ತಂಡದ ಮ್ಯಾನೇಜ್‌ಮೆಂಟ್‌ ತ್ರಿವಳಿ ದಿಗ್ಗಜರನ್ನು ಕರೆಸಿಕೊಳ್ಳಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಆ ಮೂವರ ಸಲಹೆ ಪಡೆಯಿರಿ

“ನಾನು ಭಾರತ ತಂಡಕ್ಕೆ ಸಂಬಂಧಿಸಿದ ವ್ಯಕ್ತಿಯಾಗಿದ್ದರೆ, ಸಚಿನ್ ತೆಂಡೂಲ್ಕರ್ ಅವರಂಥವರ ಬೆನ್ನ ಹಿಂದೆ ಹೋಗುತ್ತಿದ್ದೆ. ಎಂಎಸ್ ಧೋನಿ ಅವರು ಲಭ್ಯವಿದ್ದರೆ ಭಾರತ ತಂಡದೊಂದಿಗೆ ಕಳೆಯಲು ಹೇಳುತ್ತಿದ್ದೆ. ಆ ಮೂಲಕ ಅವರ ಎಲ್ಲಾ ಅನುಭವವನ್ನು ತಂಡಕ್ಕೆ ರವಾನಿಸಬಹುದು. ಯುವರಾಜ್ ಸಿಂಗ್‌ರಂಥ ಹುಡುಗರನ್ನು ಕರೆಸಿಕೊಳ್ಳಲು ಪ್ರಯತ್ನಿಸುತ್ತಿದ್ದೆ. ಪಂದ್ಯಾವಳಿ ಬಗ್ಗೆ ಬಹಿರಂಗವಾಗಿ ಮಾತನಾಡಲು ಅವರಲ್ಲಿ ಹೇಳಿ” ಎಂದು ಗಿಲ್‌ಕ್ರಿಸ್ಟ್ ಸ್ಪೋರ್ಟ್‌ಸ್ಟಾರ್‌ ಜೊತೆಗೆ ಮಾತನಾಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಭಾರತ ಮತ್ತು ಆಸ್ಟ್ರೇಲಿಯಾ ಸರಣಿ ಪರಿಪೂರ್ಣ ಸಿದ್ಧತೆ

ವಿಶ್ವಕಪ್‌ಗೆ 15 ದಿನಗಳಿಗಿಂತ ಮುನ್ನ, ಭಾರತವು ಆಸ್ಟ್ರೇಲಿಯಾ ವಿರುದ್ಧದ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಆಡುತ್ತಿದೆ. ಮೂರು ಪಂದ್ಯಗಳು ಮೊಹಾಲಿ, ರಾಜ್‌ಕೋಟ್ ಮತ್ತು ಇಂದೋರ್‌ನಲ್ಲಿ ನಡೆಯಲಿವೆ. ನವೆಂಬರ್ 19ರಂದು ವಿಶ್ವಕಪ್‌ ಟ್ರೋಫಿಯನ್ನು ಎತ್ತುವ ಎರಡು ಫೇವರೆಟ್‌ ತಂಡಗಳಿಗೆ ಇದು ಪರಿಪೂರ್ಣ ಸಿದ್ಧತೆಯಾಗಬಹುದು ಎಂದು ಗಿಲ್‌ಕ್ರಿಸ್ಟ್ ಅಭಿಮತ ವ್ಯಕ್ತಪಡಿಸಿದ್ದಾರೆ.

"ವಿಶ್ವಕಪ್‌ಗೆ ಆಸ್ಟ್ರೇಲಿಯಾ ಮತ್ತು ಭಾರತಕ್ಕಿಂತ ಉತ್ತಮ ತಯಾರಿಯನ್ನು ಬೇರೆ ತಂಡಗಳು ನಡೆಸಬಹುದು ಎಂಬುದನ್ನು ಯೋಚಿಸಲು ಸಾಧ್ಯವಿಲ್ಲ. ಇವೆರಡು ತಂಡಗಳು ಖಂಡಿತವಾಗಿಯೂ ಪ್ರಶಸ್ತಿಗಾಗಿ ಸ್ಪರ್ಧಿಸುತ್ತವೆ. ಹೀಗಾಗಿ ಭಾರತದ ಪಿಚ್‌ಗಳಲ್ಲಿ ವಿಶ್ವದ ಅತ್ಯುತ್ತಮ ತಂಡಗಳ ವಿರುದ್ಧ ಆಡುವ ಮುನ್ನ ಸಿದ್ಧತೆ ಹೇಗಿದೆ ಎಂಬುದಕ್ಕೆ ಇದು ನಿಜವಾದ ಮಾನದಂಡವಾಗಿರುತ್ತದೆ. ಆಟಗಾರರ ನಡುವೆ ಸ್ಪರ್ಧೆ ಇರುತ್ತದೆ. ಕೆಲವರಿಗೆ ಒಂದು ಅಥವಾ ಎರಡು ಪಂದ್ಯಗಳಿಂದ ವಿಶ್ರಾಂತಿ ನೀಡಲಾಗುತ್ತದೆ. ತಂಡದ ಆಳವನ್ನು ಇಲ್ಲಿ ಪರೀಕ್ಷಿಸಲಾಗುತ್ತದೆ ಎಂದು ಆಸ್ಟ್ರೇಲಿಯಾದ ಮಾಜಿ ವಿಕೆಟ್ ಕೀಪರ್ ತಿಳಿಸಿದ್ದಾರೆ.