ಜಂಪಾ ಜಬರ್ದಸ್ತ್ ಬೌಲಿಂಗ್; ಕಿವೀಸ್ ಕಿವಿ ಹಿಂಡಿ 2ನೇ ಟಿ20 ಜೊತೆಗೆ ಸರಣಿಯನ್ನೂ ಗೆದ್ದ ಆಸೀಸ್
New Zealand vs Australia 2nd T20: ನ್ಯೂಜಿಲೆಂಡ್ ಎದುರಿನ ಎರಡನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ 72 ರನ್ಗಳ ಜಯಭೇರಿ ಬಾರಿಸಿದೆ. ಇದರೊಂದಿಗೆ ಸರಣಿಯನ್ನು ವಶಪಡಿಸಿಕೊಂಡಿದೆ.
ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲೂ ಆಸ್ಟ್ರೇಲಿಯಾ (Australia vs New Zealand 2nd T20I) ಭರ್ಜರಿ ಗೆಲುವು ದಾಖಲಿಸಿದೆ. ಆಕ್ಲೆಂಡ್ನ ಈಡನ್ ಪಾರ್ಕ್ನಲ್ಲಿ ನಡೆದ ದ್ವಿತೀಯ ಪಂದ್ಯದಲ್ಲಿ ಪ್ರವಾಸಿ ಆಸೀಸ್ 72 ರನ್ಗಳ ಭರ್ಜರಿ ಜಯ ಸಾಧಿಸುವ ಮೂಲಕ ಆತಿಥೇಯ ಕಿವೀಸ್ಗೆ ಮುಖಭಂಗ ಮಾಡಿತು. ಈ ಗೆಲುವಿನೊಂದಿಗೆ 1 ಪಂದ್ಯ ಬಾಕಿ ಇರುವಂತೆಯೇ 2-0 ಅಂತರದಲ್ಲಿ ಸರಣಿ ಕೈವಶ ಮಾಡಿಕೊಂಡಿದೆ.
ಮೊದಲ ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ ರಣರೋಚಕ ಜಯ ಸಾಧಿಸಿದ್ದ ಆಸ್ಟ್ರೇಲಿಯಾ ಎರಡನೇ ಟಿ20ಯಲ್ಲಿ ಮೊದಲು ಬ್ಯಾಟಿಂಗ್ ನಡೆಸಿತು. ಆರಂಭಿಕ ಆಟಗಾರ ಟ್ರಾವಿಸ್ ಹೆಡ್ 45 ರನ್ ಗಳಿಸಿದರೆ, ಉಳಿದ ಬ್ಯಾಟರ್ಗಳು ನಿರಾಸೆ ಮೂಡಿಸಿದರು. ನಾಯಕ ಮಿಚೆಲ್ ಮಾರ್ಷ್ 26 ರನ್ ಗಳಿಸಿ ಪರವಾಗಿಲ್ಲ ಎನಿಸಿದರು. ಗ್ಲೆನ್ ಮ್ಯಾಕ್ಸ್ವೆಲ್ 6, ಸ್ಟೀವ್ ಸ್ಮಿತ್ 11, ಜೋಶ್ ಇಂಗ್ಲಿಸ್ 5 ರನ್ ಗಳಿಸಿ ವಿಫಲರಾದರು.
ಆರ್ಸಿಬಿ ವೇಗಿ ಲಾಕಿ ಫರ್ಗ್ಯುಸನ್ ಬೆಂಕಿ ಬೌಲಿಂಗ್ ನಡೆಸಿದರು. ಕಳೆದ ಪಂದ್ಯದ ಹೀರೋ ಟಿಮ್ ಡೇವಿಡ್ 17, ಮ್ಯಾಥ್ಯೂ ವೇಡ್ 1 ರನ್ ಗಳಿಸಿ ನಿರಾಸೆ ಮೂಡಿಸಿದರು. ಆದರೆ ಈ ಹಂತದಲ್ಲಿ ಪ್ಯಾಟ್ ಕಮಿನ್ಸ್ 28 ರನ್ ಕಲೆ ಹಾಕಿ ಆಪತ್ಬಾಂಧವರು. ಫರ್ಗ್ಯುಸನ್ 4 ವಿಕೆಟ್ ಉರುಳಿಸಿದರೆ, ಆ್ಯಡಂ ಮಿಲ್ನೆ, ಮಿಚೆಲ್ ಸ್ಯಾಂಟ್ನರ್, ಬೆನ್ ಸಿಯರ್ಸ್ ತಲಾ 2 ವಿಕೆಟ್ ಪಡೆದರು. ಆಸೀಸ್ 19.5 ಓವರ್ಗಳಲ್ಲಿ 174 ರನ್ಗಳಿಗೆ ಆಲೌಟಾಯಿತು.
102 ರನ್ಗಳಿಗೆ ಆಲೌಟ್
175 ರನ್ಗಳ ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಕಿವೀಸ್, ಅತ್ಯಂತ ಕೆಟ್ಟ ಪ್ರದರ್ಶನ ನೀಡಿತು. ಆ್ಯಡಂ ಜಂಪಾ ಸ್ಪಿನ್ ದಾಳಿಗೆ ನಲುಗಿತು. ಫಿನ್ ಅಲೆನ್ 6, ವಿಲ್ ಯಂಗ್ 5, ಮಿಚೆಲ್ ಸ್ಯಾಂಟ್ನರ್ 7, ಮಾರ್ಕ್ ಚಾಪ್ಮನ್ 2, ಜೋಶ್ ಕ್ಲಾರ್ಕ್ಸನ್ 10, ಮಿಲ್ನೆ 0, ಟ್ರೆಂಟ್ ಬೋಲ್ಟ್ 16 ರನ್ ಗಳಿಸಿದರು. ಗ್ಲೆನ್ ಫಿಲಿಪ್ಸ್ 42 ರನ್ ಗಳಿಸಿ ಕಿವೀಸ್ ಪರ ಟಾಪ್ ಸ್ಕೋರರ್ ಆದರು.
ಅಂತಿಮವಾಗಿ ನ್ಯೂಜಿಲೆಂಡ್ 17 ಓವರ್ಗಳಲ್ಲಿ 102 ರನ್ಗಳಿಗೆ ಆಲೌಟ್ ಆಯಿತು. ಮಾಜಿ ಆರ್ಸಿಬಿ ಬೌಲರ್ ಜಂಪಾ 4 ವಿಕೆಟ್ ಪಡೆದರು. ನಥನ್ ಎಲ್ಲಿಸ್ 2, ಮಿಚೆಲ್ ಮಾರ್ಷ್, ಪ್ಯಾಟ್ ಕಮಿನ್ಸ್, ಜೋಶ್ ಹೇಜಲ್ವುಡ್ ತಲಾ 1 ವಿಕೆಟ್ ಪಡೆದರು. ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಅಬ್ಬರಿಸಿದ ಕಮಿನ್ಸ್ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ದೊರೆಯಿತು.
ಫೆಬ್ರವರಿ 25ರಂದು 3ನೇ ಟಿ20
ಉಭಯ ತಂಡಗಳ ನಡುವೆ ಮೂರನೇ ಟಿ20 ಪಂದ್ಯವು ಫೆಬ್ರವರಿ 25ರಂದು ಆಕ್ಲೆಂಡ್ನ ಈಡನ್ ಪಾರ್ಕ್ನಲ್ಲೇ ನಡೆಯಲಿದೆ. ಈ ಪಂದ್ಯದಲ್ಲೂ ಗೆದ್ದು ಕ್ಲೀನ್ ಸ್ವೀಪ್ ಸಾಧಿಸುವ ಗುರಿಯಲ್ಲಿ ಆಸೀಸ್ ಇದ್ದರೆ, ತವರಿನಲ್ಲಿ ವೈಟ್ವಾಶ್ ಮುಖಭಂಗದಿಂದ ಪಾರಾಗಲು ಕಿವೀಸ್ ಚಿಂತನೆ ನಡೆಸುತ್ತಿದೆ. ಈ ಸರಣಿ ಬಳಿಕ ಎರಡು ತಂಡಗಳ ನಡುವೆ ಎರಡು ಪಂದ್ಯಗಳ ಟೆಸ್ಟ್ ಸರಣಿ ಜರುಗಲಿದೆ.
ಎರಡನೇ ಟಿ20ಯಲ್ಲಿ ಕಣಕ್ಕಿಳಿದ ನ್ಯೂಜಿಲೆಂಡ್ ತಂಡ
ಫಿನ್ ಅಲೆನ್, ಡೆವೊನ್ ಕಾನ್ವೆ (ವಿಕೆಟ್ ಕೀಪರ್), ವಿಲ್ ಯಂಗ್, ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಜೋಶ್ ಕ್ಲಾರ್ಕ್ಸನ್, ಮಿಚೆಲ್ ಸ್ಯಾಂಟ್ನರ್ (ನಾಯಕ), ಆಡಮ್ ಮಿಲ್ನೆ, ಲಾಕಿ ಫರ್ಗುಸನ್, ಟ್ರೆಂಟ್ ಬೌಲ್ಟ್, ಬೆನ್ ಸಿಯರ್ಸ್.
ಎರಡನೇ ಟಿ20ಯಲ್ಲಿ ಕಣಕ್ಕಿಳಿದ ಆಸ್ಟ್ರೇಲಿಯಾ ತಂಡ
ಟ್ರಾವಿಸ್ ಹೆಡ್, ಸ್ಟೀವನ್ ಸ್ಮಿತ್, ಮಿಚೆಲ್ ಮಾರ್ಷ್ (ನಾಯಕ), ಗ್ಲೆನ್ ಮ್ಯಾಕ್ಸ್ವೆಲ್, ಜೋಶ್ ಇಂಗ್ಲಿಸ್, ಟಿಮ್ ಡೇವಿಡ್, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್, ನಾಥನ್ ಎಲ್ಲಿಸ್, ಆಡಮ್ ಝಂಪಾ, ಜೋಶ್ ಹೇಜಲ್ವುಡ್.