ಏಕದಿನ ವಿಶ್ವಕಪ್‌ಗೆ ಅಫ್ಘಾನಿಸ್ತಾನ ತಂಡ ಪ್ರಕಟ; ಕೊಹ್ಲಿ-ನವೀನ್ ಉಲ್ ಹಕ್ ಮುಖಾಮುಖಿ ಖಚಿತ
ICC ODI World Cup 2023: ಹಷ್ಮತುಲ್ಲಾ ಶಾಹಿದಿ ನೇತೃತ್ವದ 15 ಸದಸ್ಯರ ಅಫ್ಘಾನಿಸ್ತಾನ ಕ್ರಿಕೆಟ್ ತಂಡದಲ್ಲಿ ನವೀನ್ ಉಲ್ ಹಕ್ ಸ್ಥಾನ ಪಡೆದಿದ್ದಾರೆ.
ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್‌ಗೆ (Cricket world cup 2023) ಅಫ್ಘಾನಿಸ್ತಾನ (Afghanistan squad) ತಂಡವನ್ನು ಪ್ರಕಟಿಸಲಾಗಿದೆ. ಐಪಿಎಲ್‌ನಲ್ಲಿ ಆರ್‌ಸಿಬಿ ಆಟಗಾರ ವಿರಾಟ್ ಕೊಹ್ಲಿ ಜೊತೆಗೆ ಕಿರಿಕ್ ಮಾಡಿ ಸುದ್ದಿಯಾಗಿದ್ದ ವೇಗಿ ನವೀನ್ ಉಲ್ ಹಕ್ (Naveen-ul-Haq), ತಂಡಕ್ಕೆ ಪುನರಾಗಮನ ಮಾಡಿದ್ದಾರೆ. ಏಷ್ಯಾಕಪ್‌ಗೆ ನವೀನ್ ಆಯ್ಕೆ ಆಗಿರಲಿಲ್ಲ.
ಪ್ರಸ್ತುತ ನಡೆಯುತ್ತಿರುವ ಏಷ್ಯಾಕಪ್ ಟೂರ್ನಿಯಿಂದ ಈಗಾಗಲೇ ಎಲಿಮನೇಟ್ ಆಗಿರುವ ಅಫ್ಘಾನ್ ತಂಡಕ್ಕೆ ನವೀನ್-ಉಲ್-ಹಕ್ ಆಯ್ಕೆ ಆಗಿರಲಿಲ್ಲ. ಆದರೆ, ಭಾರತದ್ದೇ ಆತಿಥ್ಯದಲ್ಲಿ ನಡೆಯುವ ಮಹತ್ವದ ಏಕದಿನ ವಿಶ್ವಕಪ್‌ಗೆ ನವೀನ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಹಷ್ಮತುಲ್ಲಾ ಶಾಹಿದಿ ನೇತೃತ್ವದ 15 ಸದಸ್ಯರ ತಂಡದಲ್ಲಿ 23 ವರ್ಷದ ಆಲ್‌ರೌಂಡರ್ ಅಜ್ಮತುಲ್ಲಾ ಒಮರ್ಜಾಯ್ ಕೂಡ ಸೇರಿದ್ದಾರೆ. ನವೀನ್ ಮತ್ತು ಒಮರ್ಜಾಯ್, ಏಷ್ಯಾಕಪ್ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ.
ಅಫ್ಘಾನಿಸ್ತಾನ ಏಷ್ಯಾಕಪ್ ತಂಡದಲ್ಲಿದ್ದ ಗುಲ್ಬದಿನ್ ನೈಬ್, ರಿಯಾಜ್ ಹಸನ್, ಕರೀಂ ಜನತ್, ಶರಫುದ್ದೀನ್ ಅಶ್ರಫ್ ಮತ್ತು ಮೊಹಮ್ಮದ್ ಸಲೀಮ್ ಸಫಿ ವಿಶ್ವಕಪ್ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ. ಇವರಲ್ಲಿ ನೈಬ್ ಮತ್ತು ಅಶ್ರಫ್ ಮೀಸಲು ಆಟಗಾರರಾಗಿ ಭಾರತ ವಿಮಾನ ಹತ್ತಲಿದ್ದಾರೆ.
ವಿರಾಟ್ ಜೊತೆಗೆ ಕಿರಿಕ್
ಈ ವರ್ಷ ನಡೆದ ಐಪಿಎಲ್ ವೇಳೆ, ಆರ್‌ಸಿಬಿ ಆಟಗಾರ ವಿರಾಟ್ ಕೊಹ್ಲಿ ಮತ್ತು ಲಖನೌ ತಂಡದ ಪರ ಆಡುತ್ತಿದ್ದ ನವೀನ್ ನಡುವೆ ಮೈದಾನದಲ್ಲೇ ಕಿರಿಕ್ ನಡೆದಿತ್ತು. ಉಭಯ ಆಟಗಾರರ ನಡುವೆ ಆ ಬಳಿಕವೂ ವಾದ ವಿವಾದಗಳು ಹೆಚ್ಚಿತ್ತು. ಅದಾದ ಬಳಿಕ ಏಷ್ಯಾಕಪ್‌ನಲ್ಲಿ ಕೊಹ್ಲಿ ಮತ್ತು ನವೀನ್ ಪರಸ್ಪರ ಮುಖಾಮುಖಿಯಾಗುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ವಿಶ್ರಾಂತಿಯಲ್ಲಿದ್ದ ನವೀನ್ ತಂಡಕ್ಕೆ ಆಯ್ಕೆಯಾಗಿರಲಿಲ್ಲ. ಅಲ್ಲದೆ, ಗುಂಪು ಹಂತದಲ್ಲೇ ಟೂರ್ನಿಯಿಂದ ಹೊರಬಿದ್ದ ಅಫ್ಘಾನ್ ತಂಡವು ಭಾರತದ ವಿರುದ್ಧ ಆಡುವ ಅವಕಾಶ ಪಡೆಯಲಿಲ್ಲ. ಇದೀಗ ಭಾರತದ ಆತಿಥ್ಯದಲ್ಲೇ ನಡೆಯುವ ಏಕದಿನ ವಿಶ್ವಕಪ್‌ನಲ್ಲಿ ಉಭಯ ತಂಡಗಳ ನಡುವೆ ಪಂದ್ಯ ನಿಗದಿಯಾಗಿದೆ. ಅಕ್ಟೋಬರ್ 11ರಂದು ದೆಹಲಿಯಲ್ಲಿ ಭಾರತ ಅಫ್ಘಾನಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಈ ವೇಳೆ ಕೊಹ್ಲಿ ಹಾಗೂ ನವೀನ್ ಮುಖಾಮುಖಿಗೆ ಅಭಿಮಾನಿಗಳು ಕಾಯುತ್ತಿದ್ದಾರೆ.
ವಿಶ್ರಾಂತಿ ಕೇಳಿದ್ದ ನವೀನ್
ವೇಗದ ಬೌಲರ್ ನವೀನ್, 2021ರ ಜನವರಿಯಲ್ಲಿ ಕೊನೆಯ ಬಾರಿಗೆ ಏಕದಿನ ಪಂದ್ಯ ಆಡಿದ್ದರು. ಕಳೆದ ವರ್ಷದ ಜನವರಿಯಲ್ಲಿ, ಏಕದಿನ ಪಂದ್ಯಗಳಿಂದ ವಿರಾಮ ತೆಗೆದುಕೊಳ್ಳುತ್ತಿರುವುದಾಗಿ ನವೀನ್ ಹೇಳಿದ್ದರು. ಹೀಗಾಗಿ ಆ ಬಳಿಕ ಅವರು ಅಫ್ಘಾನಿಸ್ತಾನ ಏಕದಿನ ತಂಡಕ್ಕೆ ಆಯ್ಕೆಯಾಗಿಲ್ಲ. ಇದೇ ಕಾರಣದಿಂದ ಅವರಿಗೆ ಏಷ್ಯಾಕಪ್ ತಂಡದಿಂದಲೂ ವಿಶ್ರಾಂತಿ ನೀಡಲಾಗಿತ್ತು.
ಅಫ್ಘಾನ್ ಪಂದ್ಯ ಯಾವಾಗ ಆರಂಭ?
ಅಫ್ಘಾನಿಸ್ತಾನ ತಂಡವು ತನ್ನ ವಿಶ್ವಕಪ್ ಅಭಿಯಾನವನ್ನು ಅಕ್ಟೋಬರ್ 7ರಂದು ಆರಂಭಿಸಲಿದೆ. ಧರ್ಮಶಾಲಾದಲ್ಲಿ ನಡೆಯಲಿರುವ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ. ಅದಕ್ಕೂ ಮುನ್ನ ತಂಡವು ಎರಡು ಅಭ್ಯಾಸ ಪಂದ್ಯಗಳನ್ನು ಆಡಲಿದೆ. ಸೆಪ್ಟೆಂಬರ್ 29ರಂದು ತಿರುವನಂತಪುರಂನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮತ್ತು ಅಕ್ಟೋಬರ್ 3ರಂದು ಗುವಾಹಟಿಯಲ್ಲಿ ಶ್ರೀಲಂಕಾ ವಿರುದ್ಧ ವಾರ್ಮ್ ಅಪ್ ಮ್ಯಾಚ್ ಆಡಲಿದೆ.
ಅಫ್ಘಾನಿಸ್ತಾನ ತಂಡ
ಹಷ್ಮತುಲ್ಲಾ ಶಾಹಿದಿ (ನಾಯಕ), ಇಬ್ರಾಹಿಂ ಝದ್ರಾನ್, ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ರಹಮತ್ ಷಾ, ನಜಿಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ಇಕ್ರಮ್ ಅಲಿಖಿಲ್, ಒಮರ್ಜಾಯ್, ರಶೀದ್ ಖಾನ್, ಅಬ್ದುಲ್ ರಹಮಾನ್, ನೂರ್ ಅಹ್ಮದ್, ಮುಜೀಬ್-ಉರ್-ರಹಮಾನ್, ಫಜಲ್ಹಕ್ ಫಾರೂಕಿ, ನವೀನ್-ಉಲ್-ಹಕ್.