ಔಟ್ ಅಥವಾ ನಾಟೌಟ್; ಭಾರತ-ಇಂಗ್ಲೆಂಡ್ ಟೆಸ್ಟ್ ನಂತರ, ಡಬ್ಲ್ಯುಪಿಎಲ್​ಗೂ ತಟ್ಟಿದ ಡಿಆರ್​ಎಸ್ ವಿವಾದ
ಕನ್ನಡ ಸುದ್ದಿ  /  ಕ್ರಿಕೆಟ್  /  ಔಟ್ ಅಥವಾ ನಾಟೌಟ್; ಭಾರತ-ಇಂಗ್ಲೆಂಡ್ ಟೆಸ್ಟ್ ನಂತರ, ಡಬ್ಲ್ಯುಪಿಎಲ್​ಗೂ ತಟ್ಟಿದ ಡಿಆರ್​ಎಸ್ ವಿವಾದ

ಔಟ್ ಅಥವಾ ನಾಟೌಟ್; ಭಾರತ-ಇಂಗ್ಲೆಂಡ್ ಟೆಸ್ಟ್ ನಂತರ, ಡಬ್ಲ್ಯುಪಿಎಲ್​ಗೂ ತಟ್ಟಿದ ಡಿಆರ್​ಎಸ್ ವಿವಾದ

DRS Controversy Hits WPL 2024 : ವುಮೆನ್ಸ್ ಪ್ರೀಮಿಯರ್​​ ಲೀಗ್​​ನಲ್ಲಿ ಡಿಆರ್​ಎಸ್​ ವಿವಾದ ಸೃಷ್ಟಿಯಾಗಿದೆ. ಡಿಆರ್​ಎಸ್​ ತಂತ್ರಜ್ಞಾನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಭಾರತ-ಇಂಗ್ಲೆಂಡ್ ಟೆಸ್ಟ್ ನಂತರ, ಡಬ್ಲ್ಯುಪಿಎಲ್​ಗೂ ತಟ್ಟಿದ ಡಿಆರ್​ಎಸ್ ವಿವಾದ
ಭಾರತ-ಇಂಗ್ಲೆಂಡ್ ಟೆಸ್ಟ್ ನಂತರ, ಡಬ್ಲ್ಯುಪಿಎಲ್​ಗೂ ತಟ್ಟಿದ ಡಿಆರ್​ಎಸ್ ವಿವಾದ

ವುಮೆನ್ಸ್ ಪ್ರೀಮಿಯರ್​ ಲೀಗ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ 3ನೇ ಅಂಪೈರ್​ ನೀಡಿದ ಒಂದು ತೀರ್ಪು ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಭಾರತ-ಇಂಗ್ಲೆಂಡ್ ಸರಣಿ ಬಳಿಕ ಡಬ್ಲ್ಯುಪಿಎಲ್​ಗೂ ​ಡಿಆರ್​ಎಸ್ ವಿವಾದ (DRS Controversy) ತಟ್ಟಿದೆ. ಅಂಪೈರ್​​ರ​ ಈ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಮತ್ತು ಯುಪಿ ವಾರಿಯರ್ಸ್ ಚಾಮರಿ ಅಥಾಪಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆರ್​​ಸಿಬಿ ನೀಡಿದ ಗುರಿ ಬೆನ್ನಟ್ಟಿದ ಯುಪಿ ವಾರಿಯರ್ಸ್ ತಂಡದ ಚಾಮರಿ ಅಥಾಪಟ್ಟು 8 ರನ್ ಗಳಿಸಿದ್ದ ವೇಳೆ ಆಸೀಸ್ ಸ್ಪಿನ್ನರ್ ಜಾರ್ಜಿಯಾ ವೇರ್‌ಹ್ಯಾಮ್‌ ಎಸೆದ ಚೆಂಡು ಚಾಮರಿ ಕಾಲಿಗೆ ಬಡಿಯಿತು. ಇದೇ ವೇಳೆ ಆರ್​​​ಸಿಬಿ​ ಆಟಗಾರ್ತಿಯರು ಔಟ್​​ಗಾಗಿ ಮನವಿ ಮಾಡಿದರು. ಆದರೆ ಸ್ಟ್ರೈಟ್​ ಅಂಪೈರ್ ನಾಟೌಟ್ ಎಂದು ತೀರ್ಮಾನ ನೀಡಿದರು. ಕೂಡಲೇ ಬೆಂಗಳೂರು ನಾಯಕಿ ಸ್ಮೃತಿ ಮಂಧಾನ ಡಿಆರ್​​ಎಸ್ ಪಡೆದರು. 3ನೇ ಅಂಪೈರ್​ ಪರಿಶೀಲನೆ ನಡೆಸಿದರು.

ಆಶ್ಚರ್ಯಕರವಾಗಿ ಬಾಲ್ ಟ್ರ್ಯಾಕಿಂಗ್ ವೇಳೆ ವೇರ್ಹ್ಯಾಮ್ ಎಸೆತ ನೇರವಾಗಿ ಸ್ಟಂಪ್​​ಗೆ ಹೊಡೆಯುತ್ತದೆ. ಚೆಂಡು ನೆಲಕ್ಕೆ ತಾಗಿ ಪ್ಯಾಡ್​ ಬಡಿದ ವೇಳೆ ಟರ್ನ್​ ಆದಂತೆ ಕಾಣುತ್ತದೆ. ಆದರೆ, ಬಾಲ್ ಟ್ರ್ಯಾಕಿಂಗ್ ವೇಳೆ ಚೆಂಡು ನೇರವಾಗಿ ಸ್ಟಂಪ್​ಗೆ ಬೀಳುತ್ತದೆ. ನಾಟೌಟ್‌ನಿಂದ ಔಟಾಗುವ ನಿರ್ಧಾರವನ್ನು ನೋಡಿ, ಅಥಾಪತ್ತು ಮತ್ತು ಅವರ ನಾನ್-ಸ್ಟ್ರೈಕಿಂಗ್ ಜೊತೆಗಾರ್ತಿ ಅಲಿಸ್ಸಾ ಹೀಲಿ ಗೊಂದಲಕ್ಕೊಳಗಾದರು.

ಯುಪಿ ವಾರಿಯರ್ಸ್ ಕೋಚ್ ಪ್ರಶ್ನೆ

ಇದು ಯುಪಿ ವಾರಿಯರ್ಸ್ ಆಟಗಾರ್ತಿಯರ ಜೊತೆಗೆ ಎಲ್ಲರಿಗೂ ಗೊಂದಲ ಉಂಟು ಮಾಡುತ್ತದೆ. ವಿವಾದಾತ್ಮಕ ಔಟ್​ ಬಗ್ಗೆ ಮಾತನಾಡಿದ ಯುಪಿ ವಾರಿಯರ್ಸ್ ಕೋಚ್ ತನ್ನ ಹತಾಶೆ ವ್ಯಕ್ತಪಡಿಸಿದ್ದಾರೆ. ಪ್ಯಾಡ್​ಗೆ ತಲುಲಿದ ಚೆಂಡನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿ, ಪಿಚ್ ಬಿದ್ದ ನಂತರ ಚೆಂಡು ಸಂಪೂರ್ಣ ತಿರುಗುತ್ತದೆ. ಲೆಗ್​ ಸ್ಪಿನ್ನರ್​​ನಂತೆಯೇ ತಿರುಗುತ್ತಿದೆ. ಟರ್ನ್​ ಆಗುವ ಚೆಂಡು ನೇರವಾಗಿ ಸ್ಟಂಪ್ಸ್​​ಗೆ ಹೇಗೆ ಹೊಡೆಯಲು ಸಾಧ್ಯ ಎಂದು ಜಾನ್ ಲೂಯಿಸ್ ಪ್ರಶ್ನಿಸಿದ್ದಾರೆ.

ತಂತ್ರಜ್ಞಾನದ ಒಳಸುಳಿಗಳು ಮತ್ತು ಅದು ಹೇಗೆ ಕೆಲಸ ಮಾಡುತ್ತದೆ ಎಂದು ನನಗೆ ತಿಳಿದಿಲ್ಲ. ಆದರೆ ಇದು ಖಂಡಿತವಾಗಿಯೂ ಆಟದ ಆಸಕ್ತಿದಾಯಕ ಮಾರ್ಗವಾಗಿದೆ. ನಾವು ಸಾಕಷ್ಟು ನಿರಾಶೆಗೊಂಡಿದ್ದೇವೆ ಎಂದು ಹೇಳಿದ್ದಾರೆ. ಮೂರನೇ ಅಂಪೈರ್​ನಿಂದ ಔಟೆಂಟ್ ತೀರ್ಮಾನ ಬಂದ ನಂತರ ನಾಯಕಿ ಅಲಿಸ್ಸಾ ಹೀಲಿ ಅವರು ಮೈದಾನದ ಅಂಪೈರ್ ಜೊತೆ ವಾಗ್ವಾದಕ್ಕಿಳಿದರು. ಡ್ರೆಸ್ಸಿಂಗ್​ ರೂಮ್​ಗೆ ಮರಳಿದ ಬೆನ್ನಲ್ಲೇ ಚಾಮರಿ ಅಲ್ಲಿ ತನ್ನ ಕೋಚ್​​ ಜೊತೆ ಚರ್ಚೆ ನಡೆಸಿದರು. ಪಂದ್ಯ ಮುಗಿದರೂ ಚಾಮರಿ ಅವರು ಅಸಮಾಧಾನದಿಂದಲೇ ಇದ್ದರು. ಇದೀಗ ನೆಟ್​ನಲ್ಲೂ ತಂತ್ರಜ್ಞಾನದ ಬಗ್ಗೆ ಹೆಚ್ಚು ಆಕ್ಷೇಪ ವ್ಯಕ್ತವಾಗುತ್ತಿದೆ.

ಜೋ ರೂಟ್​​ಗೂ ಇದೇ ರೀತಿ ಆಗಿತ್ತು

ಪ್ರಸ್ತುತ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್​ ನಡುವಿನ ಟೆಸ್ಟ್​​ ಸರಣಿಯಲ್ಲೂ ಜೋ ರೂಟ್​ ಕೂಡ ಇದೇ ರೀತಿಯ ಎಸೆತಕ್ಕೆ ವಿಕೆಟ್​ ಒಪ್ಪಿಸಿದರು. ಪಿಚ್ ಗೆರೆಯ ಮೇಲೆ ಬಿದ್ದ ಚೆಂಡು ಪ್ಯಾಡ್‌ಗೆ ತಗಲುವ ಮೊದಲು ಪುಟಿಯಿತು. ಆದಾಗ್ಯೂ, ಬಾಲ್-ಟ್ರ್ಯಾಕಿಂಗ್ ತಂತ್ರಜ್ಞಾನವು ಮಿಡಲ್ ಸ್ಟಂಪ್‌ಗೆ ಅಪ್ಪಳಿಸಲು ಬೇರೆ ದಾರಿಯಲ್ಲಿ ತಿರುಗುತ್ತಿದೆ ಎಂದು ತೋರಿಸಿತ್ತು. ಆಗ ಔಟೆಂದು ನೀಡಲಾಗಿತ್ತು. ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್​ ಸಹ ತಂತ್ರಜ್ಞಾನಕ್ಕೆ ಬೇಸರ ವ್ಯಕ್ತಪಡಿಸಿದ್ದರು.

ಯುಪಿ ವಾರಿಯರ್ಸ್ ವಿರುದ್ಧ ಆರ್​​ಸಿಬಿಗೆ ಗೆಲುವು

ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಲೀಗ್​ನ 11ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಆರ್​​ಸಿಬಿ, ಸ್ಮೃತಿ ಮಂಧಾನ (80) ಮತ್ತು ಎಲ್ಲಿಸ್ ಪೆರ್ರಿ (58) ಅರ್ಧಶತಕಗಳ ನೆರವಿನಿಂದ 199 ರನ್​ಗಳ ಬೃಹತ್ ಮೊತ್ತ ಪೇರಿತು. ಈ ಗುರಿ ಬೆನ್ನಟ್ಟಿದ ಯುಪಿ ಪರ ಅಲಿಸ್ಸಾ ಹೀಲಿ ಅರ್ಧಶತಕದ ಹೊರತಾಗಿ ಉಳಿದ ಬ್ಯಾಟರ್ಸ್ ನಿರಾಸೆ ಮೂಡಿಸಿದರು. ಅಂತಿಮವಾಗಿ 20 ಓವರ್​​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 175 ರನ್ ಕಲೆ ಹಾಕಿತು. ಇದರೊಂದಿಗೆ 23 ರನ್​ಗಳ ಅಂತರದಿಂದ ಸೋಲು ಕಂಡಿತು.

Whats_app_banner