ಪಾಕ್ನಲ್ಲಿ ನನ್ನ ಮೇಲೆ ಕಲ್ಲು ತೂರಾಟ ನಡೆಸಿದ್ರು, ಜೈ ಶ್ರೀರಾಮ್ ಅಂದರೆ ತಪ್ಪೇನು; ಇರ್ಫಾನ್ ಪಠಾಣ್
Irfan Pathan: ಪಾಕಿಸ್ತಾನದ ಪೇಶಾವರದಲ್ಲಿ ನಡೆದಿದ್ದ ಪಂದ್ಯದ ವೇಳೆ ನಡೆದ ಅಹಿತಕರ ಘಟನೆ ನೆನೆದ ಇರ್ಫಾನ್ ಪಠಾಣ್ ಬದ್ಧವೈರಿಯ ಮುಖವಾಡ ಕಳಚಿದ್ದಾರೆ.
ಭಾರತ-ಪಾಕಿಸ್ತಾನ (India vs Pakistan) ನಡುವಿನ ಪಂದ್ಯ ಮುಗಿದು ಒಂದು ವಾರವಾಗಿದೆ. ಆದರೂ ಪಂದ್ಯದ ಕುರಿತು ಚರ್ಚೆಗಳು ಇನ್ನೂ ನಿಂತಿಲ್ಲ. ಪಾಕಿಸ್ತಾನ ಎದುರು ಭರ್ಜರಿ 7 ವಿಕೆಟ್ಗಳ ಗೆಲುವು ದಾಖಲಿಸಿದ ಭಾರತ ತಂಡವು, ಅಜೇಯ ಓಟ ಮುಂದುವರೆಸಿತು. ಆದರೆ ಹೀನಾಯವಾಗಿ ಸೋತಿದ್ದ ಪಾಕ್ ಇದನ್ನೇ ನೆಪವಾಗಿಟ್ಟುಕೊಂಡು ಸಹಾನುಭೂತಿ ಗಳಿಸಲು ಯತ್ನಿಸಿತು. ಆದರೆ ಭಾರಿ ಮುಖಭಂಗಕ್ಕೆ ಒಳಗಾಯಿತು.
ಅಹ್ಮದಾಬಾದ್ನ ನರೇಂದ್ರ ಮೋದಿ ಮೈದಾನದಲ್ಲಿ ಭಾರತೀಯ ಕ್ರಿಕೆಟ್ ಅಭಿಮಾನಿಗಳ ವರ್ತನೆ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (Pakistan Cricket Board) ಐಸಿಸಿಗೆ (ICC) ದೂರು ನೀಡಿತ್ತು. ಆ ಮೂಲಕ ಭಾರತದ ಪ್ರತಿಷ್ಠೆಗೆ ಧಕ್ಕೆ ತರಲು ಪ್ರಯತ್ನಿಸಿತ್ತು. ಆದರೀಗ ಪಾಕಿಸ್ತಾನದ ಪೇಶಾವರದಲ್ಲಿ ನಡೆದಿದ್ದ ಪಂದ್ಯದ ವೇಳೆ ನಡೆದ ಅಹಿತಕರ ಘಟನೆ ನೆನೆದ ಇರ್ಫಾನ್ ಪಠಾಣ್ (Irfan Pathan) ಬದ್ಧವೈರಿಯ ಮುಖವಾಡ ಕಳಚಿದ್ದಾರೆ.
ಪಾಕ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್ (Mohammad Rizwan) ಔಟಾಗಿ ಡ್ರೆಸಿಂಗ್ ರೂಮ್ಗೆ ಹೋಗುತ್ತಿದ್ದ ಸಂದರ್ಭದಲ್ಲಿ ಅಭಿಮಾನಿಗಳು ಜೈ ಶ್ರೀರಾಮ್ (Jai Sri Ram) ಎಂದು ಘೋಷಿಸಿದ್ದರು. ಈ ಬಗ್ಗೆ ಪಾಕ್ ನೀಡಿದ್ದ ದೂರನ್ನು ಐಸಿಸಿ ಕ್ರಮ ಕೈಗೊಳ್ಳದೆ ನಿರಾಕರಿಸಿತ್ತು. ಅಭಿಮಾನಿಗಳು ಘೋಷಣೆ ಕೂಗಿರುವುದು ನೀತಿ ಸಂಹಿತೆಗೆ ಅನ್ವಯಿಸುವುದಿಲ್ಲ ಎಂದು ಐಸಿಸಿ ಹೇಳಿತ್ತು. ಇದರಿಂದ ಪಾಕ್ಗೆ ಭಾರಿ ಮುಖಭಂಗವಾಗಿತ್ತು.
ಪಾಕ್ ಅಭಿಮಾನಿಗಳು ಕಲ್ಲು ಎಸೆದಿದ್ದರು
ಇದೀಗ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಕಹಿ ಘಟನೆಯೊಂದನ್ನು ನೆನಪಿಸಿದ್ದಾರೆ. ಜೈಶ್ರೀರಾಮ್ ಎಂದರೆ ತಪ್ಪೇನು ಎಂದು ಪ್ರಶ್ನೆ ಹಾಕಿದ್ದಾರೆ. ನಾವು (2003-2004ರಲ್ಲಿ) ಒಮ್ಮೆ ಪಾಕಿಸ್ತಾನಕ್ಕೆ ಪ್ರವಾಸ ಹೋಗಿದ್ದೆವು. ಆಗ ಅಲ್ಲಿದ್ದ ಅಭಿಮಾನಿಗಳು ನನ್ನ ಮೇಲೆ ಕಲ್ಲು, ಕಬ್ಬಿಣದ ಮೊಳೆಗಳನ್ನು ಎಸೆದಿದ್ದರು. ಆದರೆ ಅದು ನನ್ನ ಕಣ್ಣಿನ ಭಾಗಕ್ಕೆ ಕಲ್ಲು ಬಡಿದಿತ್ತು. ಗಂಭೀರವಾಗಿ ಗಾಯಗೊಂಡಿದ್ದೆ. ಒಂದು ವೇಳೆ ಅದು ನನ್ನ ಕಣ್ಣಿಗೆ ಬಿದಿದ್ದರೆ ನಾನು ದೃಷ್ಟಿ ಕಳೆದುಕೊಳ್ಳುತ್ತಿದ್ದೆ ಎಂದು ಪಾಕ್ ಕುತಂತ್ರ ಬಿಚ್ಚಿಟ್ಟಿದ್ದಾರೆ.
ಈ ಅಹಿತಕರ ಘಟನೆಯಿಂದ ಪಂದ್ಯವು 10 ನಿಮಿಷಗಳ ಕಾಲ ಸ್ಥಗಿತಗೊಂಡಿತ್ತು. ಅಂಪೈರ್ಗೆ ದೂರು ನೀಡಿದ್ದೆವು. ಹಾಗಂತ ಪಾಕಿಸ್ತಾನ ತಂಡವನ್ನು ದೂರಲಿಲ್ಲ. ಅಭಿಮಾನಿಗಳು ಮಾಡುವ ತಪ್ಪಿಗೆ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಹೊಣೆ ಮಾಡುವುದು ಸರಿಯಲ್ಲ ಎಂದು ಪಠಾಣ್ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಟ್ವೀಟ್ ಮೂಲಕ ಜೈ ಶ್ರೀರಾಮ್ ಎಂದು ಕೂಗಿದ ಅಭಿಮಾನಿಗಳಿಗೆ ಬೆಂಬಲ ಸೂಚಿಸಿದ್ದಾರೆ.
2017ರಲ್ಲೂ ಪಾಕ್ ಫ್ಯಾನ್ಸ್ ಅನುಚಿತ ವರ್ತನೆ
2017ರ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ನಲ್ಲಿ ಟೀಮ್ ಇಂಡಿಯಾ ಸೋತ ನಂತರ, ಪಾಕಿಸ್ತಾನ ಅಭಿಮಾನಿಗಳು ಭಾರತ ತಂಡದ ಆಟಗಾರರ ಮೇಲೆ ಅನುಚಿತ ವರ್ತನೆ ತೋರಿದ್ದರು. ಆ ವೇಳೆ ಮೊಹಮ್ಮದ್ ಶಮಿ ಕೂಡ ಪಾಕಿಸ್ತಾನಿ ಅಭಿಮಾನಿಯೊಬ್ಬನ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೂ ತಂಡದ ಉಳಿದ ಆಟಗಾರರು ಸೋಲಿನ ನೋವಿನಿಂದ ಮೌನವಾಗಿ ಡ್ರೆಸ್ಸಿಂಗ್ ರೂಮಿಗೆ ತೆರಳಿದ್ದು ಬಿಟ್ಟರೆ ಪ್ರೇಕ್ಷಕರ ವರ್ತನೆಗೆ ಸಹಾನುಭೂತಿ ತೋರಲಿಲ್ಲ.
ಐಸಿಸಿ ಈವೆಂಟ್ನಂತೆ ಇರಲಿಲ್ಲ ಎಂದ ಮಿಕ್ಕಿ ಆರ್ಥರ್
ಅಹ್ಮದಾಬಾದ್ನಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ಸೋತ ನಂತರ ಈ ಪಂದ್ಯವು ಐಸಿಸಿ ಪಂದ್ಯದಂತೆ ಇರಲಿಲ್ಲ. ಬಿಸಿಸಿಐ ಈವೆಂಟ್ನಂತೆ ಇತ್ತು. ಇದು ಸಂಪೂರ್ಣ ದ್ವಿಪಕ್ಷೀಯ ಸರಣಿಯಂತೆ ಇತ್ತು. ಇದು ಬಿಸಿಸಿಐ ನಡೆಸಿದ ಈವೆಂಟ್ನಂತೆ ಅನುಭವವಾಯಿತು. ಇಂದು ರಾತ್ರಿ ದಿಲ್ ದಿಲ್ ಪಾಕಿಸ್ತಾನ್ ಎಂಬುದನ್ನು ನಾನು ಕೇಳಲೇ ಎಂದು ಅವರು ಆಟದ ನಂತರ ಬಿಸಿಸಿಐ ವಿರುದ್ಧ ಪರೋಕ್ಷವಾಗಿ ಟೀಕಿಸಿದ್ದಾರೆ. ತಮ್ಮ ಫ್ಯಾನ್ಸ್ಗೆ ವೀಸಾ ನೀಡಿದ್ದರೆ, ಅವರು ಸಹ ಮೈದಾನದಲ್ಲಿ ಇರುತ್ತಿದ್ದರು ಎಂದು ಕುಟುಕಿದ್ದರು.